ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿ ಮಹಿಳೆಯರಿಗೂ ಮೀಸಲಾತಿ ಕೊಡಿ: ಸೋನಿಯಾ ಗಾಂಧಿ

Published 20 ಸೆಪ್ಟೆಂಬರ್ 2023, 9:51 IST
Last Updated 20 ಸೆಪ್ಟೆಂಬರ್ 2023, 9:51 IST
ಅಕ್ಷರ ಗಾತ್ರ

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಮಸೂದೆಯನ್ನು ತಕ್ಷಣ ಜಾರಿಗೊಳಿಸುವುದರ ಜೊತೆಗೆ ಹಿಂದೂಳಿದ ವರ್ಗದ(ಒಬಿಸಿ) ಮಹಿಳೆಯರಿಗೂ ಸಮರ್ಪಕ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಲೋಕಸಭೆಯ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸೋನಿಯಾ , ‘ನಾರಿ ಶಕ್ತಿ ವಂದನ್‌ ಅಧಿನಿಯಮ್‌ 2023ಗೆ ನಮ್ಮ ಪಕ್ಷವೂ ಒಮ್ಮತದಿಂದ ಒಪ್ಪಿಗೆ ಸೂಚಿಸಿದೆ. ಮೀಸಲಾತಿಯನ್ನು ಜಾರಿಗೊಳಿಸಲು ವಿಳಂಬ ಮಾಡಿದರೆ ಅದು ಭಾರತೀಯ ಮಹಿಳೆಯರಿಗೆ ಮಾಡುವ ತೀವ್ರ ಅನ್ಯಾಯವಾಗಿದೆ’ ಎಂದರು.

‘ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿದ್ದು, ಆ ಮೂಲಕ ರಾಜೀವ್‌ ಗಾಂಧಿಯವರ ಕನಸು ಅರ್ಧ ಈಡೇರಿದಂತಾಗಿದೆ. ಮಸೂದೆ ಅಂಗೀರಕಾರವಾದ ನಂತರ ಅದು ಪೂರ್ಣವಾಗುತ್ತದೆ. ಮಸೂದೆ ಅಂಗೀಕಾರವಾಗುವ ಬಗ್ಗೆ ನಮಗೆ ತುಂಬಾ ಖುಷಿಯಿದೆ’ ಎಂದರು.

‘ಹಲವು ವರ್ಷಗಳಿಂದ ಭಾರತೀಯ ಮಹಿಳೆಯರು ರಾಜಕೀಯ ಪ್ರಾತಿನಿಧ್ಯಕ್ಕಾಗಿ ಕಾಯುತ್ತಿದ್ದಾರೆ. ಇದೀಗ ಇನ್ನೂ ಕೆಲವು ವರ್ಷಗಳ ಕಾಲ ಕಾಯುವಂತೆ ಹೇಳಲಾಗುತ್ತಿದೆ. ಭಾರತೀಯ ಮಹಿಳೆಯರನ್ನು ಹೀಗೆ ಕಾಯಿಸುವುದು ಸೂಕ್ತವೇ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಈ ಮಸೂದೆಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂಬುದು ಕಾಂಗ್ರೆಸ್‌ನ ಬೇಡಿಕೆಯಾಗಿದೆ. ಇದರೊಂದಿಗೆ ಜಾತಿ ಗಣತಿ ನಡೆಸಿ ಎಸ್‌ಸಿ, ಎಸ್‌ಟಿ, ಒಬಿಸಿ ಮಹಿಳೆಯರಿಗೂ ಸಮರ್ಪಕವಾದ ಮೀಸಲಾತಿ ಅವಕಾಶ ಕಲ್ಪಿಸಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮಹಿಳೆಯರ ಕೊಡುಗೆಯನ್ನು ಗುರುತಿಸಲು ಮತ್ತು ಧನ್ಯವಾದ ಸಲ್ಲಿಸಲು ಇದು ಅತ್ಯಂತ ಸೂಕ್ತವಾದ ಕ್ಷಣವಾಗಿದೆ’ ಎಂದು ಗಾಂಧಿ ಹೇಳಿದರು.

ಭಾರತೀಯ ಮಹಿಳೆಯನ್ನು ನದಿಗೆ ಹೋಲಿಸಿದ ಸೋನಿಯಾ

‘ಭಾರತೀಯ ಮಹಿಳೆ ತನ್ನ ಹೃದಯದಲ್ಲಿ ಸಾಗರದಷ್ಟು ತಾಳ್ಮೆಯನ್ನು ಹೊಂದಿದ್ದಾಳೆ. ತನಗಾಗುತ್ತಿರುವ ಅನ್ಯಾಯದ ಬಗ್ಗೆ ಆಕೆ ಎಂದಿಗೂ ದೂರಿಲ್ಲ. ತನ್ನ ಸ್ವಂತ ಲಾಭಕ್ಕಾಗಿ ಏನನ್ನೂ ಮಾಡಿಲ್ಲ. ಆಕೆ ಒಂದು ನದಿಯಂತೆ ಎಲ್ಲರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾಳೆ. ಕಷ್ಟದ ಸಮಯದಲ್ಲಿ ಹಿಮಾಲಯದಂತೆ ಅಚಲವಾಗಿ ನಿಂತಿದ್ದಳು. ಅವಳ ತಾಳ್ಮೆಯನ್ನು ಅಂದಾಜು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ವಿಶ್ರಾಂತಿ ಬೇಕೆಂದೂ ಎಂದಿಗೂ ಯೋಚಿಸಿಲ್ಲ. ದಣಿವೆಂದರೆ ಏನು ಎಂದು ಆಕೆ ತಿಳಿದಿಲ್ಲ’ ಎಂದು ಮಹಿಳೆಯನ್ನು ಹೊಗಳಿದ್ದಾರೆ.

ಸ್ವಾತಂತ್ರ್ಯ ಮತ್ತು ನವ ಭಾರತ ನಿರ್ಮಾಣದ ಹೋರಾಟದಲ್ಲಿ ಮಹಿಳೆಯರು ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾರೆ. ಮಹಿಳೆಯರ ಕಠಿಣ ಪರಿಶ್ರಮ, ಘನತೆ ಮತ್ತು ತ್ಯಾಗವನ್ನು ಗುರುತಿಸುವ ಮೂಲಕ ಮಾತ್ರ ನಾವು ಮಾನವೀಯತೆ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT