ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್ ಶಾಂತಿ ಶೃಂಗಸಭೆಯ ಯೋಜನೆಗೆ ತಣ್ಣೀರು ಸುರಿದ ರಷ್ಯಾ

Last Updated 21 ಫೆಬ್ರುವರಿ 2022, 14:26 IST
ಅಕ್ಷರ ಗಾತ್ರ

ಕೀವ್‌:ಉಕ್ರೇನ್‌ ಮೇಲೆ ರಷ್ಯಾದ ಸಂಭವನೀಯ ಆಕ್ರಮಣ ತಡೆಯಲು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವಾಗಲೇ ರಷ್ಯಾ ಮತ್ತು ಅಮೆರಿಕ ನಾಯಕರ ನಡುವಿನ ಶೃಂಗಸಭೆಗೆ ಯಾವುದೇ ಮಹತ್ವ ಇಲ್ಲ ಎಂದು ರಷ್ಯಾ ಸೋಮವಾರ ಹೇಳಿದೆ. ಇದರಿಂದಾಗಿ ಉಕ್ರೇನ್‌ ಬಿಕ್ಕಟ್ಟು ಶಮನಗೊಳಿಸುವ ಉದ್ದೇಶಕ್ಕೆ ತಣ್ಣೀರು ಎರಚಿದಂತಾಗಿದೆ.

ಉಕ್ರೇನ್‌ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ರಷ್ಯಾ ಮತ್ತು ಅಮೆರಿಕದ ಅಧ್ಯಕ್ಷರ ನಡುವೆ ಶೃಂಗಸಭೆ ನಡೆಯುವ ಸಾಧ್ಯತೆಯನ್ನು ಫ್ರಾನ್ಸ್‌ ಘೋಷಿಸಿದ ನಂತರ, ಇದು ‘ತುಂಬಾ ಮುಂಚಿತ’ವಾಯಿತು ಎಂದು ರಷ್ಯಾ ಸೋಮವಾರ ಹೇಳಿದೆ.

‘ರಷ್ಯಾ ಇತ್ತೀಚಿನ ದಿನಗಳಲ್ಲಿ ಉಕ್ರೇನ್‌ನ ಸುತ್ತಲೂ ಒಂದು ಲಕ್ಷಕ್ಕೂ ಹೆಚ್ಚಿನ ಸೈನಿಕರನ್ನು ಜಮಾವಣೆ ಮಾಡಿದೆ. ಗಡಿಯಲ್ಲಿ ಸಂಘರ್ಷ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ರಷ್ಯಾ ಪರವಿರುವಪ್ರತ್ಯೇಕತಾವಾದಿಗಳನ್ನು ಉಕ್ರೇನ್‌ ಮೇಲೆ ದಾಳಿ ನಡೆಸಲು ಹಂತಹಂತವಾಗಿ ಬಳಸಿಕೊಳ್ಳುವ ಸಾಧ್ಯತೆಯೂ ಇದೆ’ ಎಂದು ನ್ಯಾಟೊ ಉಕ್ರೇನ್‌ಗೆ ಎಚ್ಚರಿಕೆ ಕೊಟ್ಟಿದೆ.

ಐವರು ಬಂಡುಕೋರರ ಹತ್ಯೆ

ಮಾಸ್ಕೊ (ಎಎಫ್‌ಪಿ):ಉಕ್ರೇನ್‌ನಿಂದ ರಷ್ಯಾಕ್ಕೆ ಗಡಿ ದಾಟಿ ಬಂದ ಐವರು ಬಂಡುಕೋರರನ್ನು ಹತ್ಯೆ ಮಾಡಲಾಗಿದೆ ಎಂದು ರಷ್ಯಾದ ಮಿಲಿಟರಿ ಸೋಮವಾರ ಹೇಳಿದೆ. ಉಕ್ರೇನ್‌– ಮಾಸ್ಕೊ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಆರಂಭಿಸಿದೆ.

‘ನಕಲಿ’ ಉಕ್ರೇನ್‌ ನಾಗರಿಕರ ದಾಳಿ ನೆಪ ಮಾಡಿಕೊಂಡು ರಷ್ಯಾ ಆಕ್ರಮಣ ನಡೆಸಲಿದೆ ಎಂದು ಉಕ್ರೇನ್‌ ಮತ್ತು ಅಮೆರಿಕ ಆರೋಪ ಮಾಡಿದ ಬೆನ್ನಲ್ಲೇಬಂಡುಕೋರರ ಹತ್ಯೆ ವರದಿಯಾಗಿದೆ.

ಉಕ್ರೇನ್ ಮೇಲೆದೊಡ್ಡ ಪ್ರಮಾಣದ ದಾಳಿಯಾಗಬಹುದೆಂದು ಮಿತ್ರ ರಾಷ್ಟ್ರಗಳು ಆತಂಕ ವ್ಯಕ್ತಪಡಿಸುತ್ತಿರುವಾಗ ಉಕ್ರೇನ್‌ನ ಗಡಿಯ ಸುತ್ತಲೂ ರಷ್ಯಾ ಸೈನಿಕರನ್ನು ನಿಯೋಜಿಸಿದೆ.

‌‌‘ರಷ್ಯಾದ ಗಡಿಯನ್ನು ಉಲ್ಲಂಘಿಸಿ ಬಂದು ಘರ್ಷಣೆ ನಡೆಸಿದ ಐವರು ವಿಧ್ವಂಸಕರನ್ನು ರೋಸ್ಟೊವ್ ಪ್ರದೇಶದ ಮಿತ್ಯಕಿನ್ಸ್ಕಾಯಾ ಗ್ರಾಮದ ಬಳಿ ಕೊಲ್ಲಲಾಗಿದೆ’ ಎಂದು ರಷ್ಯಾದ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾ ಸೈನಿಕರು ಅಥವಾ ಗಡಿ ಭದ್ರತಾಪಡೆಗಳಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.ವಿಧ್ವಂಸಕರನ್ನು ಒಳನುಗ್ಗಿಸಲು ಉಕ್ರೇನ್‌ನ ಎರಡು ಮಿಲಿಟರಿ ವಾಹನಗಳು ರಷ್ಯಾ ಗಡಿ ದಾಟಿ ಬಂದಿವೆ. ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ರಷ್ಯಾದ ತನಿಖಾ ಸಮಿತಿಯ ಮುಖ್ಯಸ್ಥ ಅಲೆಕ್ಸಾಂಡರ್ ಬಾಸ್ಟ್ರಿಕಿನ್ ತಿಳಿಸಿದ್ದಾರೆ.

ಉಕ್ರೇನ್‌ನಿಂದ ಶೆಲ್‌ ದಾಳಿ: ರಷ್ಯಾ ಆರೋಪ

ಮಾಸ್ಕೊ:ಉಕ್ರೇನ್‌ ಕಡೆಯಿಂದ ಸೋಮವಾರ ಶೆಲ್‌ ದಾಳಿ ನಡೆದಿದ್ದು, ರಷ್ಯಾದ ರೋಸ್ಟೋವ್ ಪ್ರದೇಶದಲ್ಲಿ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಬಳಸುವಗಡಿ ಕಾವಲು ಠಾಣೆ ಸಂಪೂರ್ಣ ನಾಶವಾಗಿದೆ. ಆದರೆ, ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ರಷ್ಯಾ ತಿಳಿಸಿದೆ.

‘ಸೋಮವಾರ ಬೆಳಿಗ್ಗೆ 9.50ಕ್ಕೆ ಉಕ್ರೇನ್‌ನಿಂದ ಬಂದ ಶೆಲ್‌ ರಷ್ಯಾ ಮತ್ತು ಉಕ್ರೇನ್ ನಡುವಿನ ಗಡಿಯಿಂದ 150 ಮೀಟರ್ ದೂರದಲ್ಲಿ ಗಡಿ ಕಾವಲು ಠಾಣೆಯನ್ನು ನಾಶಪಡಿಸಿತು. ಘಟನಾ ಸ್ಥಳಕ್ಕೆ ರಷ್ಯಾದ ಮಿಲಿಟರಿ ಎಂಜಿನಿಯರ್‌ಗಳು ಭೇಟಿ ನೀಡಿದ್ದಾರೆ’ ಎಂದುಎಫ್‌ಎಸ್‌ಬಿ ನೀಡಿರುವ ಹೇಳಿಕೆ ಉಲ್ಲೇಖಿಸಿ ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಸ್‌ಪಿಬಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಮೇಲ್ಛಾವಣಿ ಮತ್ತು ಗೋಡೆಗಳೊಂದಿಗೆ ಒಂದು ಕೋಣೆಯ ಕಟ್ಟಡದ ಅವಶೇಷಗಳ ಜತೆಗೆ ರಷ್ಯಾದ ಧ್ವಜ ಇರುವುದನ್ನು ತೋರಿಸಲಾಗಿದೆ.

‌ಉಕ್ರೇನ್ ಮಿಲಿಟರಿ ಪಡೆಗಳು ಮತ್ತು ಪೂರ್ವದಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿಗಳನ್ನು ವಿಭಜಿಸುವ ರೇಖೆಯಾದ್ಯಂತ ಶೆಲ್ ದಾಳಿ ಕಳೆದ ಗುರುವಾರದಿಂದಲೇ ತೀವ್ರಗೊಂಡಿದೆ.

ರಷ್ಯಾ ಆರೋಪ ಅಲ್ಲಗಳೆದ ಉಕ್ರೇನ್‌

ಕ್ರಾಮಾಟೋರ್ಸ್ಕ್, ಉಕ್ರೇನ್‌: ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಬಳಸುವ ಗಡಿ ಕಾವಲು ಠಾಣೆ ಮೇಲೆ ಶೆಲ್ ದಾಳಿ ನಡೆಸಿರುವುದನ್ನು ಉಕ್ರೇನ್‌ ಮಿಲಿಟರಿ ಸೋಮವಾರ ನಿರಾಕರಿಸಿದೆ.

ಉದ್ವಿಗ್ನತೆ ಹೆಚ್ಚಿಸಲು ರಷ್ಯಾ ಸುಳ್ಳು ಸುದ್ದಿ ಹೆಣೆಯುತ್ತಿದೆ ಎಂದುಉಕ್ರೇನ್‌ ಕಿಡಿಕಾರಿದೆ.

‘ನಮಗೆಈ ಸುಳ್ಳು ಸುದ್ದಿ ತಡೆಯಲು ಸಾಧ್ಯವಾಗಲಿಲ್ಲ. ಆದರೆ, ನಾವು ನಾಗರಿಕ ಮೂಲಸೌಕರ್ಯಗಳ ಮೇಲೆ, ರೋಸ್ಟೋವ್ ಪ್ರದೇಶಗಳಲ್ಲಿ ಗುಂಡು ಹಾರಿಸುವುದಿಲ್ಲವೆಂದು ಸದಾ ಒತ್ತಿಹೇಳುತ್ತೇವೆ’ ಎಂದು ಉಕ್ರೇನ್‌ ಮಿಲಿಟರಿ ವಕ್ತಾರ ಪಾವ್ಲೋ ಕೊವಲ್ಚುಕ್ ಸುದ್ದಿಗಾರರಿಗೆ ತಿಳಿಸಿದರು.

ಉಕ್ರೇನ್– ಯುರೋಪ್‌ ಒಕ್ಕೂಟ ಒಪ್ಪಂದ

ಬ್ರಸೆಲ್ಸ್: ಉಕ್ರೇನ್‌ನಲ್ಲಿ ಮಿಲಿಟರಿಸಲಹಾ ತರಬೇತಿ ಕಾರ್ಯಾಚರಣೆ ಕೈಗೊಳ್ಳಲು ಉಕ್ರೇನ್ ಮತ್ತು ಯುರೋಪ್‌ ಒಕ್ಕೂಟ ತಾತ್ವಿಕ ಒಪ್ಪಂದಕ್ಕೆ ಬಂದಿವೆ ಎಂದು ಉಕ್ರೇನ್‌ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಸೋಮವಾರ ತಿಳಿಸಿದರು.

ಬ್ರಸೆಲ್ಸ್‌ನಲ್ಲಿ ಯುರೋಪ್‌ ಒಕ್ಕೂಟದ ವಿದೇಶಾಂಗ ಸಚಿವರುಗಳನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯುರೋಪ್‌ ಒಕ್ಕೂಟವು ಉಕ್ರೇನ್‌ನಲ್ಲಿ ಮಿಲಿಟರಿ ಸಲಹಾ ತರಬೇತಿ ಕಾರ್ಯಾಚರಣೆ ಕೈಗೊಳ್ಳಲಿದೆ. ಈ ಸಂಬಂಧ ನಮ್ಮ ನಡುವೆ ಒಪ್ಪಂದ ಏರ್ಪಟ್ಟಿದೆ. ಆದರೆ, ಇವು ಯುದ್ಧ ಪಡೆಗಳಲ್ಲ’ ಎಂದು ಕುಲೆಬಾ ಹೇಳಿದರು.

ರಷ್ಯಾದಿಂದ ಸೈಬರ್‌ ದಾಳಿ: ಉಕ್ರೇನ್‌ ಎಚ್ಚರಿಕೆ

ಕೀವ್‌:ಸರ್ಕಾರಿ ಸಂಸ್ಥೆಗಳು, ಬ್ಯಾಂಕ್‌ಗಳು ಮತ್ತು ರಕ್ಷಣಾ ವಲಯದ ಮೇಲೆ ರಷ್ಯಾ ಹ್ಯಾಕರ್‌ಗಳು ಮಂಗಳವಾರ ದೊಡ್ಡ ದಾಳಿ ನಡೆಸಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಎಚ್ಚರಿಕೆ ಸಂದೇಶಗಳು ಆನ್‌ಲೈನ್‌ನಲ್ಲಿ ಗೋಚರಿಸುತ್ತಿವೆ ಎಂದು ಉಕ್ರೇನ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಹ್ಯಾಕಿಂಗ್ ಫೋರಂನಲ್ಲಿ ಇಂತಹ ಎಚ್ಚರಿಕೆಗಳು ಪತ್ತೆಯಾಗಿವೆ ಎಂದುಉಕ್ರೇನ್‌ ಸರ್ಕಾರದ ಸೈಬರ್‌ ಸೆಕ್ಯುರಿಟಿ ಏಜೆನ್ಸಿ ಸಿಇಆರ್‌ಟಿ-ಯುಎ ಸೋಮವಾರಹೇಳಿದೆ.

ಇತ್ತೀಚಿನ ವಾರಗಳಲ್ಲಿ ಉಕ್ರೇನ್ ಸರಣಿ ಸೈಬರ್‌ ದಾಳಿಗಳನ್ನು ಎದುರಿಸಿದ್ದು, ಇದಕ್ಕೆ ರಷ್ಯಾ ಕಾರಣ ಎಂದು ಆರೋಪಿಸಿದೆ. ಆದರೆ, ರಷ್ಯಾ ಇದನ್ನು ನಿರಾಕರಿಸಿದೆ.

ಷರತ್ತುಬದ್ಧ ಮಾತುಕತೆಗೆ ಬೈಡನ್‌ ಒಪ್ಪಿಗೆ

ಪ್ಯಾರಿಸ್/ವಾಷಿಂಗ್ಟನ್ ಡಿಸಿ: ಉಕ್ರೇನ್ ಮೇಲೆ ಆಕ್ರಮಣ ನಿಲ್ಲಿಸುವ ಷರತ್ತಿನ ಮೇಲೆ, ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಒ‍ಪ್ಪಿದ್ದಾರೆ ಎಂದು ಫ್ರಾನ್ಸ್‌ ಅಧ್ಯಕ್ಷರ ಕಚೇರಿ ತಿಳಿಸಿದೆ.

ಪ್ಯಾರಿಸ್‌ ಶೃಂಗಸಭೆಯ ಪ್ರಸ್ತಾಪವನ್ನು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮುಂದಿಟ್ಟಿದ್ದು, ಯೂರೋಪ್‌ನ ಭದ್ರತೆ ಮತ್ತು ಕಾರ್ಯತಂತ್ರದ ಸ್ಥಿರತೆ ದೃಷ್ಟಿಯಿಂದ, ಸಂಬಂಧಿಸಿದ ಎಲ್ಲ ದೇಶಗಳನ್ನು ಸಮಾವೇಶಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಗುರುವಾರದಿಂದ ರಷ್ಯಾ ಮತ್ತು ಅಮೆರಿಕ ಅಧ್ಯಕ್ಷರ ಮಾತುಕತೆಗೆ ತಯಾರಿ ನಡೆಯಲಿದೆ. ಬೈಡನ್‌ ಜತೆಗೆ ಮಾತುಕತೆಗೆ ಪುಟಿನ್‌ ಅಗತ್ಯವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಫ್ರಾನ್ಸ್‌ ಒತ್ತಾಯಿಸಿದೆ.

ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ. ಸದ್ಯ ಶಾಂತಿ ಶೃಂಗಸಭೆಯತ್ತ ಸಾಗಬೇಕಾಗಿದೆ. ಇದು ಪುಟಿನ್‌ ಅವರ ಆಯ್ಕೆಗೆ ಬಿಟ್ಟಿದೆ. ರಾಜತಾಂತ್ರಿಕತೆ ಪ್ರಯತ್ನಗಳು ಒಳ್ಳೆಯ ಮಾರ್ಗದಲ್ಲೇ ಸಾಗಿವೆ ಎಂದು ಫ್ರಾನ್ಸ್‌ ಅಧ್ಯಕ್ಷರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫ್ರಾನ್ಸ್‌ನ ಪ್ರಕಟಣೆಯ ನಂತರ, ರಷ್ಯಾವು ಉಕ್ರೇನ್ ಅನ್ನು ಆಕ್ರಮಿಸದಿರುವವರೆಗೆ ಬೈಡನ್ ಸಭೆಗೆ ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ಶ್ವೇತಭವನವು ದೃಢಪಡಿಸಿದೆ.

‘ರಷ್ಯಾ ಆಕ್ರಮಣ ನಡೆಸದಿರುವವರೆಗೂ ರಾಜತಾಂತ್ರಿಕತೆಯನ್ನು ಅನುಸರಿಸಲು ಅಮೆರಿಕ ಬದ್ಧ’ ಎಂದು ಅಮೆರಿಕ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಮಾತುಕತೆ ಬದಲಿಗೆ ರಷ್ಯಾ ಯುದ್ಧ ಆಯ್ಕೆಮಾಡಿಕೊಂಡರೆ ತ್ವರಿತ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳಲು ನಾವು ಸಿದ್ಧ. ಪ್ರಸ್ತುತ, ರಷ್ಯಾವು ಶೀಘ್ರದಲ್ಲೇ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣಕ್ಕೆ ಸಿದ್ಧತೆಗಳನ್ನು ಮುಂದುವರೆಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಶಾಂತಿ ಶೃಂಗಸಭೆ ಅಗತ್ಯ ಇದೆ ಎಂದು ಫ್ರಾನ್ಸ್ ಮುಂದಿಟ್ಟಿರುವ ಪ್ರಸ್ತಾವವನ್ನು ಉಕ್ರೇನ್ ಕೂಡ ಎಚ್ಚರಿಕೆ ನಡೆಯಿಂದಲೇ ಸ್ವಾಗತಿಸಿದೆ.

ಸೇನೆ ಹಿಂತೆಗೆತ ನ್ಯಾಟೊ ನಿರ್ಧಾರ ಅವಲಂಬಿಸಿದೆ: ಬೆಲಾರಸ್‌

ಮಾಸ್ಕೊ:ತನ್ನ ಪ್ರದೇಶದಿಂದ ರಷ್ಯಾದ ಸೈನ್ಯವನ್ನು ಹಿಂತೆಗೆದುಕೊಳ್ಳುವುದು ನ್ಯಾಟೊ ತನ್ನ ಪಡೆಗಳನ್ನು ಬೆಲಾರಸ್ ಮತ್ತು ರಷ್ಯಾದ ಗಡಿ ಬಳಿಯಿಂದ ಹಿಂತೆಗೆದುಕೊಳ್ಳುವುದರ ಮೇಲೆ ಅವಲಂಬಿತವಾಗಿದೆ ಎಂದು ಸೋಮವಾರ ಬೆಲಾರಸ್‌ ಹೇಳಿದೆ.

ಭಾನುವಾರ ಕೊನೆಗೊಳ್ಳಬೇಕಿದ್ದ ಜಂಟಿ ಸಮರಭ್ಯಾಸವನ್ನು ರಷ್ಯಾ ಮತ್ತು ಬೆಲಾರಸ್‌ ಮತ್ತೆ ವಿಸ್ತರಿಸಿದ್ದು, ಗಡಿಗಳಲ್ಲಿ ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚು ಮಾಡಿವೆ.

ಕೆಟ್ಟ ಸನ್ನಿವೇಶ ಎದುರಿಸಲು ಸಿದ್ಧತೆ: ಬ್ರಿಟನ್‌

ಲಂಡನ್ (ರಾಯಿಟರ್ಸ್):ರಷ್ಯಾದ ಆಕ್ರಮಣದ ಸಾಧ್ಯತೆ ಹೆಚ್ಚಿರುವುದರಿಂದ ಉಕ್ರೇನ್ ಬಿಕ್ಕಟ್ಟು ಉಲ್ಬಣಿಸುತ್ತಿದ್ದು, ಅತ್ಯಂತ ಕೆಟ್ಟ ಸನ್ನಿವೇಶ ಎದುರಿಸಲು ಮಿತ್ರರಾಷ್ಟ್ರಗಳೊಂದಿಗೆ ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಬ್ರಿಟನ್ ವಿದೇಶಾಂಗ ಸಚಿವ ಲಿಜ್ ಟ್ರಸ್ ಸೋಮವಾರ ಹೇಳಿದ್ದಾರೆ.

‘ಬಿಕ್ಕಟ್ಟು ಶಮನಗೊಳಿಸಲು ರಾಜತಾಂತ್ರಿಕ ಮಾರ್ಗ ಅನುಸರಿಸಬೇಕು. ಆದರೆ, ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣ ಸಾಧ್ಯತೆ ಹೆಚ್ಚು ಕಾಣಿಸುತ್ತಿದೆ. ಇದರಿಂದ ಬ್ರಿಟನ್‌ ಮತ್ತು ಮಿತ್ರರಾಷ್ಟ್ರಗಳು ಕೆಟ್ಟ ಸನ್ನಿವೇಶ ಎದುರಿಸಲು ಸಿದ್ಧತೆಗಳನ್ನು ಹೆಚ್ಚು ಮಾಡಿಕೊಳ್ಳುತ್ತಿವೆ’ ಎಂದು ಬ್ರಸೆಲ್ಸ್‌ನಲ್ಲಿ ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಅವರು ಟ್ವಿಟ್‌ನಲ್ಲಿ ಹೇಳಿದ್ದಾರೆ.

ವಿಮಾನಯಾನಕ್ಕೆ ವಾಯುಪ್ರದೇಶ ಮುಕ್ತ: ರಷ್ಯಾದೊಂದಿಗಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ 10 ವಿಮಾನಯಾನ ಸಂಸ್ಥೆಗಳು ಉಕ್ರೇನ್‌ಗೆ ತಮ್ಮ ನಿಗದಿತ ವೇಳಾಪಟ್ಟಿಯ ಪ್ರಕಾರ ವಿಮಾನಗಳ ಸಂಚಾರ ಮುಂದುವರಿಸಿದ್ದು, ವಿಮಾನ ಹಾರಾಟಕ್ಕೆ ವಾಯು ಪ್ರದೇಶ ಮುಕ್ತವಾಗಿರಿಸಲಾಗಿದೆ ಎಂದು ಉಕ್ರೇನ್ ಮೂಲಸೌಕರ್ಯ ಸಚಿವರು ಸೋಮವಾರ ತಿಳಿಸಿದ್ದಾರೆ.

ಜರ್ಮನಿಯ ಲುಫ್ತಾನ್ಸಾ ವಾಯುಯಾನ ಸಂಸ್ಥೆ ಸೋಮವಾರದಿಂದಲೇ ಉಕ್ರೇನ್‌ಗೆ ವಿಮಾನಗಳ ಸಂಚಾರ ಸ್ಥಗಿತಗೊಳಿಸಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಫ್ರಾನ್ಸ್‌ ಮತ್ತು ಕೀವ್‌ ನಡುವಿನ ವಿಮಾನಗಳನ್ನು ಮಂಗಳವಾರದಿಂದಲೇ ರದ್ದುಗೊಳಿಸಲು ಏರ್ ಫ್ರಾನ್ಸ್ ನಿರ್ಧರಿಸಿದೆ. ಸ್ಕ್ಯಾಂಡಿನೇವಿಯನ್ ಏರ್‌ಲೈನ್ ಎಸ್‌ಎಎಸ್ ಕೂಡ ವಿಮಾನಗಳ ಸಂಚಾರ ಸ್ಥಗಿತಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT