ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತ್‌ಪಾಲ್ ಪರಾರಿಯಾಗಲು ನೆರವಾದ ನಾಲ್ವರ ಬಂಧನ: ಪಂಜಾಬ್ ಪೊಲೀಸ್

Last Updated 21 ಮಾರ್ಚ್ 2023, 14:20 IST
ಅಕ್ಷರ ಗಾತ್ರ

ಚಂಡೀಗಢ: ಸ್ವಯಂಘೋಷಿತ ಧರ್ಮಬೋಧಕ ಮತ್ತು ಪ್ರತ್ಯೇಕ ಖಾಲಿಸ್ಥಾನ ರಾಷ್ಟ್ರದ ಪ್ರತಿಪಾದಕ ಅಮೃತ್‌ಪಾಲ್ ಸಿಂಗ್ ಪರಾರಿಯಾಗಲು ನೆರವಾದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಂಜಾಬ್‌ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಅಮೃತ್‌ಪಾಲ್‌ ಜಲಂಧರ್‌ನ ನಂಗಲ್‌ ಆ್ಯಂಬಿಯಾನ್‌ ಗ್ರಾಮದಲ್ಲಿರುವ ಗುರುದ್ವಾರಕ್ಕೆ ತೆರಳಿದ್ದ. ಆತ ಕಾರಿನಲ್ಲಿ ತಪ್ಪಿಸಿಕೊಳ್ಳಲು ಬಂಧಿತ ನಾಲ್ವರು ನೆರವಾಗಿದ್ದರು ಎಂಬುದು ವಿಚಾರಣೆ ವೇಳೆ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

'ಅಲ್ಲಿ (ಗುರುದ್ವಾರದಲ್ಲಿ) ಆತ ತನ್ನ ಬಟ್ಟೆಗಳನ್ನು ಬದಲಿಸಿ ಪ್ಯಾಂಟ್‌ ಹಾಗೂ ಶರ್ಟ್‌ ಧರಿಸಿ, ಇತರ ಮೂವರೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ' ಎಂದು ಐಜಿಪಿ ಸುಖ್‌ಚೈನ್‌ ಸಿಂಗ್‌ ಗಿಲ್‌ ಮಾಧ್ಯದವರಿಗೆ ಮಾಹಿತಿ ನೀಡಿದ್ದಾರೆ.

ಅಮೃತ್‌ಪಾಲ್‌ ಹಾಗೂ ಆತನ 'ವಾರಿಸ್‌ ಪಂಜಾಬ್‌ ದೇ' ಸಂಘಟನೆ ವಿರುದ್ಧ ಪೊಲೀಸರು ಶನಿವಾರ ದಾಳಿ ನಡೆಸಿದ್ದರು. ಈ ವೇಳೆ ಅಮೃತ್‌ಪಾಲ್‌ ಪರಾರಿಯಾಗಿದ್ದ. ಈ ಸಂಬಂಧ ಮನ್‌ಪ್ರೀತ್‌ ಸಿಂಗ್‌ ಅಲಿಯಾಸ್‌ ಮನ್ನಾ, ಗುರ್‌ದೀಪ್‌ ಸಿಂಗ್‌ ಅಲಿಯಾಸ್‌ ದೀಪ, ಹರ್‌ಪ್ರೀತ್‌ ಸಿಂಗ್‌ ಅಲಿಯಾಸ್‌ ಹ್ಯಾಪಿ ಮತ್ತು ಗುರ್‌ಭೆಜ್‌ ಸಿಂಗ್‌ ಅಲಿಯಾಸ್‌ ಭೆಜಾ ಎಂಬವರನ್ನು ಬಂಧಿಸಲಾಗಿದೆ ಎಂದು ಗಿಲ್ ಹೇಳಿದ್ದಾರೆ.

ಪರಾರಿಯಾಗಲು ಬಳಸಿದ್ದ ಕಾರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ರೈಫಲ್‌ ಹಾಗೂ ಹರಿತವಾದ ಆಯುಧಗಳು, ವಾಕಿ–ಟಾಕಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ವಿವಿಧ ರೀತಿಯ ವೇಷದಲ್ಲಿರುವ ಅಮೃತ್‌ಪಾಲ್‌ನ ನಾಲ್ಕು ಚಿತ್ರಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ಆತನ ಪತ್ತೆ ಹಚ್ಚಲು ನೆರವಾಗುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಅಮೃತ್‌ಪಾಲ್‌ ಸೆರೆ ಹಿಡಿಯಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಖುದ್ದಾಗಿ ಈ ಪ್ರಕರಣದ ಮೇಲೆ ಕಣ್ಣಿಟ್ಟಿದ್ದಾರೆ. ನಿರಂತರವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದೂ ಗಿಲ್ ವಿವರಿಸಿದ್ದಾರೆ.

ಅಮೃತ್‌ಪಾಲ್‌ ಸಿಂಗ್ಗಾಗಿ ಶೋಧ ಮುಂದುವರಿಸಿರುವ ಪೊಲೀಸರು ಆತನ ಹಲವು ಬೆಂಬಲಿಗರನ್ನು ಬಂಧಿಸಿದ್ದಾರೆ. ಇಲ್ಲಿಯವರೆಗೂ ನೂರಕ್ಕೂ ಹೆಚ್ಚು ಜನರ ಬಂಧನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT