ಶನಿವಾರ, 1 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಮ್ಮ ಮೊದಲ ಗ್ಯಾರಂಟಿ ಎಂಎಸ್‌ಪಿ ಖಾತರಿ: ಖರ್ಗೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಂಎಸ್‌ಪಿಗೆ ಕಾನೂನು – ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಭರವಸೆ
Published 13 ಫೆಬ್ರುವರಿ 2024, 13:15 IST
Last Updated 13 ಫೆಬ್ರುವರಿ 2024, 13:15 IST
ಅಕ್ಷರ ಗಾತ್ರ

ಅಂಬಿಕಾಪುರ (ಛತ್ತೀಸಗಢ): ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಖಾತರಿ ಕಾನೂನು ಜಾರಿಗೆ ತರಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ರೈತರ `ದೆಹಲಿ ಚಲೋ' ಆಂದೋಲನದ ನಡುವೆ ಖರ್ಗೆ ಈ ಘೋಷಣೆ ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನ ಇದು ಪಕ್ಷದ ಮೊದಲ ಗ್ಯಾರಂಟಿ ಎಂದೂ ಅವರು ಹೇಳಿದರು.

ಛತ್ತೀಸಗಢದ ಅಂಬಿಕಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ ಜೋಡೊ ನ್ಯಾಯ ಯಾತ್ರೆ' ವೇಳೆ ಮಾತನಾಡಿದ ಖರ್ಗೆ , ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿಯವರು ನೀಡುವ ಗ್ಯಾರಂಟಿಗಳನ್ನು ಜನರು ನಂಬಬಾರದು ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರೈತರ ಹಿತದೃಷ್ಟಿಯಿಂದ ಎಂಎಸ್‌ಪಿಗೆ ಕಾನೂನು ತರುತ್ತೇವೆ. ಇದು ನಮ್ಮ ಮೊದಲ ಭರವಸೆ ಎಂದು ಖರ್ಗೆ ಹೇಳಿದರು.

ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಅವರು ತಮಗಾಗಿ ಮಾತ್ರ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಬಡವರ ಪಕ್ಷವಾದರೆ, ಬಿಜೆಪಿ ಶ್ರೀಮಂತರ ಪಕ್ಷ ಎಂದು ಕಿಡಿಕಾರಿದರು.

ರಾಹುಲ್‌ ಗಾಂಧಿ ಹೇಳಿದ್ದಿಷ್ಟು:

‘ರೈತ ಬಂಧುಗಳೇ, ಇಂದು ಐತಿಹಾಸಿಕ ದಿನ. ಸ್ವಾಮಿನಾಥನ್ ಆಯೋಗದ ಪ್ರಕಾರ ಬೆಳೆಗಳ ಮೇಲೆ ಪ್ರತಿ ರೈತರಿಗೆ ಎಂಎಸ್‌ಪಿ ಕಾನೂನುಬದ್ಧ ಖಾತರಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕ್ರಮವು 15 ಕೋಟಿ ರೈತ ಕುಟುಂಬಗಳ ಏಳಿಗೆಯನ್ನು ಖಾತ್ರಿಪಡಿಸುವ ಮೂಲಕ ಅವರ ಜೀವನವನ್ನು ಸುಧಾರಿಸುತ್ತದೆ. ನ್ಯಾಯದ ಹಾದಿಯಲ್ಲಿ ಇದು ಕಾಂಗ್ರೆಸ್‌ನ ಮೊದಲ ಗ್ಯಾರಂಟಿ' ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT