ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ | ಕಾಯಿಲೆಯ ಭೀತಿಯೂ ಕಾಯಿಲೆಯೇ!

Last Updated 18 ಜುಲೈ 2022, 20:30 IST
ಅಕ್ಷರ ಗಾತ್ರ

ಜಗತ್ತಿನಲ್ಲಿ ಕಾಯಿಲೆ ಇರುವವರು ಒಂದು ವಿಧದವರಾದರೆ, ದೈಹಿಕವಾಗಿ ಆರೋಗ್ಯವಾಗಿದ್ದರೂ ಯಾವುದೋ ಘೋರ ಕಾಯಿಲೆ ಬಂದೇಬಿಟ್ಟಿದೆಯೆಂಬ ಅತಾರ್ಕಿಕ ಭಯಯಲ್ಲಿ ಬದುಕುವವರು ಮತ್ತೊಂದು ಬಗೆ.

‘ಕಾಯಿಲೆ ಬೀಳುವುದಷ್ಟೇ ಅನಾರೋಗ್ಯವಲ್ಲ; ಕಾಯಿಲೆ ಬೀಳುತ್ತೇವೆಂಬ ಅಸಹಜ ಭೀತಿಯೂ ಒಂದು ವಿಧದ ವ್ಯಾಧಿ’ ಎಂದು ವೈದ್ಯಕೀಯದಲ್ಲಿ ಮಾತಿದೆ.

ಜಗತ್ತಿನಲ್ಲಿ ಕಾಯಿಲೆ ಇರುವವರು ಒಂದು ವಿಧದವರಾದರೆ, ದೈಹಿಕವಾಗಿ ಆರೋಗ್ಯವಾಗಿದ್ದರೂ ಯಾವುದೋ ಘೋರ ಕಾಯಿಲೆ ಬಂದೇಬಿಟ್ಟಿದೆಯೆಂಬ ಅತಾರ್ಕಿಕ ಭಯಯಲ್ಲಿ ಬದುಕುವವರು ಮತ್ತೊಂದು ಬಗೆ. ಕೋವಿಡ್-19 ಜಾಗತಿಕ ವಿಪತ್ತಿನ ವೇಳೆ ಈ ಭೀತಿ ತಾರಕಕ್ಕೆ ಏರಿತ್ತು. ಜನಸಾಮಾನ್ಯರಿಂದ ಈ ಭಯವನ್ನು ಕಳೆಯಲು ವೈದ್ಯಕೀಯ ಜಗತ್ತು ಪ್ರಾಯಶಃ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ವ್ಯಯಿಸಿದ್ದಕ್ಕಿಂತ ಹೆಚ್ಚಿನ ಸಮಯ, ಶ್ರಮ ವಹಿಸಿದೆ.

ಪ್ರಸ್ತುತ ಜಾಗತಿಕವಾಗಿ ಕಾಣುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ತಮ್ಮ ಪ್ರತಿಯೊಂದು ಆರೋಗ್ಯ ಸಮಸ್ಯೆಯನ್ನೂ ಗೂಗಲ್ ಜಾಲತಾಣದಲ್ಲಿ ಹುಡುಕುವುದು. ಅದರಲ್ಲಿ ಬರುವ ಸಾವಿರಾರು ಪುಟಗಳ ಪೈಕಿ ಮೊದಲ ಕೆಲವನ್ನು ಮಾತ್ರ ಓದಿ, ಮತ್ತಷ್ಟು ಗೊಂದಲವಾಗಿ, ‘ತನಗೆ ಯಾವುದೋ ಕೆಟ್ಟ ಕಾಯಿಲೆ ಬಂದಿದೆ’ ಎಂದು ಭ್ರಮಿಸಿ ಗಾಬರಿಗೊಳ್ಳುವುದು. ಅದರ ಪರಿಹಾರಕ್ಕೆ ಹಲವರು ವೈದ್ಯರನ್ನು ಸಂಪರ್ಕಿಸಿ, ತಾವು ಓದಿದ್ದನ್ನೆಲ್ಲಾ ಅವರ ಬಳಿ ಹೇಳುತ್ತಾ, ಅವರ ಯಾವುದೇ ಪರಿಹಾರವನ್ನೂ ಒಪ್ಪದೇ ಆತಂಕಕ್ಕೆ ಒಳಗಾಗುವುದು. ಇದನ್ನು ‘ಸೈಬರ್-ಕಾಂಡ್ರಿಯಾ’ ಎಂದು ಕರೆಯುತ್ತಾರೆ.

ವೈದ್ಯಕೀಯ ವ್ಯಾಸಂಗದ ವೇಳೆ ಕಾಯಿಲೆಗಳ ಕುರಿತಾದ ರೋಗಲಕ್ಷಣಗಳನ್ನು ವೈದ್ಯಕೀಯ ಪಠ್ಯಗಳಲ್ಲಿ ಓದುವಾಗ ‘ಈ ಕಾಯಿಲೆ ತನಗೇ ಇದೆ’ ಎಂದು ಭ್ರಮಿಸುವುದು ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳ ಸಾಮಾನ್ಯ ಸಮಸ್ಯೆ. ಇದರಿಂದ ಮಾನಸಿಕವಾಗಿ ವಿಚಲಿತರಾಗಿ, ತಮ್ಮ ಆಸ್ಪತ್ರೆಗಳ ಹಿರಿಯ ವೈದ್ಯರನ್ನು ಎಡತಾಕುವವರು ಹಲವರು.

ಕಾಯಿಲೆಗಳ ಅಸಹಜ ಭೀತಿಗೆ ಹಲವಾರು ಆಯಾಮಗಳಿವೆ. ತಮಗೆ ಪರಿಚಯವಿರುವ ಯಾರಿಗೋ ಕ್ಯಾನ್ಸರ್ ಇದೆ ಎಂದು ಅರಿತವರೊಬ್ಬರು, ತಮಗೆ ತಲೆನೋವು ಬಂದ ಕೂಡಲೇ ‘ಇದು ಮಿದುಳಿನ ಕ್ಯಾನ್ಸರ್ ಇರಬಹುದು’ ಎಂದು ಭ್ರಮಿಸಿ ಚಿಂತೆಗೊಳಗಾವುದು. ಅದು ನಿದ್ರಾಹೀನತೆಯಿಂದಲೋ, ಸೈನಸ್ ಸಮಸ್ಯೆಯಿಂದಲೋ, ಅಥವಾ ದೃಷ್ಟಿದೋಷ ದಿಂದಲೋ ಆದ ಸರಳ ತಲೆನೋವಿರಬಹುದು. ಆದರೆ, ತಾವು ಸಂಪರ್ಕಿಸುವ ವೈದ್ಯರ ಮೇಲೆ ನಂಬಿಕೆ ಇಲ್ಲದಿದ್ದರೆ, ಹಲವಾರು ಅನಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡು, ತಮಗೆ ತಿಳಿದ, ತಿಳಿಯದ ತಜ್ಞವೈದ್ಯರ ಬಳಿಗೆ ಹೋಗಿ ಚಿಂತಿತರಾಗುವವರು ಎಷ್ಟೋ ಮಂದಿ. ಯಾವುದೇ ತಜ್ಞವೈದ್ಯರನ್ನು ಸುಲಭವಾಗಿ, ಸೋವಿಯಾಗಿ ಸಂಪರ್ಕಿಸಲು ಸಾಧ್ಯವಿರುವ ನಮ್ಮಂತಹ ದೇಶಗಳಲ್ಲಿ ಇಂತಹ ಪ್ರಸಂಗಗಳು ಹೆಚ್ಚು. ಕೆಲವು ಮುಂದುವರೆದ ದೇಶಗಳಲ್ಲಿ ಹೀಗೆ ನೇರವಾಗಿ ತಜ್ಞವೈದ್ಯರನ್ನು ಸಂಪರ್ಕಿಸುವ ಅವಕಾಶ ಇರುವುದಿಲ್ಲ.

ಮೊದಲು ಪ್ರಾಥಮಿಕ ಹಂತದ ವೈದ್ಯರನ್ನು ಕಂಡು, ತಮ್ಮ ಸಮಸ್ಯೆಯನ್ನು ಅವರಲ್ಲಿ ಚರ್ಚಿಸಬೇಕು. ಪ್ರಾಥಮಿಕ ವೈದ್ಯರು ಶಿಫಾರಸು ಮಾಡಿದರೆ ಮಾತ್ರ ತಜ್ಞವೈದ್ಯರನ್ನು ಕಾಣಬಹುದು. ಇಂತಹ ಸಂದರ್ಭದಲ್ಲಿ ಆತಂಕಕ್ಕೆ ಒಳಗಾದ ರೋಗಿಗಳು ಒಂದರ ಹಿಂದೊಂದರಂತೆ ಹಲವಾರು ಪ್ರಾಥಮಿಕ ವೈದ್ಯರನ್ನು ಕಂಡು, ತಮ್ಮನ್ನು ತಜ್ಞವೈದ್ಯರಿಗೆ ಶೀಘ್ರವಾಗಿ ಶಿಫಾರಸು ಮಾಡುವಂತೆ ಗೋಗರೆಯುವುದು ಸಾಮಾನ್ಯ. ಇದರ ನಂತರವೂ ತಜ್ಞವೈದ್ಯರ ಸಲಹೆಗೆ ಕೆಲವು ವಾರಗಳಿಂದ ಕೆಲವು ತಿಂಗಳುಗಳು ಕಾಯಬೇಕು. ಈ ಅವಧಿಯಲ್ಲಿ ಅಸಹಜ ಭೀತಿಯ ರೋಗಿಗಳ ಮನಃಸ್ಥಿತಿ ತೀರಾ ನಾಜೂಕಿನದು.

ಹತಾಶೆಯಿಂದ ಅವೈಜ್ಞಾನಿಕ ಪರಿಹಾರಗಳಿಗೆ ಶರಣುಹೋದವರಿದ್ದಾರೆ. ಇದರಿಂದ ಯಾತನೆ ಮತ್ತಷ್ಟು ತೀವ್ರವಾಗುತ್ತದೆ. ಇನ್ನು ಕೆಲವರಿಗೆ ವೈದ್ಯರ ಬಳಿಗೆ ಹೋಗಲು ಭಯ. ಆದರೆ ತಮ್ಮ ಸಮಸ್ಯೆಗಳನ್ನು ಇತರರ ಬಳಿ ಸುಲಭವಾಗಿ ಚರ್ಚಿಸುತ್ತಾರೆ. ಅದರಲ್ಲಿ ಕೆಲವರು ತಮ್ಮ ಪರಿಚಿತರಿಗೆ ಆದ ತೀವ್ರವಾದ ಕಾಯಿಲೆಗಳ ಉದಾಹರಣೆಯನ್ನು ನೀಡುತ್ತಾರೆ. ಅದನ್ನು ಕೇಳಿದಾಕ್ಷಣ ‘ತನಗೂ ಅಂತಹ ಕಾಯಿಲೆಯೇ ಇದ್ದಿರಬಹುದು’ ಎನ್ನುವ ಗುಮಾನಿ ಶುರುವಾಗುತ್ತದೆ.

ಹೆಚ್ಚಿನ ಜನರ ಬಳಿ ಮಾತನಾಡಿದಷ್ಟೂ ಈ ಸಮಸ್ಯೆಗೆ ರೆಕ್ಕೆಪುಕ್ಕಗಳು ಸೇರುತ್ತಾ ಹೋಗುತ್ತವೆ. ಕಡೆಗೊಂದು ದಿನ ಧೈರ್ಯ ಮಾಡಿ ವೈದ್ಯರ ಬಳಿ ಹೋದಾಗ, ತಮಗೆ ವಾಸ್ತವದಲ್ಲಿ ಇದ್ದ ರೋಗಲಕ್ಷಣಗಳಿಗಿಂತಲೂ ತಾವು ಭ್ರಮೆಗೆ ಸಿಲುಕಿದ ಸಮಸ್ಯೆಗಳನ್ನೇ ಚರ್ಚಿಸುತ್ತಾರೆ. ಇದರಿಂದ ಅವರ ರೋಗನಿರ್ಧಾರವಾಗುವುದು ಗೋಜಲಾಗುತ್ತದೆ; ಅನಗತ್ಯ ಪರೀಕ್ಷೆಗಳಿಗೆ ದಾರಿಯಾಗುತ್ತದೆ.

ಮತ್ತೂ ಹಲವರು ತಮ್ಮ ಕುಟುಂಬದ, ಸ್ನೇಹಿತರ, ಪರಿಚಿತರ ಕಾಯಿಲೆಗಳ ವಿವರಗಳನ್ನು ಅರಿತಾಗ ತಮಗೂ ಅವರಿಗೂ ಇರುವ ಸಾಮ್ಯಗಳನ್ನು ಲೆಕ್ಕ ಹಾಕುತ್ತಾರೆ. ವಯಸ್ಸು, ಆರ್ಥಿಕ ಸ್ಥಿತಿ, ಮನೆಯ ಪರಿಸ್ಥಿತಿ, ಉದ್ಯೋಗ, ಚಟಗಳು, ಚಟುವಟಿಕೆಗಳು, ಹವ್ಯಾಸ ಮೊದಲಾದ ವಿವರಗಳನ್ನು ತಾಳೆ ಮಾಡುತ್ತಾ, ಅವರಿಗೆ ಬಂದದ್ದು ತನಗೂ ಬರಬಹುದು ಅಥವಾ ಈಗಾಗಲೇ ಬಂದುಬಿಟ್ಟಿದೆ ಎಂಬ ಭಯಕ್ಕೆ ಒಳಗಾಗುತ್ತಾರೆ. ಅದರಲ್ಲೂ ಆಪ್ತರೋ ಪರಿಚಿತರೋ ಆಸ್ಪತ್ರೆಗೆ ಸೇರಿದರೆ, ಅಥವಾ ಅಂತಹ ಯಾರದ್ದೋ ಮರಣವಾದರೆ ಭೀತಿ ಮತ್ತಷ್ಟು ಉಲ್ಬಣಿಸುತ್ತದೆ.

ಆ ಸಮಯದಲ್ಲಿ ವಿವೇಚನೆ ಕೆಲಸ ಮಾಡುವುದಿಲ್ಲ; ಅತಾರ್ಕಿಕ ಚಿಂತೆಗಳಿಗೆ ದಾರಿಯಾಗುತ್ತದೆ. ವೈದ್ಯರ ಬಳಿಗೆ ಬಂದು, ತಮಗೆ ತಲೆಯಿಂದ ಹಿಡಿದು ಕಾಲಿನವರೆಗೆ ಎಲ್ಲಾ ಪರೀಕ್ಷೆಗಳನ್ನೂ ಮಾಡುವಂತೆ ಆಗ್ರಹ ಮಾಡುತ್ತಾರೆ. ಅಂತಹವರ ಭೀತಿಯನ್ನು ನಗದಿಗೆ ಪರಿವರ್ತಿಸುವ ‘ಮಾಸ್ಟರ್ ಹೆಲ್ತ್ ಚೆಕ್ ಅಪ್’ ಎನ್ನುವ ಯೋಜನೆಗಳೂ ಇವೆ! ಇಂತಹ ಪರೀಕ್ಷೆಗಳಲ್ಲಿ ಯಾವುದೋ ಒಂದು ಅಂಶ ಏರಿಳಿತವಾಗಿದೆ ಎಂದರೆ, ಅದನ್ನು ಹಿಡಿದು ಆತಂಕಿತರಾಗುತ್ತಾರೆ. ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳೇ ತುಂಬಿಕೊಳ್ಳುತ್ತವೆ. ಇದರಿಂದ ಸಹಜವಾಗಿಯೇ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.

ಇದಕ್ಕೆ ಪರಿಹಾರವೇನು? ಮೊದಲನೆಯದಾಗಿ ಪ್ರತಿಯೊಬ್ಬರೂ ತಮ್ಮ ನಂಬಿಕೆಯ ಕುಟುಂಬ ವೈದ್ಯರನ್ನು ಆಯ್ದುಕೊಳ್ಳಬೇಕು. ನೂರಕ್ಕೆ ಎಂಬತ್ತು ಅನಾರೋಗ್ಯಗಳನ್ನು ಅವರು ಸರಿಪಡಿಸಬಲ್ಲರು. ಉಳಿದವಕ್ಕೆ ಯಾರನ್ನು ಕಾಣಬೇಕೆಂಬ ಸರಿಯಾದ ಸಲಹೆ ನೀಡಬಲ್ಲರು. ಜೊತೆಗೆ ಯಾವುದೇ ಅನಗತ್ಯ ಆತಂಕ ಕಾಡದಂತೆ ಧೈರ್ಯ ತುಂಬಿ ಪರಿಸ್ಥಿತಿಯನ್ನು ನಿರ್ವಹಿಸಬಲ್ಲರು. ಇದೊಂದು ರೀತಿ ಅರಿಯದ ಜಾಡಿನಲ್ಲಿ ಪ್ರಯಾಣ ಮಾಡುವಾಗ ದಾರಿಯನ್ನು ಚೆನ್ನಾಗಿ ಬಲ್ಲ ಮಾರ್ಗದರ್ಶಿ ಜೊತೆಗಿದ್ದಂತೆ. ಅಂತಹವರು ತಮ್ಮ ಬೆಂಬಲಕ್ಕೆ ಇದ್ದಾರೆಂಬ ಭಾವನೆಯೇ ಮನಸ್ಸನ್ನು ಹಗುರ ಮಾಡುತ್ತದೆ. ಚಿತ್ತವೆಂಬುದು ಸ್ತಿಮಿತದಲ್ಲಿ ಇರುವಾಗ ತಪ್ಪು ನಿರ್ಧಾರಗಳ ಸಾಧ್ಯತೆ ಕಡಿಮೆ.

ಎರಡನೆಯದಾಗಿ, ಆರೋಗ್ಯಕ್ಕೆ ಸಂಬಂಧಿಸಿದ ಜಾಲತಾಣಗಳನ್ನು ನೋಡುವಾಗ ಬಹಳ ಎಚ್ಚರ ವಹಿಸಬೇಕು. ಸಾಮಾನ್ಯವಾಗಿ ಗೂಗಲ್ ಜಾಲತಾಣದಲ್ಲಿ ಹುಡುಕುವಾಗ ಬಹುತೇಕ ಮಂದಿ ಒಂದೆರಡು ಪುಟಗಳಿಗಿಂತ ಹೆಚ್ಚು ಮುಂದೆ ಹೋಗುವುದಿಲ್ಲ. ಅನೇಕ ಬಾರಿ ಸರಿಯಾಗಿ ಹುಡುಕಲು ಬಾರದಿದ್ದಾಗ ಸಮಂಜಸ ಮಾಹಿತಿ ನೀಡುವ ಪುಟಗಳು ಮೊದಲು ಕಾಣುವುದಿಲ್ಲ. ಹೀಗಾಗಿ, ತಪ್ಪು ಮಾಹಿತಿಗೆ ಆಹಾರವಾಗುವ ಸಾಧ್ಯತೆಗಳೇ ಹೆಚ್ಚು. ಬಹುತೇಕ ವೈದ್ಯರು ವೈದ್ಯಕೀಯ ಜಾಲತಾಣಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತಾರೆ. ರೋಗಿಯ ಆಯಾ ಕಾಯಿಲೆಗೆ ನಿಖರ ಮಾಹಿತಿ ನೀಡಬಲ್ಲ ಜಾಲತಾಣಗಳನ್ನು ಅವರೇ ಸೂಚಿಸಬಲ್ಲರು. ಹೀಗಾಗಿ, ಗೂಗಲ್ ಮಾಡುವುದಕ್ಕಿಂತ ಮೊದಲು ವೈದ್ಯರನ್ನು ಕಾಣುವುದು ಸೂಕ್ತ.

ಒಮ್ಮೆ ಕಾಯಿಲೆಯ ಅಸಹಜ ಭೀತಿ ಗೀಳಿನ ಸ್ವರೂಪ ಪಡೆದರೆ, ಆಗ ಮನೋವೈದ್ಯರ ಸಲಹೆ ಬೇಕಾಗಬಹುದು. ಇದನ್ನು ಕೂಡ ಮುಕ್ತ ಮನಸ್ಸಿನಿಂದಲೇ ಸ್ವೀಕರಿಸಬೇಕು. ಈ ನಿಟ್ಟಿನಲ್ಲಿ ರೋಗಿಗಿಂತಲೂ ಹೆಚ್ಚಾಗಿ ಅವರ ಕುಟುಂಬ ಅಥವಾ ಗೆಳೆಯರು ನಿರ್ಧಾರ ತೆಗೆದುಕೊಳ್ಳಬೇಕು. ಈ ಗೀಳನ್ನು ಯಶಸ್ವಿಯಾಗಿ ಗುಣಪಡಿಸಬಲ್ಲ ವಿಧಾನಗಳಿವೆ.

ಆರೋಗ್ಯರಕ್ಷಣೆ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿ. ಆದರೆ, ಅದು ಅಗತ್ಯಕ್ಕಿಂತ ವಿಪರೀತವೂ ಆಗಬಾರದು. ಜೀವನದ ಇತರ ವಿಷಯಗಳಂತೆ ಇದರಲ್ಲೂ ಒಂದು ಸುವರ್ಣ ಮಧ್ಯಮಾರ್ಗವನ್ನೇ ಅನುಸರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT