ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ–ಕುಶಲ | ಪ್ರಾಣಿಯೊಂದಿಗೆ ಪಯಣ: ಆಟದೊಂದಿಗೆ ಆಸನ

Published 4 ಜೂನ್ 2024, 0:31 IST
Last Updated 4 ಜೂನ್ 2024, 0:31 IST
ಅಕ್ಷರ ಗಾತ್ರ
ಯೋಗ ಪ್ರತಿಯೊಬ್ಬರಿಗೂ ಉಪಯುಕ್ತ. ಮಕ್ಕಳಾದಿಯಾಗಿ ಪ್ರತಿಯೊಬ್ಬರೂ ಯೋಗ ಕಲಿಯುವುದು ವೈಯಕ್ತಿಕ, ಸಾಂಸಾರಿಕ ಹಾಗೂ ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಬಹಳ ಅಗತ್ಯ. ವಿಶೇಷವಾಗಿ ಬಾಲ್ಯದಲ್ಲೇ ಯೋಗವನ್ನು ಪ್ರಾರಂಭಿಸುವುದು ಒಳಿತು. ಮಕ್ಕಳಿಗೆ ಯೋಗವನ್ನು ಆಟೋಪಾದಿಯಲ್ಲಿ ಹೇಳಿಕೊಡುವುದು ಅವಶ್ಯಕ. ಮಕ್ಕಳನ್ನು ಯೋಗದೆಡೆಗೆ ಸೆಳೆಯಲು ಯೋಗಾಸನಗಳು ಬಹು ಉಪಯುಕ್ತ ಮಾರ್ಗ. ಯೋಗಾಸನಗಳಲ್ಲಿರುವ ಬಾಗುವಿಕೆ, ಸಮತೋಲನ ಮಕ್ಕಳಲ್ಲಿ ಒಳ್ಳೆಯ ಉತ್ಸಾಹವನ್ನು ಉಂಟುಮಾಡುವುದರಲ್ಲಿ ಅನುಮಾನವೇ ಇಲ್ಲ. ಆಸನಗಳೊಮದಿಗೆ ಯೋಗದಲ್ಲಿ ಅವಶ್ವಕವಾದಂಥ ಮಕ್ಕಳ ಉತ್ತಮ ಬೆಳವಣಿಗೆಗೆ ಪೂರಕವಾದಂತಹ ಕೆಲವು ನೈತಿಕ ಮೌಲ್ಯಗಳನ್ನು ಕಲಿಸುವುದು ಅವಶ್ಯಕ. ಈ ದಿಶೆಯಲ್ಲಿ ಪ್ರಾಣಿಪ್ರಪಂಚದ ಹೆಸರುಗಳನ್ನಳ್ಳಂತಹ ಕೆಲವು ಆಸನಗಳೊಂದಿಗೆ, ಅವುಗಳಿಂದ ಕಲಿಯಬಹುದಾದಂತಹ ಕೆಲವು ನೀತಿಗಳನ್ನೂ ನೋಡೋಣ.

 ಭುಜಂಗಾಸನ:

1. ಎದೆಯ ಮೇಲೆ ಮಲಗಿ; ಕಾಲುಗಳನ್ನು ನೀಳವಾಗಿ ಚಾಚಿ.
2. ಎರಡೂ ಹಸ್ತಗಳನ್ನು ಎದೆಯ ಗೂಡಿನ ಪಕ್ಕದಲ್ಲಿ ಇರಿಸಿ.
3. ಹಸ್ತಗಳನ್ನು ಒತ್ತುತ್ತಾ ನಿಧಾನವಾಗಿ ದೇಹದ ಮೇಲ್ಭಾಗವನ್ನು ಹಿಂದಕ್ಕೆ ಬಾಗಿಸಿ; ಕೈಗಳನ್ನು ನೇರ ಮಾಡಿ; ಕತ್ತನ್ನೂ ಹಿಂದಕ್ಕೆ ಬಾಗಿಸಿ.
4. ಸುಮಾರು 20 ಸೆಕಂಡುಗಳಷ್ಟು ಕಾಲ ಈ ಸ್ಥಿತಿಯನ್ನು ಕಾಯ್ದುಕೊಂಡು ನಂತರ ವಿರಮಿಸಿ; ಮತ್ತೊಮ್ಮೆ ಮಾಡಿ
ಭುಜಂಗಾಸನ ಬೆನ್ನುಗಂಬಕ್ಕೆ ಬಹಳ ಉಪಯುಕ್ತ. ಉದರ, ಎದೆಯ ಅಂಗಾಂಗಳಿಗೂ ಉತ್ತಮವಾದ ಚಾಚುವಿಕೆ ಲಭ್ಯವಾಗುತ್ತದೆ. ‘ಭುಜಂಗ’ ಎಂದರೆ ಹಾವು. ಹಾವು ದ್ವೇಷದ ಸಂಕೇತವೂ ಆಗಿರುತ್ತದೆ. ಮಕ್ಕಳು ದ್ವೇಷಬುದ್ಧಿಯನ್ನು ಬೆಳೆಸಿಕೊಳ್ಳದೇ ಇರುವಂತೆ ಈ ಆಸನ ಅಭ್ಯಾಸದ ಸಮಯದಲ್ಲಿ ವಿವರಿಸಬಹುದು.


 ಉಷ್ಟ್ರಾಸನ:

1. ಮಂಡಿಯ ಮೇಲೆ ನಿಂತು ನಿಧಾನವಾಗಿ ಹಿಂದಕ್ಕೆ ಬಾಗಿ.
2. ಎರಡೂ ಕೈಗಳಿಂದ ಪಾದದ ಕೀಲುಗಳನ್ನು ಹಿಡಿದುಕೊಂಡು, ಕತ್ತನ್ನೂ ಹಿಂದಕ್ಕೆ ಚಾಚುತ್ತಾ ಪೃಷ್ಠಗಳನ್ನು ಮುಂದಕ್ಕೆ ತಳ್ಳಬೇಕು.
3. ಸುಮಾರು 20 ಸೆಕಂಡುಗಳಷ್ಟು ಕಾಲ ಈ ಸ್ಥಿತಿಯನ್ನು ಕಾಯ್ದುಕೊಂಡು ನಂತರ ವಿರಮಿಸಿ; ಮತ್ತೊಮ್ಮೆ ಮಾಡಿ
‘ಉಷ್ಟ್ರ’ ಎಂದರೆ ಒಂಟೆ; ಇದು ಮರಳುಗಾಡಿನಲ್ಲಿ ವಾಸ ಮಾಡುವ ಪ್ರಾಣಿ. ಎಷ್ಟೇ ಬಿಸಿಲಿನ ತಾಪಮಾನದಲ್ಲೂ ಆರಾಮವಾಗಿ ಇರುತ್ತದೆ. ತನಗೆ ಅಗತ್ಯವಿರುವಷ್ಟು ನೀರನ್ನು ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಜೀವನದಲ್ಲಿ ಎಂತಹುದೇ ಸನ್ನಿವೇಶಕ್ಕೂ ಒಗ್ಗಿಕೊಳ್ಳುವ ಮನೋಭಾವವನ್ನು ನಾವೂ ಬೆಳೆಸಿಕೊಳ್ಳಬೇಕೆಂಬುದನ್ನು ಈ ಆಸನದ ಸಮಯದಲ್ಲಿ ತಿಳಿಯಹೇಳಬಹುದು.

ಕಪೋತಾಸನ:

ಭುಜಂಗಾಸನ ಹಾಗೂ ಉಷ್ಟ್ರಾಸನದ ಮುಂದುವರೆದ ಭಾಗವೇ ಕಪೋತಾಸನ. ಉಷ್ಟ್ರಾಸನದಿಂದ ಮುಂದುವರಿದು, ಹಿಂದಕ್ಕೆ ಬಾಗಿ ತಲೆಯನ್ನು ಪಾದಕ್ಕೆ ತಾಗಿಸುವುದೇ ಕಪೋತಾಸನ. ಅಂತೆಯೇ ಭುಜಂಗಾಸನವನ್ನು ಮಾಡಿ ಕಾಲುಗಳನ್ನು ಮಡಿಚಿ, ತಲೆಯನ್ನು ಪಾದಗಳಿಗೆ ತಾಗಿಸುವುದೇ ರಾಜ ಕಪೋತಾಸನ. ‘ಕಪೋತ’ ಎಂದರೆ ಪಾರಿವಾಳ. ಪಾರಿವಾಳ ಶಾಂತಿಯ ಸಂಕೇತ. ಮಕ್ಕಳಲ್ಲಿ ಶಾಂತಸ್ವಭಾವವನ್ನು ಬೆಳೆಸಿಕೊಳ್ಳುವುದು ಎಷ್ಟು ಅವಶ್ಯಕ ಎಂಬುದನ್ನು ಈ ಆಸನದ ಸಮಯದಲ್ಲಿ ತಿಳಿಸಿಕೊಡಬಹುದು.

 ಮಂಡೂಕಾಸನ:



1. ಎರಡೂ ಕಾಲುಗಳನ್ನು ಪಕ್ಕಕ್ಕೆ ಮಡಿಚಿ ಕುಳಿತುಕೊಳ್ಳಿ. ಮಂಡಿಗಳನ್ನು ಸಾಕಷ್ಟು ವಿಸ್ತಾರವಾಗಿರಿಸಿಕೊಳ್ಳಿ.
2. ಬೆನ್ನುಗಂಬವನ್ನು ಚಾಚುತ್ತಾ, ನಿಧಾನವಾಗಿ ಮುಂದಕ್ಕೆ ಬಾಗಿ, ಹಣೆಯನ್ನು ವಿರಮಿಸಿ, ಕೈಗಳೆರಡನ್ನೂ ಮುಂದಕ್ಕೆ ಚಾಚಿ
3. ಸುಮಾರು 2 ನಿಮಿಷಗಳಷ್ಟು ಕಾಲ ಈ ಸ್ಥಿತಿಯಲ್ಲಿ ವಿರಮಿಸಬೇಕು.


ಇದು ಒಳ್ಳೆಯ ವಿಶ್ರಾಂತಿಯನ್ನು ನೀಡುವ ಹಾಗೂ ಬೆನ್ನುಗಂಬಕ್ಕೆ, ಕಾಲುಗಳಿಗೆ, ಇಡಿಯ ದೇಹಕ್ಕೆ ಚೈತನ್ಯವನ್ನು ನೀಡುವ ಆಸನವಾಗಿದೆ. ‘ಮಂಡೂಕ’ ಎಂದರೆ ಕಪ್ಪೆ; ನೀರು ಹಾಗೂ ನೆಲ ಎರಡರ ಮೇಲೂ ವಾಸಿಸುವ ಪ್ರಾಣಿ. ಹೊಂದಾಣಿಕೆಯ ಮನೋಭಾವವನ್ನು ಸೂಚಿಸುತ್ತದೆ. ಮಕ್ಕಳೂ ಹೊಂದಾಣಿಕೆಯ ಭಾವನೆಯನ್ನು ಬೆಳೆಸಿಕೊಳ್ಳುವುದು ಅವಶ್ಯಕ ಎಂಬ ಅರಿವನ್ನು ಅವರಿಗೆ ಈ ಆಸನದ ಸಮಯದಲ್ಲಿ ಮುಟ್ಟಿಸಬಹುದು.

 ಮತ್ಸ್ಯಾಸನ:



1. ಕಾಲುಗಳನ್ನು ಎಳೆದುಕೊಂಡು ಒಂದರಮೇಲೊಂದು ನಿಧಾನವಾಗಿ ತೊಡೆಯ ಮೇಲೆ ಎಳೆದುಕೊಂಡು ಪಾದಗಳನ್ನು ಉದರದ ಹತ್ತಿರ ಬರುವಂತೆ ಪದ್ಮಾಸನದಲ್ಲಿ ಕುಳಿತುಕೊಳ್ಳಿ.
2. ನಿಧಾನವಾಗಿ ಹಿಂದಕ್ಕೆ ಬಾಗಿ ಬೆನ್ನಿನ ಮೇಲೆ ಮಲಗಿ.
3. ಎದೆಯನ್ನು ಮೇಲಕ್ಕೆತ್ತಿ, ನೆತ್ತಿಯ ಭಾಗವನ್ನು ನೆಲದ ಮೇಲೆ ವಿರಮಿಸಿ.
4. ಮೊಣಕೈಗಳನ್ನು ನೆಲದ ಮೇಲೆ ಒತ್ತುತ್ತಾ, ಎರಡೂ ಹಸ್ತಗಳಿಂದ ಪಾದವನ್ನು ಹಿಡಿದುಕೊಳ್ಳಿ.
5. ಸುಮಾರು 1 ನಿಮಿಷಗಳಷ್ಟು ಕಾಲ ಈ ಸ್ಥಿತಿಯಲ್ಲಿ ವಿರಮಿಸಿ.


ಇದು ಕುತ್ತಿಗೆ ಹಾಗೂ ಬೆನ್ನುಗಂಬಕ್ಕೆ ಉಪಯುಕ್ತ. ವಿಶೇಷವಾಗಿ ಗುರಾಣಿಕ, ಬದಿಗುರಾಣಿಕ ಗ್ರಂಥಿಗಳಿಗೆ ಚೈತನ್ಯವನ್ನು ನೀಡಿ ಉತ್ತಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ‘ಮತ್ಸ್ಯ’ ಎಂದರೆ ಮೀನು. ಮೀನನ್ನು ಹಿಡಿಯಲು ಒಂದು ಸಣ್ಣ ಎರೆಹುಳುವನ್ನು ಕೊಕ್ಕೆಗೆ ಚುಚ್ಚಿ, ದಾರದಿಂದ ಬಿಗಿದು ಆಹಾರವಾಗಿ ನೀರಿನಲ್ಲಿ ಬಿಡುತ್ತಾರೆ. ಇದರ ರುಚಿಯ ಆಸೆಗೆ ಮನಸೋತ ಮೀನು ಕೊಕ್ಕೆಗೆ ಸಿಲುಕಿ ಬೀಳುತ್ತದೆ. ಮಕ್ಕಳು ಅನ್ಯ ಆಕರ್ಷಣೆಗೆ ಒಳಗಾದರೆ ಕೆಡಕುಂಟಾಗುತ್ತದೆ ಎಂಬ ಸಂದೇಶವನ್ನು ಈ ಆಸನಕಾಲದಲ್ಲಿ ನೀಡಬಹುದು.

ಸೂಚನೆ: ಮಕ್ಕಳು ಆಸನಗಳನ್ನು ತಜ್ಞರ ಮಾರ್ಗದರ್ಶನದಲ್ಲಿಯೇ ಮಾಡತಕ್ಕದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT