ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG TEST | ವಿರಾಟ್ - ಜಡೇಜ ಗೈರು: ಇಂಗ್ಲೆಂಡ್‌ಗೆ ಅನುಕೂಲ

ದಿಗ್ಗಜ ಕ್ರಿಕೆಟಿಗ ಜೆಫ್ರಿ ಬಾಯ್ಕಾಟ್‌ ಅಭಿಪ್ರಾಯ
Published 30 ಜನವರಿ 2024, 16:28 IST
Last Updated 30 ಜನವರಿ 2024, 16:28 IST
ಅಕ್ಷರ ಗಾತ್ರ

ಲಂಡನ್: ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಗೈರುಹಾಜರಿ ಭಾರತ ತಂಡವನ್ನು ಕಾಡಿತು. ರೋಹಿತ್ ಶರ್ಮಾ ಅವರ ವೈಭವವು ಈಗ ಗತಕಾಲ ಸೇರಿದೆ ಎಂದು ಇಂಗ್ಲೆಂಡ್‌ ಕ್ರಿಕೆಟ್ ದಿಗ್ಗಜ ಜೆಫ್ರಿ ಬಾಯ್ಕಾಟ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ 28 ರನ್‌ಗಳಿಂದ ಸೋತಿತ್ತು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮುನ್ನಡೆ ಗಳಿಸಿದ್ದ ಆತಿಥೇಯ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಹಿಡಿತ ಕಳೆದುಕೊಂಡಿದ್ದು ಸೋಲಿಗೆ ಕಾರಣವಾಗಿತ್ತು. ಪಂದ್ಯದ ನಾಲ್ಕನೇ ದಿನ 231 ರನ್‌ಗಳ ಗುರಿಯನ್ನು ಸಾಧಿಸುವಲ್ಲಿ ಭಾರತ ತಂಡ ವಿಫಲವಾಗಿತ್ತು. 

ಈ ಐದು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಂದ ವಿರಾಟ್ ‘ರಜೆ’ ಪಡೆದಿದ್ದಾರೆ.

'ಇಂಗ್ಲೆಂಡ್ ತಂಡಕ್ಕೆ ಇದು ಉತ್ತಮ ಸಮಯವಾಗಿದೆ. 12 ವರ್ಷಗಳ ನಂತರ ಭಾರತವನ್ನು ಅದರದ್ದೇ ತವರಿನಲ್ಲಿ ಸೋಲಿಸಬಹುದು’ ಎಂದು ಬಾಯ್ಕಾಟ್  ‘ದ ಡೇಲಿ ಟೆಲಿಗ್ರಾಫ್‌’ ಅಂಕಣದಲ್ಲಿ ಬರೆದಿದ್ದಾರೆ.

‘ಮುಂದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ವಿರಾಟ್ ಹಾಗೂ ಜಡೇಜ ಅವರ ಕೊರತೆ ಕಾಡಲಿದೆ. ಜಡೇಜ ಸ್ನಾಯುಸೆಳೆತದಿಂದ ಹೊರಬಿದ್ದಿದ್ದಾರೆ. ನಾಯಕ ರೋಹಿತ್ ಅವರಿಗೆ ಈಗ 37 ವರ್ಷ ಗಳಾಗಿದೆ. ಅವರ ಆಟವು ಗತಕಾಲ ಸೇರಿದೆ. ಸ್ವಲ್ಪ ಹೊತ್ತು ಅಬ್ಬರಿಸಿ ಸಂಚಲನ ಮೂಡಿಸಬಲ್ಲರಷ್ಟೇ. ಕಳೆದ ನಾಲ್ಕು ವರ್ಷಗಳಲ್ಲಿ ರೋಹಿತ್ ಅವರ ತಮ್ಮ ತವರಿನಂಗಳದಲ್ಲಿ  ನಡೆದ ಟೆಸ್ಟ್‌ಗಳಲ್ಲಿ ಎರಡು ಶತಕ ದಾಖಲಿಸಿದ್ದಾರೆ. ಫೀಲ್ಲಿಂಗ್‌ನಲ್ಲಿಯೂ ತಂಡವು ದುರ್ಬಲವಾಗಿದೆ. ಒಲ ಪೋಪ್ 110 ರನ್‌ ಗಳಿಸಿದ್ದಾಗ ಕ್ಯಾಚ್ ಕೈಚೆಲ್ಲಿದರು. ಇದರಿಂದಾಗಿ ಪೋಪ್ ತಮ್ಮ ಖಾತೆಗೆ ಮತ್ತೆ 86 ರನ್ ಸೇರಿಸಿಕೊಂಡರು. ಇದು ಭಾರತದ ಸೋಲಿಗೆ ಕಾರಣವಾಯಿತು’ ಎಂದು ವಿಶ್ಲೇಷಿಸಿದ್ದಾರೆ.

‘ಜಡೇಜ ಶ್ರೇಷ್ಠ ಆಲ್‌ರೌಂಡರ್ ಆಗಿದ್ದಾರೆ. ಅಮೋಘ ಫೀಲ್ಡರ್ ಆಗಿರುವ ಅವರು, ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿಯೂ ತಂಡಕ್ಕೆ ಶಕ್ತಿ ತುಂಬುವ ಆಟಗಾರ. ಅವರು ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಆಘಾತವಾಗಿದೆ. ಕೊಹ್ಲಿ ಸರಾಸರಿ 60ರಲ್ಲಿ ರನ್‌ ಗಳಿಸಿರುವ ಬ್ಯಾಟರ್. ಅವರು ಶ್ರೇಷ್ಠ ಫೀಲ್ಡರ್ ಕೂಡ ಹೌದು. ಈಗ ಅವರಿಬ್ಬರೂ ಇಲ್ಲದಿರುವುದು ಇಂಗ್ಲೆಂಡ್‌ಗೆ ಅನುಕೂಲವಾಗಲಿದೆ’ ಎಂದು ಬಾಯ್ಕಾಟ್ ಬರೆದಿದ್ದಾರೆ.

ಐದನೇ ಸ್ಥಾನಕ್ಕೆ ಕುಸಿದ ಭಾರತ

ದುಬೈ (ಪಿಟಿಐ): ಹೈದರಾಬಾದ್‌ನಲ್ಲಿ ನಡೆದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಕೈಲಿ ಆಘಾತಕಾರಿ ಸೋಲನುಭವಿಸಿದ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನಕ್ಕೆ ಸರಿದಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯನ್ನು ಈ ತಿಂಗಳ ಆರಂಭದಲ್ಲಿ 1–1 ರಲ್ಲಿ ಸಮ ಮಾಡಿಕೊಂಡಿದ್ದ ಭಾರತ ಅಲ್ಪಾವಧಿಗೆ ಅಗ್ರಸ್ಥಾನಕ್ಕೇರಿತ್ತು. ಆದರೆ ಪಾಕಿಸ್ತಾನ ವಿರುದ್ಧ ಸರಣಿ ಗೆದ್ದ ನಂತರ ಆಸ್ಟ್ರೇಲಿಯಾ ತಂಡವು, ಭಾರತ ತಂಡವನ್ನು ಹಿಂದೆಹಾಕಿ ಮೊದಲ ಸ್ಥಾನಕ್ಕೆ ಮರಳಿತ್ತು. ಇಂಗ್ಲೆಂಡ್‌ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಸೋಲಿನಿಂದ ಭಾರತದ ಸ್ಥಾನ ಕುಸಿಯಿತು.

ರೋಹಿತ್‌ ಶರ್ಮಾ ಬಳಗದ ಶೇಕಡವಾರು ಪಾಯಿಂಟ್ಸ್‌ 54.16 ರಿಂದ ಹಾಲಿ 43.33ಕ್ಕೆ ಇಳಿದಿದೆ.

ಆಸ್ಟ್ರೇಲಿಯಾ 55 ಪರ್ಸೆಂಟೇಜ್‌ ಪಾಯಿಂಟ್‌ಗಳೊಡನೆ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ಎಲ್ಲವೂ 50 ಪರ್ಸೆಂಟೇಜ್ ಪಾಯಿಂಟ್ಸ್‌ ಹೊಂದಿದ್ದು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಪಾಕಿಸ್ತಾನ, ವೆಸ್ಟ್‌ ಇಂಡೀಸ್, ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಕ್ರಮವಾಗಿ ಆರರಿಂದ ಒಂಬತ್ತರವರೆಗಿನ ಸ್ಥಾನಗಳನ್ನು ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT