ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯ 73 ಸಾವಿರ ಮಕ್ಕಳಿಗೆ ರಾಗಿ ಪೇಯ ವಿತರಣೆ

Published 22 ಫೆಬ್ರುವರಿ 2024, 14:10 IST
Last Updated 22 ಫೆಬ್ರುವರಿ 2024, 14:10 IST
ಅಕ್ಷರ ಗಾತ್ರ

ಚಾಮರಾಜನಗರ: ಮಧ್ಯಾಹ್ನದ ಬಿಸಿಯೂಟ ಯೋಜನೆಯ ಭಾಗವಾಗಿ, ವಾರದಲ್ಲಿ ಮೂರು ದಿನ ಬಿಸಿ ಹಾಲಿನೊಂದಿಗೆ ರಾಗಿ ಹೆಲ್ತ್‌ ಮಿಕ್ಸ್‌ (ರಾಗಿ ಮಾಲ್ಟ್‌) ಬೆರೆಸಿ ವಿತರಿಸುವ ಯೋಜನೆಗೆ ಗುರುವಾರ ಜಿಲ್ಲೆಯಾದ್ಯಂತ ಚಾಲನೆ ಸಿಕ್ಕಿದೆ. ‌

ಚಿಕ್ಕಬಳ್ಳಾಪುರದ  ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ರಾಗಿ ಹೆಲ್ತ್‌ ಮಿಕ್ಸ್‌ ಪೂರೈಸುತ್ತದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಹಾಲಿನೊಂದಿಗೆ ರಾಗಿ ಹೆಲ್ತ್‌ ಮಿಕ್ಸ್‌ ಬೆರೆಸಿ ನೀಡಲಾಗುತ್ತದೆ.

ಒಬ್ಬ ವಿದ್ಯಾರ್ಥಿಗೆ ಪ್ರತಿ ದಿನಕ್ಕೆ 5 ಗ್ರಾಂನಷ್ಟು ನೀಡಬೇಕು ಎಂದು ಸರ್ಕಾರ ನಿಗದಿ ಮಾಡಿದೆ. ಅ ಪ್ರಮಾಣವನ್ನೇ ಪರಿಗಣಿಸಿ ವಾರದಲ್ಲಿ ಮೂರು ದಿನ ನೀಡಲಾಗುತ್ತದೆ. ಜಿಲ್ಲೆಯಲ್ಲಿ 73,668 ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಗುರುವಾರ ರಾಜ್ಯ ಮಟ್ಟದಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿದ್ದು, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಆರಂಭಿಸಲಾಗಿದೆ’ ಎಂದು ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಗುರುಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

ನಗರದಲ್ಲಿ ಚಾಲನೆ: ಜಿಲ್ಲಾ ಮಟ್ಟ ಹಾಗೂ ಚಾಮರಾಜನಗರ ತಾಲ್ಲೂಕು ಮಟ್ಟದ  ಉದ್ಘಾಟನಾ ಕಾರ್ಯಕ್ರಮ ಸಂತೇಮರಹಳ್ಳಿ ರಸ್ತೆಯಲ್ಲಿರುವ ಉಪ್ಪಾರ ಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಿತು.  

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ‘ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕೇವಲ ಹಾಲು ಕೊಡುವ ಬದಲು ಅದರ ಜೊತೆಗೆ ಪ್ರತಿ ದಿನ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ನೀಡಲು ಮುಂದಾಗಿದೆ’ ಎಂದರು.

ಮಕ್ಕಳು ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮಕ್ಕಳು ಶಾಲೆಗಳಲ್ಲಿ ನೀಡುವ ಪೌಷ್ಟಿಕ ಆಹಾರವನ್ನು ಸೇವಿಸಿ ವಿದ್ಯೆಗೆ ಹೆಚ್ಚು ಒತ್ತು ನೀಡಬೇಕು’ ಎಂದು ಹೇಳಿದರು. 

ಡಯಟ್ ಪ್ರಾಶುಪಾಲ ಕಾಶೀನಾಥ್ ಮಾತನಾಡಿ, ‘ಮಕ್ಕಳು ನಮ್ಮ ದೇಶದ ಮುಂದಿನ ಪ್ರಜೆಗಳು. ಮಕ್ಕಳಿಗೆ ಜ್ಞಾನವನ್ನು ತುಂಬುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಒತ್ತುಕೊಟ್ಟು ಮುಂದೆ ಸಾಗಬೇಕಿದೆ. ಸರ್ಕಾರಿ ಶಾಲೆಗಳ ಮಕ್ಕಳು  ಹಸಿವಿನಿಂದ ಇರಬಾರದು ಎಂದು ಮದ್ಯಾಹ್ನದ ಊಟ, ಜೊತೆ ಮೊಟ್ಟೆ, ರಾಗಿ ಹೆಲ್ತ್ ಮಿಕ್ಸ್ ನೀಡುತ್ತಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಮಾತನಾಡಿ, ‘ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲಿನ ಜೊತೆಯಲ್ಲಿ ರಾಗಿ ಮಿಕ್ಸ್‌ ನೀಡುವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಮಕ್ಕಳು ಶಕ್ತಿ ಹೀನಾರಾಗಬಾರದು, ಸರ್ಕಾರವು ನೀಡುವ ಪೌಷ್ಟಿಕ ಆಹಾರ ಪಡೆದು ಶಕ್ತಿವಂತರಾಗುವುದರ ಜೊತೆಗೆ ಜ್ಞಾನವನ್ನೂ ಹೆಚ್ಚಿಸಿಕೊಳ್ಳಬೇಕು’ ಎಂದರು. ‌‌

ನಗರಸಭೆ ಸದಸ್ಯ ಬಸವಣ್ಣ ಮಾತನಾಡಿದರು.‌ ಜಿಲ್ಲಾ ಆಕ್ಷರ ದಾಸೋಹ ಅಧಿಕಾರಿ ಗುರುಲಿಂಗಯ್ಯ, ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ವೆಂಕಟೇಶ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವರಾಜು, ಸಿ.ಆರ್.ಪಿ ಗಂಗಾಂಬಿಕೆ, ಎಸ್.ಡಿ.ಎಂ.ಸಿ ಸದಸ್ಯ ಮಹದೇವಸ್ವಾಮಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕ ಚಿಕ್ಕಬಸವಯ್ಯ, ಹಾಗೂ ಶಾಲಾ ಶಿಕ್ಷಕ ವೃಂದದವರು ಹಾಗೂ ಮಕ್ಕಳು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT