ಕವಲಂದೆ (ಮೈಸೂರು ಜಿಲ್ಲೆ): ‘ಹಿಜಾಬ್ ನಿಷೇಧವನ್ನು ವಾಪಸ್ ಪಡೆಯುವಂತೆ ಸೂಚಿಸಿರುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಪೊಲೀಸ್ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ನಂಜನಗೂಡು ತಾಲ್ಲೂಕು ಕವಲಂದೆ, ಎಚ್.ಡಿ. ಕೋಟೆ ತಾಲ್ಲೂಕು ಅಂತರಸಂತೆ ಹಾಗೂ ಮೈಸೂರು ತಾಲ್ಲೂಕಿನ ಜಯಪುರ ಪೊಲೀಸ್ ಠಾಣಿಗಳ ಕಟ್ಟಡಗಳನ್ನು ಇಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಉಡುಪು ಅವರವರ ಇಷ್ಟ. ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎನ್ನುವುದು ಬೋಗಸ್. ಬಟ್ಟೆ, ಉಡುಪು, ಜಾತಿ ಆಧಾರದ ಮೇಲೆ ಜನರನ್ನು ಹಾಗೂ ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
‘ನಾವು ಎಲ್ಲ ಜಾತಿ, ಧರ್ಮದವರು ಹಾಗೂ ಎಲ್ಲಾ ಪಕ್ಷದವರಿಗೂ ಅನುಕೂಲ ಆಗುವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಬಿಜೆಪಿಯವರು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆಯುತ್ತಿಲ್ಲವೇ? ಗೃಹಜ್ಯೋತಿ ಸೌಲಭ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುತ್ತಿಲ್ಲವೇ?’ ಎಂದು ಪ್ರಶ್ನಿಸಿದ ಅವರು, ‘ನಮ್ಮ ಸರ್ಕಾರದ ಲಾಭ ಪಡೆದರೂ ನಕರಾ ಆಡುವವರ ಜೊತೆ ಹೋಗಬೇಡಿ’ ಎಂದು ಕೋರಿದರು.