ಪಟ್ನಾ: ಬಿಹಾರದಲ್ಲಿ 24 ಗಂಟೆಯಲ್ಲಿ ಸಿಡಿಲು ಬಡಿದು 21 ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಮಧುಬನಿ ಜಿಲ್ಲೆಯಲ್ಲಿ ಅತಿ ಹೆಚ್ಚು ಆರು ಮಂದಿ ಮೃತಪಟ್ಟಿದ್ದಾರೆ. ಔರಂಗಾಬಾದ್‌ನಲ್ಲಿ ನಾಲ್ಕು, ಪಟ್ನಾದಲ್ಲಿ ಎರಡು ಮತ್ತು ರೋಹತಾಸ್, ಭೋಜ್‌ಪುರ, ಕೈಮೂರ್, ಸರನ್, ಜೆಹಾನಾಬಾದ್, ಗೋಪಾಲ್‌ಗಂಜ್, ಸುಪೌಲ್, ಲಖಿಸರಾಯ್ ಮತ್ತು ಮಾಧೇಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಘಟನೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಸಿಡಿಲು ಬಡಿದು ಮೃತಪಟ್ಟವರ ಕುಟುಂಬಗಳಿಗೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ, ವಿಪತ್ತು ನಿರ್ವಹಣಾ ಪಡೆ ನೀಡುವ ಸೂಚನೆಗಳನ್ನು ಪಾಲಿಸುವಂತೆಯೂ ಜನರಿಗೆ ಸಿಎಂ ಮನವಿ ಮಾಡಿದ್ದಾರೆ.
ಬಿಹಾರದಲ್ಲಿ ಕಳೆದ ಕೆಲವು ವಾರಗಳಿಂದ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುತ್ತಿದೆ. ಈ ತಿಂಗಳಾರಂಭದಿಂದ ಈವರೆಗೆ ಸಿಡಿಲು ಬಡಿದು ಸುಮಾರು 70 ಮಂದಿ ಮೃತಪಟ್ಟಿದ್ದಾರೆ.