ಶನಿವಾರ, ಜನವರಿ 28, 2023
24 °C

ಉತ್ತರ ಭಾರತದಲ್ಲಿ ಹೆಚ್ಚಿದ ಶೀತಗಾಳಿ, ದಟ್ಟ ಮಂಜು: ಹಲವೆಡೆ ರೈಲು ಸಂಚಾರ ವ್ಯತ್ಯಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶೀತಗಾಳಿ ಮತ್ತು ದಟ್ಟವಾದ ಮಂಜು ಹೆಚ್ಚಾಗಿರುವ ಕಾರಣ ಶನಿವಾರ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯ ತಿಳಿಸಿದೆ.

ಹವಾಮಾನ ವೈಪರೀತ್ಯದಿಂದಾಗಿ 32 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ರಾಜಧಾನಿ ದೆಹಲಿಯಲ್ಲಿ ಮೂರು ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಎರಡು ವರ್ಷಗಳಲ್ಲಿ ಜನವರಿಯಲ್ಲಿ ಇದು ಅತ್ಯಂತ ಕನಿಷ್ಠ ತಾಪಮಾನವಾಗಿದೆ.

ದೆಹಲಿಯ ಡಾಲ್‌ಹೌಸಿಯಲ್ಲಿ 4.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ, ಧರ್ಮಶಾಲಾ 5.2 ಡಿಗ್ರಿ ಸೆಲ್ಸಿಯಸ್, ಕಂಗ್ರಾ 3.2, ಶಿಮ್ಲಾ 3.7, ಡೆಹ್ರಾಡೂನ್ 4.6, ಮಸ್ಸೂರಿ 4.4 ಮತ್ತು ನೈನ್‌ಟಾಲ್‌ನಲ್ಲಿ 6.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದಾಗಿ ಎಲ್ಲೆಡೆ ಮಂಜು ಕವಿದಿದ್ದು, ಕನಿಷ್ಠ 12 ರೈಲುಗಳ ಸಂಚಾರದಲ್ಲಿ 1 ರಿಂದ 6ಗಂಟೆಗಳು ವ್ಯತ್ಯಯವಾಗಿದೆ ಎಂದು ಅಧಿಕೃತ ಮೂಲ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 40 ದಿನಗಳ ಕಠಿಣ ಚಳಿಗಾಲದ 'ಚಿಲೈ ಕಲನ್' ನಡೆಯುತ್ತಿರುವುದರಿಂದ ದಾಖಲೆಯ ತಾಪಮಾನ ಕುಸಿತವಾಗಿದೆ.

ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತದಾದ್ಯಂತ ದಟ್ಟವಾದ ಮಂಜು ಆವರಿಸಿದ್ದು, ಮುಂದಿನ ವಾರದಲ್ಲೂ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ರಾಜಸ್ಥಾನದ ಅಲ್ವಾರ್, ಭರತ್‌ಪುರ್, ಧೋಲ್‌ಪುರ್, ಜುಂಜುನು ಮತ್ತು ಕರೌಲಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತೀವ್ರ ಶೀತ ಗಾಳಿ ಮುಂದುವರಿಯುತ್ತಿರುವ ಕಾರಣ ಹವಾಮಾನ ಕಚೇರಿ 'ಆರೆಂಜ್ ಅಲರ್ಟ್' ನೀಡಿದೆ.

ಅಮರನಾಥ ಯಾತ್ರೆಯ ಮೂಲ ಶಿಬಿರ ಇರುವ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಪ್ರವಾಸಿ ತಂಗುದಾಣವು ಕನಿಷ್ಠ ಮೈನಸ್ 9.2 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ.

ಜಾರ್ಖಂಡ್‌ನಲ್ಲಿ ದಟ್ಟವಾದ ಮಂಜು ಹಾಗೂ ಮೋಡ ಕವಿದ ವಾತಾವರಣ ಇದ್ದು, 7–10 ಡಿಗ್ರಿ ಸೆಲ್ಸಿಯಲ್ ತಾಪಮಾನ ಇದೆ. ಇಲ್ಲಿನ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಜನವರಿ 8 ರವರೆಗೆ ಸರ್ಕಾರ ರಜೆ ಘೋಷಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು