ರೆಕ್ಯಾವಿಕ್: ಐಸ್ಲೆಂಡ್ನಲ್ಲಿ ಕಳೆದ 14 ಗಂಟೆಗಳ ಅವಧಿಯಲ್ಲಿ 800 ಬಾರಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 5.2ರಷ್ಟಿದ್ದ ತೀವ್ರತೆಯಿಂದಾಗಿ ಜ್ವಾಲಾಮುಖಿ ಸ್ಪೋಟಿಸುವ ಭೀತಿ ಎದುರಾಗಿದೆ. ಇದರಿಂದಾಗಿ ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಹೇರಲಾಗಿದೆ.
‘ದೇಶದ ನೈರುತ್ಯ ಭಾಗದ ರೆಕ್ಯಾಜೇನ್ಸ್ ಭಾಗದಲ್ಲಿ ಭೂಮಿ ಕಂಪಿಸಿದೆ. ಉತ್ತರದ ಗ್ರಿಂಡ್ವಿಕ್ನಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ. ಈ ಸರಣಿ ಭೂಕಂಪದಿಂದ ಜ್ವಾಲಾಮುಖಿ ಸ್ಪೋಟಿಸುವ ಸಾಧ್ಯತೆ ಇದೆ‘ ಎಂದು ನಾಗರಿಕ ರಕ್ಷಣೆ ಹಾಗೂ ತುರ್ತು ನಿರ್ವಹಣಾ ಇಲಾಖೆ ತಿಳಿಸಿದೆ.
‘ಗ್ರಿಂಡ್ವಿಕ್ ಪ್ರದೇಶದಲ್ಲಿ ಸುಮಾರು ನಾಲ್ಕು ಸಾವಿರ ಜನರು ವಾಸಿಸುತ್ತಿದ್ದಾರೆ. ಇವರನ್ನು ಸ್ಥಳಾಂತರಿಸುವ ಕಾರ್ಯ ನಡೆಸಲಾಗುತ್ತಿದೆ. ಶುಕ್ರವಾರ ಸಂಜೆ 5.30ರಿಂದ ಭೂಮಿ ಕಂಪಿಸಲು ಪ್ರಾರಂಭಿಸಿತು. ಕಳೆದ ಅಕ್ಟೋಬರ್ನಿಂದ ಇಲ್ಲಿಯವರೆಗೆ ಸುಮಾರು 24 ಸಾವಿರ ಬಾರಿ ಭೂಮಿ ಕಂಪಿಸಿದ ಅನುಭವ ಇಲ್ಲಿನ ಜನರಿಗೆ ಆಗಿದೆ. ಅದರಲ್ಲೂ ಕಳೆದ 14 ಗಂಟೆಗಳಲ್ಲಿ 800 ಬಾರಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.