ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ: ನೆರವಿಗೆ ಕಾಯುತ್ತಿದೆ ‘ಆಟ’
ಒಳನೋಟ: ನೆರವಿಗೆ ಕಾಯುತ್ತಿದೆ ‘ಆಟ’
Published 11 ಫೆಬ್ರುವರಿ 2024, 0:02 IST
Last Updated 11 ಫೆಬ್ರುವರಿ 2024, 0:02 IST
ಅಕ್ಷರ ಗಾತ್ರ

ಬೆಳಗಾವಿ: ಪಾಳು ಬಿದ್ದ ಕಟ್ಟಡದಂತೆ ಕಾಣುವ ದಾವಣಗೆರೆಯ ಕ್ರೀಡಾ ವಸತಿ ನಿಲಯದಲ್ಲಿ ಬೆಳಕಿನ ವ್ಯವಸ್ಥೆಯೇ ಇಲ್ಲ. ಬೆಳಗುವ ಒಂದೆರಡು ದೀಪಗಳ ಮಂದಬೆಳಕಿನಲ್ಲೇ ನಿತ್ಯ ಅಭ್ಯಾಸ. ಇರುವ ಏಕೈಕ ಫ್ಯಾನ್‌ ಹಲವು ತಿಂಗಳಿಂದ ತಿರುಗುತ್ತಿಲ್ಲ. ಹರಿದ ಮ್ಯಾಟ್‌ಗಳಲ್ಲೇ ತಾಲೀಮು ಪೈಲ್ವಾನರಿಗೆ ಅನಿವಾರ್ಯ.

ಯಾದಗಿರಿಯಲ್ಲಿ ನಿರ್ಮಿಸಲಾದ ಕ್ರೀಡಾ ಹಾಸ್ಟೆಲ್‌ ಇನ್ನೂ ಉದ್ಘಾಟನೆಯಾಗಿಲ್ಲ. ಅದಕ್ಕೆ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲೇ ಬಾಲಕರು ಸ್ನಾನ ಮಾಡುತ್ತಾರೆ. ಅಲ್ಲಿ ಬಟ್ಟೆಗಳನ್ನು ಇರಿಸಲು ರ್‍ಯಾಕ್‌ ವ್ಯವಸ್ಥೆ ಇಲ್ಲ. ಶುಚಿತ್ವದ ಕೊರತೆ ಇದೆ. ಜೊತೆಗೆ ಅಗತ್ಯ ಮೂಲಸೌಲಭ್ಯವೂ ಇಲ್ಲ.

ರಾಯಚೂರಿನಲ್ಲೂ ಹಳೆಯ ಕ್ರೀಡಾ ಹಾಸ್ಟೆಲ್‌ ಕಟ್ಟಡ ದುಃಸ್ಥಿತಿಯಲ್ಲಿದೆ. ಡಾರ್ಮಿಟರಿಯೇ ಮಕ್ಕಳಿಗೆ ಆಶ್ರಯವಾಗಿದೆ. ಅವರಿಗೆ ಮಲಗಲು ಮಂಚ, ಹೊದಿಕೆ ‘ಉದ್ರಿ’ (ಸಾಲದ) ರೂಪದಲ್ಲಿ ಕೊಟ್ಟವರು ಈಗ ₹2.50 ಲಕ್ಷ ಬಿಲ್‌ಗಾಗಿ ಅಧಿಕಾರಿಗಳ ಬೆನ್ನುಬಿದ್ದಿದ್ದಾರೆ. ಕಲಬುರಗಿಯ ಹಾಸ್ಟೆಲ್‌ನಲ್ಲಿ ಶೌಚಗೃಹಗಳ ಬಾಗಿಲು ಮುರಿದಿದೆ. ಸೋಲಾರ್‌ ಫಲಕ ಕೆಟ್ಟಿರುವ ಕಾರಣ ಹಾವೇರಿಯಲ್ಲಿ ಕ್ರೀಡಾಪಟುಗಳಿಗೆ ತಣ್ಣೀರು
ಸ್ನಾನವೇ ಗತಿ.

–ಇವು ಕೆಲ ಉದಾಹರಣೆಗಳಷ್ಟೇ. ರಾಜ್ಯದ ಬಹುತೇಕ ಜಿಲ್ಲೆಗಳ ಕ್ರೀಡಾ ಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿ ಇಂಥ ಹಲವು ಸಮಸ್ಯೆಗಳಿವೆ. ಕ್ರೀಡಾಪಟುಗಳಾಗಬೇಕೆಂಬ ಕನಸು ಕಟ್ಟಿಕೊಂಡ ಮಕ್ಕಳು ಇಲ್ಲಿ ಬಳಲುತ್ತಿದ್ದಾರೆ. ತರಬೇತುದಾರರ ಅಭಾವ, ಮೂಲ
ಸೌಲಭ್ಯ ಕೊರತೆ ಸೇರಿ ಇತರೆ ಕಾರಣಗಳಿಂದ ಕ್ರೀಡಾಪಟುಗಳಿಗೆ ಸುಸಜ್ಜಿತ ತರಬೇತಿ ಎಂಬುದು ಮರೀಚಿಕೆಯಾಗಿದೆ. ಕನಿಷ್ಠ ಸೌಲಭ್ಯವೂ ಇಲ್ಲದೇ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಒಳ್ಳೆಯ ಸಾಧನೆ ನಿರೀಕ್ಷಿಸುವುದಾದರೂ ಹೇಗೆ?

ಬೀದರ್‌ನಲ್ಲಿ ಕ್ರೀಡಾ ಹಾಸ್ಟೆಲ್ ನಿರ್ಮಾಣಕ್ಕೆ ₹2.50 ಕೋಟಿ ಅನುದಾನ ಮಂಜೂರಾಗಿದೆ. ಆದರೆ, ಕಾಮಗಾರಿ ಆರಂಭವಾಗಿಲ್ಲ. ವಸತಿಯಿಲ್ಲದ ವಿದ್ಯಾರ್ಥಿಗಳು ಶಿಥಿಲ ಸ್ಥಿತಿಯಲ್ಲಿರುವ ಕ್ರೀಡಾ ಸಂಕೀರ್ಣದ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಮಲಗುತ್ತಿದ್ದರು. ಪ್ರಜಾವಾಣಿ ‌ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದ ಮಾರನೇ ದಿನವೇ ವಿದ್ಯಾರ್ಥಿಗಳಿಗೆ ಬೇರೆ ಕಡೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಯಿತು.

ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಕುಸ್ತಿ ತರಬೇತಿ ಶಾಲೆಯಲ್ಲಿನ ಜಿಮ್‌ ಸಲಕರಣೆಗಳು ಮುರಿದಿವೆ
–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಕುಸ್ತಿ ತರಬೇತಿ ಶಾಲೆಯಲ್ಲಿನ ಜಿಮ್‌ ಸಲಕರಣೆಗಳು ಮುರಿದಿವೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ಬಹುತೇಕ ಕಡೆ ಬಾಲಕರು ಮತ್ತು ಬಾಲಕಿಯರಿಗೆ ಒಂದೇ ಕಟ್ಟಡದಲ್ಲಿ ಹಾಸ್ಟೆಲ್ ಇದೆ. ಅದಕ್ಕೆ ಪಾಲಕರು ಹೆಣ್ಣುಮಕ್ಕಳನ್ನು ಹಾಸ್ಟೆಲ್‌ಗೆ ಸೇರಿಸಲು ಹಿಂಜರಿಯುತ್ತಾರೆ. ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಗೆ ಹಲವು ವರ್ಷಗಳಿಂದ ಸ್ಪಂದನೆ ಸಿಕ್ಕಿಲ್ಲ.

‘ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ಗೆದ್ದು ತರಲು ನಾವು ಪಡುವ ಪಡಿಪಾಟಲು ಎಂಥದ್ದು ಎಂಬುದು ನಮಗೇ ಗೊತ್ತು. ಈ ಕತ್ತಲ ಕೋಣೆಯಲ್ಲಿ ಗಾಳಿ, ಬೆಳಕು ಇಲ್ಲ. ಆದರೆ, ತಾಲೀಮು ಇಲ್ಲೇ ಮಾಡಬೇಕು. ರೆಕ್ಕೆ ಮುರಿದ ಫ್ಯಾನ್ ಮತ್ತು ಕಿಟಕಿಯ ಒಡೆದ ಗಾಜುಗಳ ದುರಸ್ತಿ ಕಾಣದೇ ತಿಂಗಳುಗಳೇ ಕಳೆದಿವೆ. ಸೊಳ್ಳೆಗಳ ಕಾಟ ಹೇಳತೀರದು’ ಎಂದು ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿನ ಕ್ರೀಡಾ ವ್ಯಾಯಾಮ ಶಾಲೆಯಲ್ಲಿ ಪೈಲ್ವಾನರು ನೋವಿನಿಂದ ಹೇಳುತ್ತಾರೆ.

ಬೀದರ್ ಕ್ರೀಡಾಪಟುಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ‘ಬೀದರ್‌ನ ನೆಹರೂ ಕ್ರೀಡಾಂಗಣದ ಕ್ರೀಡಾ ಸಂಕೀರ್ಣದ ತರಬೇತಿ ಶಾಲೆಯಲ್ಲಿ ಅವ್ಯವಸ್ಥೆ ತುಂಬಾ ಇದೆ. ಸ್ವಚ್ಛತೆ ಇಲ್ಲ. ಶೌಚಾಲಯ ನಿರ್ವಹಣೆ ಸರಿಯಿಲ್ಲ. ಕುಡಿಯುವ ನೀರಿಗೂ ನಾವು ಪರದಾಡಬೇಕು’ ಎಂದು ಕ್ರೀಡಾಪಟುಗಳು ಸಂಕಷ್ಟ ತೋಡಿಕೊಳ್ಳುತ್ತಾರೆ.

ರಾಜ್ಯದಲ್ಲಿ ಎರಡು ಕ್ರೀಡಾಶಾಲೆಗಳು (ಬೆಂಗಳೂರಿನ ವಿದ್ಯಾನಗರ ಮತ್ತು ಕೊಡಗು ಜಿಲ್ಲೆಯ ಕೂಡಿಗೆ) ಮತ್ತು 32 ಜಿಲ್ಲಾ ಕ್ರೀಡಾ ನಿಲಯಗಳಿವೆ.

ಐದನೇ ತರಗತಿಯಿಂದ ಪ‍ದವಿ ಹಂತದವರೆಗಿನ 2,482 ಕ್ರೀಡಾಪಟುಗಳು ಈ ಹಾಸ್ಟೆಲ್‌ಗಳಲ್ಲಿ ತರಬೇತಿ ಪಡೆಯುತ್ತಾರೆ. ಎಳೆವಯಸ್ಸಿನಲ್ಲೇ ಅಗತ್ಯ ತರಬೇತಿ ನೀಡಿ, ಅವರನ್ನು ವಿಶ್ವದ ಪ್ರಮುಖ ಕ್ರೀಡಾಕೂಟ, ಒಲಿಂಪಿಕ್ಸ್‌ಗೆ ತಯಾರು ಮಾಡುವುದು ರಾಜ್ಯ ಸರ್ಕಾರದ ಉದ್ದೇಶ. ಆದರೆ ಈ ಎಲ್ಲಾ ಶಾಲೆಗಳದ್ದೂ ಒಂದೇ ಕೂಗು– ಅಂತರರಾಷ್ಟ್ರೀಯ ದರ್ಜೆಗೇರಿಸಿ ಎನ್ನುವ ಬೇಡಿಕೆಯಲ್ಲ. ಕನಿಷ್ಠ ಸೌಲಭ್ಯ ನೀಡಿ ಎನ್ನುವ ಆಗ್ರಹ.

ಕ್ರೀಡಾಂಗಣದ ಗ್ಯಾಲರಿ ಕೆಳಗಿರುವ ಮಡಿಕೇರಿಯ ಹಾಸ್ಟೆಲ್ ಮತ್ತು ವ್ಯಾಯಾಮ ಶಾಲೆಯಲ್ಲಿರುವ ಪೊನ್ನಂಪೇಟೆಯ ಹಾಸ್ಟೆಲ್‌ನಲ್ಲಿ ಉಸಿರುಗಟ್ಟುವ ಸ್ಥಿತಿಯಿದೆ. ಹೆಚ್ಚು ಮಳೆ ಬೀಳುವ ಪ್ರದೇಶವಾದ್ದರಿಂದ ಈ ಕಟ್ಟಡಗಳ ನಿರ್ವಹಣೆಗೆ ನಿರೀಕ್ಷೆಯಂತೆ ಹಣ ಬಿಡುಗಡೆ ಆಗುತ್ತಿಲ್ಲ. ಮೂಲಸೌಲಭ್ಯದ ಕೊರತೆಯಿದ್ದು, ಉಪಲೋಕಾಯುಕ್ತರು ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾವಣಗೆರೆಯ ಹಾಸ್ಟೆಲ್‌ನಲ್ಲಿ ತರಬೇತಿ ಪಡೆದವರು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗಳಿಸಿದ್ದಾರೆ. ಇಲ್ಲಿ ಸದ್ಯ 161 ಮಂದಿ ಕ್ರೀಡಾಪಟುಗಳಿದ್ದು, ಅವರಲ್ಲಿ 75 ಮಂದಿ ಕುಸ್ತಿಪಟುಗಳು ಇದ್ದಾರೆ.  ಕ್ರೀಡಾಪಟುಗಳ ಸಂಖ್ಯೆಗೆ ತಕ್ಕಂತೆ ಕೊಠಡಿಗಳಿಲ್ಲ. ಹಾಸನದ ಹಾಸ್ಟೆಲ್‌ನಲ್ಲಿ ಉತ್ತಮ ಸೌಲಭ್ಯಗಳಿವೆ. ಇವರಲ್ಲಿ 6 ಕ್ರೀಡಾಪಟುಗಳು ಕಳೆದ ವರ್ಷ ಮಹಿಳೆಯರ ರಾಷ್ಟ್ರೀಯ ಜ್ಯೂನಿಯರ್‌ ಹಾಕಿ
ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದರು.

ಒಡಿಶಾ, ಗೋವಾಕ್ಕೆ ಹೋಲಿಸಿದರೆ ಕರ್ನಾಟಕದ ಕ್ರೀಡಾಪಟುಗಳಿಗೆ ನಿರೀಕ್ಷಿತ ಪ್ರೋತ್ಸಾಹ ಸಿಗುತ್ತಿಲ್ಲ. ಒಡಿಶಾ ಸರ್ಕಾರ 2023–24ರಲ್ಲಿ ಕ್ರೀಡಾ ಕ್ಷೇತ್ರಕ್ಕೆ ₹1,217 ಕೋಟಿ ಮತ್ತು ಗೋವಾ ಸರ್ಕಾರ ₹384 ಕೋಟಿ ಮೀಸಲಿರಿಸಿವೆ. ಆದರೆ, ಯುವ ಸಬಲೀಕರಣ ಮತ್ತು ಕ್ರೀಡಾ ಕ್ಷೇತ್ರಕ್ಕೆ ಕರ್ನಾಟಕ ಸರ್ಕಾರವು ಮೀಸಲಿಟ್ಟಿದ್ದು ಬರೀ ₹211 ಕೋಟಿ. ಈ ಹಣದಲ್ಲೇ ಸಿಬ್ಬಂದಿ ವೇತನ, ಹಾಸ್ಟೆಲ್, ಜಿಲ್ಲಾ ಕ್ರೀಡಾಂಗಣ ನಿರ್ವಹಣೆ, ಹೊಸ ಕಟ್ಟಡ ನಿರ್ಮಾಣ ಸೇರಿ ಮತ್ತಿತರ ಚಟುವಟಿಕೆ ನಿರ್ವಹಿಸಬೇಕು. ರಾಜ್ಯದ ಕ್ರೀಡಾಭಿವೃದ್ಧಿಗೆ ಇದು ಸಾಕಾಗದು ಎಂಬ ಅಳಲು ಅಧಿಕಾರಿಗಳದ್ದು.

ಮಂಗಳೂರಿನ ಮಂಗಳಾ ಕ್ರೀಡಾಂಗಣದ ಕಾಮಗಾರಿ ಇನ್ನೂ ಅಪೂರ್ಣ. ಪ್ರೇಕ್ಷಕರ ಗ್ಯಾಲರಿ ಬಳಸಲಾಗದ ಸ್ಥಿತಿಯಲ್ಲಿದೆ
– ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ ಮಂಗಳಾ ಕ್ರೀಡಾಂಗಣದ ಕಾಮಗಾರಿ ಇನ್ನೂ ಅಪೂರ್ಣ. ಪ್ರೇಕ್ಷಕರ ಗ್ಯಾಲರಿ ಬಳಸಲಾಗದ ಸ್ಥಿತಿಯಲ್ಲಿದೆ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ಭಾರತ ಹಾಕಿ ತಂಡದ ಮಾಜಿ ನಾಯಕ ವಿ.ಆರ್‌.ರಘುನಾಥ, ಕಬಡ್ಡಿ ಪಟು ಹೊನ್ನಪ್ಪಗೌಡ, ಕ್ರಿಕೆಟ್‌ಪಟು ಎಸ್‌.ಅರವಿಂದ ಮತ್ತಿತರರನ್ನು ಒಳಗೊಂಡ ಕ್ರೀಡಾ ತಜ್ಞರ ಸಮಿತಿ, ರಾಜ್ಯದ ಕ್ರೀಡಾಂಗಣಗಳು, ಕ್ರೀಡಾಶಾಲೆ ಮತ್ತು ವಸತಿ ನಿಲಯಗಳನ್ನು ವೈಜ್ಞಾನಿಕವಾಗಿ ಮೇಲ್ದರ್ಜೆಗೇರಿಸಲು ಹಿಂದಿನ ಸರ್ಕಾರಕ್ಕೆ ವರದಿ ಕೊಟ್ಟಿತ್ತು. ಬಹುತೇಕ ಕ್ರೀಡಾಂಗಣಗಳುದುಃಸ್ಥಿತಿಯಲ್ಲಿದ್ದು, ಸೌಲಭ್ಯಗಳ ಕೊರತೆಯೂ ಇದೆ. ಅವುಗಳನ್ನು ಉನ್ನತೀಕರಿಸಬೇಕು. ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ನಿರ್ಮಿಸಬೇಕು. ಅಲ್ಲಿ ಕ್ರೀಡಾಪಟುಗಳ ಸಂಖ್ಯೆಗೆ ಅನುಗುಣವಾಗಿ ಸ್ನಾನಗೃಹ, ಶೌಚಗೃಹ ಹೆಚ್ಚಿಸಬೇಕು. ಮಹಿಳಾ ತರಬೇತುದಾರರನ್ನು ಹೆಚ್ಚಿಸಿ, ಬಾಲಕಿಯರನ್ನು ಕ್ರೀಡಾ ಕ್ಷೇತ್ರದತ್ತ ಸೆಳೆಯಲು ಉತ್ತೇಜಿಸಬೇಕು ಎಂದೆಲ್ಲ ಶಿಫಾರಸು ಮಾಡಿತ್ತು. ಆದರೆ ಈವರೆಗೆ ಶಿಫಾರಸಿಗೆ ಸಂಬಂಧಿಸಿ ಯಾವುದೇ ಪ್ರಗತಿ ಕಂಡುಬಂದಿಲ್ಲ.

ನಿತ್ಯ ಮಣ್ಣಿನ ಅಂಕಣದಲ್ಲಿ ಓಡುವ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಓಡಲು ಪ್ರಯಾಸ ಪಡುತ್ತಾರೆ. ಐದಾರು ವರ್ಷಗಳ ಹಿಂದೆ ರಾಜ್ಯದ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜು ಕ್ರೀಡಾಕೂಟ ಧಾರವಾಡದಲ್ಲಿ ನಡೆದಿತ್ತು. ಅಲ್ಲಿನ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಓಡಲು ಅಥ್ಲೀಟುಗಳಿಗೆ ಕಷ್ಟವಾಗಿತ್ತು. ಕಾರಣ, ಅವರು ಯಾವತ್ತೂ ಅಂಥ ಟ್ರ್ಯಾಕ್‌ನಲ್ಲಿ ಓಡಿರಲಿಲ್ಲ.

ಕ್ರೀಡಾ ತರಬೇತುದಾರರ ಸ್ಥಿತಿಯಂತೂ ಇನ್ನೂ ಶೋಚನಿಯವಾಗಿದೆ. ಕ್ರೀಡಾಪಟುಗಳನ್ನು ರೂಪಿಸಿ, ಮಾರ್ಗದರ್ಶನ ನೀಡುವ ಅವರು, ತಮ್ಮ ಬದುಕು ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ವಾಸ್ತವ ಸಮಸ್ಯೆಗಳನ್ನು ಬಿಚ್ಚಿಡುವ ಬೆಳಗಾವಿಯ ವಾಲಿಬಾಲ್‌ ಕ್ರೀಡಾ ತರಬೇತುದಾರ ಬಸವರಾಜ ಹೊಸಮಠ, ‘ಎರಡು ದಶಕಗಳಿಂದ ಸಾಕಷ್ಟು ಆಟಗಾರರನ್ನು ರೂಪಿಸಿದ್ದೇನೆ. ಅವರು ಹಲವು ಪ್ರಶಸ್ತಿಗಳನ್ನು ಪಡೆದು, ನೌಕರಿ ಗಿಟ್ಟಿಸಿ ಸುಭದ್ರ ಬದುಕು ರೂಪಿಸಿಕೊಂಡಿದ್ದಾರೆ. ಆದರೆ, ನಮ್ಮ ಬದುಕು ಈಗಲೂ ಅಭದ್ರ’ ಎನ್ನುತ್ತಾರೆ.‌

'ಕ್ರೀಡಾ ಹಾಸ್ಟೆಲ್‌ಗಳಲ್ಲಿ 20 ವರ್ಷಗಳಿಂದದುಡಿಯುತ್ತಿದ್ದರೂ, ಸೇವಾ ಭದ್ರತೆ ಇಲ್ಲ. ಪಿ.ಎಫ್‌ ಹೊರತುಪಡಿಸಿದರೆ ಪಿಂಚಣಿ ಸೇರಿ ಯಾವ ಸೌಲಭ್ಯವೂ  ಇಲ್ಲ.  ಪ್ರತಿ ವರ್ಷ ನಮ್ಮ ಸೇವಾವಧಿ ನವೀಕರಣ ಆಗುತ್ತದೆ. ಒಂದು ವೇಳೆ ನವೀಕರಣ ಆಗದಿದ್ದರೆ, ಕೆಲಸ ಹೋಯಿತು ಎಂದೇ ಅರ್ಥ. ಕೆಲಸವಿಲ್ಲದೇ ಜೀವನ ನಡೆಸುವುದು ಹೇಗೆ’ ಎಂಬ ಆತಂಕ
ತರಬೇತುದಾರರದ್ದು.

ಪಾಲನೆಯಾಗದ ಊಟದ ಮೆನು: ಹಾಸ್ಟೆಲ್‌ಗಳಲ್ಲಿ ಮೆನು ಪ್ರಕಾರ, ಊಟ ನೀಡುವುದಿಲ್ಲ. ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳಲು ಹಣ್ಣು ಸೇರಿ ಪೌಷ್ಟಿಕಾಂಶವುಳ್ಳ ಆಹಾರ ಕೊಡಬೇಕು. ಆದರೆ, ಸಚಿವರು ಅಥವಾ ಹಿರಿಯ
ಅಧಿಕಾರಿಗಳು ಬಂದಾಗಷ್ಟೇ, ಮೆನುವಿನಂತೆ ಊಟ ಸಿಗುತ್ತದೆ. ಉಳಿದ ಸಮಯದಲ್ಲಿ ಸಿಗಲ್ಲ.

‘ನಾವು ಮಾಡಿದ ಅಡುಗೆ ಚೆನ್ನಾಗಿದೆ  ಎನ್ನಬೇಕು. ದೂರು ಹೇಳದಂತೆ ಬೆದರಿಸಲಾಗುತ್ತದೆ. ನಮಗೆಲ್ಲ ಜೋಳದ ರೊಟ್ಟಿ ತಿಂದು ರೂಢಿ. ಆದರೆ ಹಾಸ್ಟೆಲ್‌ಗಳಲ್ಲಿ ಚಪಾತಿ ಕೊಡುತ್ತಾರೆ. ದೈಹಿಕ ಸಾಮರ್ಥ್ಯ ಹೇಗೆ ತಾನೇ ಕಾಪಾಡಿಕೊಳ್ಳಲು ಸಾಧ್ಯ’ ಎಂಬ ಪ್ರಶ್ನೆ ಕಲಬುರಗಿಯ ಕ್ರೀಡಾಪಟುಗಳದ್ದು.

‘ಕುಸ್ತಿಪಟುಗಳಿಗೆ ತಾಲೀಮಿಗೆ ತಕ್ಕಂತೆ ಆಹಾರ ನೀಡಬೇಕು. ಪ್ರತಿ ಭಾನುವಾರ ಮಾರುಕಟ್ಟೆಗೆ ಹೋಗಿ ವಿವಿಧ ಹಣ್ಣುಗಳು, ಡ್ರೈಫ್ರುಟ್ಸ್‌ಗಳನ್ನು ನಾವೇ ಖರೀದಿಸಿ, ತಿನ್ನುತ್ತೇವೆ. ಇದಕ್ಕೆ ತಿಂಗಳಿಗೆ ₹5 ಸಾವಿರ ಖರ್ಚಾಗುತ್ತದೆ’ ಎನ್ನುತ್ತಾರೆ ಬೆಳಗಾವಿಯ ಕುಸ್ತಿಪಟುಗಳು.

ಗದಗ ಕ್ರೀಡಾ ಹಾಸ್ಟೆಲ್‌ನಲ್ಲಿ 5 ರಿಂದ 10ನೇ ತರಗತಿಯ 34 ವಿದ್ಯಾರ್ಥಿಗಳು ಕುಸ್ತಿ, 48 ಮಂದಿ ಸೈಕ್ಲಿಂಗ್‌ ಮತ್ತು 14 ಮಂದಿ ಹಾಕಿ ತರಬೇತಿ ಪಡೆಯುತ್ತಾರೆ. ಪ್ರತಿ ವಿದ್ಯಾರ್ಥಿಗೆ ಸರ್ಕಾರ ದಿನಕ್ಕೆ ₹ 225 ಖರ್ಚು ಮಾಡುತ್ತದೆ. ಆಹಾರ ತಯಾರಿಕೆಗೆ ಬೇಕಾಗುವ ಸಾಮಗ್ರಿ ಪೂರೈಸಲು ಟೆಂಡರ್‌ ಕರೆಯಲಾಗುತ್ತದೆ. ಇಲ್ಲಿ ಟೆಂಡರ್‌ದಾರರು ₹193 ರಿಂದ ₹199ರವರೆಗೆ ಬಿಡ್ ಮಾಡುತ್ತಾರೆ. ಆದರೆ, ಕ್ರೀಡಾ ಇಲಾಖೆಯು ವಿದ್ಯಾರ್ಥಿಗಳಿಗೆ ಕೊಡಬೇಕಿರುವ ಆಹಾರದ ಮೆನು ಕಾರ್ಡ್‌ ನೋಡಿದಾಗ, ‘ಟೆಂಡರ್‌ದಾರರು ₹199ಕ್ಕೆ ಗುಣಮಟ್ಟದ ಸಾಮಗ್ರಿಗಳನ್ನು ಪೂರೈಸಲು ಸಾಧ್ಯವೇ’ ಎಂಬ ಸಂದೇಹ ಮೂಡುತ್ತದೆ.

‘ಟೆಂಡರ್‌ ಪಡೆದವರು ನಮ್ಮ ಮೆನುವಿಗೆ ಅನುಸಾರ ಗುಣಮಟ್ಟದ ಸಾಮಗ್ರಿ ಪೂರೈಸಬೇಕು. ಇದರಲ್ಲಿ ರಾಜಿ ಇಲ್ಲ. ಕಳಪೆ ಸಾಮಗ್ರಿ ಪೂರೈಸಿದರೆ ಅವರನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ’ ಎನ್ನುತ್ತಾರೆ ಕ್ರೀಡಾ ಇಲಾಖೆ ಅಧಿಕಾರಿ
ಶರಣು ಗೋಗೇರಿ.

ಆಗೊಮ್ಮೆ–ಈಗೊಮ್ಮೆ ಸಣ್ಣಪುಟ್ಟ ಲೋಪಗಳನ್ನು ಹೊರತುಪಡಿಸಿದರೆ, ದಾವಣಗೆರೆ ಹಾಸ್ಟೆಲ್‌ನಲ್ಲಿ ಕ್ರೀಡಾಪಟುಗಳಿಗೆ ಗುಣಮಟ್ಟದ ಆಹಾರ ಸಿಗುತ್ತದೆ. ಮೈಸೂರಿನಲ್ಲಿ ಬೆಳಿಗ್ಗೆ 6.30ರಿಂದ ಕ್ರೀಡಾಪಟುಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಬಾದಾಮಿ, ದ್ರಾಕ್ಷಿ ಸೇರಿ ಒಣಹಣ್ಣುಗಳ ಪಾನೀಯದೊಂದಿಗೆ ಆರಂಭವಾಗುವ ಮೆನು, ದೋಸೆ, ಮಟನ್‌ ಬಿರಿಯಾನಿ ಸೇರಿ ವಿವಿಧ ಪೌಷ್ಟಿಕಯುಕ್ತ ಆಹಾರ ಒಳಗೊಂಡಿದೆ. ಆಹಾರದ ವಿಷಯದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗಿಂತ ದಕ್ಷಿಣ ಕರ್ನಾಟಕದ ಜಿಲ್ಲೆಗಳೇ ಉತ್ತಮ. ಕ್ರೀಡೆಗೆ ಅನುಗುಣವಾಗಿ ಮೆನು ಬದಲಿಸಬೇಕೆಂಬ ಆಗ್ರಹವೂ ಇದೆ.

ಮಂಗಳೂರಿನ ಮಂಗಳಾ ಕ್ರೀಡಾಂಗಣದ ಟ್ರ್ಯಾಕ್‌ ಬಳಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಹುಲ್ಲು ಬೆಳೆದಿರುವುದು –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮಂಗಳೂರಿನ ಮಂಗಳಾ ಕ್ರೀಡಾಂಗಣದ ಟ್ರ್ಯಾಕ್‌ ಬಳಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಹುಲ್ಲು ಬೆಳೆದಿರುವುದು –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ಎರವಲು ಸೇವೆ: ಬಹುತೇಕ ಜಿಲ್ಲೆಗಳಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮೂಲತಃ ಇದೇ ಇಲಾಖೆಯವರಲ್ಲ. ಬೇರೆ ಇಲಾಖೆಗಳಲ್ಲಿ ಜಂಟಿ ನಿರ್ದೇಶಕ, ಸಹಾಯಕ ನಿರ್ದೇಶಕ ಹುದ್ದೆಯಲ್ಲಿದ್ದು, ಇಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಾರೆ. ಕ್ರೀಡಾ ಹಿನ್ನೆಲೆ ಅಥವಾ ಇದಕ್ಕೆಂದೇ ಪ್ರತ್ಯೇಕವಾಗಿ ನೇಮಕಗೊಂಡ ಅಧಿಕಾರಿಗಳು ಇಲ್ಲ.

ಹೀಗಾಗಿ ಅವರಿಗೆ ಕ್ರೀಡಾ ಕ್ಷೇತ್ರದ ಆಗುಹೋಗು, ಸಮಸ್ಯೆಗಳ ಬಗ್ಗೆ ಹೆಚ್ಚು ಜ್ಞಾನ, ಮಾಹಿತಿ ಇರುವುದಿಲ್ಲ. ಒಮ್ಮೆ ನಿಯೋಜನೆಗೊಂಡವರು ಇಲ್ಲೇ ಮುಂದುವರಿಯಲು ಬಯಸುತ್ತಾರೆ. ಅಮಾನತುಗೊಂಡವರು ಶಿಫಾರಸು
ತಂದು ಮರಳಿ ಅದೇ ಇಲಾಖೆಗೆ ನಿಯೋಜನೆಗೊಂಡ
ಉದಾಹರಣೆಗಳಿವೆ.

ತರಬೇತುದಾರರ ಕೊರತೆ: ಅಥ್ಲೆಟಿಕ್ಸ್‌, ಹಾಕಿ, ವಾಲಿಬಾಲ್‌, ಫುಟ್‌ಬಾಲ್‌, ಕುಸ್ತಿ, ಸೈಕ್ಲಿಂಗ್, ಜಿಮ್ನಾಸ್ಟಿಕ್‌, ಬ್ಯಾಸ್ಕೆಟ್‌ಬಾಲ್‌ ಮತ್ತಿತರ ಕ್ರೀಡೆಗಳಿಗೆ ಆಯಾ ಕ್ರೀಡಾ ಹಾಸ್ಟೆಲ್‌ಗಳಲ್ಲಿ ತರಬೇತಿ ಕೊಡಲಾಗುತ್ತದೆ. ರಾಜ್ಯದಲ್ಲಿ 139 ತರಬೇತುದಾರರಿಗೆ
ಬೇಡಿಕೆಯಿದೆ. ಆದರೆ, 72 ಮಂದಿ ಇದ್ದಾರೆ. ಬಹುತೇಕ ಹಾಸ್ಟೆಲ್‌ನಲ್ಲಿ ವಾರ್ಡನ್‌ ಇಲ್ಲ. ವಿದ್ಯಾರ್ಥಿಗಳನ್ನು ನೋಡಿಕೊಳ್ಳುವ ‘ಹೆಚ್ಚುವರಿ ಜವಾಬ್ದಾರಿ’ ತರಬೇತುದಾರರಿಗೆ ಹೊರಿಸಲಾಗಿದೆ.

ಬೆಳಗಾವಿಯಲ್ಲಿ ಜಿಮ್ನಾಸ್ಟಿಕ್‌ ತರಬೇತಿ ಶಾಲೆಗೆ ₹1 ಕೋಟಿಗೂ ಅಧಿಕ ಮೌಲ್ಯದ ಕ್ರೀಡಾ ಸಾಮಗ್ರಿ ಖರೀದಿಸಲಾಗಿದೆ. ಆದರೆ, ಸೂಕ್ತ ತರಬೇತುದಾರರು ಇಲ್ಲದ ಕಾರಣ ಟಾರ್ಪಲ್‌ ಹೊದಿಸಿ ‘ಮೂಲೆಗುಂಪು’ ಮಾಡಲಾಗಿದೆ. ಮಂಗಳೂರಿನ ಹಾಸ್ಟೆಲ್‌ನಲ್ಲಿ ಅಥ್ಲೆಟಿಕ್ಸ್‌ ಮತ್ತು ವಾಲಿಬಾಲ್‌ ತರಬೇತಿಗೆ ಅವಕಾಶವಿದೆ. ವಾಲಿಬಾಲ್ ತರಬೇತುದಾರ ನೇಮಕವಾಗದ ಕಾರಣ ಅಲ್ಲಿನ 50 ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್‌ನಲ್ಲೇ ತರಬೇತಿ ನೀಡಲಾಗುತ್ತಿದೆ.

ಕ್ರೀಡಾಂಗಣದ್ದು ಅದೇ ವ್ಯಥೆ: ಕಲಬುರಗಿಯ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇದ್ದರೂ ಬಹುದಿನಗಳಿಂದ ನೀರಿನ ಸ್ಪರ್ಶವಾಗಿಲ್ಲ. ಅಖಿಲ ಭಾರತ ಮಟ್ಟದ ಟೂರ್ನಿಯಲ್ಲಿ ಆಡಿರುವ ಕೊಪ್ಪಳದ ವಾಲಿಬಾಲ್‌ ಕ್ರೀಡಾಪಟುಗಳಿಗೆ ಸಿಂಥೆಟಿಕ್‌ ಅಂಕಣವಿಲ್ಲ. ದಕ್ಷಿಣ ವಲಯ ಹಾಗೂ ರಾಷ್ಟ್ರಮಟ್ಟದ ಹ್ಯಾಮರ್‌ ಥ್ರೋ ಸ್ಪರ್ಧೆಯಲ್ಲಿ ಸಾಧನೆ ಮಾಡಿರುವ ಕೊಪ್ಪಳದ ಸಚಿನ್‌ ಅವರಿಗೆ ನಡಿಗೆಪಥವೇ ಅವರ ತಾಲೀಮು ಸ್ಥಳ.

ವಿಜಯಪುರದ ಸೈಕ್ಲಿಸ್ಟ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದರೂ ವೆಲೊಡ್ರೋಮ್‌ ಟ್ರ್ಯಾಕ್‌ ಅಭ್ಯಾಸಕ್ಕೆ ಈಗಲೂ ದೆಹಲಿ ನೆಚ್ಚಿಕೊಳ್ಳಬೇಕಿದೆ. ವಿಜಯಪುರದಲ್ಲಿ ಟ್ರ್ಯಾಕ್‌ ಇದೆ. ಆದರೆ, ಉದ್ಘಾಟನೆ ಆಗಿಲ್ಲ. ಬಾಗಲಕೋಟೆ ಸೈಕ್ಲಿಸ್ಟ್‌ಗಳದ್ದೂ ಇದೇ ಪಾಡು. ಪ್ರತಿಭಾವಂತ ಈಜುಪಟುಗಳಿದ್ದರೂ ಕೋಲಾರದಲ್ಲಿ ಸರ್ಕಾರಿ ಈಜುಕೊಳ ಇಲ್ಲ. ತಾಲೀಮಿಗೆ ಅವರು ಬೆಂಗಳೂರಿಗೆ ಹೋಗಬೇಕು.

ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದೇ ಮೈದಾನದಲ್ಲಿ ಕೊಕ್ಕೊ, ವಾಲಿಬಾಲ್‌ ಅಂಕಣಗಳಿವೆ. ಕ್ರಿಕೆಟಿಗರು ಮತ್ತು ಫುಟ್‌ಬಾಲ್‌ ಆಟಗಾರರೂ ಅಲ್ಲಿಯೇ ಅಕ್ಕಪಕ್ಕ  ಆಡುತ್ತಾರೆ. ಅವರು ಬಾರಿಸುವ ಚೆಂಡು ತಾಗಿ, ಕೆಲವು ಅಥ್ಲೀಟ್‌ಗಳು ಗಾಯಗೊಂಡಿದ್ದಾರೆ.

‘ಕ್ರೀಡಾಪಟುಗಳ ಅಗತ್ಯಕ್ಕೆ ಅನುಗುಣವಾಗಿ ಮೂಲಸೌಲಭ್ಯ ಒದಗಿಸಬೇಕು ಎಂಬ ಉದ್ದೇಶ ನಮಗೂ ಇದೆ. ಆದರೆ, ಇಲಾಖೆ ಖಾತೆಯಲ್ಲಿ ₹20 ಸಾವಿರ ಮೊತ್ತವಷ್ಟೇ ಇದೆ. ಇದರಲ್ಲಿ ಏನು ತಾನೆ ಮಾಡಲು ಸಾಧ್ಯ?’ ಎಂದು ಕ್ರೀಡಾ ಇಲಾಖೆ ದಾವಣಗೆರೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ಅಸಹಾಯಕರಾಗಿ ನುಡಿಯುತ್ತಾರೆ.

(ಪೂರಕ ಮಾಹಿತಿ: ಜಿಲ್ಲಾ ವರದಿಗಾರರಿಂದ)

ಬಿ.ಶ್ರೀನಿವಾಸ
ಬಿ.ಶ್ರೀನಿವಾಸ
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಸೂಕ್ತ ಸೌಲಭ್ಯಗಳಿಲ್ಲ. ಅದನ್ನು ಕೇಳಿದರೆ ನಮ್ಮನ್ನೇ ದೂಷಿಸುತ್ತಾರೆ. ಹೀಗಾಗಿ ಹೊಂದಿಕೊಂಡು ಹೋಗುವ ಸ್ಥಿತಿಯಿದೆ.
–ಹಣಮಂತ ನಾಯಕ ಕ್ರೀಡಾಪಟು ಯಾದಗಿರಿ
ಸಚಿನ್‌
ಸಚಿನ್‌
- ಬೇರೆ ರಾಜ್ಯಕ್ಕೆ ಪ್ರತಿಭಾ ಪಲಾಯನ ಆಗುವುದು ತಪ್ಪಿಸಬೇಕು. ಜಿಲ್ಲಾ ಕ್ರೀಡಾಂಗಣ ಅಥವಾ ಹಾಸ್ಟೆಲ್‌ನಲ್ಲಿ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ಕೊಡಬೇಕು. ಪ್ರತಿಭೆ ಬೆಳಕಿಗೆ ತರಬೇಕು.
–ಸಚಿನ್‌ ಹ್ಯಾಮರ್‌ ಥ್ರೋ ಅಥ್ಲೀಟ್‌ ಕೊಪ್ಪಳ
ವಿಸ್ಮಯಿ
ವಿಸ್ಮಯಿ
Quote - ಮಡಿಕೇರಿ ಪೊನ್ನಂಪೇಟೆಯಲ್ಲಿರುವ ಕ್ರೀಡಾ ಹಾಸ್ಟೆಲ್ ಮತ್ತು ಕೂಡಿಗೆಯ ಕ್ರೀಡಾಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ
–ವಿಸ್ಮಯಿ ಸಹಾಯಕ ನಿರ್ದೇಶಕಿ ಯುವಜನ ಮತ್ತು ಕ್ರೀಡಾ ಇಲಾಖೆ ಕೊಡಗು
ಬೀದರ್‌ನ ಕ್ರೀಡಾ ಸಮುಚ್ಛಯದಲ್ಲಿನ ತರಬೇತಿ ಶಾಲೆಯಲ್ಲಿ ಕ್ರೀಡಾ ಸಾಮಗ್ರಿಗಳನ್ನು ಬೇಕಾಬಿಟ್ಟಿಯಾಗಿ ಎಸೆದಿರುವುದು– ಪ್ರಜಾವಾಣಿ ಚಿತ್ರ
ಬೀದರ್‌ನ ಕ್ರೀಡಾ ಸಮುಚ್ಛಯದಲ್ಲಿನ ತರಬೇತಿ ಶಾಲೆಯಲ್ಲಿ ಕ್ರೀಡಾ ಸಾಮಗ್ರಿಗಳನ್ನು ಬೇಕಾಬಿಟ್ಟಿಯಾಗಿ ಎಸೆದಿರುವುದು– ಪ್ರಜಾವಾಣಿ ಚಿತ್ರ
ಬೀದರ್‌ನ ಕ್ರೀಡಾ ಸಮುಚ್ಛಯದಲ್ಲಿನ ತರಬೇತಿ ಶಾಲೆಯಲ್ಲಿ ಕ್ರೀಡಾ ಸಾಮಗ್ರಿಗಳನ್ನು ಬೇಕಾಬಿಟ್ಟಿಯಾಗಿ ಎಸೆದಿರುವುದು– ಪ್ರಜಾವಾಣಿ ಚಿತ್ರ
ಬೀದರ್‌ನ ಕ್ರೀಡಾ ಸಮುಚ್ಛಯದಲ್ಲಿನ ತರಬೇತಿ ಶಾಲೆಯಲ್ಲಿ ಕ್ರೀಡಾ ಸಾಮಗ್ರಿಗಳನ್ನು ಬೇಕಾಬಿಟ್ಟಿಯಾಗಿ ಎಸೆದಿರುವುದು– ಪ್ರಜಾವಾಣಿ ಚಿತ್ರ
ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಕುಸ್ತಿ ತರಬೇತಿ ಶಾಲೆಯೊಳಗಿನ ಫ್ಯಾನ್‌ ಮುರಿದಿದ್ದು ಪೈಲ್ವಾನರು ಅದರ ಪಕ್ಕದಲ್ಲೇ ತಾಲೀಮು ನಡೆಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಕುಸ್ತಿ ತರಬೇತಿ ಶಾಲೆಯೊಳಗಿನ ಫ್ಯಾನ್‌ ಮುರಿದಿದ್ದು ಪೈಲ್ವಾನರು ಅದರ ಪಕ್ಕದಲ್ಲೇ ತಾಲೀಮು ನಡೆಸುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಬಾಲಕರು ಸ್ನಾನ ಮಾಡಿ ಬಟ್ಟೆಗಳನ್ನು ಎಸೆದಿರುವುದು
ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಬಾಲಕರು ಸ್ನಾನ ಮಾಡಿ ಬಟ್ಟೆಗಳನ್ನು ಎಸೆದಿರುವುದು

1984ರಲ್ಲಿ ನಿರ್ಮಾಣವಾದ ಕಲಬುರಗಿ ಜಿಲ್ಲಾ ಕ್ರೀಡಾಂಗಣದ ಸಂಪೂರ್ಣ ನವೀಕರಣಕ್ಕೆ ಯೋಜನೆ ಸಿದ್ಧವಾಗಿದೆ. ₹33 ಕೋಟಿ ವೆಚ್ಚದಲ್ಲಿ ಎಲ್ಲ ಅಂಕಣಗಳನ್ನು ನವೀಕರಿಸಲು ನಿರ್ಧರಿಸಲಾಗಿದೆ

–ಜಿ.ಗಾಯತ್ರಿ ಸಹಾಯಕ ನಿರ್ದೇಶಕಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ

ವ್ಯವಸ್ಥೆ ಮೇಲ್ದರ್ಜೆಗೇರಿಸಲು ಕ್ರಮ: ನಾಗೇಂದ್ರ

‘ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಯನ್ನೂ ಮುಖ್ಯವಾಹಿನಿಗೆ ತಂದು ಪ್ರೋತ್ಸಾಹಿಸುವುದೇ ನಮ್ಮ ಗುರಿ. ಅದಕ್ಕೆ ರಾಜ್ಯದ ಕ್ರೀಡಾಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು’ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಾನು ವಿವಿಧ ಜಿಲ್ಲೆಗಳ ಕ್ರೀಡಾ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಊಟ ಶೌಚಗೃಹದ ವಿಚಾರವಾಗಿ ಹಲವು ಸಮಸ್ಯೆ ಗಮನಕ್ಕೆ ಬಂದಿವೆ. ಅವುಗಳನ್ನೆಲ್ಲ ಬಗೆಹರಿಸುತ್ತೇವೆ. ಊಟದ ಮೆನುವಿನಲ್ಲಿ ಇನ್ನಷ್ಟು ಪೌಷ್ಟಿಕಾಂಶಯುಕ್ತ ಆಹಾರ ಸೇರಿಸಲು ಪ್ರಯತ್ನ ನಡೆದಿದೆ’ ಎಂದರು. ‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕ್ರೀಡಾ ರಂಗಕ್ಕೆ ಮೀಸಲಿಟ್ಟ ಅನುದಾನ ಕಡಿಮೆ. ಮುಂದಿನ ಬಜೆಟ್‌ನಲ್ಲಿ ಅನುದಾನದ ಪ್ರಮಾಣ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಿರುವೆ. ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗಳಿಸಿದವರಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿದ್ದೇವೆ’ ಎಂದು ಹೇಳಿದರು. ‘ಈ ಹಿಂದೆ ಪೊಲೀಸ್‌ ಮತ್ತು ಅರಣ್ಯ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಇದ್ದ ಶೇ 2ರಷ್ಟು ಹುದ್ದೆಗಳ ಮೀಸಲಾತಿಯನ್ನು ಶೇ 3ಕ್ಕೆ ಹೆಚ್ಚಿಸಿದ್ದೇವೆ. ಇನ್ಮುಂದೆ ಎಲ್ಲ ಇಲಾಖೆಗಳ ನೇಮಕಾತಿಯಲ್ಲೂ ಕ್ರೀಡಾಪಟುಗಳಿಗೆ ಆದ್ಯತೆ ಸಿಗಲಿದೆ’ ಎಂದರು. ‘176 ತರಬೇತುದಾರರ ನೇಮಕ’ ‘ಕ್ರೀಡಾಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿನ ಶೌಚಗೃಹ ವಿದ್ಯುತ್‌ ಕುಡಿಯವ ನೀರು ಭದ್ರತಾ ಸಿಬ್ಬಂದಿ ಅಭಾವ ಸೇರಿ ಇತರ ಸಮಸ್ಯೆಗಳು ಗಮನಕ್ಕೆ ಬಂದಿದ್ದು ಅವುಗಳನ್ನು ಪರಿಹರಿಸುತ್ತೇವೆ. 176 ತರಬೇತುದಾರರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆಯಾ ಜಿಲ್ಲೆಗಳಲ್ಲಿನ ಕ್ರೀಡಾಂಗಣ ನಿರ್ವಹಣಾ ಸಮಿತಿಗಳಲ್ಲಿ ಅನುದಾನವಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅದನ್ನು ಕ್ರೀಡಾಂಗಣಗಳ ಅಭಿವೃದ್ಧಿಗೆ ಬಳಸುವ ಬಗ್ಗೆ ಚರ್ಚಿಸಲಾಗುತ್ತಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್.ಶಶಿಕುಮಾರ ತಿಳಿಸಿದರು.

- ‘ಗುರಿ’ ತಪ್ಪಿದ ಬಿಲ್ಗಾರಿಕೆ ಶಾಲೆ

ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯಲ್ಲಿ 8 ವರ್ಷಗಳ ಹಿಂದೆ ಬಿಲ್ವಿದ್ಯೆ ಮತ್ತು ಕತ್ತಿವರಸೆ ತರಬೇತಿ ಶಾಲೆ ಆರಂಭವಾಗಿದ್ದು ನಿಗದಿತ ‘ಗುರಿ’ ತಲುಪಲು ಸಾಧ್ಯವಾಗಿಲ್ಲ. 2016ರಲ್ಲಿ ಪರಿಶಿಷ್ಟ ವರ್ಗ ಹಾಗೂ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ ನಿರ್ಮಿಸಿರುವ ರಾಜ್ಯದ ಏಕೈಕ ವಸತಿ ಶಾಲೆ ಇದಾಗಿದೆ. ಇಲ್ಲಿ ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶದ ಜಿಲ್ಲೆಗಳ ವಿದ್ಯಾರ್ಥಿಗಳು ಬಿಲ್ಲು ವಿದ್ಯೆ ಮತ್ತು ಕತ್ತಿ ವರಸೆ ಕಲಿಯುತ್ತಾರೆ. ಆದರೆ ಕಾಯಂ ತರಬೇತುದಾರರನ್ನು ಸರ್ಕಾರ ಇಂದಿಗೂ ನೇಮಿಸಿಲ್ಲ. ತರಬೇತುದಾರರಿಗೆ ಪ್ರತ್ಯೇಕ ವಸತಿ ಗೃಹಗಳ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳ ಕೊಠಡಿಗಳನ್ನೇ ಇವರಿಗೂ ಕೊಡಲಾಗಿದೆ.

ಅನುದಾನ ಬಳಕೆ ಹೇಗೆ?

ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಕ್ಷೇತ್ರಕ್ಕೆ ₹211 ಕೋಟಿ ಮೀಸಲಿಟ್ಟಿದೆ. ಯಾವುದಕ್ಕೆ ಎಷ್ಟು ಖರ್ಚು ಆಗುತ್ತದೆ ಎಂಬ ವಿವರ ಹೀಗಿದೆ.

* ಕ್ರೀಡಾ ಹಾಸ್ಟೆಲ್‌ನ ಕ್ರೀಡಾಪಟುಗಳು ಮತ್ತು 100 ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ಪೌಷ್ಟಿಕ ಆಹಾರ  ಊಟ ಮತ್ತು ಉಪಾಹಾರದ ವೆಚ್ಚ;₹12 ಕೋಟಿ

* ಹಾಸ್ಟೆಲ್‌ ಮತ್ತು ಖೇಲೋ ಇಂಡಿಯಾದ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರ ಕ್ರೀಡಾ ಉಪಕರಣ ಮತ್ತು ಇತರೆ ಅವಶ್ಯಕ ಕ್ರೀಡಾ ಸಾಮಗ್ರಿ ಒದಗಿಸುವ ವೆಚ್ಚ;₹11 ಕೋಟಿ

* ಕ್ರೀಡಾಶಾಲೆ ಹಾಸ್ಟೆಲ್‌ಗಳಲ್ಲಿ ಕ್ರೀಡಾಪಟುಗಳ ಆಯ್ಕೆ ದೈಹಿಕ ಕ್ಷಮತೆ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ತರಬೇತುದಾರರು ಕ್ರೀಡಾಪಟುಗಳ ಪ್ರಯಾಣ ಭತ್ಯೆ ಕ್ರೀಡಾಪಟುಗಳಿಗೆ ನಗದು ಪ್ರೋತ್ಸಾಹ ಜಿಲ್ಲಾಮಟ್ಟದ ಕ್ರೀಡಾಶಾಲೆ ವಸತಿ ನಿಲಯಗಳ ನಿರ್ವಹಣೆ ವೆಚ್ಚ;₹3.75 ಕೋಟಿ

* ಯುವಜನರ ದೈಹಿಕ ಸಾಮರ್ಥ್ಯ ಹೆಚ್ಚಳಕ್ಕೆ ಯುವಶಕ್ತಿ ಕೇಂದ್ರ ಯೋಜನೆಯಡಿ ಆಯ್ದ ಪೊಲೀಸ್‌ ತರಬೇತಿ ಶಾಲೆ ಇಲಾಖೆ ಕ್ರೀಡಾಂಗಣಗಳು ಮತ್ತು ಸರ್ಕಾರಿ ಕಾಲೇಜು ಸೇರಿ 18 ಕೇಂದ್ರಗಳಿಗೆ ಒಳಾಂಗಣ ಜಿಮ್‌ ಉಪಕರಣ ಸರಬರಾಜು ವೆಚ್ಚ;₹2.70 ಕೋಟಿ

* ಸರ್ಕಾರಿ ಮಾರ್ಗಸೂಚಿಯನುಸಾರ ರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ 2021 ಮತ್ತು 2022ನೇ ಸಾಲಿನ ನಗದು ಪುರಸ್ಕಾರ ಏಕಲವ್ಯ ಪ್ರಶಸ್ತಿ ಜೀವಮಾನ ಸಾಧನೆ ಪ್ರಶಸ್ತಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪ್ರದಾನ ಮತ್ತು ಕಾರ್ಯಕ್ರಮ ಆಯೋಜನೆ ವೆಚ್ಚ;₹5.50 ಕೋಟಿ

* ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇರುವ ಕ್ರೀಡಾಂಗಣ ನಿರ್ವಹಣೆ ಕ್ರೀಡಾ ಉಪಕರಣಗಳ ಪೂರೈಕೆ ವಿದ್ಯುತ್ ವೆಚ್ಚ; ₹15 ಕೋಟಿ

* ಇಲಾಖೆ ಅಧಿಕಾರಿಗಳ ವೇತನ;₹1.19 ಕೋಟಿ * ಸಿಬ್ಬಂದಿ ವೇತನ;₹1.47 ಕೋಟಿ

* ಗುತ್ತಿಗೆ/ಹೊರಗುತ್ತಿಗೆ ನೌಕರರ ವೇತನ ಪಾವತಿ; ₹7.02 ಕೋಟಿ * ಅಧಿಕಾರಿ–ಸಿಬ್ಬಂದಿ ತುಟ್ಟಿಭತ್ಯೆ;₹1.14 ಕೋಟಿ

* ಯುವ ಸಬಲೀಕರಣದ ವಿವಿಧ ಕಾರ್ಯಕ್ರಮಗಳಿಗೂ ಅನುದಾನ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT