ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣಾ ಭಾಷಣಗಳನ್ನು ರಾಜ್ಯಸಭೆಯ ವಿರೋಧ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಮಾತೃಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ನಡೆಸಿದರು. ಖರ್ಗೆ ಅವರ ಬಹುತೇಕ ಟೀಕೆಗಳನ್ನು ಸಭಾಪತಿ ಜಗದೀಪ್ ಧನಕರ್ ಕಡತದಿಂದ ತೆಗೆಸಿದರು.
ಆರ್‌ಎಸ್‌ಎಸ್ ಅನ್ನು ಧನಕರ್ ಸಮರ್ಥಿಸಿಕೊಂಡರು. ಇದು ರಾಷ್ಟ್ರಕ್ಕಾಗಿ ಕೆಲಸ ಮಾಡುವ ಪ್ರಸಿದ್ಧ ಸಂಸ್ಥೆ ಎಂದು ಬಣ್ಣಿಸಿದರು. ಆರ್‌ಎಸ್ಎಸ್ ಹಾಗೂ ಅದರ ಸಿದ್ಧಾಂತದ ವಿರುದ್ಧ ಖರ್ಗೆ ಪದೇ ಪದೇ ಹೇಳಿಕೆ ನೀಡಿದ್ದಕ್ಕೆ ಧನಕರ್ ಆಕ್ಷೇಪಿಸಿದರು. ಬಿಜೆಪಿ ಸದಸ್ಯರೂ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಖರ್ಗೆ ಸುಮಾರು 90 ನಿಮಿಷ ಮಾತನಾಡಿದರು. ಚುನಾವಣಾ ರ‍್ಯಾಲಿಗಳಲ್ಲಿನ ಮೋದಿ ಭಾಷಣಗಳನ್ನು ಅವರು ಉಲ್ಲೇಖಿಸಿದರು. ಪ್ರಧಾನಿಯವರು ಅಲ್ಪಸಂಖ್ಯಾತರು ಮತ್ತು ಪಾಕಿಸ್ತಾನವನ್ನು ಎಷ್ಟು ಬಾರಿ ಉಲ್ಲೇಖಿಸಿದ್ದಾರೆ ಎಂಬುದನ್ನು ತೋರಿಸುವ ಅಂಕಿಅಂಶಗಳನ್ನು ಪ್ರಸ್ತುತಪಡಿಸಿದರು. ಅವರ ಹೇಳಿಕೆಗಳನ್ನು ದೃಢೀಕರಿಸಲು ದಾಖಲೆಗಳನ್ನು ನೀಡಿ ಎಂದು ಸಭಾಪತಿ ಕೋರಿದರು. ಪತ್ರಿಕಾ ತುಣುಕುಗಳನ್ನು ಖರ್ಗೆ ಉಲ್ಲೇಖಿಸಿದರು. ಅದನ್ನು ಧನಕರ್ ಒಪ್ಪಲಿಲ್ಲ.
ಆಗ ಖರ್ಗೆ ಅವರ ಬೆಂಬಲಕ್ಕೆ ಪಿ.ಚಿದಂಬರಂ ಬಂದರು. ‘ಪ್ರಧಾನಿ ಏನು ಹೇಳಿದ್ದಾರೆ ಎಂಬುದಕ್ಕೆ ವಿಪಕ್ಷ ನಾಯಕರು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದಾರೆ. ಅದನ್ನು ಬಿಟ್ಟು ಬೇರೆ ಯಾವ ರೀತಿಯಲ್ಲಿ ದೃಢೀಕರಿಸಲು ಸಾಧ್ಯ’ ಎಂದು ಪ್ರಶ್ನಿಸಿದರು. ಆದರೆ, ವಾದವನ್ನು ಒಪ್ಪದ ಸಭಾಪತಿಯವರು ಖರ್ಗೆಯವರ ಹೇಳಿಕೆಯನ್ನು ದಾಖಲೆಗಳಿಂದ ತೆಗೆಸಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ 10 ವರ್ಷಗಳ ಆಡಳಿತವು ಕೇವಲ ಟ್ರೈಲರ್ ಮತ್ತು 'ಪಿಕ್ಚರ್ ಅಭಿ ಬಾಕಿ ಹೈ' ಎಂಬ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಖರ್ಗೆ ಟೀಕಿಸಿದರು.
‘ಮೋದಿ 3.0 ಸರ್ಕಾರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಪರೀಕ್ಷೆಗಳ ರದ್ದು, ರೈಲು ಅಪಘಾತ, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ, ರಾಮಮಂದಿರದಲ್ಲಿ ಸೋರಿಕೆ, ಮೂರು ವಿಮಾನ ನಿಲ್ದಾಣಗಳ ಚಾವಣಿ ಕುಸಿತ, ಟೋಲ್ ಶುಲ್ಕ ಹೆಚ್ಚಳ ಹಾಗೂ ರೂಪಾಯಿ ಕುಸಿತ ಆಗಿರುವುದನ್ನು ನೋಡಿದ್ದೇವೆ’ ಎಂದರು. ವಿವಾದಾತ್ಮಕ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೀಟ್ ಮತ್ತಿತರ ವಿಷಯಗಳ ಬಗ್ಗೆಯೂ ಅವರು ಮಾತನಾಡಿದರು.
ಆದಾಗ್ಯೂ, ಆರೆಸ್ಸೆಸ್ ಕುರಿತು ಖರ್ಗೆಯವರ ಉಲ್ಲೇಖಗಳು ಆಡಳಿತ ಪಕ್ಷದ ಸದಸ್ಯರಿಂದ ಗದ್ದಲದ ಪ್ರತಿಭಟನೆಗೆ ಕಾರಣವಾಯಿತು. ಈ ಹೇಳಿಕೆಗಳನ್ನು ಕಡತದಿಂದ ಹೊರಹಾಕುವಂತೆ ಸಭಾನಾಯಕ ಜೆ.ಪಿ. ನಡ್ಡಾ ಕೋರಿದರು. ಸಂಸದೀಯ ದಾಖಲೆಗಳಿಂದ ಈ ಟೀಕೆಗಳನ್ನು ತೆಗೆದುಹಾಕಲು ಆದೇಶಿಸಿದ ಧನಕರ್, ‘ ಸಂಘಟನೆ (ಆರ್‌ಎಸ್‌ಎಸ್) ಸದಸ್ಯರಾಗಿರುವುದು ಅಪರಾಧವೇ? ಯಾರಾದರೂ ಆರ್‌ಎಸ್‌ಎಸ್ ಸದಸ್ಯರಾಗಿದ್ದರೆ ತಪ್ಪೇನು? ಇದು ದೇಶಕ್ಕಾಗಿ ಕೆಲಸ ಮಾಡುವ ಪ್ರಸಿದ್ಧ ಸಂಸ್ಥೆ. ಅಲ್ಲಿ ಸಾಕಷ್ಟು ಬುದ್ಧಿವಂತರು ಇದ್ದಾರೆ. ರಾಷ್ಟ್ರಕ್ಕಾಗಿ ದಣಿವರಿಯಿಲ್ಲದೆ ದುಡಿಯುತ್ತಿರುವ ಸಂಸ್ಥೆಯನ್ನು ನೀವು ದೂಷಿಸುತ್ತಿದ್ದೀರಿ’ ಎಂದರು.
ಮಣಿಪುರದ ಕುರಿತ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಯನ್ನು ಖರ್ಗೆ ಉಲ್ಲೇಖಿಸಿದರು. ಆದರೆ, ಅದನ್ನೂ ಧನಕರ್ ಸದನದ ದಾಖಲೆಗಳಿಂದ ತೆಗೆಸಿದರು.
ಇತ್ತೀಚಿನ ಪ್ರಶ್ನೆ ಸೋರಿಕೆಯಿಂದ 30 ಲಕ್ಷ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ ಎಂದು ಒತ್ತಿ ಹೇಳಿದ ಖರ್ಗೆ, ‘ಇದೇ ರೀತಿ ಮುಂದುವರಿದರೆ ವಿದ್ಯಾರ್ಥಿಗಳು ಓದುವುದನ್ನು ನಿಲ್ಲಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ 70 ಬಾರಿ ಪ್ರಶ್ನೆ ಸೋರಿಕೆಯಾಗಿದೆ. ಇದು ಎರಡು ಕೋಟಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ’ ಎಂದು ಕಿಡಿಕಾರಿದರು.
ರಾಷ್ಟ್ರಪತಿಗಳ ಭಾಷಣದಲ್ಲಿ ಮಣಿಪುರದ ಹಿಂಸಾಚಾರವನ್ನು ಉಲ್ಲೇಖಿಸದಿರುವ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ, ‘2023ರ ಮೇ ತಿಂಗಳಿಂದ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಿರುವ ಮಣಿಪುರಕ್ಕೆ ಪ್ರಧಾನಿ ಒಂದು ಸಲವೂ ಭೇಟಿ ನೀಡಲಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.