ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಧ್ಯಕ್ಷೀಯ ಚುನಾವಣೆ | ಕಮಲಾ ಹ್ಯಾರಿಸ್‌ ‘ಅಸಮರ್ಥರು’: ಟ್ರಂಪ್‌ ವಾಗ್ದಾಳಿ

Published : 25 ಜುಲೈ 2024, 13:55 IST
Last Updated : 25 ಜುಲೈ 2024, 13:55 IST
ಫಾಲೋ ಮಾಡಿ
Comments

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಹಾಗೂ ಡೆಮಾಕ್ರಟಿಕ್‌ ಪಕ್ಷದ ಸಂಭವನೀಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್‌ ಅವರು ‘ಆಡಳಿತ ನಡೆಸಲು ಅಸಮರ್ಥರು’ ಎಂದು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಟೀಕಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಕಮಲಾ ಅವರು ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಸಂಭಾವ್ಯ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಈ ಬೆಳವಣಿಗೆ ಬಳಿಕ ಬುಧವಾರ ತಮ್ಮ ಮೊದಲ ಪ್ರಚಾರ ಸಭೆಯಲ್ಲಿ ಮಾತನಾಡಿದ 78 ವರ್ಷದ ಟ್ರಂಪ್‌, ಎದುರಾಳಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.

‘ಬೈಡನ್‌ ಅವರ ವಿನಾಶಕಾರಿ ನೀತಿಗಳನ್ನು ಕಳೆದ ಮೂರೂವರೆ ವರ್ಷಗಳಿಂದ ಬೆಂಬಲಿಸುತ್ತಾ ಬಂದಿರುವ ಕಮಲಾ ಅವರು ಅತಿರೇಕದ ಎಡಪಂಥೀಯ ವಿಚಾರಧಾರೆ ಹೊಂದಿದ್ದಾರೆ. ಅವರಿಗೆ ಅಧಿಕಾರ ಸಿಕ್ಕರೆ ನಮ್ಮ ದೇಶವನ್ನು ನಾಶ ಮಾಡುತ್ತಾರೆ. ಅದಕ್ಕೆ ಅವಕಾಶ ನೀಡಬಾರದು’ ಎಂದು ಕಿಡಿಕಾರಿದರು.

‘ಇಂತಹ ಜನರೊಂದಿಗೆ ವ್ಯವಹರಿಸುವಾಗ ನೀವು ತುಂಬಾ ಎಚ್ಚರದಿಂದ ಇರಬೇಕು. ಏಕೆಂದರೆ ಇವರು ಅಪಾಯಕಾರಿ ಜನರು. ನವೆಂಬರ್‌ನಲ್ಲಿ ಬರುವ ಚುನಾವಣೆಯಲ್ಲಿ ಜನರು ಇವರಿಗೆ ಪಾಠ ಕಲಿಸಲಿದ್ದಾರೆ’ ಎಂದು ಸಭಿಕರ ಚಪ್ಪಾಳೆಯ ನಡುವೆ ಹೇಳಿದರು.

‘ನೀವು ತುಂಬಾ ಕೆಟ್ಟ ಕೆಲಸ ಮಾಡಿದ್ದೀರಿ. ಯಾವ ಕೆಲಸವನ್ನೂ ಸಮರ್ಥವಾಗಿ ನಿರ್ವಹಿಸಿಲ್ಲ. ನೀವು ಅತಿ ಉದಾರವಾದಿ ಆಗಿದ್ದೀರಿ. ನಿಮ್ಮಂಥವರು ಇಲ್ಲಿ ಮಾತ್ರವಲ್ಲ, ಎಲ್ಲಿಯೂ ಇರಲು ನಾವು ಬಯಸುವುದಿಲ್ಲ. ಕಮಲಾ ಅವರೇ, ನಿಮ್ಮನ್ನು ಇಲ್ಲಿಂದ ಕಿತ್ತೆಸೆಯಲಾಗಿದೆ. ಹೊರಟು ಹೋಗಿ’ ಎಂದು ಟ್ರಂಪ್ ಹೇಳಿದರು.

ಬೈಡನ್‌ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ದೈಹಿಕವಾಗಿ ಸಮರ್ಥರಲ್ಲದಿದ್ದರೂ, ಆ ವಿಷಯವನ್ನು ಕಮಲಾ ಮುಚ್ಚಿಟ್ಟರು ಎಂದು ದೂರಿದರು. ತಮ್ಮ ಭಾಷಣದಲ್ಲಿ ಕಮಲಾ ಹೆಸರನ್ನು 45 ಸಲ ಪ್ರಸ್ತಾಪಿಸಿದರಲ್ಲದೆ, ‘ಹ್ಯಾರಿಸ್ ಕೈಹಾಕಿದ ಎಲ್ಲ ಕೆಲಸಗಳೂ ಸಂಪೂರ್ಣ ದುರಂತವಾಗಿ ಬದಲಾಗುತ್ತದೆ’ ಎಂದು ಆರೋಪಿಸಿದರು.

‘ಉಕ್ರೇನ್‌ ಮೇಲೆ ದಾಳಿ ಮಾಡದಂತೆ ರಷ್ಯಾವನ್ನು ತಡೆಯಲು ಕಮಲಾ ಹ್ಯಾರಿಸ್ ಅವರನ್ನು ಯುರೋಪ್‌ಗೆ ಕಳುಹಿಸಲಾಗಿತ್ತು. ಅದು ಯಾವ ರೀತಿ ಕೆಲಸ ಮಾಡಿತು? ಅವರು ಅಮೆರಿಕಕ್ಕೆ ವಾಪಸಾದ ಐದು ದಿನಗಳ ನಂತರ ಆಕ್ರಮಣ ಪ್ರಾರಂಭಿಸುವ ಮೂಲಕ ರಷ್ಯಾ ತಕ್ಕ ಉತ್ತರ ನೀಡಿತು. ಕಮಲಾ ಏನೂ ಅಲ್ಲ ಎಂಬುದನ್ನು ಪುಟಿನ್ ತೋರಿಸಿಕೊಟ್ಟಿದ್ದಾರೆ’ ಎಂದರು. 

ಕಮಲಾ ಹ್ಯಾರಿಸ್‌ಗೆ ಮತ ಹಾಕಿದರೆ ಅಮೆರಿಕದಲ್ಲಿ ಇನ್ನೂ ನಾಲ್ಕು ವರ್ಷ ಅಪ್ರಾಮಾಣಿಕತೆ ಅದಕ್ಷತೆ ದೌರ್ಬಲ್ಯ ಮತ್ತು ವೈಫಲ್ಯ ಮುಂದುವರಿಯಲು ಮತ ಹಾಕಿದಂತೆ
ಡೊನಾಲ್ಡ್‌ ಟ್ರಂಪ್‌ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ
‘ಹೊಸಬರಿಗೆ ಅವಕಾಶ ನೀಡಿದ್ದೇನೆ’
ವಾಷಿಂಗ್ಟನ್: ‘ಅಧಿಕಾರದ ದೀವಟಿಗೆಯನ್ನು ಹೊಸ ಪೀಳಿಗೆಯ ಜನರಿಗೆ ಹಸ್ತಾಂತರಿಸುವ ಉದ್ದೇಶದಿಂದ ನಾನು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ ಬಳಿಕ ಮೊದಲ ಬಾರಿ ಅಮೆರಿಕದ ಜನರನ್ನುದ್ದೇಶಿಸಿ ಮಾತನಾಡಿದ ಅವರು ‘ಅಧಿಕಾರವನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವುದು ಉತ್ತಮ ಎಂದು ನಿರ್ಧರಿಸಿದ್ದೇನೆ. ನಮ್ಮ ದೇಶವನ್ನು ಒಗ್ಗೂಡಿಸಲು ಇರುವ ಉತ್ತಮ ಮಾರ್ಗ ಇದಾಗಿದೆ. ನನ್ನ ಸುದೀರ್ಘ ಅವಧಿಯ ರಾಜಕೀಯ ಜೀವನದಲ್ಲಿ ಸಾಕಷ್ಟು ಅನುಭವ ಪಡೆದಿದ್ದೇನೆ. ಹೊಸಬರಿಗೂ ಅಲ್ಲಿ ಅವಕಾಶವಿದ್ದು ಅದಕ್ಕೆ ಈಗ ಕಾಲ ಕೂಡಿಬಂದಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT