ಮಂಗಳೂರು: ನಗರದ ಕಪಿತಾನಿಯೊ ಬಳಿ ಜುಲೈ 8ರಂದು ದಿನಸಿ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ಬರಕಟ್ಟಿ ಮಹರ್ ನಿವಾಸಿಗಳಾದ ಮಹಮ್ಮದ್ ನಜೀರ್ ಹೌಸಿಲ್ ಖಾನ್ (27), ಇಲಿಯಾಸ್ ಖಾನ್ (22) ಬಂಧಿತ ಆರೋಪಿಗಳು. ಬಂಧಿತರಿಂದ ₹1.13 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದ ಪತ್ತೆ ಹೇಗೆ?: ಕಪಿತಾನಿಯೊ ಸಮೀಪದ ಬಿ.ಎಚ್.ಟ್ರೇಡರ್ಸ್‌ನ ಶಟರ್ ಮೀಟಿ ಒಳ ನುಗ್ಗಿದ ಕಳ್ಳರು ₹10.20 ಲಕ್ಷ ನಗದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಅಂಗಡಿ ಮಾಲೀಕ ಉಮ್ಮರ್ ಫಾರೂಕ್ ಕಂಕನಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಠಾಣೆಯ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದ ತನಿಖಾ ತಂಡದವರು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದ ಫೂಟೇಜ್ ಆಧರಿಸಿ, ಆಟೊರಿಕ್ಷಾ ಚಾಲಕರನ್ನು ವಿಚಾರಿಸಿದ್ದರು. ಇಬ್ಬರು ಹಿಂದಿ ಮಾತನಾಡುವ ವ್ಯಕ್ತಿಗಳನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟ ಬಗ್ಗೆ ಅವರು ಮಾಹಿತಿ ನೀಡಿದ್ದರು. ಆ ದಿನದ ರೈಲು ವೇಳಾಪಟ್ಟಿ ಪರಿಶೀಲಿಸಿ, ಎರ್ನಾಕುಲಂ– ಪುಣೆ ಎಕ್ಸ್‌ಪ್ರೆಸ್‌ನಲ್ಲಿ ಇಬ್ಬರು ಮಂಗಳೂರಿನಿಂದ ಪುಣೆಗೆ ಟಿಕೆಟ್ ಪಡೆದು ಹೋಗಿರುವ ಬಗ್ಗೆ ಮಾಹಿತಿ ಪಡೆದು, ಪುಣೆ ಆರ್‌ಪಿಎಫ್‌ನವರನ್ನು ಸಂಪರ್ಕಿಸಲಾಯಿತು ಎಂದರು.
ರಾತ್ರಿ 11.45ರ ವೇಳೆಗೆ ಪುಣೆಯ ಆರ್‌ಪಿಎಫ್ ಮತ್ತು ಜಿಆರ್‌ಪಿ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರನ್ನು ಅಲ್ಲಿಯೇ ಹಿಡಿದಿಟ್ಟುಕೊಳ್ಳುವಂತೆ ವಿನಂತಿಸಿ, ಕಂಕನಾಡಿ ಠಾಣೆಯ ತನಿಖಾ ತಂಡದವರು ಪುಣೆಗೆ ತೆರಳಿ, ಆ ಇಬ್ಬರು ಶಂಕಿತರನ್ನು ವಿಚಾರಿಸಿದ್ದು, ಅವರಿಬ್ಬರು ಕೃತ್ಯ ನಡೆಸಿದ್ದನ್ನು ಒಪ್ಪಿಕೊಂಡಿದ್ದಾರೆ. ಹಣದ ಬ್ಯಾಗ್ ಅನ್ನು ರೈಲ್ವೆ ಫ್ಲಾಟ್‌ಫಾರ್ಮ್‌ನ ಬೇರೊಂದು ಕಡೆ ಬಚ್ಚಿಟ್ಟಿದ್ದಾಗಿ ಬಾಯ್ಬಿಟ್ಟಿದ್ದಾರೆ. ಒಟ್ಟು ಮೊತ್ತದಲ್ಲಿ ₹7,000 ಅವರು ಖರ್ಚು ಮಾಡದ್ದಾಗಿ ಹೇಳಿದ್ದಾರೆ. ಕೃತ್ಯ ವರದಿಯಾದ 16 ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ತಿಳಿಸಿದರು.
ಉತ್ತರ ಪ್ರದೇಶದ ಹಲವರು ಮಂಗಳೂರಿಗೆ ಕೆಲಸಕ್ಕೆ ಬಂದಿದ್ದು, ಅಂತೆಯೇ ಆರೋಪಿಗಳಿಬ್ಬರು ಇಲ್ಲಿ ಕೆಲಸ ಹುಡಕಿ ಬಂದಿದ್ದಾರೆ. ತಕ್ಷಣಕ್ಕೆ ಕೆಲಸ ಸಿಗದೇ ಇದ್ದುದರಿಂದ ಮತ್ತು ಅವರ ಬಳಿ ಇದ್ದ ಹಣ ಖರ್ಚಾಗಿರುವುದರಿಂದ ಸಣ್ಣಪುಟ್ಟ ಕಳ್ಳತನ ನಡೆಸಲು ನಿರ್ಧರಿಸಿ, ಪಂಪ್‌ವೆಲ್ ಸುತ್ತಮುತ್ತ ಓಡಾಡಿದ್ದಾರೆ. ಈ ವೇಳೆ ಬಿ.ಎಚ್.ಟ್ರೇಡರ್ಸ್‌ನಲ್ಲಿ ಹೆಚ್ಚು ವ್ಯಾಪಾರ ನಡೆಯುತ್ತಿರುವುದನ್ನು ಗಮನಿಸಿ, ರಾತ್ರಿ ವೇಳೆ ಆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದು, ದೊಡ್ಡ ಮೊತ್ತದ ಹಣ ದೊರೆತ ಕಾರಣ ಪುಣೆಗೆ ಪ್ರಯಾಣಿಸಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ ಎಂದು ಅನುಪಮ್ ಅಗರ್ವಾಲ್ ಹೇಳಿದರು.
ಅಂಗಡಿ ಶಟರ್ಸ್ ಮೀಟಿ ಕೇವಲ ಆರು ನಿಮಿಷಗಳಲ್ಲಿ ಅವರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಶಿವಕುಮಾರ್, ಶಾಂತಪ್ಪ, ಎಎಸ್‌ಐಗಳಾದ ವೆಂಕಟೇಶ್ ಕುಂಬ್ಳೆ, ಅಶೋಕ್, ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.