ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಧಾರಣೆಯನ್ನು ನೈಸರ್ಗಿಕವಾಗಿ ತಡೆಗಟ್ಟುವ ವಿಧಾನ ಯಾವುದು?

Last Updated 6 ಮೇ 2022, 23:00 IST
ಅಕ್ಷರ ಗಾತ್ರ

ಗರ್ಭಧಾರಣೆಯನ್ನು ನೈಸರ್ಗಿಕವಾಗಿ ತಡೆಗಟ್ಟುವ ವಿಧಾನ ಯಾವುದು?

1. ನ್ಯಾಚುರಲ್ ಬರ್ತ್‌ ಕಂಟ್ರೋಲ್ ಹೇಗೆ? ನಮ್ಮ ಮಗುವಿಗೆ ಇನ್ನೂ 1 ವರ್ಷ, 1 ತಿಂಗಳು. ಇನ್ನೊಂದು ಮಗು ಪಡೆಯಲು ಪ್ರಯತ್ನ ಮಾಡಬಹುದೇ?

ಹೆಸರು, ಊರು ಬೇಡ

ನಿಮ್ಮ ಮಗುವಿಗೆ ಕೇವಲ 1 ವರ್ಷವಾಗಿರುವುದರಿಂದ ಇನ್ನೊಂದು ಮಗು ಪಡೆಯಲು ಇನ್ನೂ ಕನಿಷ್ಠ 2 ವರ್ಷವಾದರೂ ಅಂತರವಿರುವುದು ಒಳ್ಳೆಯದು. ಶೇ 60ಕ್ಕೂ ಹೆಚ್ಚು ಜನ ಒಂದು ಮಗುವಾಗಿ ಇನ್ನೊಂದು ಮಗು ಬೇಡವೆಂದು ಅಂದುಕೊಳ್ಳುತ್ತಿರುವಾಗಲೇ ಗರ್ಭ ಧರಿಸಿಬಿಡುತ್ತಾರೆ.

ಎರಡು ಮಕ್ಕಳ ನಡುವೆ 2 ರಿಂದ 3 ವರ್ಷವಾದರೂ ಅಂತರವಿಡಲು ತಾತ್ಕಾಲಿಕವಾಗಿ ಗರ್ಭಧಾರಣೆ ತಡೆಗಟ್ಟುವುದಕ್ಕಾಗಿ ಹಲವು ವಿಧಾನಗಳಿವೆ. ನೈಸರ್ಗಿಕ ವಿಧಾನಗಳಾದ ಋತುಫಲಪ್ರದ ದಿನಗಳಲ್ಲಿ (ಪ್ರತಿ ಋತುಚಕ್ರದ 8 ರಿಂದ 18ನೇ ದಿನಗಳವರೆಗೆ) ಲೈಂಗಿಕ ಸಂಪರ್ಕ ಮಾಡದಿರುವುದು, ನಿಮ್ಮ ಪತಿ ಕೂಡ ಲೈಂಗಿಕ ಸಂಪರ್ಕದ ಸಮಯದಲ್ಲಿ ವೀರ್ಯವನ್ನು ದೇಹದ ಹೊರಗೆ ಬಿಡುವುದರಿಂದ ಗರ್ಭಧಾರಣೆಯಾಗುವುದಿಲ್ಲ. ಬ್ಯಾರಿಯರ್ ವಿಧಾನಗಳಾದ - ಪುರುಷರ ಕಾಂಡೋಮ್ ಬಳಕೆ ಲೈಂಗಿಕ ಸಂಪರ್ಕದ ಸಮಯದಲ್ಲಿ ವೀರ್ಯವನ್ನು ಸಂಗ್ರಹಿಸಿಟ್ಟು ಗರ್ಭಧಾರಣೆ ತಡೆಗಟ್ಟುತ್ತದೆ. ಮಹಿಳೆಯರ ಡಯಾಫ್ರಮ್ ಬಳಕೆ - ಹೆಣ್ಣುಮಕ್ಕಳು ಗರ್ಭಕೊರಳನ್ನು ಸುತ್ತುವರೆಯುವಂತೆ ತೆಳುಪೊರೆಯಂತಹ ಡಯಾಫ್ರಮ್ ಬಳಸಬಹುದಾದರೂ ನಮ್ಮ ದೇಶದಲ್ಲಿ ಹೆಚ್ಚು ಬಳಕೆಯಲ್ಲಿಲ್ಲ. ಇನ್ನು ವೀರ್ಯನಾಶಕಗಳನ್ನು ಕೂಡ ಬಳಸಬಹುದು. ಇವುಗಳಲ್ಲಿ – ಜೆಲ್ಲಿ, ಕ್ರೀಮ್, ಪೆಸರಿ, ಮಾತ್ರೆಗಳ ರೂಪದಲ್ಲಿ ಲಭ್ಯವಿರುವ ಇವುಗಳನ್ನು ಲೈಂಗಿಕ ಸಂಪರ್ಕಕ್ಕೆ ಮುಂಚೆ ಯೋನಿದ್ವಾರದ ಬಳಿ ಇಟ್ಟುಕೊಳ್ಳಬೇಕು. ಗರ್ಭಕೋಶದ ಒಳಗಡೆ ಇಡುವ ಉಪಕರಣಗಳಾದ ಕಾಪರ್‌–ಟಿ (3 ರಿಂದ 5 ವರ್ಷಗಳು), ಪ್ರೊಜೆಸ್ಟಿರಾನ್ ಹಾರ್ಮೋನ್‌ ಹೊಂದಿರುವ ಎಲ್‌ಎನ್‌ಜಿಐಯುಡಿ (5 ವರ್ಷಗಳ ದೀರ್ಘಕಾಲ) ಬಳಸುವುದು. ಹಾರ್ಮೋನುಗಳನ್ನು ಹೊಂದಿರುವ ಮಾತ್ರೆಗಳು (ಓಸಿ ಪಿಲ್ಸ್), 3 ತಿಂಗಳಿಗೊಮ್ಮೆ ತೆಗೆದುಕೊಳ್ಳುವ ಹಾರ್ಮೋನು ಇಂಜೆಕ್ಷನ್‌ಗಳು (ಡಿಎಂಪಿಎ ಇತ್ಯಾದಿ), ಹಾರ್ಮೋನ್ ಇಂಪ್ಲಾಂಟ್‌ಗಳು ಕೂಡ ಪ್ರಚಲಿತದಲ್ಲಿವೆ. ನಿಮಗೆ ಯಾವುದು ಸೂಕ್ತವೆನಿಸುತ್ತದೆಯೋ ಅದರ ಸಾಧಕ ಬಾಧಕಗಳನ್ನು ಅರಿತುಕೊಂಡು ಬಳಸುವುದು ಒಳ್ಳೆಯದು. ಕಾಪರ್‌–ಟಿ ನಿಮಗೆ ಹೆಚ್ಚೇನು ದುಷ್ಪರಿಣಾಮ ಕೊಡದಂತಹ ಸಾಧನವಾದ್ದರಿಂದ ಇದನ್ನೇ ನೀವು ಬಳಸಬಹುದು. ಅದು ಸರಿಹೋಗದಿದ್ದಲ್ಲಿ ವೈದ್ಯರ ಸಲಹೆಯ ಮೇರೆಗೆ ನೀವು ಬೇರೆ ವಿಧಾನಗಳನ್ನು ಅನುಸರಿಸಿ.

2. ನನಗೆ ಬಿಳಿ ಮುಟ್ಟಿನ ಸಮಸ್ಯೆ ಇದೆ. ಜನನಾಂಗದ ಭಾಗದಲ್ಲಿ ಕಡಿತವಿದೆ, ಮತ್ತೆ ಉರಿಉರಿಯಾದ ಹಾಗೆ ಆಗುತ್ತದೆ. ಗುದದ್ವಾರಕೂಡ ಉರಿಯಾಗುತ್ತದೆ. ಕ್ಯಾನ್‌ಸಾಫ್ಟ್ ಸಪ್ಪೋಸಿಟರಿ ತೆಗೆದುಕೊಂಡಿರುವೆ. ಇದಕ್ಕೆ ಶಾಶ್ವತ ಪರಿಹಾರವಿಲ್ಲವೇ? ನನಗೆ ಪದೇಪದೇ ಈ ಸಮಸ್ಯೆ ಕಾಡುತ್ತಿದೆ.

ಹೆಸರು, ಊರು ಬೇಡ

ಜನನಾಂಗದ ಭಾಗದಲ್ಲಿ ಕಡಿತ ಹಾಗೂ ಗುದದ್ವಾರದಲ್ಲೂ ಕಡಿತ ಬರುವುದಕ್ಕೆ ಜಂತುಹುಳಗಳ ಭಾದೆಯೂ ಕಾರಣವಿರಬಹುದು. ಅದರಲ್ಲೂ ಮುಖ್ಯವಾಗಿ ಪಿನ್‌ವರ್ಮ್ ಸೋಂಕಿನಿಂದಲೂ ಈ ರೀತಿಯಾಗಬಹುದು. ಅದಕ್ಕೆ 6 ತಿಂಗಳಿಗೊಮ್ಮೆ ಜಂತುಭಾದೆ ನಿವಾರಣಾ ಮಾತ್ರೆಯನ್ನು ತೆಗೆದುಕೊಳ್ಳಬೇಕು ಮತ್ತು ಮಲವಿಸರ್ಜನೆಯ ನಂತರ ತೊಳೆದುಕೊಳ್ಳಬೇಕಾದರೆ ಕೈಗಳು ಹಿಮ್ಮುಖವಾಗಿ ಚಲಿಸಬೇಕು. ನಿತ್ಯ 3 ರಿಂದ 4 ಲೀಟರ್ ನೀರನ್ನು ಕುಡಿಯಲೇಬೇಕು. ಪೌಷ್ಟಿಕ ಆಹಾರ, ಸಡಿಲವಾದ ಹತ್ತಿ ಬಟ್ಟೆಯ ಒಳ ಉಡುಪನ್ನೇ ಬಳಸಿ. ಜನನಾಂಗದ ಭಾಗದಲ್ಲಿ ತೇವಾಂಶವಿರದ ಹಾಗೇ ನೋಡಿಕೊಳ್ಳಬೇಕು. ಇಷ್ಟೆಲ್ಲಾ ಮುಂಜಾಗ್ರತೆವಹಿಸಿಯೂ ಕಡಿಮೆಯಾಗದಿದ್ದಲ್ಲಿ ಇನ್ನೊಮ್ಮೆ ನಿಮ್ಮ ತಜ್ಞವೈದ್ಯರನ್ನು ಸಂಪರ್ಕಿಸಿ.

3. ನನಗೆ 45 ವರ್ಷ, ಈ ತಿಂಗಳು ಮುಟ್ಟು ಆಗಲಿಲ್ಲ. ಬಿಳಿಮುಟ್ಟು ತುಂಬಾ ಹೋಗ್ತಿದೆ, ಆದರೆ ಈಗ ಇಲ್ಲ. ಒಂದು ದಿವಸ ಒಂದು ತೊಟ್ಟು ಕೆಂಪುಮುಟ್ಟು ಆಯಿತು. ಆದ್ರೆ ಅದು ಮುಟ್ಟಾ? ಎರಡು ವರ್ಷ ಮುಂಚೆ ತಿಂಗಳಲ್ಲಿ ಎರಡು ಸಾರಿ ಆಗುತ್ತಿತ್ತು. ವೈದ್ಯರ ಬಳಿ ತೋರಿಸಿದ ಮೇಲೆ ಸರಿ ಆಗಿದೆ. ಇದಕ್ಕೆ ಕಾರಣವೇನು ಮೇಡಂ?

ಶಾಂತಿ, ಕುಂದಾಪುರ

ಶಾಂತಿಯವರೇ, ನಿಮಗೀಗ ಮುಟ್ಟು ನಿಲ್ಲುವ ಆಸುಪಾಸಿನ ಸಮಯವಿರಬಹುದು. ಹಾಗಾಗಿ ಮುಟ್ಟಾಗುವುದು ನಿಂತು ಹೋಗಬಹುದು. ಋತುಬಂಧದ ಸಮಯದಲ್ಲಿ ಕೆಲವರಿಗೆ ಯಾವಾಗಲೋ ಒಮ್ಮೆ ಸ್ವಲ್ಪ ಸ್ವಲ್ಪ ಕೆಂಪುಮುಟ್ಟು ಕಾಣಿಸಿಕೊಂಡು ನಂತರ ಹಾಗೇ ನಿಂತುಹೋಗಬಹುದು. ಆದರೆ ಬಿಳಿಮುಟ್ಟು ತುಂಬಾ ಹೋಗುತ್ತಿದ್ದರೆ ಅದು ದುರ್ವಾಸನೆ ಹಾಗೂ ಜನನಾಂಗ ಭಾಗದ ಕಡಿತದಿಂದ ಕೂಡಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಹಾಗೂ ಚಿಕಿತ್ಸೆ ಪಡೆದುಕೊಳ್ಳಿ.

4. ನನಗೆ 2020ರಿಂದ ಪಿಸಿಒಡಿ ಸಮಸ್ಯೆ ಇತ್ತು. ಆದರೆ ಈಗ 5 ತಿಂಗಳಿನಿಂದ ನೈಜಮುಟ್ಟು ಆಗ್ತಿದೆ. ನಾನು ಈಗ ಲೈಂಗಿಕ ಸಂಪರ್ಕ ಮಾಡಿದರೆ ಏನಾದರೂ ತೊಂದರೆ ಆಗುತ್ತಾ, ಅಂದರೆ ನಾನು ಪ್ರೆಗ್ನೆಂಟ್ ಆಗೋದು ಆ ರೀತಿ ನನಗೆ ತುಂಬಾ ಭಯ, ಯಾರತ್ರಾನೂ ಹೇಳ್ಕೊಳಕ್ಕೆ ಆಗಲ್ಲ ಅದಕ್ಕೆ ಕ್ಲಾರಿಫಿಕೇಷನ್‌ಗಾಗಿ ಕೇಳಿದೆ. ನನಗೆ ಇನ್ನು ಮದುವೆ ಆಗಿಲ್ಲ.

ಪಿಸಿಒಡಿ ಸಮಸ್ಯೆ ಈಗ ಬಹಳ ಸಾಮಾನ್ಯವಾಗಿದ್ದು ಈ ಬಗ್ಗೆ ಬಹಳ ಬಾರಿ ಹಿಂದಿನ ಅಂಕಣಗಳಲ್ಲಿ ಚರ್ಚಿಸಲಾಗಿದೆ. ಜೀವನಶೈಲಿ ತಿದ್ದಿಕೊಂಡು ನೀವು ಸೂಕ್ತಚಿಕಿತ್ಸೆಯನ್ನು ಪಡೆದುಕೊಳ್ಳಿ ಮತ್ತು ನೀವು ಸೂಕ್ತ ವರನನ್ನು ಮದುವೆಯಾಗಿ ನಂತರ ಲೈಂಗಿಕಸಂಪರ್ಕವಾದರೆ ಒಳ್ಳೆಯದು. ಪಿಸಿಒಡಿ ಸಮಸ್ಯೆ ಸರಿಯಾಗುತ್ತಾ ಬಂದ ಹಾಗೆ ಅಂಡಾಣು ಬಿಡುಗಡೆಯು ಆರಂಭವಾಗುತ್ತಾ ಹೋದ ಹಾಗೆ ಗರ್ಭಧರಿಸುವ ಸಂಭವ ಹೆಚ್ಚಾಗುತ್ತದೆ. ಹಾಗಾಗಿ ನೀವು ಸೂಕ್ತ ವರನನ್ನು ಮದುವೆಯಾಗಲು ಹಾಗೂ ನಿಮ್ಮ ಜೀವನಶೈಲಿ ಸುಧಾರಿಸಿಕೊಳ್ಳಲು ಪ್ರಯತ್ನಿಸಿ. ಯಾವುದೇ ಭಯ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT