ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50 ಸೂಪರ್ ಸ್ಪೆಷಾಲಿಟಿ ಸೀಟು ಭರ್ತಿ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಅನುಮತಿ

Last Updated 2 ಡಿಸೆಂಬರ್ 2022, 11:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಶೇ 50ರಷ್ಟು ಸೂಪರ್‌ ಸ್ಪೆಷಾಲಿಟಿ ಸೀಟುಗಳನ್ನು ನೀಟ್‌ ಅರ್ಹತೆ ಹೊಂದಿರುವ ಸೇವಾನಿರತ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.

ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಿ.ಆರ್‌.ಗವಾಯಿ ಹಾಗೂ ವಿಕ್ರಂ ನಾಥ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು, ರಾಜ್ಯ ಸರ್ಕಾರ ಈ ಸಂಬಂಧ 2020ರ ನವೆಂಬರ್‌ 7ರಂದು ಹೊರಡಿಸಿದ್ದ ಆದೇಶದ ಪ್ರಕಾರವೇಶೇ 50ರಷ್ಟು ಸೂಪರ್‌ ಸ್ಪೆಷಾಲಿಟಿ ಸೀಟುಗಳನ್ನು 15 ದಿನಗಳೊಳಗೆ ಭರ್ತಿ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಿದೆ.

‘ಶೇ 50ರಷ್ಟು ಸೂಪರ್ ಸ್ಪೆಷಾಲಿಟಿ ಸೀಟುಗಳನ್ನು ನೀಟ್ ಅರ್ಹತೆ ಹೊಂದಿರುವ ಸೇವಾ ನಿರತರಿಗೆ ಹಂಚಿಕೆ ಮಾಡುವ ತನ್ನ ನಿರ್ಧಾರಕ್ಕೆ ತಡೆ ನೀಡಲು ನ್ಯಾಯಪೀಠ ನಿರಾಕರಿಸಿತ್ತು. 2022ರ ಮಾರ್ಚ್‌ 16ರಂದು ನ್ಯಾಯಪೀಠ ನೀಡಿದ್ದ ಈ ತೀರ್ಪಿನ ಬಗ್ಗೆ ಸ್ಪಷ್ಟನೆ ಕೋರಿ ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದೆ. ಉಭಯ ಬಣದವರ ವಾದವನ್ನು ಆಲಿಸಲಾಗಿದೆ. ಹೋದ ವರ್ಷ ಸೇವಾ ನಿರತರಿಗಾಗಿ ಮೀಸಲಿಟ್ಟಿದ್ದ ಸೀಟುಗಳು ಭರ್ತಿಯಾಗಿಲ್ಲ. ಸೂಪರ್‌ ಸ್ಪೆಷಾಲಿಟಿ ಸೀಟುಗಳು ರಾಷ್ಟ್ರೀಯ ಸ್ವತ್ತುಗಳಾಗಿದ್ದು ಅವುಗಳು ವ್ಯರ್ಥವಾಗಲು ಅವಕಾಶ ನೀಡಬಾರದು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಮನವಿ ಮಾಡಿದ್ದಾರೆ. ಈ ವಿಚಾರದಲ್ಲಿ ಅವರು ತೋರಿರುವ ಕಾಳಜಿಯನ್ನು ನಾವು ಪ್ರಶಂಶಿಸುತ್ತೇವೆ’ ಎಂದು ನ್ಯಾಯಪೀಠ ತಿಳಿಸಿದೆ.

‘ಪ್ರಸಕ್ತ ವರ್ಷ ಸರ್ಕಾರದ ಆದೇಶದ ಪ್ರಕಾರವೇ ಸೀಟುಗಳನ್ನು ಭರ್ತಿ ಮಾಡುವುದಕ್ಕೆ ತಮಿಳುನಾಡು ಸರ್ಕಾರಕ್ಕೆ ಅನುಮತಿ ನೀಡಬೇಕು ಎಂಬುದನ್ನು ನಾವು ಮನಗಂಡಿದ್ದೇವೆ. ಸೀಟು ಭರ್ತಿಗೆ ನಿಗದಿಪಡಿಸಲಾಗಿರುವ ಕಾಲಾವಧಿ ಪೂರ್ಣಗೊಂಡ ಬೆನ್ನಲ್ಲೇ (16ನೇ ದಿನ) ತಮಿಳುನಾಡು ಸರ್ಕಾರವು ಸೇವಾ ನಿರತರಿಗೆ ಮೀಸಲಿಟ್ಟಿರುವ ಸೀಟುಗಳ ಪೈಕಿ ಭರ್ತಿಯಾಗದೆ ಉಳಿದಿರುವ ಸೀಟುಗಳೆಷ್ಟು ಎಂಬುದರ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕು’ ಎಂದೂ ಸೂಚಿಸಿದೆ.

ಪ್ರಕರಣದ ವಿಚಾರಣೆಯನ್ನು 2023ರ ಫೆಬ್ರುವರಿ 14ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT