ಬುಧವಾರ, ಆಗಸ್ಟ್ 10, 2022
23 °C

ಸಿಬಿಐ ವಶದಲ್ಲಿದ್ದ ₹45ಕೋಟಿ ಮೌಲ್ಯದ 103 ಕೆಜಿ ಚಿನ್ನ ನಾಪತ್ತೆ: ತನಿಖೆಗೆ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಸಿಬಿಐ ವಶಪಡಿಸಿಕೊಂಡಿದ್ದ ₹45 ಕೋಟಿ ಮೌಲ್ಯದ 103 ಕೆಜಿ ಚಿನ್ನ ನಾಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ಕ್ರೈಂ ಬ್ರಾಂಚ್ –ಸಿಐಡಿ ಪೊಲೀಸ್‌ರಿಗೆ ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದೆ.

2012ರಲ್ಲಿ ಚೆನ್ನೈನಲ್ಲಿ ‘ಸುರಾನಾ ಕಾರ್ಪೊರೇಷನ್ ಲಿಮಿಟೆಡ್ (ಎಸ್‌ಸಿಎಲ್)’ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿತ್ತು. ಆ ಸಂದರ್ಭ ದಾಖಲೆ ಇಲ್ಲದ 400.47 ಕೆಜಿ ಚಿನ್ನ ವಶಪಡಿಸಿಕೊಂಡಿತ್ತು. ವಶಪಡಿಸಿಕೊಂಡಿದ್ದ ಚಿನ್ನವನ್ನು ಎಸ್‌ಸಿಎಲ್‌ನ ಸುರಕ್ಷಿತ ಕಪಾಟುಗಳಲ್ಲಿ ಇರಿಸಿದ್ದ ಸಿಬಿಐ ಲಾಕ್‌ ಹಾಕಿ ಸೀಲ್‌ ಮಾಡಿತ್ತು. ಇದರಲ್ಲಿನ 103 ಕೆಜಿ ಈಗ ನಾಪತ್ತೆಯಾಗಿದೆ.

ಆರು ತಿಂಗಳಲ್ಲಿ ತನಿಖೆಯನ್ನು ಮುಕ್ತಾಯಗೊಳಿಸಬೇಕು ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಬೇಕು ಎಂದು ನ್ಯಾಯಮೂರ್ತಿ ಪಿ.ಎನ್‌. ಪ್ರಕಾಶ್‌ ಅವರು ಸಿಬಿ–ಸಿಐಡಿಗೆ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: 

ಬಾಕಿ ನೀಡಬೇಕಾಗಿರುವ 103.864 ಕೆಜಿ ಚಿನ್ನವನ್ನು ಹಸ್ತಾಂತರಿಸುವಂತೆ ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಎಸ್‌ಸಿಎಲ್‌ನ ಲಿಕ್ವಿಡೇಟರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.

ಸ್ಥಳೀಯ ಪೊಲೀಸ್‌ರಿಂದ ತನಿಖೆ ನಡೆಸಿದರೆ ತನ್ನ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ ಎನ್ನುವ ಸಿಬಿಐ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿತು.

ಸಿಬಿಐಗೆ ವಿಶೇಷ ಕೊಂಬುಗಳಿಲ್ಲ: ‘ಎಲ್ಲ ಪೊಲೀಸ‌ರ ಮೇಲೆ ವಿಶ್ವಾಸವಿಡಬೇಕು. ಸಿಬಿಐಗೆ ವಿಶೇಷ ಕೊಂಬುಗಳಿಲ್ಲ ಅಥವಾ ಸ್ಥಳೀಯ ಪೊಲೀಸ‌ರಿಗೆ ಕೇವಲ ಬಾಲ ಇದೆ ಎನ್ನುವ ಮಾತುಗಳನ್ನು ಕೇಳುವುದು ಬೇಡ. ಸಿಬಿಐಗೆ ಇದೊಂದು ಅಗ್ನಿ ಪರೀಕ್ಷೆ. ರಾಮಾಯಣದ ಸೀತೆಯ ರೀತಿಯಲ್ಲಿ ಸಿಬಿಐ ಅಧಿಕಾರಿಗಳು ಪರಿಶುದ್ಧರಾಗಿದ್ದರೆ ಈ ಪ್ರಕರಣದಲ್ಲಿ ಯಶಸ್ಸು ಸಾಧಿಸುತ್ತಾರೆ. ಇಲ್ಲದಿದ್ದರೆ ಅವರು ಕಾನೂನು ಕ್ರಮ ಎದುರಿಸುತ್ತಾರೆ’ ಎಂದು ನ್ಯಾಯಾಧೀಶರು ಹೇಳಿದರು.

ಇದನ್ನೂ ಓದಿ: 

72 ಕೀಗಳನ್ನು ಚೆನ್ನೈನ ಪ್ರಧಾನ ವಿಶೇಷ ಕೋರ್ಟ್‌ಗೆ ಹಸ್ತಾಂತರಿಸಲಾಗಿತ್ತು ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.

ವಶಪಡಿಸಿಕೊಂಡ ಸಂದರ್ಭದಲ್ಲಿ ಎಲ್ಲ ಚಿನ್ನದ ಬಾರ್‌ಗಳನ್ನು ಒಟ್ಟಿಗೆ ತೂಕ ಮಾಡಲಾಗಿತ್ತು. ಆದರೆ, ಸುರಾನಾ ಮತ್ತು ಎಸ್‌ಬಿಐ ನಡುವಣ ಸಾಲವನ್ನು ಇತ್ಯರ್ಥಗೊಳಿಸಲು ನೇಮಿಸಿದ್ದ ಲಿಕ್ವಿಡೇಟರ್‌ಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಪ್ರತ್ಯೇಕವಾಗಿ ತೂಕ ಮಾಡಲಾಯಿತು. ಆ ಸಂದರ್ಭದಲ್ಲಿ ಹಲವು ವ್ಯತ್ಯಾಸಗಳಾಗಿವೆ ಎಂದು ಸಿಬಿಐ ಪ್ರತಿಪಾದಿಸಿದೆ.

ಚಿನ್ನ ಮತ್ತು ಬೆಳ್ಳಿಯನ್ನು ಆಮದು ಮಾಡಿಕೊಳ್ಳಲು ‘ಮಿನರಲ್ಸ್ ಆ್ಯಂಡ್ ಮೆಟಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ’ (ಎಂಎಂಟಿಸಿ) ಅಧಿಕಾರಿಗಳು ಅನಗತ್ಯವಾಗಿ ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ವಿದೇಶಿ ವ್ಯಾಪಾರ ನೀತಿ (ಎಫ್‌ಟಿಪಿ) ಉಲ್ಲಂಘಿಸಿ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಸಿಬಿಐ ಆರೋಪಿಸಿತ್ತು. ಹೀಗಾಗಿಯೇ, 2013ರಲ್ಲಿ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿತ್ತು. ಬಳಿಕ, ತನಿಖೆಯನ್ನು ಪೂರ್ಣಗೊಳಿಸಿದ್ದ ಸಿಬಿಐ ಕೆಲ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿತ್ತು.

ಇದನ್ನೂ ಓದಿ: 

‘ಆರೋಪಿ ಸಂಸ್ಥೆಯು ಯಾವುದೇ ಅಪರಾಧ ಮಾಡಿಲ್ಲ. ಆದರೆ, ಸುರಾನಾಗೆ ನಾಮನಿರ್ದೇಶಿತ ಸಂಸ್ಥೆ ಎಂದು ಪ್ರಮಾಣಪತ್ರ ನೀಡಲಾಗಿದೆ. ಇದಕ್ಕಾಗಿ ಕೆಲವು ಅಧಿಕಾರಿಗಳ ವಿರುದ್ಧ ಇಲಾಖೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಿಬಿಐ ಶಿಫಾರಸು ಮಾಡಿ ಈ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು.

ಇದೇ ವೇಳೆ, ಚಿನ್ನ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ), ಸಾಲ ನೀಡಿರುವ ಬ್ಯಾಂಕ್‌ ಅಧಿಕಾರಿಗಳ ಸಮ್ಮುಖದಲ್ಲಿ ಲಿಕ್ವಿಡೇಟರ್‌ಗೆ ಚಿನ್ನವನ್ನು ಹಸ್ತಾಂತರಿಸಬೇಕು ಎಂದು ಆದೇಶ ನೀಡಿತು.

ಈ ಆದೇಶದ ಅನ್ವಯ, ಇದೇ ವರ್ಷದ ಫೆಬ್ರುವರಿ 27 ಮತ್ತು 29ರಂದು ಸಿಬಿಐ ಮತ್ತು ಎಲ್ಲ ಬ್ಯಾಂಕ್‌ ಹಾಗೂ ಎಸ್‌ಸಿಎಲ್ ಪ್ರತಿನಿಧಿಗಳ ಸಮ್ಮುಖದಲ್ಲಿ ಲಾಕರ್‌ಗಳ ಸೀಲ್‌ ತೆರೆದಾಗ 296.606 ಕೆಜಿ ಚಿನ್ನ ಮಾತ್ರ ಇತ್ತು. ಹೀಗಾಗಿ, ಉಳಿದ ಚಿನ್ನವನ್ನು ಹಸ್ತಾಂತರಿಸುವಂತೆ ಸಿಬಿಐಗೆ ನಿರ್ದೇಶನ ನೀಡುವಂತೆ ಲಿಕ್ವಿಡೇಟರ್‌ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು