ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹600 ಕೋಟಿ ಭೂಹಗರಣದ ಆರೋಪ |ಹೇಮಂತ್ ಸೊರೇನ್‌ ಸೆರೆ: ಚಂಪೈ ಜಾರ್ಖಂಡ್‌ನ ಹೊಸ ಸಿಎಂ

Published 31 ಜನವರಿ 2024, 16:18 IST
Last Updated 31 ಜನವರಿ 2024, 16:18 IST
ಅಕ್ಷರ ಗಾತ್ರ

ರಾಂಚಿ: ದಿಢೀರ್‌ ರಾಜಕೀಯ ಬೆಳವಣಿಗೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್ ಸೊರೇನ್‌ ಅವರು ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಹಣ ಅಕ್ರಮ ವರ್ಗಾವಣೆ
ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಅವರನ್ನು ಬಂಧಿಸಿದೆ. 

ಇನ್ನೊಂದೆಡೆ, ಆಡಳಿತಾರೂಢ ಮೈತ್ರಿಕೂಟದ ನೇತೃತ್ವ ವಹಿಸಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಶಾಸಕಾಂಗ ಪಕ್ಷದ ನಾಯಕನಾಗಿ ಹಿರಿಯ ನಾಯಕ ಚಂಪೈ ಸೊರೇನ್‌ ಸರ್ವಾನುಮತದಿಂದ ಆಯ್ಕೆಯಾಗಿದ್ದು, ಸರ್ಕಾರ ರಚಿಸಲು ಹಕ್ಕು ಪ್ರತಿಪಾದಿಸಿದ್ದಾರೆ.

ಸುಮಾರು ₹600 ಕೋಟಿ ಮೊತ್ತದ ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಸುಮಾರು ಏಳು ಗಂಟೆ ಹೇಮಂತ್‌ ಅವರನ್ನು ವಿಚಾರಣೆಗೆ ಒಳಪಡಿಸಿದರು. ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಹೇಮಂತ್ ರಾಜೀನಾಮೆ ಸಲ್ಲಿಸಿದರು. ಅದಾದ ಕೆಲವೇ ಕ್ಷಣಗಳಲ್ಲಿ ಇ.ಡಿ ಅಧಿಕಾರಿಗಳು ಅವರನ್ನು ಬಂಧಿಸಿದರು.  

ಈ ನಡುವೆ ಸಿ.ಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಚಂಪೈ ಸೊರೇನ್‌ ಅವರನ್ನು ಜೆಎಂಎಂ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಪಕ್ಷದ ವಕ್ತಾರ ವಿನೋದ್ ಪಾಂಡೆ ತಿಳಿಸಿದರು. ಚಂಪೈ ಅವರು ಶಿಬು ಸೊರೇನ್‌ ಅವರಿಗೆ ಅತ್ಯಂತ ಆಪ್ತರೂ ಹೌದು. ಹೇಮಂತ್‌ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದರು.

ಇ.ಡಿ ವಿಚಾರಣೆಗೆ ಹಾಜರಾಗಲು ಸೂಚಿಸಿ ಸಮನ್ಸ್‌ ನೀಡಿದ್ದರೂ ಹೇಮಂತ್‌ ಏಳು ಬಾರಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಬಂಧನ ಭೀತಿಯಲ್ಲಿದ್ದ ಅವರು ಮಂಗಳವಾರವಷ್ಟೇ ಆಡಳಿತರೂಢ ಮೈತ್ರಿಕೂಟದ ಶಾಸಕರ ಸಭೆ ನಡೆಸಿ, ಉತ್ತರಾಧಿಕಾರಿ ಆಯ್ಕೆ ಬಗ್ಗೆ ಚರ್ಚಿಸಿದ್ದರು. 

ಹದಿನೈದು ದಿನಗಳಲ್ಲಿ ಎರಡನೇ ಬಾರಿಗೆ ವಿಚಾರಣೆಗೆ ಒಳಗಾಗಿ, ಬಂಧನ ಸನ್ನಿಹಿತವಾಗುತ್ತಿದ್ದಂತೆ
ಹೇಮಂತ್, ಪತ್ನಿ ಕಲ್ಪನಾ ಅವರ ಹೆಸರನ್ನು ಉತ್ತರಾಧಿಕಾರಿ ಸ್ಥಾನಕ್ಕೆ ಪ್ರಸ್ತಾಪಿಸಬಹುದು ಎಂಬ ನಿರೀಕ್ಷೆ
ಗಳಿದ್ದವು. ವಿಧಾನಸಭೆಯ ಅವಧಿಯ ಕೊನೆಯ ವರ್ಷದಲ್ಲಿ ಉಪಚುನಾವಣೆ ನಡೆಸುವಂತಿಲ್ಲ ಮತ್ತು ಕಲ್ಪನಾ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರಿಸಿದರೂ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಲು ಸಾಧ್ಯ
ವಿರಲಿಲ್ಲ. ನವೆಂಬರ್‌ನಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ಅಂತಿಮವಾಗಿ ಕೈಬಿಡಲಾಯಿತು ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. 

ಏಳು ತಾಸು ವಿಚಾರಣೆ: ಬಿಗಿ ಭದ್ರತೆ ನಡುವೆ ಬುಧವಾರ ಇ.ಡಿ ಅಧಿಕಾರಿಗಳು ಹೇಮಂತ್‌ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಏಳು ತಾಸಿಗೂ ಹೆಚ್ಚು ಸಮಯ ವಿಚಾರಣೆ ನಡೆಸಿದರು. ಹೆಚ್ಚಿನ ವಿಚಾರಣೆಗೆ ರಾಂಚಿ
ಯಲ್ಲಿನ ಇ.ಡಿ ಕಚೇರಿಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎತ್ತಂಗಡಿ: ಹಿರಿಯ ಐಎಎಸ್ ಅಧಿಕಾರಿ ಅವಿನಾಶ್ ಕುಮಾರ್ ಅವರನ್ನು ಜಾರ್ಖಂಡ್ ಸರ್ಕಾರದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಬುಧವಾರ ತೆಗೆದುಹಾಕಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಖ್ಯ ಕಾರ್ಯದರ್ಶಿ ಎಲ್.ಖಿಯಾಂಗ್ಟೆ ಅವರಿಗೆ ಗೃಹ, ಬಂದೀಖಾನೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಹೇಮಂತ್ ಅವರ ವಿಚಾರಣೆ ನಡೆಯುತ್ತಿರುವಂತೆಯೇ ಗೃಹ ಕಾರ್ಯದರ್ಶಿಯನ್ನು ಬದಲಾಯಿಸಲಾಯಿತು. ಕುಮಾರ್ ಅವರಿಗೆ ಇನ್ನೂ ಹುದ್ದೆ ತೋರಿಸಿಲ್ಲ.  

ಸೊರೇನ್‌ ಕುಟುಂಬದಲ್ಲಿ ಅಂತಃಕಲಹ

ರಾಂಚಿ (ಪಿಟಿಐ): ಹೇಮಂತ್‌ ಸೊರೇನ್‌ ನಿರ್ಗಮನದ ಬೆನ್ನಲ್ಲೇ ಅವರ ಕುಟುಂಬದಲ್ಲಿ ಮುಖ್ಯಮಂತ್ರಿ ಗಾದಿಗಾಗಿ ತೀವ್ರ ಅಂತಃಕಲಹ ನಡೆದ ಸಂಗತಿ ಹೊರಬಿದ್ದಿದೆ.

ಹೇಮಂತ್‌ ಸೊರೇನ್ ಅವರ ಪತ್ನಿ ಕಲ್ಪನಾ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಸುದ್ದಿ ಆರಂಭದಲ್ಲಿ ಹರಿದಾಡಿದಾಗ ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್‌ ಅವರ ಹಿರಿಯ ಸೊಸೆ, ಶಾಸಕಿ ಸೀತಾ ಸೊರೇನ್‌ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ದೂರವಾಣಿಯಲ್ಲಿ ಪಿಟಿಐ ಜೊತೆಗೆ ಮಾತನಾಡಿದ ಸೀತಾ, ‘ಜೆಎಂಎಂ ಶಾಸಕಾಂಗ ಪಕ್ಷದ ನಾಯಕಿಯಾಗಿ ಕಲ್ಪನಾ ಆಯ್ಕೆಗೆ ನನ್ನ ತೀವ್ರ ಆಕ್ಷೇಪವಿದೆ’ ಎಂದಿದ್ದರು. ಮಂಗಳವಾರ ಹೇಮಂತ್‌ ನೇತೃತ್ವದಲ್ಲಿ ನಡೆದಿದ್ದ ಶಾಸಕರ ಸಭೆಯಲ್ಲೂ ಕಲ್ಪನಾ ಭಾಗವಹಿಸಿದ್ದರು. ಇದಕ್ಕೂ ಸೀತಾ ಅಸಮಾಧಾನ ವ್ಯಕ್ತಪಡಿಸಿದ್ದರು.

47 ಶಾಸಕರ ಬೆಂಬಲ ಇದೆ. 43 ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಿ ಸರ್ಕಾರ ರಚಿಸಲು ಹಕ್ಕು ಪ್ರತಿಪಾದಿಸಿದ್ದೇನೆ. ಆಹ್ವಾನ ಬರುವ ನಿರೀಕ್ಷೆಯಿದೆ.
–ಚಂಪೈ ಸೊರೇನ್‌, ಜೆಎಂಎಂ ಶಾಸಕಾಂಗ ‍ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT