ಮಂಗಳೂರು: ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಕೆಲದಿನಗಳ ಹಿಂದೆ ಮೂರು ಮನೆಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಜೇಶ್ವರದ ಮಹಮ್ಮದ್ ಸಿಯಾಬ್ (30), ಬಜಪೆಯ ಮಹಮ್ಮದ್ ಅರ್ಫಾಜ್ (19), ಸಫ್ವಾನ್ (20) ಮತ್ತು ಸಜಿಪದ ಜಂಶೀರ್ (27) ಬಂಧಿತ ಆರೋಪಿಗಳು. ಜು.10ರಂದು ಬೆಳಗಿನ ಜಾವ ಮುದುಂಗಾರಕಟ್ಟೆ ಚೆಕ್ ಪಾಯಿಂಟ್ ಬಳಿ ಕಾರಿನಲ್ಲಿದ್ದ ಮೂವರನ್ನು ತಪಾಸಣೆ ನಡೆಸಿದಾಗ ಅವರ ಬಳಿ ಎರಡು ಡ್ರಾಗನ್, ಮೂರು ಡಮ್ಮಿ ಪಿಸ್ತೂಲ್, ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್, ಮನೆ ಬಾಗಿಲು ಒಡೆಯಲು ಬಳಸುವ ಸಲಕರಣೆಗಳು ಕಂಡಬಂದಿವೆ. ಈ ವೇಳೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 130 ಗ್ರಾಂ ಚಿನ್ನಾಭರಣ, ಒಂದು ವಾಚ್, ಕಾರು ಸೇರಿ ಒಟ್ಟು ₹12.50 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಯಾಬ್ ನೀಡಿದ ಮಾಹಿತಿ ಆಧರಿಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಜಂಶೀರ್‌ನನ್ನು ಬಂಧಿಸಲಾಗಿದೆ ಎಂದರು.
ಆರೋಪಿಗಳ ಮೇಲೆ ಈ ಹಿಂದೆ ಬೇರೆ ಬೇರೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಮಹಮ್ಮದ್ ಸಿಯಾಬ್ ವಿರುದ್ಧ ನಾಲ್ಕು ದರೋಡೆ ಮತ್ತು ಮನೆಯಲ್ಲಿ ಕಳ್ಳತನ ಪ್ರಕರಣ, ಕೊಲೆಯತ್ನ, ಮಾದಕ ವಸ್ತು ಮಾರಾಟ ಸೇರಿದಂತೆ ಒಟ್ಟು 13 ಪ್ರಕರಣಗಳು, ಮಹಮ್ಮದ್ ಅರ್ಫಾಜ್ ವಿರುದ್ಧ ಮೂರು ಪ್ರಕರಣಗಳು, ಸಫ್ವಾನ್ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಆರೋಪಿಗಳು, ಮಂಗಳೂರು ನಗರ, ಉಡುಪಿ, ಹಾಸನ, ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಮನೆಯಲ್ಲಿ ಕಳ್ಳತನ, ದರೋಡೆ ನಡೆಸಿರುವ ಬಗ್ಗೆ ಮಾಹಿತಿ ಇದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಕೊಣಾಜೆ ಠಾಣೆಯ ಇನ್‌ಸ್ಪೆಕ್ಟರ್ ರವೀಂದ್ರ ಸಿ.ಎಂ, ಪಿಎಸ್‌ಐ ವಿನೋದ್, ಎಎಸ್‌ಐಗಳಾದ ಜಗನ್ನಾಥ ಶೆಟ್ಟಿ, ಸಂಜೀವ್ ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ದಿನೇಶ್‌ಕುಮಾರ್, ಎಸಿಪಿ ಧನ್ಯಾ ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.