ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 80ರಷ್ಟು ಶಾಸಕರು ಪೈಲಟ್ ಜೊತೆಗಿದ್ದಾರೆ: ರಾಜಸ್ಥಾನ ಸಚಿವ ರಾಜೇಂದ್ರ ಸಿಂಗ್

Last Updated 25 ನವೆಂಬರ್ 2022, 6:35 IST
ಅಕ್ಷರ ಗಾತ್ರ

ಜೋಧಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ನಡುವಿನ ಬಂಡಾಯ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಗೆಹಲೋತ್‌ ನೀಡಿರುವ ಶಾಸಕರ ಸಂಖ್ಯಾಬಲದ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ರಾಜೇಂದ್ರ ಸಿಂಗ್ ಗುಧ, ‘ಶೇ 80ರಷ್ಟು ಶಾಸಕರು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರ ಜೊತೆಗಿದ್ದಾರೆ. ಅವರಿಗಿಂತ ಉತ್ತಮ ರಾಜಕಾರಣಿ ಇಲ್ಲ’ ಎಂದು ತಿಳಿಸಿದ್ದಾರೆ.

ಎನ್‌ಡಿಟಿವಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಗೆಹಲೋತ್‌, ‘ಸಚಿನ್‌ ಪೈಲಟ್‌ ನಂಬಿಕೆದ್ರೋಹಿ. ಅವರು ನನ್ನ ಸ್ಥಾನ ತುಂಬಲಾರರು. 2020ರಲ್ಲಿ ಅವರು ಪಕ್ಷದ ವಿರುದ್ಧವೇ ಬಂಡಾಯ ಎದ್ದಿದ್ದರು. ತಮ್ಮ ಸರ್ಕಾರವನ್ನೇ ಉರುಳಿಸಲು ಯತ್ನಿಸಿದ್ದರು’ ಎಂದು ವಾಗ್ದಾಳಿ ನಡೆಸಿದ್ದರು.

‘ಪೈಲಟ್‌ ಅವರ ಬಂಡಾಯದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಕೈವಾಡವಿತ್ತು. ಸರ್ಕಾರ ಕೆಡವುವ ಉದ್ದೇಶದಿಂದ ಪೈಲಟ್‌ಗೆ ನಿಷ್ಠರಾಗಿದ್ದ ಕೆಲ ಶಾಸಕರು ಗುರುಗ್ರಾಮದ ರೆಸಾರ್ಟ್‌ವೊಂದಕ್ಕೆ ತೆರಳಿದ್ದರು. ಸುಮಾರು ಒಂದು ತಿಂಗಳು ಅಲ್ಲಿದ್ದರು. ಆಗ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಬಂಡಾಯ ಶಾಸಕರನ್ನು ಭೇಟಿಯಾಗಿದ್ದರು. ಪೈಲಟ್ ಸೇರಿದಂತೆ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಎಲ್ಲಾ ಶಾಸಕರಿಗೂ ಬಿಜೆಪಿಯು ತಲಾ ₹10 ಕೋಟಿ ಮೊತ್ತ ನೀಡಿತ್ತು. ಇದಕ್ಕೆ ಸಂಬಂಧಪಟ್ಟ ದಾಖಲೆಗಳು ನನ್ನ ಬಳಿ ಇವೆ’ ಎಂದು ಹೇಳಿದ್ದರು.

‘ಪಕ್ಷವು ನನ್ನನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಬಯಸಿದ್ದೇ ಆದಲ್ಲಿ, ನನ್ನ ಸ್ಥಾನಕ್ಕೆ ಸಚಿನ್‌ ಪೈಲಟ್‌ ಅವರನ್ನು ಬಿಟ್ಟು ಹಾಲಿ ಇರುವ 102 ಶಾಸಕರ ಪೈಕಿ ಯಾರನ್ನಾದರೂ ಮುಖ್ಯಮಂತ್ರಿ ಮಾಡಲಿ. ಅದಕ್ಕೆ ಅಭ್ಯಂತರವೇನಿಲ್ಲ’ ಎಂದು ಗೆಹಲೋತ್‌ ತಿಳಿಸಿದ್ದರು.

'ವಿಶ್ವಾಸದ್ರೋಹಿಯನ್ನು ನಾವು ಮುಖ್ಯಮಂತ್ರಿಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಿಷ್ಠಾವಂತರಾಗಿರುವ 102 ಶಾಸಕರಲ್ಲಿ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಮಾಡಿ. ನಂಬಿಕೆ ದ್ರೋಹಿಯನ್ನು ರಾಜ್ಯದ ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುವುದು ಹೇಗೆ? ಕೇವಲ 10 ಶಾಸಕರ ಬೆಂಬಲವನ್ನೂ ಹೊಂದಿರದ ಪೈಲಟ್‌ರನ್ನು ಹೈಕಮಾಂಡ್‌ ಮುಖ್ಯಮಂತ್ರಿಯನ್ನಾಗಿಸಲು ಹೇಗೆ ಸಾಧ್ಯ?' ಎಂದು ಗೆಹಲೋತ್‌ ಪ್ರಶ್ನಿಸಿದ್ದರು.

ಗೆಹಲೋತ್‌ ಹೇಳಿಕೆಗೆ ಪೈಲಟ್‌ ತಿರುಗೇಟು: ‘ಗೆಹಲೋತ್‌ ಅವರಂತಹ ಹಿರಿಯ ನಾಯಕರು ಇಂತಹ ಭಾಷೆ ಬಳಸಿ ಹೇಳಿಕೆ ನೀಡುವುದು ಸರಿಯಲ್ಲ, ಇಂತಹ ಕೆಸರೆರಚಾಟದಿಂದ ಯಾವ ಪ್ರಯೋಜನವೂ ಇಲ್ಲ. ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಪಕ್ಷದ ಸಂಘಟನೆಯನ್ನು ಬಲಪಡಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಸಚಿನ್ ಪೈಲಟ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT