ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲ್ಕನೇ ಹಂತದ ಮತದಾನ: ಅಖಿಲೇಶ್‌, ಒವೈಸಿ ಭವಿಷ್ಯ ನಿರ್ಧಾರ ಇಂದು

ನಾಲ್ಕನೇ ಹಂತದ ಮತದಾನಕ್ಕೆ ವೇದಿಕೆ ಸಜ್ಜು; ಕಣದಲ್ಲಿ 1,717 ಅಭ್ಯರ್ಥಿಗಳು
Published 12 ಮೇ 2024, 23:24 IST
Last Updated 13 ಮೇ 2024, 2:34 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ ನಡೆಯಲಿದೆ. 96 ಕ್ಷೇತ್ರಗಳಲ್ಲಿ ಒಟ್ಟು 1,717 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಸಂಕ್ಷಿಪ್ತ ವಿವರ ಇಲ್ಲಿದೆ;

ಅಖಿಲೇಶ್‌ ಯಾದವ್ (ಎಸ್‌ಪಿ)

ಕ್ಷೇತ್ರ: ಕನೌಜ್‌, ಉತ್ತರ ಪ್ರದೇಶ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ ಅವರ ಕುಟುಂಬದ ಪ್ರಭಾವವಿರುವ ಕನೌಜ್‌ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಅವರ ಪುತ್ರ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಅಖಿಲೇಶ್‌ ಅವರ ಪತ್ನಿ ಡಿಂಪಲ್‌ ಯಾದವ್‌ ಅವರು ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷವು ತೇಜ್ ಪ್ರತಾಪ್‌ ಯಾದವ್‌ ಅವರ ಹೆಸರನ್ನು ಆರಂಭದಲ್ಲಿ ಘೋಷಿಸಿತ್ತು. ಬಳಿಕ ಅವರನ್ನು ಬದಲಿಸಿ ಅಖಿಲೇಶ್‌ ಅವರೇ ಕಣಕ್ಕಿಳಿದಿದ್ದಾರೆ. ಬಿಜೆಪಿಯು ಕಳೆದ ಬಾರಿ ಗೆದ್ದಿದ್ದ ಸುಬ್ರತ್‌ ಪಾಠಕ್‌ ಅವರನ್ನು ಅಖಾಡಕ್ಕಿಳಿಸಿದೆ. ಬಿಎಸ್‌ಪಿಯಿಂದ ಇಮ್ರಾನ್‌ ಬಿನ್‌ ಜಾಫರ್‌ ಕಣದಲ್ಲಿದ್ದಾರೆ.

ಗಿರಿರಾಜ್‌ ಸಿಂಗ್ (ಬಿಜೆಪಿ)

ಕ್ಷೇತ್ರ: ಬೆಗುಸರಾಯ್, ಬಿಹಾರ 

ಬಿಜೆಪಿಯು ಬೆಗುಸರಾಯ್‌ ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರನ್ನೇ ಕಣಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಗಿರಿರಾಜ್‌ ಅವರು, ಸಿಪಿಐನಿಂದ ಸ್ಪರ್ಧಿಸಿದ್ದ ಕನ್ಹಯ್ಯ ಕುಮಾರ್‌ ಅವರನ್ನು 4,22,217 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಎಡಪಕ್ಷದ ಪ್ರಾಬಲ್ಯವಿರುವ ಈ ಕ್ಷೇತ್ರದಿಂದ ‘ಇಂಡಿಯಾ’ ಕೂಟದ ಅಭ್ಯರ್ಥಿಯಾಗಿ ಸಿಪಿಐನ ಅವಧೇಶ್‌ ಕುಮಾರ್‌ ರಾಯ್‌ ಕಣದಲ್ಲಿದ್ದಾರೆ. 

ಅರ್ಜುನ್‌ ಮುಂಡಾ (ಬಿಜೆಪಿ) 

ಕ್ಷೇತ್ರ: ಖುಂಟಿ, ಜಾರ್ಖಂಡ್

ಜಾರ್ಖಂಡ್‌ನ ಖುಂಟಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಪೈಪೋಟಿ ಪುನರಾವರ್ತನೆಯಾಗಲಿದೆ. ಬಿಜೆಪಿಯು ಈ ಬಾರಿಯೂ ಅರ್ಜುನ್‌ ಮುಂಡಾ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಕೇಂದ್ರ ಸಚಿವರಾಗಿರುವ ಅರ್ಜುನ್‌ ಮುಂಡಾ, 2019ರ ಚುನಾವಣೆಯಲ್ಲಿ 1,445 ಮತಗಳ ಅಂತರದಿಂದ ಕಾಂಗ್ರೆಸ್‌ನ ಕಾಳೀಚರಣ್ ಮುಂಡಾ ಅವರನ್ನು ಪರಾಭವಗೊಳಿಸಿದ್ದರು. ಕಾಂಗ್ರೆಸ್ ಈ ಬಾರಿಯೂ ಕಾಳೀಚರಣ್‌ ಅವರನ್ನೇ ಸ್ಪರ್ಧೆಗಿಳಿಸಿದೆ. 

ಮಹುವಾ ಮೊಯಿತ್ರಾ (ಟಿಎಂಸಿ)

ಕ್ಷೇತ್ರ: ಕೃಷ್ಣನಗರ, ಪಶ್ಚಿಮ ಬಂಗಾಳ

ಮೋದಿ ಸರ್ಕಾರದ ಕಟು ಟೀಕಾಕಾರ್ತಿಯಾಗಿದ್ದು, ಸಂಸತ್ತಿನಿಂದ ಉಚ್ಚಾಟನೆಗೊಂಡಿದ್ದ ಮಹುವಾ ಮೊಯಿತ್ರಾ ಮತ್ತೊಮ್ಮೆ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಟಿಎಂಸಿಯಿಂದ ಸ್ಪರ್ಧಿಸಿದ್ದಾರೆ. ಅವರ ಎದುರಾಳಿಯಾಗಿ ‘ರಾಜಮಾತೆ’ ಎಂದೇ ಹೆಸರಾದ ಅಮೃತಾ ರಾಯ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಮಹುವಾ ಕಳೆದ ಬಾರಿ ಬಿಜೆಪಿಯ ಕಲ್ಯಾಣ್ ಚೌಬೆ ಅವರನ್ನು 63,218 ಮತಗಳಿಂದ ಪರಾಭವಗೊಳಿಸಿದ್ದರು.

ಶತ್ರುಘ್ನ ಸಿನ್ಹಾ (ಟಿಎಂಸಿ)

ಕ್ಷೇತ್ರ: ಅಸನ್‌ಸೋಲ್, ಪಶ್ಚಿಮ ಬಂಗಾಳ

ಜಾರ್ಖಂಡ್ ಗಡಿಗೆ ಹೊಂದಿಕೊಂಡಿರುವ ಅಸನ್‌ಸೋಲ್ ಕ್ಷೇತ್ರದ ಹಾಲಿ ಸಂಸದರಾಗಿರುವ ಶತ್ರುಘ್ನ ಸಿನ್ಹಾ ಮತ್ತೆ ಟಿಎಂಸಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸುರೇಂದ್ರಜೀತ್ ಸಿಂಗ್ ಅಹ್ಲುವಾಲಿಯಾ ಕಣಕ್ಕಿಳಿದಿದ್ದಾರೆ. 2022ರಲ್ಲಿ ನಡೆದ ಉಪಚುನಾವಣೆಯಲ್ಲಿ ಶತ್ರುಘ್ನ ಸಿನ್ಹಾ ಗೆದ್ದಿದ್ದರು.  

ಅಸಾದುದ್ದೀನ್‌ ಒವೈಸಿ (ಎಐಎಂಐಎಂ)

ಕ್ಷೇತ್ರ: ಹೈದರಾಬಾದ್, ತೆಲಂಗಾಣ

ಹೈದರಾಬಾದ್ ಲೋಕಸಭಾ ಕ್ಷೇತ್ರದಿಂದ ಎಐಎಂಐಎಂನಿಂದ ಅಸಾದುದ್ದೀನ್ ಒವೈಸಿ ಸ್ಪರ್ಧಿಸಿದ್ದಾರೆ. ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಮಾಧವಿ ಲತಾ ಕಣದಲ್ಲಿದ್ದು, ಇಬ್ಬರ ನಡುವೆ ತುರುಸಿನ ಹಣಾಹಣಿ ನಿರೀಕ್ಷಿಸಲಾಗಿದೆ. ಒವೈಸಿ ಕಳೆದ ಬಾರಿ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಭಗವಂತ್‌ ರಾವ್ ಅವರನ್ನು 2,82,186 ಮತಗಳಿಂದ ಮಣಿಸಿದ್ದರು. ಕಾಂಗ್ರೆಸ್‌ನಿಂದ ಮಹಮ್ಮದ್ ವಲೀವುಲ್ಲಾ ಸಮೀರ್ ಹಾಗೂ ಬಿಆರ್‌ಎಸ್‌ನಿಂದ ಗಡ್ಡಂ ಶ್ರೀನಿವಾಸ ಯಾದವ್ ಸ್ಪರ್ಧಿಸಿದ್ದಾರೆ.

ವೈ.ಎಸ್‌.ಶರ್ಮಿಳಾ (ಕಾಂಗ್ರೆಸ್)

ಕ್ಷೇತ್ರ: ಕಡಪ, ಆಂಧ್ರಪ್ರದೇಶ

ಆಂಧ್ರಪ್ರದೇಶದ ಕಡಪ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ವೈ.ಎಸ್‌.ರಾಜಶೇಖರ ರೆಡ್ಡಿ ಅವರ ಪುತ್ರಿ ಹಾಗೂ ಮುಖ್ಯಮಂತ್ರಿ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ಅವರ ಸಹೋದರಿ ವೈ.ಎಸ್‌. ಶರ್ಮಿಳಾ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರು ಆಂಧ್ರ ಪ್ರದೇಶ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆಯೂ ಆಗಿದ್ದಾರೆ. ವೈ.ಎಸ್‌.ಅವಿನಾಶ್‌ ಅವರು ವೈಎಸ್‌ಆರ್‌ಸಿಪಿಯಿಂದ ಎದುರಾಳಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಅಧೀರ್–ಯೂಸುಫ್ ಮುಖಾಮುಖಿ

ಕ್ಷೇತ್ರ: ಬಹರಾಂಪುರ, ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಬಹರಾಂಪುರ ಕ್ಷೇತ್ರವು ಕಾಂಗ್ರೆಸ್‌ನ ಅಧೀರ್‌ ರಂಜನ್‌ ಚೌಧರಿ ಮತ್ತು ಟಿಎಂಸಿಯ ಯೂಸುಫ್‌ ಪಠಾಣ್‌ ನಡುವಣ ಹಣಾಹಣಿಯಿಂದ ಕುತೂಹಲ ಕೆರಳಿಸಿದೆ. 1999ರಿಂದಲೂ ಈ ಕ್ಷೇತ್ರವನ್ನು ಅಧೀರ್ ರಂಜನ್ ಪ್ರತಿನಿಧಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಅಧೀರ್‌ ಅವರ ವಿರುದ್ಧ ಟಿಎಂಸಿಯು ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಸ್ಪರ್ಧೆಗಿಳಿಸಿ ಪ್ರಬಲ ಪೈಪೋಟಿ ಒಡ್ಡಿದೆ. ಬಿಜೆಪಿಯಿಂದ ನಿರ್ಮಲ್ ಕುಮರ್ ಸಹಾ ಸ್ಪರ್ಧಿಸಿದ್ದಾರೆ.

ಕಾಂಗ್ರೆಸ್ ಮತ್ತು ಟಿಎಂಸಿ ರಾಜ್ಯದಲ್ಲಿ ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತಿವೆ. ಆದರೆ, ರಾಷ್ಟ್ರಮಟ್ಟದಲ್ಲಿ ಎರಡೂ ‘ಇಂಡಿಯಾ’ ಕೂಟದ ಭಾಗವಾಗಿವೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ಅಥವಾ ಟಿಎಂಸಿ ಯಾರೇ ಗೆದ್ದರೂ ಅದು ‘ಇಂಡಿಯಾ’ ಕೂಟದ ಲೆಕ್ಕಕ್ಕೇ ಸೇರುತ್ತದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT