ಕೊಲಂಬೊ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯು ಸೆಪ್ಟಂಬರ್ 21ರಂದು ನಡೆಯಲಿದೆ ಎಂದು ಚುನಾವಣಾ ಆಯೋಗವು ಘೋಷಿಸಿದೆ.
2022ರಲ್ಲಿ ಆರ್ಥಿಕವಾಗಿ ದಿವಾಳಿಯಾದ ನಂತರ ಶ್ರೀಲಂಕಾದಲ್ಲಿ ನಡೆಯುತ್ತಿರುವ ಚುನಾವಣೆ ಇದಾಗಿದೆ.
ಆ. 15ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಶುಕ್ರವಾರ ಹೊರಡಿಸಿರುವ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಚುನಾವಣೆ ಘೋಷಣೆಯಿಂದ, ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಅಧಿಕಾರದ ಅವಧಿಯು ವಿಸ್ತರಣೆಗೊಳ್ಳಲಿದೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ.
ಗೊಟಬಯ ರಾಜಪಕ್ಸ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದೇಶ ದಿವಾಳಿಯಾದಾಗ, ಅಧಿಕಾರದ ಚುಕ್ಕಾಣಿ ಹಿಡಿದ ವಿಕ್ರಮಸಿಂಘೆ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ಆದರೆ ರಾನಿಲ್ ತಮ್ಮ ಉಮೇದುವಾರಿಕೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.