ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಖಾನೆ ಮುಚ್ಚದಿದ್ದರೆ ಕ್ರಿಮಿನಲ್‌ ಪ್ರಕರಣ: ಈಶ್ವರ ಖಂಡ್ರೆ

ಯತ್ನಾಳ ಕಾರ್ಖಾನೆಗೆ ₹ 1.5 ಕೋಟಿ ದಂಡ ವಿಧಿಸಿದ್ದ ಕೇಂದ್ರ ಪರಿಸರ ಸಚಿವಾಲಯ
Published 27 ಜನವರಿ 2024, 23:24 IST
Last Updated 27 ಜನವರಿ 2024, 23:24 IST
ಅಕ್ಷರ ಗಾತ್ರ

ಕಲಬುರಗಿ: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನದ ಚಿಂಚೋಳಿಯ ಸಿದ್ಧಸಿರಿ ಎಥೆನಾಲ್ ಹಾಗೂ ಪವರ್ ಘಟಕದಲ್ಲಿ ಪರವಾನಗಿ ಪಡೆಯದೇ ಲಕ್ಷಾಂತರ ಟನ್ ಕಬ್ಬು ನುರಿಸಲಾಗಿದೆ. ಬಾಯ್ಲರ್ ಅಳವಡಿಸಿದ್ದಾರೆ. ನಿಯಮಾವಳಿ ಪ್ರಕಾರ ನೋಟಿಸ್ ನೀಡಲಾಗಿದ್ದು, ಕಾರ್ಖಾನೆ ಬಂದ್ ಮಾಡಲೇಬೇಕು. ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಎಚ್ಚರಿಸಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಘಟಕಕ್ಕೆ ಕೇಂದ್ರ ಪರಿಸರ ಸಚಿವಾಲಯ ಒಂದೂವರೆ ವರ್ಷದ ಹಿಂದೆ ₹1.5 ಕೋಟಿ ದಂಡ ವಿಧಿಸಿತ್ತು. ದಂಡ ಪಾವತಿಸಿದ ಬಳಿಕವೂ ಅಗತ್ಯ ಅನುಮತಿ ಪಡೆದಿರಲಿಲ್ಲ’ ಎಂದರು. 

‘ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ‌ಎಂಬ ಯತ್ನಾಳ ಹೇಳಿಕೆಯೇ ಹಾಸ್ಯಾಸ್ಪದ. ಕೇಂದ್ರ ಪರಿಸರ ಸಚಿವಾಲಯ ದಂಡ ವಿಧಿಸಿರುವುದರ ಹಿಂದೆಯೂ ರಾಜಕೀಯ ಉದ್ದೇಶವಿತ್ತು ಎಂದು ಯತ್ನಾಳ ಹೇಳುತ್ತಾರೆಯೇ’ ಎಂದು ಖಂಡ್ರೆ ಅವರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

‘ಜಲ ಮತ್ತು ವಾಯು ಮಾಲಿನ್ಯ ಮಾಡುವ ಕಾರ್ಖಾನೆಗಳ ಬಗ್ಗೆ ವರದಿ ನೀಡುವಂತೆ ವಾರದ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚಿಸಿದ್ದೆ. ಅದರಂತೆ ರಾಜ್ಯದ ವಿವಿಧ ಕಾರ್ಖಾನೆಗಳು ಕಾಯ್ದೆ ಉಲ್ಲಂಘಿಸಿದ್ದರಿಂದ ಕಾನೂನು ರೀತಿಯಲ್ಲಿ ನೋಟಿಸ್ ನೀಡಲಾಗಿದೆ. ಯತ್ನಾಳ ಅವರಿಗೆ ಸೇರಿದ ಕಾರ್ಖಾನೆಗಷ್ಟೇ ನೋಟಿಸ್‌ ಕೊಟ್ಟಿಲ್ಲ’ ಎಂದು ಹೇಳಿದರು.

ಕಾನೂನು ಹೋರಾಟ: ಯತ್ನಾಳ

ವಿಜಯಪುರ: ‘ರೈತರಿಗೆ ನೆರವಾಗಲು ಹಾಗೂ ಹಿಂದುಳಿದ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಲು ಕಾರ್ಖಾನೆ ಸ್ಥಾಪಿಸಲಾಗಿದೆ. ಆದರೆ ಕಾಂಗ್ರೆಸ್‌ ಸರ್ಕಾರ ರಾಜಕೀಯವಾಗಿ ನನ್ನನ್ನು ಎದುರಿಸಲಾಗದೇ ಎಥೆನಾಲ್‌ ಕಾರ್ಖಾನೆಗೆ ನೋಟಿಸ್‌ ಕೊಡಿಸಿದೆ. ಈ ನೋಟಿಸ್‌ ಆದೇಶಗಳಿಗೆ ಹೆದರುವ ಜಾಯಮಾನ ನನ್ನದಲ್ಲ. ಕಾನೂನು ರೀತಿ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗುವುದು’ ಎಂದು ಚಿಂಚೋಳಿಯ ಸಿದ್ಧಸಿರಿ ಎಥೆನಾಲ್ ಹಾಗೂ ಪವರ್ ಘಟಕದ ಮಾಲೀಕರೂ ಆದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. 

‘ರಾಜಕೀಯ ಒತ್ತಡಕ್ಕೆ ಮಣಿದು ನನ್ನ ಕಾರ್ಖಾನೆಯನ್ನು ಮುಚ್ಚಿಸುವುದರಿಂದ ಇವರಿಗೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಾರ್ಖಾನೆ ಮತ್ತೆ ತೆರೆಯುವುದು ನಿಶ್ಚಿತ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ಕಾಂಗ್ರೆಸ್‌ ಆಡಳಿತದ ವಿರುದ್ಧ ಹೋರಾಟ ಮಾಡಲು ಶಕ್ತಿ ಇಮ್ಮಡಿಯಾಗಿದೆ’ ಎಂದು ಹೇಳಿದ್ದಾರೆ.

ಕಾರ್ಖಾನೆ ಮುಚ್ಚಲು ಎ.ಸಿ ಸೂಚನೆ

ಚಿಂಚೋಳಿ: ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿದ ಬೆನ್ನಲ್ಲೇ ಸಿದ್ಧಸಿರಿ ಎಥೆನಾಲ್‌ ಹಾಗೂ ಪವರ್‌ ಘಟಕಕ್ಕೆ ಸೇಡಂ ಉಪವಿಭಾಗಾಧಿಕಾರಿ ಆಶಪ್ಪ ಪೂಜಾರಿ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಕಾರ್ಖಾನೆ ಮುಚ್ಚುವಂತೆ ಸೂಚಿಸಿತು. ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಪವಿಭಾಗಾಧಿಕಾರಿ ನಿಯಮಾವಳಿ ಪಾಲಿಸದಿರುವ ಬಗ್ಗೆ ಕಾರ್ಖಾನೆಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಕಬ್ಬು ನುರಿಸಿದ ವಿವರ ಹಾಗೂ ಕಬ್ಬಿನ ದಾಸ್ತಾನು ವಿವರ ಹಂಚಿಕೊಂಡ ಕಾರ್ಖಾನೆಯ ಅಧಿಕಾರಿಗಳು ‘ಸರ್ಕಾರದ ಆದೇಶಕ್ಕೆ ಬದ್ಧರಿದ್ದೇವೆ. ಕಾರ್ಖಾನೆ ಬಂದ್ ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT