ಕೋಲ್ಕತ್ತ: ಇಲ್ಲಿನ ಕೆ.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ಸಿನಿಮಾ ನಿರ್ದೇಶಕರಾದ ಅಪರ್ಣಾ ಸೇನ್ ಸೇರಿದಂತೆ ಬಂಗಾಳಿ ಚಿತ್ರ ರಂಗದ ಹಲವು ಪ್ರಮುಖರು ಭಾನುವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಕಾರರರು ಆಗ್ರಹಿಸಿದರು.
ಘಟನೆ ಖಂಡಿಸಿ ನಗರದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆ, ರ್‍ಯಾಲಿಗಳನ್ನು ನಡೆಸಿದವು. ಒಂದೆಡೆ ‘ಮಹಾಮಿಚಿಲ್’ ಪ್ರತಿಭಟನೆ ನಡೆದರೆ, ರಾಮಕೃಷ್ಣ ಮಿಷನ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳು ಮತ್ತೊಂದೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾಲೇಜಿನ ಚೌಕದಲ್ಲಿ ನಡೆದ ಬೃಹತ್ ರ್‍ಯಾಲಿಯಲ್ಲಿ ಅಪರ್ಣಾ ಸೇನ್, ಕಲಾವಿದರಾದ ಸ್ವಸ್ತಿಕಾ ಮುಖರ್ಜಿ, ಸುದೀಪ್ತ ಚಕ್ರವರ್ತಿ, ಚೈತಿ ಘೋಸಲ್, ಸೋಹಿನಿ ಸರ್ಕಾರ್ ಸೇರಿದಂತೆ ಹಲವರು ಪಾಲ್ಗೊಂಡು, ಟ್ರೈನಿ ವೈದ್ಯಕೀಯ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
‘ನಾವು ನ್ಯಾಯಕ್ಕಾಗಿ ರಸ್ತೆಗೆ ಇಳಿದಿದ್ದೇವೆ. ಅಗತ್ಯವಿದ್ದರೆ ಮತ್ತೊಮ್ಮೆ ರಸ್ತೆಗೆ ಇಳಿಯುತ್ತೇವೆ’ ಎಂದು ಸೇನ್ ಹೇಳಿದರು.
‘ಆಗಸ್ಟ್ 9ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕೇವಲ ಒಬ್ಬರನ್ನು ಬಂಧಿಸಲಾಗಿದೆ. ತನಿಖೆಯ ಪ್ರಗತಿ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಿರಿಯ ವೈದ್ಯರ ವೇದಿಕೆಯ ಸದಸ್ಯರು ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ರಾಮಕೃಷ್ಣ ಮಿಷನ್ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಹಳೆ ವಿದ್ಯಾರ್ಥಿಗಳು ಕಪ್ಪುಬಟ್ಟೆ ಧರಿಸಿ, ಶಂಖ ಊದಿ ಪ್ರತಿಭಟಿಸಿದರು.
ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರೂ ಪ್ರತಿಭಟಿಸಿದರು. ಆಗಸ್ಟ್ 29ರಿಂದ ಧರಣಿ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರು ಭಾನುವಾರವೂ ಮುಂದುವರಿಸಿದರು.
ರಾಮಕೃಷ್ಣ ಮಿಷನ್‌ನ ಹಳೆ ವಿದ್ಯಾರ್ಥಿಗಳು ಕಪ್ಪುಬಟ್ಟೆ ಧರಿಸಿ ಶಂಖ ಊದಿ ಪ್ರತಿಭಟಿಸಿದರು