ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಮಣಿಪುರ ಸಂಘರ್ಷಕ್ಕೆ ಪರಿಹಾರ: ಸರ್ಕಾರಕ್ಕೆ ದೂರದರ್ಶಿತ್ವ ಬೇಕು

ಮಣಿಪುರದಲ್ಲಿ ಸಂಘರ್ಷವೇ ಇಲ್ಲ ಎಂಬ ಅವಿವೇಕದ ಹೇಳಿಕೆಗಳಿಂದ ಯಾವ ಉಪಯೋಗವೂ ಇಲ್ಲ
Published 3 ಮೇ 2024, 22:39 IST
Last Updated 3 ಮೇ 2024, 22:39 IST
ಅಕ್ಷರ ಗಾತ್ರ

ಸ್ವಾತಂತ್ರ್ಯೋತ್ತರ ಭಾರತದ 76 ವರ್ಷಗಳ ಇತಿಹಾಸದಲ್ಲಿ ರಾಜ್ಯವೊಂದರಲ್ಲಿ ನಾಗರಿಕ
ಸಂಘರ್ಷವೊಂದರ ಪರಿಹಾರಕ್ಕೆ ಕೇಂದ್ರ ಸರ್ಕಾರದ ಯಾವುದೇ ಪ್ರಯತ್ನ ಇಲ್ಲದೆ ಸಂಘರ್ಷ ಒಂದು ವರ್ಷ
ಮುಂದುವರಿದದ್ದು ಬಹಳ ವಿರಳ. ಮಣಿಪುರದಲ್ಲಿ ಜನಾಂಗೀಯ ಗಲಭೆಯು ಆರಂಭವಾಗಿ ಒಂದು ವರ್ಷವಾಗಿದೆ. ಈ ಗಲಭೆಯಲ್ಲಿ 220ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ; ಮಹಿಳೆಯರು ಲೈಂಗಿಕ  ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ; 60 ಸಾವಿರಕ್ಕೂ  ಹೆಚ್ಚು ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಚರ್ಚುಗಳಿಗೆ ಬೆಂಕಿ ಹಚ್ಚಲಾಗಿದೆ. ಈ ರಾಜ್ಯದ ಜನರು ನೊಂದರೂ ಪರವಾಗಿಲ್ಲ ಬೆಂದರೂ ಪರವಾಗಿಲ್ಲ ಎಂದು ಕೇಂದ್ರ ಸರ್ಕಾರ ಭಾವಿಸಿರುವಂತಿದೆ. ಈ ರಾಜ್ಯವು ದೇಶದ ಈಶಾನ್ಯದ ಮೂಲೆಯಲ್ಲಿದೆ. ಹೀಗಾಗಿ, ದೂರದಲ್ಲಿ ಎಲ್ಲಿಯೋ ಹಿಂಸಾಚಾರ ನಡೆಯುತ್ತಿದೆ ಎಂಬ ಭಾವ ಉಂಟಾಗಿದೆ. ಗಂಭೀರವಾದ ಪ್ರಕರಣಗಳು ನಡೆಯುತ್ತಿದ್ದರೂ ಅದರ ತೀವ್ರತೆ ಹೊರಗಿದ್ದವರಿಗೆ ತಟ್ಟುತ್ತಿಲ್ಲ. ದೊಡ್ಡ ಗುಂಪೊಂದು ಮೂವರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ವಿಡಿಯೊವೊಂದು ಬಹಿರಂಗವಾದಾಗ ಮಾತ್ರ ದೇಶದ ಆತ್ಮಸಾಕ್ಷಿಯು ಬೆಚ್ಚಿಬಿದ್ದಿತು. ಘಟನೆ ನಡೆದ ಒಂದು ತಿಂಗಳ ಬಳಿಕ ವಿಡಿಯೊ ಬಹಿರಂಗವಾಗಿತ್ತು. ಸಂಘರ್ಷದ ಆರಂಭದಲ್ಲಿಯೇ ಪೊಲೀಸರ ಕಣ್ಣ ಮುಂದೆಯೇ ಶಸ್ತ್ರಾಗಾರಗಳನ್ನು ಕೊಳ್ಳೆ ಹೊಡೆಯಲಾಯಿತು. ಎರಡೂ ಗುಂ‍ಪುಗಳಲ್ಲಿಯೂ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹ ಇದೆ.

ಈ ರಾಜ್ಯದಲ್ಲಿ ಬಿಜೆಪಿಯ ಆಡಳಿತ ಇದೆ. ಈ ಒಂದು ಕಾರಣದಿಂದ ಮಾತ್ರ ಬಿರೇನ್‌ ಸಿಂಗ್‌ ನೇತೃತ್ವದ ಸರ್ಕಾರ ವಜಾಗೊಂಡಿಲ್ಲ ಎಂಬುದು ಈ ಸರ್ಕಾರ ಇನ್ನೂ ಇರುವುದಕ್ಕೆ ಕೊಡಬಹುದಾದ ಏಕೈಕ ಕಾರಣವಾಗಿದೆ. ಸಂಘರ್ಷಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿಂಗ್‌ ಅವರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ. ಅಲ್ಪಸಂಖ್ಯಾತರಾದ, ಮುಖ್ಯವಾಗಿ ಕ್ರೈಸ್ತ ಧರ್ಮಕ್ಕೆ ಸೇರಿದ ಕುಕಿ ಬುಡಕಟ್ಟು ಜನರು ಮತ್ತು ಬಹುಸಂಖ್ಯಾತರಾದ ಮೈತೇಯಿ ಸಮುದಾಯದ ಜನರು ಸರಣಿ ಹಿಂಸಾಕೃತ್ಯಗಳನ್ನು ನಡೆಸಿದ್ದಾರೆ, ಪರಸ್ಪರ ಪ್ರತೀಕಾರದ ನಡೆಗಳು ಪರಿಸ್ಥಿತಿಯನ್ನು ಘೋರವಾಗಿಸಿವೆ. ಎರಡೂ ಸಮುದಾಯಗಳ ನಡುವಣ ವೈರತ್ವಕ್ಕೆ ಹಲವು ದಶಕಗಳ ಇತಿಹಾಸ ಇದೆ. ಆದರೆ, ಹಿಂದೆಂದೂ ಈಗಿನಷ್ಟು ಆಘಾತಕರವಾದ ಹಿಂಸಾಚಾರ ನಡೆದಿರಲಿಲ್ಲ. ಮೈತೇಯಿ ಸಮುದಾಯದ ತೀವ್ರಗಾಮಿ ಗುಂಪಾದ ಅರಂಬಾಯಿ ತೆಂಗೊಲ್‌ಗೆ ರಾಜ್ಯ ಸರ್ಕಾರವು ಪೂರ್ಣ ಸ್ವಾತಂತ್ರ್ಯವನ್ನೇ ಕೊಟ್ಟುಬಿಟ್ಟದ್ದು ಹಿಂಸಾಚಾರದ ತೀವ್ರತೆ ಹೆಚ್ಚಲು ಕಾರಣವಾಯಿತು. 

ವಿರೋಧ ಪಕ್ಷಗಳ ಬಲವಂತದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಆಗಸ್ಟ್‌ನಲ್ಲಿ ಗಲಭೆಯ ಕುರಿತು ಮಾತನಾಡಿದರು. ಆ ಹೊತ್ತಿಗೆ ಗಲಭೆ ಆರಂಭವಾಗಿ ಮೂರು ತಿಂಗಳು ಕಳೆದಿತ್ತು. ಸಂಸತ್ತಿನಲ್ಲಿ ಮಾತನಾಡಿದ ಮೋದಿ ಅವರು ಮಣಿಪುರದ ಈಗಿನ ಸಮಸ್ಯೆಗೆ ಈ ಹಿಂದೆ ಇದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಕಾರಣ ಎಂದರು. ತಮ್ಮ ಪಕ್ಷದ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಸದ್ಯದಲ್ಲಿಯೇ ಶಾಂತಿ ಸ್ಥಾಪಿಸಲಿದೆ ಎಂದರು. ಮಣಿಪುರದ ಎರಡು ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ಮುಂಚೆ ಮೋದಿ ಅವರು ‘ಅಸ್ಸಾಂ ಟ್ರಿಬ್ಯೂನ್‌’ ಪತ್ರಿಕೆಗೆ ಸಂದರ್ಶನ ನೀಡಿದ್ದರು. ತಮ್ಮ ಸರ್ಕಾರದ ಸಕಾಲಿಕ ಕ್ರಮಗಳಿಂದಾಗಿ ಪರಿಸ್ಥಿತಿಯಲ್ಲಿ ‘ಅಸಾಧಾರಣ ಸುಧಾರಣೆ’ ಆಗಿದೆ ಎಂದರು. ಆದರೆ, ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ದಿನವಾದ ಏಪ್ರಿಲ್‌ 19ರಂದು ನಡೆದ ಹಿಂಸಾಚಾರವು ಮೋದಿ ಅವರ ಹೇಳಿಕೆ ಸುಳ್ಳು ಎಂದು ನಿರೂಪಿಸಿತು. ಮ್ಯಾನ್ಮಾರ್‌ ಗಡಿಯಲ್ಲಿ ಬೇಲಿ ನಿರ್ಮಿಸುವುದನ್ನು ಬಿಟ್ಟು ಬೇರೊಂದು ಪರಿಹಾರ ಸರ್ಕಾರದ ಮುಂದೆ ಇಲ್ಲ. ಆದರೆ, ಇದು ಆತ್ಮಘಾತುಕವಾದ ನಿರ್ಧಾರ. ಏಕೆಂದರೆ, ಅಲ್ಪಸಂಖ್ಯಾತ ಕುಕಿ ಸಮುದಾಯವೇ ಹಿಂಸಾಚಾರಕ್ಕೆ ಕಾರಣ ಎಂದು ಸಾರಿಹೇಳಿದಂತಾಗುತ್ತದೆ. ಅವರೆಲ್ಲರೂ ಗಡಿಯಾಚೆಯಿಂದ ಬಂದವರು ಎಂದು ಹೇಳಿದಂತಾಗುತ್ತದೆ. ಅವಿವೇಕದ ಹೇಳಿಕೆಗಳ ಮೂಲಕ ಮಣಿಪುರದಲ್ಲಿ ಸಂಘರ್ಷವೇ ಇಲ್ಲ ಎಂದು ಹೇಳಿಕೊಳ್ಳುವುದರಿಂದ ಯಾವ ಉಪಯೋಗವೂ ಇಲ್ಲ. ಈ ಸಂಘರ್ಷಕ್ಕೆ ಪರಿಹಾರ ಕೊಡಲು ಈಗಿನ ನಾಯಕತ್ವವು ತೋರಿರುವುದಕ್ಕಿಂತ ಹೆಚ್ಚಿನ ದೂರದರ್ಶಿತ್ವದ ಅಗತ್ಯ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT