ಶುಕ್ರವಾರ, ಮೇ 27, 2022
22 °C

ಪಲ್ಸ್ ಪೋಲಿಯೊ ಹನಿ ಬದಲಿಗೆ 12 ಮಕ್ಕಳಿಗೆ ಸ್ಯಾನಿಟೈಸರ್ ಹಾಕಿದ ಸಿಬ್ಬಂದಿ

ಪಿಟಿಐ Updated:

ಅಕ್ಷರ ಗಾತ್ರ : | |

ಯವತ್ಮಾಲ್: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸಿಬ್ಬಂದಿಯ ತೀವ್ರ ನಿರ್ಲಕ್ಷ್ಯದಿಂದಾಗಿ ಪೋಲಿಯೊ ಲಸಿಕೆ ಹನಿಗಳ ಬದಲಿಗೆ 12 ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್ ಹನಿಗಳನ್ನು ಹಾಕಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೋಲಿಯೊ ಬದಲಿಗೆ ಸ್ಯಾನಿಟೈಸರ್ ಹಾಕಲಾಗಿದ್ದು, ಸದ್ಯ ಎಲ್ಲ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಪ್ಸಿಕೊಪ್ರಿ ಗ್ರಾಮದ ಭನ್ಬೋರಾ ಪಿಎಚ್‌ಸಿ (ಪ್ರಾಥಮಿಕ ಆರೋಗ್ಯ ಕೇಂದ್ರ) ದಲ್ಲಿ ಭಾನುವಾರ 1 ರಿಂದ 5 ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮ ನಡೆಯುತ್ತಿರುವಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿ ಹೇಳಿದ್ದಾರೆ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಮಕ್ಕಳಿಗೆ ಪೋಲಿಯೊ ಹನಿಗಳ ಬದಲಿಗೆ ಎರಡು ಹನಿ ಸ್ಯಾನಿಟೈಸರ್ ನೀಡಲಾಗಿದೆ. ಇದರಲ್ಲಿ ಒಂದು ಮಗು ವಾಂತಿ ಮಾಡಿಕೊಂಡಿದೆ' ಎಂದು ಯವತ್ಮಾಲ್ ಜಿಲ್ಲಾ ಪರಿಷತ್ ಸಿಇಒ ಶ್ರೀಕೃಷ್ಣ ಪಂಚಲ್ ತಿಳಿಸಿದ್ದಾರೆ.

ಸ್ಯಾನಿಟೈಸರ್ ಹನಿಗಳನ್ನು ನೀಡಿದ್ದ ಎಲ್ಲ ಮಕ್ಕಳಿಗೆ ಮತ್ತೆ ಪೋಲಿಯೊ ಹನಿಗಳನ್ನು ನೀಡಿ ಯವತ್ಮಾಲ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಸದ್ಯ ಮಕ್ಕಳ ಸ್ಥಿತಿಯು ಸ್ಥಿರವಾಗಿದ್ದು, ಗಮನ ವಹಿಸಲಾಗಿದೆ ಎಂದು ಪಂಚಲ್ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, 'ಮೂವರು ಆರೋಗ್ಯ ಕಾರ್ಯಕರ್ತರು - ವೈದ್ಯರು, ಅಂಗನವಾಡಿ ಕಾರ್ಯಕರ್ತೆ ಮತ್ತು ಆಶಾ ಕಾರ್ಯಕರ್ತೆಯರು ಘಟನೆ ನಡೆದ ಸಮಯದಲ್ಲಿ ಪಿಎಚ್‌ಸಿಯಲ್ಲಿ ಹಾಜರಿದ್ದರು. ಈ ಕುರಿತು ತನಿಖೆ ನಡೆಯುತ್ತಿದೆ ಮತ್ತು ಮೂವರು ಆರೋಗ್ಯ ಕಾರ್ಯಕರ್ತರನ್ನು ಅಮಾನತುಗೊಳಿಸಲು ಆದೇಶ ಹೊರಡಿಸಲಾಗುವುದು' ಎಂದು ಪಂಚಲ್ ಹೇಳಿದರು.

ಈ ಮಧ್ಯೆ, ಹಳ್ಳಿಯ ಸರಪಂಚ್ ಒಬ್ಬರು ಹನಿಗಳನ್ನು ಪರಿಶೀಲಿಸಿದಾಗ ಅವು ಹ್ಯಾಂಡ್ ಸ್ಯಾನಿಟೈಸರ್ ಮತ್ತು ಪೋಲಿಯೊ ಹನಿಗಳಲ್ಲ ಎಂದು ಕಂಡುಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯ ನಂತರ, ಆ ಪ್ರದೇಶದ ಪೋಷಕರು ಭಯಭೀತರಾಗಿದ್ದರು. ಆಘಾತಕಾರಿ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು