ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Odisha IT Raid: 5 ದಿನ, ₹353 ಕೋಟಿ ನೋಟು ಎಣಿಸಿ ಸುಸ್ತಾದ 80 ಸಿಬ್ಬಂದಿ

Published 11 ಡಿಸೆಂಬರ್ 2023, 11:46 IST
Last Updated 11 ಡಿಸೆಂಬರ್ 2023, 11:46 IST
ಅಕ್ಷರ ಗಾತ್ರ

ನವದೆಹಲಿ/ಭುವನೇಶ್ವರ: ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಒಡೆತನದ, ಒಡಿಶಾ ಮೂಲದ ಡಿಸ್ಟಿಲರಿ ಕಂಪನಿಯ ವಿರುದ್ಧದ ಆದಾಯ ತೆರಿಗೆ ಇಲಾಖೆಯ ಶೋಧ ಕಾರ್ಯಾಚರಣೆ ಆರನೇ ದಿನಕ್ಕೆ ಕಾಲಿಟ್ಟಿದೆ.

ಐದು ದಿನಗಳಲ್ಲಿ ₹353 ಕೋಟಿ ನಗದು ಹಣವನ್ನು ಎಣಿಕೆ ಮಾಡಲಾಗಿದೆ. ಇದು ದೇಶದ ಯಾವುದೇ ತನಿಖಾ ಏಜೆನ್ಸಿ ಒಂದೇ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿದ, ಲೆಕ್ಕಪತ್ರವಿಲ್ಲದ ಗರಿಷ್ಠ ಮೊತ್ತದ ನಗದು ವಶಪಡಿಸಿಕೊಂಡಿರುವ ಪ್ರಕರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾರ್ಖಂಡ್‌ನಿಂದ ರಾಜ್ಯಸಭೆಗೆ ಪ್ರವೇಶಿಸಿರುವ ಕಾಂಗ್ರೆಸ್ ಮುಖಂಡ ಧೀರಜ್ ಪ್ರಸಾದ್ ಅವರ ರಾಂಚಿ ಮತ್ತು ಒಡಿಶಾದ ಇತರ ಭಾಗಗಳಲ್ಲಿರುವ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಡಿ.6ರಿಂದ ಪ್ರಾರಂಭಿಸಿದ್ದು, ಸೋಮವಾರ (ಡಿ.11) ಆರನೇ ದಿನಕ್ಕೆ ಕಾಲಿಟ್ಟಿದೆ. ನೋಟುಗಳ ಎಣಿಕೆ ಕಾರ್ಯ ಮುಗಿದಿದ್ದು, ದಾಖಲೆಗಳನ್ನು ಪರಿಶೀಲಿಸುವ ಕೆಲಸ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ.

ಭಾನುವಾರ ರಾತ್ರಿಯ ಲೆಕ್ಕಾಚಾರದ ಪ್ರಕಾರ ₹353 ಕೋಟಿ ಹಣವನ್ನು ಲೆಕ್ಕ ಮಾಡಲಾಗಿದೆ. ಹಣ ಲೆಕ್ಕ ಮಾಡಲು ಹತ್ತಾರು ನೋಟು ಎಣಿಕೆ ಯಂತ್ರಗಳನ್ನು ಬಳಸಲಾಗಿದ್ದು, ಅವುಗಳೂ ಕಾರ್ಯ ನಿಲ್ಲಿಸುವಷ್ಟು ಪ್ರಮಾಣದಲ್ಲಿ ನೋಟುಗಳಿದ್ದವು.

6 ದಿನಗಳಲ್ಲಿ 80 ಸಿಬ್ಬಂದಿ, ಹಗಲು ರಾತ್ರಿ ದುಡ್ಡು ಎಣಿಕೆ

ಆದಾಯ ತೆರಿಗೆ ಇಲಾಖೆ ಹಾಗೂ ಬ್ಯಾಂಕ್‌ನ ಒಟ್ಟು 80ರಷ್ಟು ಸಿಬ್ಬಂದಿಯನ್ನು ಒಳಗೊಂಡ 9 ತಂಡಗಳು ದಿನದ ಇಪ್ಪತ್ತನಾಲ್ಕು ಗಂಟೆಯೂ ಪಾಳಿಗಳಲ್ಲಿ ಕುಳಿತು ಈ ಹಣ ಎಣಿಕೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ದೊರೆತಿರುವುದರಲ್ಲಿ ಹೆಚ್ಚಿನವು ₹500 ಮುಖಬೆಲೆಯ ನೋಟುಗಳು.

ಮತ್ತಷ್ಟು ಜನರ ಸಹಾಯ

ಬೇರೆ ಬೇರೆ ಕಡೆಗಳಲ್ಲಿ ಇನ್ನೂ 10 ಅಲ್ಮೇರಾಗಳು ಪತ್ತೆಯಾದ ಬಳಿಕ, ಭದ್ರತಾ ಅಧಿಕಾರಿಗಳು, ಚಾಲಕರು ಮತ್ತು ಇತರ ಸಿಬ್ಬಂದಿಯೂ ಸೇರಿದಂತೆ ಇನ್ನೂ ಸುಮಾರು 200ರಷ್ಟು ಮಂದಿಯ ತಂಡವು ತನಿಖೆಗೆ ಸೇರಿಕೊಂಡಿದೆ.

ಒಡಿಶಾದ ವಿವಿಧ ಬ್ಯಾಂಕುಗಳ ಶಾಖೆಗಳಲ್ಲಿ ಈ ಹಣವನ್ನು ಇರಿಸಲೆಂದು ಸುಮಾರು 200 ಬ್ಯಾಗುಗಳು ಹಾಗೂ ಟ್ರಂಕ್‌ಗಳಲ್ಲಿ ಸಾಗಿಸಲಾಗಿದೆ.

ಬೌದ್ಧ್ ಡಿಸ್ಟಿಲರೀಸ್, ಅದರ ವಿತರಕರು ಮತ್ತಿತರರ ಮೂಲಕ ದೇಸೀ ಸಾರಾಯಿಯ ಮಾರಾಟದಿಂದ ಈ ಪ್ರಮಾಣದ ನಗದು ಬಂದಿರಬಹುದು ಎಂದು ಇಲಾಖೆ ಅಂದಾಜಿಸಿದೆ.

ಸಂಬಾಲ್ಪುರ, ಟಿಟ್ಲಾಗಢ, ಸುಂದರ್‌ಗಢ, ಬೋಲಂಗೀರ್ ಮತ್ತು ಭುವನೇಶ್ವರದಲ್ಲಿ ದಾಳಿ ನಡೆಸಲಾಗಿದ್ದು, ಗರಿಷ್ಠ ಪ್ರಮಾಣದ ಹಣ ಸಿಕ್ಕಿರುವುದು ಬೌದ್ಧ್ ಡಿಸ್ಟಿಲರೀಸ್‌ನ ಬೊಲಂಗೀರ್ ಜಿಲ್ಲೆಯ ಸ್ಥಾವರದಲ್ಲಿ ಎಂದು ಮೂಲಗಳು ಹೇಳಿವೆ.

ಇದುವೇ ಗರಿಷ್ಠ ನಗದು

ಇದು ಒಂದೇ ಸಂಸ್ಥೆ ಅಥವಾ ಬಳಗದ ವಿರುದ್ಧ ನಡೆಸಿದ ದಾಳಿಯಲ್ಲಿ ದೊರೆತ ಅತ್ಯಂತ ಗರಿಷ್ಠ ಪ್ರಮಾಣದ ನಗದು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ 2019ರಲ್ಲಿ ಜಿಎಸ್‌ಟಿ ಗುಪ್ತ ದಳವು ಕಾನ್ಪುರ ಮೂಲದ ಉದ್ಯಮಿಯ ನಿವಾಸ, ಸಂಸ್ಥೆಗಳ ಮೇಲೆ ದಾಳಿ ನಡೆಸಿ ₹257 ಕೋಟಿ ಮೊತ್ತದ ನಗದು ವಶಪಡಿಸಿಕೊಂಡಿತ್ತು.

2018ರ ಜುಲೈ ತಿಂಗಳಲ್ಲಿ ತಮಿಳುನಾಡಿನ ರಸ್ತೆ ನಿರ್ಮಾಣ ಸಂಸ್ಥೆಯ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ₹163 ಕೋಟಿ ನಗದು ಪತ್ತೆಯಾಗಿತ್ತು.

ರಾಜಕೀಯ ಹೇಳಿಕೆಗಳು

ಈ ಮಧ್ಯೆ, ಕಾಂಗ್ರೆಸ್ ಪಕ್ಷವು ಪ್ರತಿಕ್ರಿಯಿಸಿದ್ದು, ಪಕ್ಷಕ್ಕೂ ಅವರ ವ್ಯವಹಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರವು ಕಾಂಗ್ರೆಸ್ ಮುಖಂಡರನ್ನು ಮಾತ್ರ ಗುರಿಯಾಗಿಸುತ್ತಿದೆ, ಬಿಜೆಪಿ ಮುಖಂಡರ ವಿರುದ್ಧ ಆದಾಯ ತೆರಿಗೆ ಇಲಾಖೆಯ ದಾಳಿ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಆದರೆ, ಅವರು ಕಾಂಗ್ರೆಸ್ ಸಂಸದರಾಗಿರುವುದರಿಂದ ಆತನ ಬಳಿ ಇಷ್ಟು ಪ್ರಮಾಣದ ನಗದು ಹಣ ಎಲ್ಲಿಂದ ಬಂತು ಎಂಬುದನ್ನು ಅವರು ಅಧಿಕೃತವಾಗಿ ಹೇಳಬೇಕು ಎಂದು ಜಾರ್ಖಂಡ್ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆ ಹೇಳಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೌನವಾಗಿರುವುದೇಕೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಅವರು ಪ್ರಶ್ನಿಸಿದ್ದಾರೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಿ, ‘ಸಾರ್ವಜನಿಕರಿಂದ ಲೂಟಿ ಮಾಡಿದ ಪೈಸೆ ಪೈಸೆಯನ್ನೂ ಹಿಂತಿರುಗಿಸಲಾಗುತ್ತದೆ. ಇದು ಮೋದಿ ಗ್ಯಾರಂಟಿ’ ಎಂದು ಜನರಿಗೆ ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT