ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ವೇಳೆ ಟಿವಿ ನೋಡುವುದು, ಪತ್ರಿಕೆ ಓದುವುದು ಬೇಡ ಎಂದಿದ್ದ ಸಚಿನ್: ಯುವಿ

Published 29 ಸೆಪ್ಟೆಂಬರ್ 2023, 11:40 IST
Last Updated 29 ಸೆಪ್ಟೆಂಬರ್ 2023, 11:40 IST
ಅಕ್ಷರ ಗಾತ್ರ

ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಅಕ್ಟೋಬರ್‌ 5ರಿಂದ ಆರಂಭವಾಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ಕಳೆದ ಬಾರಿ ರನ್ನರ್‌ ಅಪ್‌ ಆಗಿದ್ದ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.

ಈ ಟೂರ್ನಿಗೆ ಆತಿಥ್ಯ ವಹಿಸಿರುವ ಭಾರತ ತಂಡ ಅಕ್ಟೋಬರ್‌ 8ರಂದು ಚೆನ್ನೈನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಅಭಿಯಾನ ಆರಂಭಿಸಲಿದೆ.

ರೋಹಿತ್‌ ಶರ್ಮ ನಾಯಕತ್ವದ ಭಾರತ ತಂಡ ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ. ನಂತರ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನೂ 2–1 ಅಂತರದ ಜಯಿಸಿ ವಿಶ್ವಾಸದ ಅಲೆಯಲ್ಲಿದೆ. ಟೀಂ ಇಂಡಿಯಾ ಅತ್ಯುತ್ತಮ ಲಯದಲ್ಲಿದೆಯಾದರೂ, ತವರಿನಲ್ಲಿ ವಿಶ್ವಕಪ್‌ ಆಡುತ್ತಿರುವುದರಿಂದ ಒತ್ತಡ ತಪ್ಪಿದ್ದಲ್ಲ.

ಟಿವಿ ನೋಡುವುದು ಬೇಡ ಎಂದಿದ್ದ ಸಚಿನ್

ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಜಂಟಿಯಾಗಿ ಆತಿಥ್ಯ ವಹಿಸಿದ್ದ 2011ರ ವಿಶ್ವಕಪ್‌ ಟೂರ್ನಿಯಲ್ಲಿ, ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಟೀಂ ಇಂಡಿಯಾ ಚಾಂಪಿಯನ್‌ ಆಗಿತ್ತು. ಆದರೆ ಅದಕ್ಕೂ ಮುನ್ನ ಗುಂಪು ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋಲು ಕಂಡಾಗ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಆಗಲೂ ತವರಿನ ಅಂಗಳದಲ್ಲೇ ಆಡಿದ್ದ ಭಾರತ ತಂಡದ ಭಾಗವಾಗಿದ್ದ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌, ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್ ಅವರು ನೀಡಿದ್ದ ಸಲಹೆಗಳನ್ನು ಸ್ಮರಿಸುತ್ತಾ..‌ ರೋಹಿತ್‌ ಪಡೆಗೆ ಕಿವಿಮಾತು ಹೇಳಿದ್ದಾರೆ.

'ಈಗ ಅಡೆತಡೆಗಳು ಸಾಕಷ್ಟಿವೆ. ಆಗ (2011ರಲ್ಲಿ) ಸಾಮಾಜಿಕ ಮಾಧ್ಯಮಗಳು ಈಗಿನಷ್ಟು ಪ್ರಚಲಿತದಲ್ಲಿರಲಿಲ್ಲ. ಮಾಧ್ಯಮಗಳು ಮತ್ತು ಜನರಿಂದ ಮಾತ್ರವೇ ನಮ್ಮ ಏಕಾಗ್ರತೆಗೆ ಭಂಗವಾಗುತ್ತಿತ್ತು. ವಿಶ್ವಕಪ್‌ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನಾವು ಸೋಲು ಕಂಡಾಗ ಮಾಧ್ಯಮಗಳಲ್ಲಿ ನಮ್ಮ ವಿರುದ್ಧದ ಸುದ್ದಿಗಳು ತೀವ್ರವಾಗಿ ಪ್ರಸಾರವಾಗುತ್ತಿದ್ದವು. ಆಗ ಸಚಿನ್‌ (ತೆಂಡೂಲ್ಕರ್‌) 'ನಾವು ಟಿವಿ ನೋಡುವುದನ್ನು, ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಬೇಕು. ವಿಮಾನ ನಿಲ್ದಾಣಗಳಲ್ಲಿ ಜನಸಂದಣಿಯಲ್ಲಿ ಓಡಾಡುವಾಗ ಹೆಡ್‌ಫೋನ್‌ಗಳನ್ನು ಬಳಸಬೇಕು. ವಿಶ್ವಕಪ್‌ ಮೇಲಷ್ಟೇ ಗಮನ ಕೇಂದ್ರೀಕರಿಸಬೇಕು' ಎಂದು ತಂಡದ ಆಟಗಾರರಿಗೆ ಸಲಹೆ ನೀಡಿದ್ದರು. ಎಲ್ಲರೂ ಅವರ ಮಾತಿಗೆ ಒಪ್ಪಿಗೆ ಸೂಚಿಸಿದ್ದೆವು. ಅದನ್ನೇ ಅನುಕರಿಸಿದೆವು. ಆ ತಂತ್ರ ಯಶಸ್ವಿಯಾಯಿತು' ಎಂದು ಹೇಳಿಕೊಂಡಿದ್ದಾರೆ.

'ತಂಡದ ಮೇಲೆ ಸಾಕಷ್ಟು ಒತ್ತಡವಿದೆ. ಜನರು ಭಾರತ ತಂಡ ಮಾತ್ರವೇ ಗೆಲ್ಲುತ್ತದೆ ಎಂದುಕೊಳ್ಳುವುದು ಸಮಸ್ಯೆ. ಇದು ಅತಿದೊಡ್ಡ ವಿಶ್ವಕಪ್‌ ಟೂರ್ನಿ. ಇಲ್ಲಿ ಸಾಕಷ್ಟು ಅತ್ಯುತ್ತಮ ತಂಡಗಳು ಆಡುತ್ತವೆ. ನಮ್ಮ ಕೈಯಲ್ಲಿರುವ ವಿಚಾರಗಳತ್ತ ಮಾತ್ರವೇ ಗಮನಹರಿಸಬೇಕು' ಎಂದಿದ್ದಾರೆ. ಆ ಮೂಲಕ ಒತ್ತಡ ಮುಕ್ತವಾಗಿ ಆಟದ ಮೇಲೆ ಗಮನಹರಿಸುವಂತೆ ರೋಹಿತ್‌ ಪಡೆಗೆ ಕಿವಿಮಾತು ಹೇಳಿದ್ದಾರೆ.

ಯುವರಾಜ್‌ ಸಿಂಗ್‌ ಅವರು 2011ರ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಎನಿಸಿದ್ದರು.

2011ರಲ್ಲಿ ಭಾರತದ ಸಾಧನೆ
ಟೂರ್ನಿಯಲ್ಲಿ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಭಾರತ, ಗುಂಪು ಹಂತದಲ್ಲಿ ಆಡಿದ್ದ 6 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿ 1 ಸೋಲು ಕಂಡಿತ್ತು. ಇನ್ನೊಂದು ಪಂದ್ಯ ಟೈ ಆಗಿತ್ತು. ಹೀಗಾಗಿ ಗುಂಪಿನಿಂದ ಎರಡನೇ ತಂಡವಾಗಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತ್ತು.

ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿ, ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಶ್ರೀಲಂಕಾ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT