ಬುಧವಾರ, ಫೆಬ್ರವರಿ 8, 2023
17 °C
ಪ್ರಾಯೋಗಿಕ ಪರೀಕ್ಷೆ ನೆಪ, ರಾತ್ರಿ ಶಾಲೆಯಲ್ಲೇ ವಾಸ್ತವ್ಯ

ಉತ್ತರಪ್ರದೇಶ: ಪ್ರಾಯೋಗಿಕ ಪರೀಕ್ಷೆ ನೆಪ, 17ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ (ಉತ್ತರ ಪ್ರದೇಶ): ಪ್ರಾಯೋಗಿಕ ಪರೀಕ್ಷೆಗೆ ತಯಾರಿ ನಡೆಸುವ ನೆಪದಲ್ಲಿ 17 ಬಾಲಕಿಯರು ಶಾಲೆಯಲ್ಲಿ ರಾತ್ರಿ ತಂಗುವಂತೆ ಮಾಡಿದ ಶಾಲೆಯ ಮಾಲೀಕ ಮತ್ತು ಆತನ ಸಹಚರರು ಈ ವಿದ್ಯಾರ್ಥಿನಿಯರಿಗೆ ಅರಿವಳಿಕೆ ಮದ್ದು ನೀಡಿ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಇಲ್ಲಿಗೆ 500 ಕಿ.ಮೀ. ದೂರವಿರುವ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಭೋಪಾ ಪ್ರದೇಶದ ಖಾಸಗಿ ಶಾಲೆಯ ಮಾಲೀಕನನ್ನು ಯೋಗೇಶ್‌ ಎಂದು ಗುರುತಿಸಲಾಗಿದ್ದು ಸೋಮವಾರ ಬಂಧಿಸಲಾಗಿದೆ. ಇತರರ ಪತ್ತೆಗೆ ಹುಡುಕಾಟ ನಡೆದಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ. 

ಈ ಘಟನೆ ನಡೆದು ಹದಿನೈದು ದಿನಗಳಾಗಿವೆ. ಘಟನೆ ಸಂಬಂಧ ಬಾಲಕಿಯರ ಪೋಷಕರು ದೂರು ನೀಡಿದ ನಂತರವೂ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. 

ಪುರಕಾಜಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ಪೋಸ್ಕೊ ಕಾಯ್ದೆ ಮತ್ತು ಇತರ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. 

ಭೋಪಾ ಪ್ರದೇಶದಲ್ಲಿ ಶಾಲೆಯೊಂದನ್ನು ನಡೆಸುತ್ತಿರುವ ಯೋಗೇಶ್‌ ಪ್ರೌಢಶಾಲೆಯ ಪ್ರಾಯೋಗಿಕ ಪರೀಕ್ಷೆಗಾಗಿ ನವೆಂಬರ್‌ 18 ರಂದು 17 ಬಾಲಕಿಯರನ್ನು ಪುರ್ಕಾಜಿ ಪ್ರದೇಶದ ಮತ್ತೊಂದು ಶಾಲೆಗೆ ಕರೆದೊಯ್ದಿದ್ದ. ಯೋಗೇಶ್‌ ಮತ್ತು ಆತನ ಸಹಾಯಕ ಅರ್ಜುನ್‌ ಪ್ರಾಯೋಗಿಕ ಪರೀಕ್ಷೆಯ ನಂತರ ಬಾಲಕಿಯರು ತಮ್ಮ ಮುಂದಿನ ಪರೀಕ್ಷೆಗೆ ತಯಾರಿ ನಡೆಸಬೇಕು. ಅಲ್ಲದೆ ಕತ್ತಲಾಗಿರುವುದರಿಂದ ಹೊರಗೆ ಹೋಗುವುದು ಸುರಕ್ಷಿತವಲ್ಲವೆಂದು ಹೇಳಿ ಬಾಲಕಿಯರು ಶಾಲೆಯಲ್ಲೇ ಉಳಿಯುವಂತೆ ಮಾಡಿದರು. ಈ ಬಗ್ಗೆ ಬಾಲಕಿಯರ ಪೋಷಕರಿಗೂ ಮಾಹಿತಿ ನೀಡಿದ್ದರು. 

ಆರೋಪಿಗಳಿಬ್ಬರೂ ಬಾಲಕಿಯರಿಗೆ ಖಿಚಡಿ ಊಟದಲ್ಲಿ ಮತ್ತು ಬರುವ ಮಿಶ್ರಣ ಸೇರಿಸಿದರು. ಬಳಿಕ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮೂಲಗಳು ಹೇಳಿವೆ. ತನಗೆ ಏನೋ ಸಮಸ್ಯೆಯಾಗಿದೆ ಎಂದು ವಿದ್ಯಾರ್ಥಿನಿಯೊಬ್ಬಳು ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯರು ಈ ಬಗ್ಗೆ ಪ್ರಶ್ನಿಸಿದಾಗ ವಿಷಯವನ್ನು ಪೋಷಕರಿಗೆ ಹೇಳಿದರೆ ಕುಟುಂಬದವರನ್ನು ಕೊಲ್ಲುವುದಾಗಿಯೂ ಯೋಗೇಶ್‌ ಮತ್ತು ಅರ್ಜುನ್‌ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ.

ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸುವಂತೆ ಶಿಕ್ಷಣ ಅಧಿಕಾರಿಗಳಿಗೆ ಕೋರಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು