ವಯನಾಡ್: ಪ್ರಕೃತಿ ಮುನಿಸಿನಿಂದಾಗಿ ನಿಂತ ನೆಲವೇ ಕುಸಿದ ‘ದೇವರ ನಾಡಿ’ನಲ್ಲಿ ಈಗ ಚಿಂತೆಯೇ ಗುಡ್ಡವಾಗುತ್ತಿದೆ. ಎಲ್ಲವನ್ನೂ ಆಪೋಶನ ಪಡೆದು ತಣ್ಣಗೆ, ಆದರೆ ರಭಸದಿಂದ ಹರಿಯುತ್ತಿರುವ ನದಿ ದಂಡೆಯಗುಂಟ ಎತ್ತ ಹೆಜ್ಜೆ ಹಾಕಿದರೂ ನೋವಿನ ನೋಟಗಳೇ ಕಣ್ಣಿಗೆ ಬೀಳುತ್ತಿವೆ. ಬೆಟ್ಟದ ಜೀವಗಳ ಆಕ್ರಂದನದ ಸದ್ದು, ರಭಸದಿಂದ ಹರಿಯುತ್ತಿರುವ ನೀರಿನ ಭೋರ್ಗರೆತವನ್ನೂ ಮೀರಿ ಕೇಳಿಸುತ್ತಿದೆ.
ಇದು ಪ್ರಕೃತಿಯ ಸೊಬಗನ್ನೇ ಹೊದ್ದುಕೊಂಡಿದ್ದ ಕೇರಳದ ವಯನಾಡ್ ಜಿಲ್ಲೆಯ, ಈಗ ಬಹುತೇಕ ನಾಮಾವಶೇಷವೇ ಆಗಿರುವ ನಾಲ್ಕು ಗ್ರಾಮಗಳ ಸದ್ಯದ ಚಿತ್ರಣ. ಬಹು ಹಂತದಲ್ಲಿ ಕುಸಿದ ಗುಡ್ಡಗಳ ನಡುವೆ ಹಲವರ ಬದುಕು, ಅವರ ಕನಸುಗಳು ಸಮಾಧಿಯಾಗಿವೆ. ಉಳಿದದ್ದು ಬಯಲು ಮಾತ್ರ.
ದುರಂತ ಸಂಭವಿಸಿದ 36 ಗಂಟೆಗಳ ನಂತರವೂ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗುತ್ತಿದೆ. ಅಷ್ಟೇ ಬಿರುಸಾಗಿ ಹರಿಯುತ್ತಿರುವ ನದಿ, ರಕ್ಷಣಾ ಸಿಬ್ಬಂದಿಗೆ ಹೆಚ್ಚಿನ ಸವಾಲೊಡ್ಡುತ್ತಿದೆ. ರಕ್ಷಣೆಗೆ ಸೇನೆ, ನೌಕಾಪಡೆ ನೆರವು ಪಡೆಯಲಾಗಿದೆ. ಎನ್‌ಡಿಆರ್‌ಎಫ್ ತಂಡವೂ ಜೊತೆಗೂಡಿದೆ. ಸ್ಥಳೀಯರು ಸಹ ಕೈಜೋಡಿಸಿದ್ದಾರೆ.
ಭಾರಿ ಮಳೆಯಿಂದಾಗಿ ವಯನಾಡ್‌ನಲ್ಲಿ ಸಂಭವಿಸಿದ್ದ ಭೂಕುಸಿತ, ಪ್ರವಾಹದಿಂದಾಗಿ 22 ಮಕ್ಕಳು ಸೇರಿ 200 ಮಂದಿ ಮೃತಪಟ್ಟಿದ್ದಾರೆ. 191ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಬೆಟ್ಟ ಪ್ರದೇಶಗಳ ನಡುವೆ ಇದ್ದ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ, ನೂಲ್ಪುಳ ಗ್ರಾಮಗಳು ಗುಡ್ಡ ಕುಸಿತದಿಂದ ಧಾರಾಶಾಹಿಯಾಗಿವೆ.
ನಿರಂತರ ಮಳೆ, ಎಲ್ಲೆಂದರಲ್ಲಿ ಹರಡಿರುವ ಕೆಸರು, ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕಾದಂತೆ ಜಾರುತ್ತಿರುವ ನೆಲ ಹಾಗೂ ಇದರ ಜೊತೆಗೆ ರಭಸದಿಂದ ಹರಿಯುತ್ತಿರುವ ನದಿ – ಈ ಎಲ್ಲವೂ ರಕ್ಷಣಾ ಕಾರ್ಯಗಳಿಗೆ ಸವಾಲೊಡ್ಡಿವೆ. ಪ್ರತಿಸವಾಲು ಎಂಬಂತೆ ರಕ್ಷಣಾ ಕಾರ್ಯ ವೇಗವಾಗಿ ನಡೆದಿದೆ. ಭೂಕುಸಿತ ಹಾಗೂ ಪ್ರವಾಹಕ್ಕೆ ಸಿಕ್ಕಿ ನಾಪತ್ತೆಯಾದವರು ಹಾಗೂ ಅವಶೇಷಗಳ ನಡುವೆ ಬದುಕುಳಿದವರ ಪತ್ತೆಗೆ ಶೋಧ ಕಾರ್ಯ ಚುರುಕಾಗಿ ನಡೆದಿದೆ. ಕುಸಿದ ಮನೆಗಳ ಅವಶೇಷಗಳು, ಪ್ರವಾಹದಲ್ಲಿ ಕೊಚ್ಚಿ ಗುಡ್ಡೆಯಾಗಿರುವ ಮರ, ಗಿಡ ಕೊಂಬೆಗಳ ರಾಶಿಗಳು ಕೂಡ ಕಾರ್ಯಾಚರಣೆಗೆ ಅಡೆತಡೆ ಒಡ್ಡುತ್ತಿವೆ.
ವಯನಾಡ್ ಜಿಲ್ಲಾಡಳಿತದ ಪ್ರಕಾರ, ಕೆಸರು, ಅವಶೇಷಗಳ ನಡುವೆ ಹಲವರು ಸಿಲುಕಿರುವ ಸಾಧ್ಯತೆ ಇದೆ. ಮೃತರ ಸಂಖ್ಯೆ ಇನ್ನಷ್ಟು ಏರಬಹುದು. ಅಂದಾಜು 200 ಜನರು ನಾಪತ್ತೆಯಾಗಿದ್ದಾರೆ. 300 ಮನೆಗಳು ಪೂರ್ಣ ನಾಶವಾಗಿವೆ. ಚೂರಲ್‌ಮಲ, ಮುಂಡಕ್ಕೈ ಗ್ರಾಮಗಳಲ್ಲಿ ಗುಡ್ಡಕುಸಿತದ ಪರಿಣಾಮ ತೀವ್ರವಾಗಿದೆ.
ಮೃತರಲ್ಲಿ 123 ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 75 ಶವಗಳ ಗುರುತು ಪತ್ತೆಯಾಗಿದೆ. ಪತ್ತೆಯಾದ ಶವಗಳನ್ನು ಮೇಪ್ಪಾಡಿಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ನಿಲಂಬೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ ಎಂದು ಜಿಲ್ಲಾಡಳಿತವು ತಿಳಿಸಿದೆ.
ಭೂಕುಸಿತ ಬಾಧಿತ ಚೂರಲ್‌ಮಲ ಪ್ರದೇಶದಲ್ಲಿ ಬುಧವಾರ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು
– ಪಿಟಿಐ ಚಿತ್ರ
ಮಾಹಿತಿ ಸಂಗ್ರಹ:
ಈ ಮಧ್ಯೆ, ಅವಘಡದಲ್ಲಿ ಮೃತಪಟ್ಟವರು, ನಾಪತ್ತೆಯಾದವರ ಖಚಿತ ಮಾಹಿತಿಗಾಗಿ ನಿವಾಸಿಗಳ ಹೆಸರು, ಅಂಕಿ ಅಂಶಗಳನ್ನು ಸಂಗ್ರಹಿಸಲು ಜಿಲ್ಲಾಡಳಿತ ಮುಂದಾಗಿದೆ. ಮಾಹಿತಿ ಕಲೆಹಾಕಲು ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ರಕ್ಷಣಾ ಇಲಾಖೆಯ ಹೇಳಿಕೆಯ ಪ್ರಕಾರ, ಮಂಗಳವಾರ ರಾತ್ರಿಯಿಂದ ಬಾಧಿತ ಗ್ರಾಮಗಳಿಂದ ಸುಮಾರು ಒಂದು ಸಾವಿರ ಜನರನ್ನು ರಕ್ಷಿಸಲಾಗಿದೆ. ಸೇನೆಯು ಬಾಧಿತ ಪ್ರದೇಶಗಳ ವ್ಯಾಪ್ತಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದು, ರಕ್ಷಣೆಯಲ್ಲಿ ತೊಡಗಿರುವ ತಂಡಗಳ ಜೊತೆಗೆ ಪೂರಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ.
ಭೂಕುಸಿತ ಸಾಧ್ಯತೆ ಕುರಿತು ಕೇರಳ ಸರ್ಕಾರಕ್ಕೆ ಜುಲೈ 23ರ ನಂತರ ನಾಲ್ಕು ಬಾರಿ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ಆದರೆ, ಸರ್ಕಾರ ಮುನ್ನೆಚ್ಚರಿಕೆ ವಹಿಸಲಿಲ್ಲ.-ಅಮಿತ್ ಶಾ, ಕೇಂದ್ರ ಗೃಹ ಸಚಿವ
ಐಎಂಡಿ ಜುಲೈ 30ರವರೆಗೆ ಆರೆಂಜ್ ಅಲರ್ಟ್ ನೀಡಿತ್ತು. ಎರಡು ದಿನದಲ್ಲಿ 115–204 ಮಿ.ಮೀ ಮಳೆ ಆಗಬಹುದು ಎಂದೂ ಅಂದಾಜಿಸಿತ್ತು. ವಾಸ್ತವವಾಗಿ 572 ಮಿ.ಮೀ. ಮಳೆ ಸುರಿದಿದೆಪಿಣರಾಯಿ ವಿಜಯನ್, ಕೇರಳ ಸಿ.ಎಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.