ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೊಲೀಸರ ಕಾಲರ್ ಹಿಡಿಯಲೂ ಸಿದ್ಧ: ಬಿಜೆಪಿ ಶಾಸಕ ಹರೀಶ್ ಪೂಂಜ

‘ಇನ್ನು ಮುಂದೆಯೂ ಪೊಲೀಸರ ಕಾಲರ್ ಹಿಡಿಯಲು ನಾನು ಸಿದ್ಧ. ಜೈಲಿನಲ್ಲಿ ಕುಳಿತುಕೊಳ್ಳಲೂ ನಾನು ಸಿದ್ಧ’ ಎಂದು ಇಲ್ಲಿನ ಶಾಸಕ ಹರೀಶ್ ಪೂಂಜ ಹೇಳಿದರು.
Published 20 ಮೇ 2024, 16:05 IST
Last Updated 20 ಮೇ 2024, 16:05 IST
ಅಕ್ಷರ ಗಾತ್ರ

ಬೆಳ್ತಂಗಡಿ (ದಕ್ಷಿಣ ಕನ್ನಡ): ‘ಬೆಳ್ತಂಗಡಿಯ ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿದ್ದೇ ಆದರೆ, ಇನ್ನು ಮುಂದೆಯೂ ಪೊಲೀಸರ ಕಾಲರ್ ಹಿಡಿಯಲು ನಾನು ಸಿದ್ಧ. ಜೈಲಿನಲ್ಲಿ ಕುಳಿತುಕೊಳ್ಳಲೂ ನಾನು ಸಿದ್ಧ’ ಎಂದು ಇಲ್ಲಿನ ಶಾಸಕ ಹರೀಶ್ ಪೂಂಜ ಹೇಳಿದರು.

ಕಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಅಕ್ರಮ ದಾಸ್ತಾನು ಪ್ರಕರಣದಲ್ಲಿ ಪಕ್ಷದ ಯುವ ಮೋರ್ಚಾದ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಬಂಧನವನ್ನು ಖಂಡಿಸಿ ಹಾಗೂ ಪೊಲೀಸರಿಗೆ ಬೆದರಿಕೆ ಒಡ್ಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಶಾಸಕ ಹರೀಶ್‌ ಪೂಂಜ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಇಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರನ್ನು ನಿಂದಿಸಿದ ಅವರು, ‘ಶಶಿರಾಜ್ ಬಂಧನ ಆದಾಗ ಸುಬ್ಬಾಪುರ ಮಠ್‌ಗೆ ಫೋನ್ ಮಾಡಿದರೆ ರಿಸೀವ್ ಮಾಡಿಲ್ಲ. ತಹಶೀಲ್ದಾರ್‌ಗೆ ಫೋನ್ ಮಾಡಿದರೆ ಅವರ ಫೋನೂ ಸ್ವಿಚ್ ಆಫ್. ಜಿಲ್ಲೆಯಿಂದ ತಾಲ್ಲೂಕಿನವರೆಗೂ ಇರುವ ನೀವೆಲ್ಲಾ ಕಾಂಗ್ರೆಸ್ ಏಜೆಂಟರಾ’ ಎಂದು ಅಧಿಕಾರಿಗಳನ್ನು ಉದ್ದೇಶಿಸಿ ಪ್ರಶ್ನಿಸಿದರು.

‘ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಯು ಒಬ್ಬ ಶಾಸಕ ಮಾಡಿದ ಕರೆಯನ್ನು ಸ್ವೀಕರಿಸುವುದಿಲ್ಲ ಎಂದಾದರೆ ನೀವು ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುವವರು ಎಂದರ್ಥ. ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ವಿನಾ ಕಾರಣ ಒಳಗೆ ಕುಳ್ಳಿರಿಸುವಾಗ ನಾನು ಆಕ್ರೋಶದಲ್ಲಿಯೇ ಮಾತನಾಡುತ್ತೇನೆ. ಅಧಿಕಾರಯುತವಾಗಿಯೇ ಮಾತನಾಡುತ್ತೇನೆ. ನಿರಪರಾಧಿಗೆ ಶಿಕ್ಷೆ ಆಗದ ಹಾಗೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ’ ಎಂದರು.

ಆರೋಪಿ ಶಶಿರಾಜ್‌ ಬಿಡುಗಡೆಗೆ ಆಗ್ರಹಿಸಿ ಬೆಳ್ತಂಗಡಿ ಠಾಣಾಧಿಕಾರಿಗೆ ಅವಾಚ್ಯವಾಗಿ ಬೈದು, ಬೆದರಿಕೆ ಒಡ್ಡಿದ ಆರೋಪದ ಮೇಲೆ ಶಾಸಕ ಹರೀಶ್ ಪೂಂಜ ವಿರುದ್ಧ ಭಾನುವಾರ ಎಫ್‌ಐಆರ್‌ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT