ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ತಂಬಾಕು ರಹಿತ ದಿನ: ತಂಬಾಕು ಮುಕ್ತ ಸಮಾಜ ನಿರ್ಮಾಣ ಸಾಧ್ಯವೇ?

Last Updated 30 ಮೇ 2022, 19:30 IST
ಅಕ್ಷರ ಗಾತ್ರ

ಮೇ 31 ವಿಶ್ವ ‘ತಂಬಾಕು ರಹಿತ ದಿನ’. ತಂಬಾಕು ಸೇವನೆಯು ಮನುಷ್ಯನ ಮೇಲೆ ಉಂಟುಮಾಡುವ ದುಷ್ಪರಿಣಾಮಗಳನ್ನು ಯುವ ಸಮುದಾಯಕ್ಕೆ ಮನಮುಟ್ಟುವಂತೆ ತಿಳಿಸಿ ಹೇಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ತಂಬಾಕು ಸೇವನೆಯಿಂದ ಯುವ ಪೀಳಿಗೆಯನ್ನು ರಕ್ಷಿಸುವುದು ಹೇಗೆ ಎಂಬ ಬಗ್ಗೆ ಯೋಜನೆಗಳನ್ನು ರೂಪಿಸುವುದರ ಜತೆಗೆ ಅವರಲ್ಲಿ ಈ ಬಗ್ಗೆ ಅರಿವು ಮೂಡಿಸಿ, ತಂಬಾಕು ನಿಯಂತ್ರಣದ ವಿಚಾರದಲ್ಲಿ ನೂತನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಮಾಜ ಒಟ್ಟಾಗಿ ಪಣ ತೊಡಬೇಕಾಗಿದೆ.

ತಂಬಾಕು ಸೇವನೆಯ ದುಶ್ಚಟಕ್ಕೆ ದಾಸರಾಗಿ ವಿಶ್ವದಲ್ಲಿ ಪ್ರತಿವರ್ಷ ಸುಮಾರು 80 ಲಕ್ಷ ಜನರು ಸಾಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಭಾರತದಲ್ಲಿ 13 ಲಕ್ಷಕ್ಕೂ ಹೆಚ್ಚು ಜನರು ತಂಬಾಕಿನ ದುಷ್ಪರಿಣಾಮಗಳಿಗೆ ಬಲಿಯಾಗುತ್ತಿದ್ದಾರೆ. ಯುವ ಪೀಳಿಗೆಯು ತಂಬಾಕಿನ ದುಶ್ಚಟಕ್ಕೆ ಬೀಳುವುದನ್ನು ತಡೆಯುವುದು ಒಂದು ಸವಾಲಾಗಿದ್ದರೆ, ಈಗಾಗಲೇ ಈ ದುಶ್ಚಟಕ್ಕೆ ಒಳಗಾದವರನ್ನು ಅದರಿಂದ ಹೊರತರುವುದು ಇನ್ನೂ ದೊಡ್ಡ ಸವಾಲು.

ಮನೆ, ಸಮಾಜದಲ್ಲಿ ‘ಹಿರಿಯರು’ ಎನ್ನಿಸಿಕೊಂಡವರು (ಪೋಷಕರು, ಸ್ನೇಹಿತರು, ಶಿಕ್ಷಕರು) ಧೂಮಪಾನ ಚಟಕ್ಕೆ ಒಳಗಾದರೆ, ಅವರನ್ನು ಅನುಸರಿಸುವ ಯುವಕರೂ ಆ ಚಟ ಅಂಟಿಸಿಕೊಳ್ಳುತ್ತಾರೆ ಎಂಬುದು ಸತ್ಯ. ಧೂಮಪಾನಿಗಳ ಸಹವಾಸ, ನಟ–ನಟಿಯರ ಅನುಕರಣೆ, ಧೂಮಪಾನ ಮಾಡುವ ಪೋಷಕರ ಪ್ರಭಾವ, ತಪ್ಪು ಮಾಹಿತಿ ನೀಡುವ ಜಾಹೀರಾತುಗಳು... ಹೀಗೆ ಹತ್ತು ಹಲವು ಕಾರಣಗಳಿಂದ ಧೂಮಪಾನದ ಚಟ ಅಂಟಿಸಿಕೊಂಡು ಅನೇಕ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಯುವಕರು ತುತ್ತಾಗುತ್ತಾರೆ.

‘ಒತ್ತಡ ಕಡಿಮೆ ಮಾಡಲು ಧೂಮಪಾನ ಸಹಕಾರಿ, ಧೂಮಪಾನವು ಸಂತೋಷ ಹೆಚ್ಚಿಸುತ್ತದೆ, ಧೈರ್ಯ ತುಂಬುತ್ತದೆ’ ಎಂಬೆಲ್ಲ ಹುಸಿ ಕಲ್ಪನೆಗಳು ಜನರಲ್ಲಿ ಮೂಡಿರುವುದು ದುರದೃಷ್ಟಕರ. ಬೀಡಿ, ಸಿಗರೇಟು, ಗುಟ್ಕಾ, ಜರ್ದಾ, ನಶ್ಯಾ, ಹುಕ್ಕಾ... ಹೀಗೆ ಅನೇಕ ರೀತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸಲಾಗುತ್ತಿದೆ. ತಂಬಾಕಿನಲ್ಲಿರುವ 100 ವಿಷಕಾರಕ ಹಾಗೂ 70 ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಶ್ವಾಸಕೋಷದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ನಾಲಗೆ, ಗಂಟಲಿನ ಕ್ಯಾನ್ಸರ್, ದೀರ್ಘಕಾಲದ ಕೆಮ್ಮು, ಶ್ವಾಸಕೋಶದ ಸೋಂಕು, ಹೀಗೆ ಹಲವಾರು ಗುಣಪಡಿಸಲಾಗದ ಭಯಂಕರ ರೋಗಗಳಿಗೆ ಕಾರಣವಾಗುತ್ತದೆ.

ತಂಬಾಕು ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಯುವಜನರನ್ನು ಈ ಚಟದಿಂದ ದೂರವಿಡುವುದೇ ದೊಡ್ಡ ಸವಾಲು. ಸಾರ್ವಜನಿಕ ಸ್ಥಳ, ಕೆಲಸ ಮಾಡುವ ಸ್ಥಳಗಳಲ್ಲಿ (ಕಾರ್ಖಾನೆ), ಶಾಲಾ, ಕಾಲೇಜು ವಠಾರ, ರೈಲು, ಬಸ್ಸು, ವಿಮಾನಗಳಲ್ಲಿ ಕಟ್ಟುನಿಟ್ಟಾಗಿ ಧೂಮಪಾನ ನಿಯಂತ್ರಣ ಮಾಡಲಾಗುತ್ತದೆ.ಆ ಮೂಲಕ ಪರ್ಯಾಯ ಧೂಮಪಾನದಿಂದ ಸಾವಿರಾರು ಮಂದಿಯನ್ನು ರಕ್ಷಿಸಲಾಗುತ್ತದೆ ಎಂಬುದು ಸ್ವಲ್ಪ ಸಮಾಧಾನ ಕೊಡುವ ವಿಚಾರ.

ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ‘ತಂಬಾಕು ವ್ಯಸನಮುಕ್ತ ಕೇಂದ್ರ’ಗಳನ್ನು ಸ್ಥಾಪಿಸಿಸಲಾಗಿದೆ. ವೈಯುಕ್ತಿಕ ಹಾಗೂ ಕೌಟುಂಬಿಕ ಆಪ್ತ ಸಮಾಲೋಚನೆ ನೀಡಲಾಗುತ್ತಿದೆ. ಸಾರ್ವಜನಿಕರು ಈ ಕೇಂದ್ರಗಳಲ್ಲಿ ದೊರಕುವ ಆರೋಗ್ಯ ಸೇವೆಯನ್ನು ಪಡೆಯಬಹುದು. ದೂರವಾಣಿ ಮೂಲಕವೂ ಆಪ್ತ ಸಮಾಲೋಚನೆ ನೀಡಲಾಗುತ್ತದೆ. ಸ್ವಯಂಪ್ರೇರಿತವಾಗಿ ಧೂಮಪಾನವನ್ನು ವರ್ಜಿಸಲು ಬಯಸುವರಿಗೆ ಇದೊಂದು ಸುವರ್ಣ ಅವಕಾಶ.

ತಂಬಾಕು ನಿಯಂತ್ರಣ ಕಾಯ್ದೆ ಹಾಗೂ ಅನೇಕ ಯೋಜನೆಗಳು ಜಾರಿಯಲ್ಲಿದ್ದರೂ, ತಂಬಾಕು ಸೇವನೆಯ ಪ್ರಮಾಣ ಕಡಿಮೆಯಾಗುತ್ತಿಲ್ಲ ಎಂಬುದು ಆತಂಕದ ವಿಚಾರ. ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳು, ಮನೋವ್ಯೆದ್ಯರು, ಶಿಕ್ಷಣ ಸಂಸ್ಥೆಗಳು, ಆಪ್ತ ಸಮಾಲೋಚಕರು ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ತಂಬಾಕು ಮುಕ್ತ ಗ್ರಾಮ, ನಗರ ಹಾಗೂ ಕುಟುಂಬ ನಿರ್ಮಾಣ ಅಸಾಧ್ಯವೇನಲ್ಲ.

ತಮ್ಮ ಆರೋಗ್ಯ ಕಾಪಾಡುವುದರ ಜತೆಗೆ ಕುಟುಂಬದವರನ್ನೂ ಈ ಚಟದಿಂದ ದೂರ ಇರಿಸುವ ಉದ್ದೇಶದಿಂದಲಾದರೂ ತಂಬಾಕಿನ ಚಟಕ್ಕೆ ಒಳಗಾಗಿರುವವರು ‘ತಂಬಾಕು ರಹಿತ ದಿನ’ದಂದ ಈ ಚಟವನ್ನು ತ್ಯಜಿಸುವ ಪಣ ತೊಡಬೇಕು.

ಆಗಬೇಕಾದದ್ದೇನು?

* ರೈತರಿಗೆ ಪರ್ಯಾಯ ಬೆಳೆ ಅವಕಾಶ ನೀಡಿ ತಂಬಾಕು ಬೆಳೆಯನ್ನು ಹಂತ ಹಂತವಾಗಿ ನಿಲ್ಲಿಸಬೇಕು

* ತಂಬಾಕು ಪದಾರ್ಥಗಳ ಉತ್ಪಾದನೆಯನ್ನು ಕಡಿಮೆ ಮಾಡುವುದು.

* ಇ- ಸಿಗರೇಟನ್ನು ಸಂಪೂರ್ಣ ನಿಷೇಧಿಸಬೇಕು

* ತಂಬಾಕು ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ತಂಬಾಕು ಮುಕ್ತ ಪ್ರದೇಶವನ್ನು ನಿರ್ಮಾಣ ಮಾಡುವುದು.

– ಡಾ. ರಾಮಚಂದ್ರ ಕಾಮತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT