ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

14 ಗಂಟೆಗಳಲ್ಲಿ 800 ಬಾರಿ ಭೂಕಂಪನ: ತುರ್ತು ಪರಿಸ್ಥಿತಿ ಘೋಷಿಸಿದ ಐಸ್‌ಲೆಂಡ್‌

Published : 11 ನವೆಂಬರ್ 2023, 5:57 IST
Last Updated : 11 ನವೆಂಬರ್ 2023, 5:57 IST
ಫಾಲೋ ಮಾಡಿ
Comments

ರೆಕ್ಯಾವಿಕ್: ಐಸ್‌ಲೆಂಡ್‌ನಲ್ಲಿ ಕಳೆದ 14 ಗಂಟೆಗಳ ಅವಧಿಯಲ್ಲಿ 800 ಬಾರಿ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪನದಲ್ಲಿ 5.2ರಷ್ಟಿದ್ದ ತೀವ್ರತೆಯಿಂದಾಗಿ ಜ್ವಾಲಾಮುಖಿ ಸ್ಪೋಟಿಸುವ ಭೀತಿ ಎದುರಾಗಿದೆ. ಇದರಿಂದಾಗಿ ತುರ್ತು ಪರಿಸ್ಥಿತಿಯನ್ನು ದೇಶದಲ್ಲಿ ಹೇರಲಾಗಿದೆ.

‘ದೇಶದ ನೈರುತ್ಯ ಭಾಗದ ರೆಕ್ಯಾಜೇನ್ಸ್ ಭಾಗದಲ್ಲಿ ಭೂಮಿ ಕಂಪಿಸಿದೆ. ಉತ್ತರದ ಗ್ರಿಂಡ್‌ವಿಕ್‌ನಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ. ಈ ಸರಣಿ ಭೂಕಂಪದಿಂದ ಜ್ವಾಲಾಮುಖಿ ಸ್ಪೋಟಿಸುವ ಸಾಧ್ಯತೆ ಇದೆ‘ ಎಂದು ನಾಗರಿಕ ರಕ್ಷಣೆ ಹಾಗೂ ತುರ್ತು ನಿರ್ವಹಣಾ ಇಲಾಖೆ ತಿಳಿಸಿದೆ. 

‘ಗ್ರಿಂಡ್‌ವಿಕ್‌ ಪ್ರದೇಶದಲ್ಲಿ ಸುಮಾರು ನಾಲ್ಕು ಸಾವಿರ ಜನರು ವಾಸಿಸುತ್ತಿದ್ದಾರೆ. ಇವರನ್ನು ಸ್ಥಳಾಂತರಿಸುವ ಕಾರ್ಯ ನಡೆಸಲಾಗುತ್ತಿದೆ. ಶುಕ್ರವಾರ ಸಂಜೆ 5.30ರಿಂದ ಭೂಮಿ ಕಂಪಿಸಲು ಪ್ರಾರಂಭಿಸಿತು. ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಸುಮಾರು 24 ಸಾವಿರ ಬಾರಿ ಭೂಮಿ ಕಂಪಿಸಿದ ಅನುಭವ ಇಲ್ಲಿನ ಜನರಿಗೆ ಆಗಿದೆ. ಅದರಲ್ಲೂ ಕಳೆದ 14 ಗಂಟೆಗಳಲ್ಲಿ 800 ಬಾರಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಭೂಮಿಯ 5 ಕಿ.ಮೀ. ಆಳದಲ್ಲಿ ಭೂಕಂಪ ಉಂಟಾಗಿದೆ. ಇಂಥ ಸಂದರ್ಭಗಳಲ್ಲಿ ಲಾವಾರಸವು ಮೇಲೆ ಉಕ್ಕಲು ಕೆಲವೇ ಸಮಯಗಳಷ್ಟೇ ಸಾಕು. ಭೂಕಂಪ ಸಂಭವಿಸಿದ ಪ್ರದೇಶಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಹೀಗಾಗಿ ಲಾವಾರಸ ಹರಿಯುವ ಸಾಧ್ಯತೆ ಹೆಚ್ಚು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಗ್ರಿಂಡ್‌ವಿಕ್‌ನಲ್ಲಿ ತುರ್ತು ಚಿಕಿತ್ಸಾ ಕೇಂದ್ರ ಹಾಗೂ ನೆರವಿನ ಕೇಂದ್ರಗಳನ್ನು ತೆರೆಯಲಾಗಿದೆ. ಇದೇ ಮಾದರಿಯಲ್ಲಿ ದೇಶದ ಇತರ ಮೂರು ಕಡೆ ಇಂಥ ಕೇಂದ್ರಗಳನ್ನು ತೆರೆಯಲಾಗುವುದು ಎಂದಿದ್ದಾರೆ.

ಈ ಪ್ರಾಂತ್ಯದಲ್ಲಿ 2021ರಿಂದ ಈಚೆಗೆ ಮೂರು ಬಾರಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಐಸ್‌ಲೆಂಡ್‌ನಲ್ಲಿ ಒಟ್ಟು 33 ಸಕ್ರಿಯ ಭೂಕಂಪ ಮಾಪನ ಕೇಂದ್ರಗಳಿದ್ದು, ಯುರೋಪ್‌ನಲ್ಲಿ ಅತಿ ಹೆಚ್ಚು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT