ಗದಗ: ನಟ ಯಶ್ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಯುವಕರು ಮೃತಪಟ್ಟಿದ್ದಾರೆ.
ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದ ಅಂಬೇಡ್ಕರ್ ನಗರದ ಯಶ್ ಅಭಿಮಾನಿಗಳು ಭಾನುವಾರ ರಾತ್ರಿ ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸುವುದಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಕಟೌಟ್ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಲಕ್ಷ್ಮೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹನುಮಂತ ಹರಿಜನ, ಮುರಳಿ ನಡುವಿನಮನಿ ಮತ್ತು ನವೀನ ಗಾಜಿ ಮೃತ ಯುವಕರು. ಈ ವೇಳೆ ಇನ್ನೂ ಮೂರು ಮಂದಿ ಗಂಭಿರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯುವಕರ ಹಠಾತ್ ಸಾವಿನಿಂದಾಗಿ ಸೂರಣಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.
ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಡಾಕ್ಟರ್ ಚಂದ್ರು ಲಮಾಣಿ ಆಸ್ಪತ್ರೆಗೆ ಭೇಟಿ ನೀಡಿದ್ದರು.