ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಟ್ವೀಟ್: ಬೆತ್ತಲಾದ ನೂರಾರು ದಂತಕಥೆಗಳು

Last Updated 4 ಫೆಬ್ರುವರಿ 2021, 18:22 IST
ಅಕ್ಷರ ಗಾತ್ರ

ಅದು ಕೇವಲ ಆರು ಪದಗಳ, ಒಂದು ಆಶ್ಚರ್ಯಕರ, ಒಂದು ಪ್ರಶ್ನಾರ್ಥಕ ಚಿಹ್ನೆ ಮತ್ತು ಒಂದು ಹ್ಯಾಷ್ ಟ್ಯಾಗ್ ಇದ್ದ ಒಂದು ಅತಿ ಸಾಮಾನ್ಯ ಟ್ವೀಟ್! ಆ ಅತಿ ಸಾಮಾನ್ಯ ಟ್ವೀಟ್‌ಗೆ ಭಾರತ ಸರ್ಕಾರ, ವಿದೇಶಾಂಗ ಸಚಿವರು, ನೂರಾರು ಬಾಲಿವುಡ್ ತಾರೆಗಳು, ಕ್ರಿಕೆಟ್ ದಂತಕಥೆಗಳು, ಪ್ರಭುತ್ವದ ಪರ ಇರುವವರು ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿದರೆ, ಒಂದು ದೇಶವಾಗಿ ನಾವೆತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಮೂಡದೇ ಇರುವುದಿಲ್ಲ. “Why aren’t we talking about this!?#FarmersProtest” ಎಂಬ ಆ ಟ್ವೀಟ್ ಮಾಡಿದ್ದು ಹೆಸರಾಂತ ಗಾಯಕಿ, ಗೀತ ರಚನೆಗಾರ್ತಿ, ನಟಿ, ಉದ್ಯಮಿ ಮತ್ತು ಸಮಾಜ ಸೇವಕಿ ರಾಬಿನ್ ರಿಯಾನಾ ಫೆಂಟಿ.

ಫೆಬ್ರುವರಿ ಎರಡರಂದು ರಿಯಾನಾ ಆ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಭಾರತದಲ್ಲಿ ಎರಡು ತಿಂಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು-ಹೆಚ್ಚು ಸದ್ದು ಮಾಡತೊಡಗಿತು. ರಿಯಾನಾ ರೀತಿಯಲ್ಲಿಯೇ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ, ಸಮಾಜ ಸೇವೆಯಲ್ಲಿ ತೊಡಗಿರುವ ಅನೇಕ ಯುವ ಸಾಧಕರು ಭಾರತದಲ್ಲಿನ ರೈತರ ಪ್ರತಿಭಟನೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಅದು ಕೂಡ ಅತ್ಯಂತ ಸಹಜವಾಗಿ ನಡೆದ ಪ್ರಕ್ರಿಯೆ.

ಆದರೆ, ಆ ಹಿನ್ನೆಲೆಯಲ್ಲಿ ಈಗ ಅನಗತ್ಯವಾಗಿ ಭುಗಿಲೆದ್ದಿರುವ ಮೂಲ ಪ್ರಶ್ನೆಯೆಂದರೆ, ಇದು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಒಂದು ವ್ಯವಸ್ಥಿತ ಪಿತೂರಿಯೇ? ಭಾರತದ ಆಂತರಿಕ ವಿಷಯದಲ್ಲಿ ಹೊರಗಿನ ಶಕ್ತಿಗಳು ಕೈ ಹಾಕುವ ಕುತಂತ್ರವೇ? ಖಂಡಿತ ಅಲ್ಲ. ಇಂದು ಸಂಪರ್ಕ ಕ್ರಾಂತಿ ಮತ್ತು ಮಾಹಿತಿ ತಂತ್ರಜ್ಞಾನದ ಫಲವಾಗಿ ಇಡೀ ಜಗತ್ತೇ ಒಂದು ಹಳ್ಳಿಯಾಗಿ ನಿಂತಿದೆ. ಇಂತಹ ಸಂದರ್ಭದಲ್ಲಿ ಪ್ರಪಂಚದ ಶಕ್ತಿಗಳು ಎಂದು ಪರಿಗಣಿಸಲಾದ ಅಮೆರಿಕ, ಚೀನಾ, ಭಾರತದಲ್ಲಿ ಏನೇ ಆದರೂ ಅಥವಾ ಮಾನವೀಯ ನೆಲೆಯಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ಆದರೂ ಪ್ರಜ್ಞಾವಂತರೆಲ್ಲ ಸಾಮಾಜಿಕ ಜಾಲತಾಣದಲ್ಲಿ
ಪ್ರತಿಕ್ರಿಯಿಸುತ್ತಾರೆ. ಇದು ಡಿಜಿಟಲ್ ಯುಗದಲ್ಲಿನ ಸಹಜ ನಡೆ.

ಕೆಲವೇ ತಿಂಗಳ ಹಿಂದೆ, ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಕಾಂಗ್ರೆಸ್ ಭವನದ ಮೇಲೆ ಅಧಿಕಾರ ಹಸ್ತಾಂತರದ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದಾಳಿ ನಡೆಸಿದಾಗ ಭಾರತದ ಪ್ರಧಾನಿಗಳಾದ ನರೇಂದ್ರ ಮೋದಿ ಅವರೇ, “Distressed to see news about rioting and violence in Washington DC. Orderly and peaceful transfer of power must continue. The democratic process cannot be allowed to be subverted through unlawful protests.” ಎಂದು ಟ್ವೀಟ್ ಮಾಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಇಂತಹ ಚಳವಳಿಗಳನ್ನೆಲ್ಲಾ ಒಂದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ವ್ಯವಸ್ಥಿತ ಪಿತೂರಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ದುರಂತವೆಂದರೆ ನಮ್ಮ ಸರ್ಕಾರ ಮತ್ತು ಅದನ್ನು ಬೆಂಬಲಿಸುವ ಭಕ್ತ ಗಣ ಆ ಟ್ವೀಟ್‌ಗೆ ಪ್ರತಿಸ್ಪಂದಿಸಿದ ಮತ್ತು ಪ್ರತಿಸ್ಪಂದಿಸುತ್ತಿರುವ ರೀತಿ. ಅದೊಂದು ಜಾಗತಿಕ ಪಿತೂರಿ ಎಂಬ ಭ್ರಮೆ ಹುಟ್ಟಿಸಿ, ಅದನ್ನು ನಮ್ಮ ಬಾಲಿವುಡ್ ತಾರೆಯರ- ಕ್ರಿಕೆಟ್ ದಂತಕಥೆಗಳ ಮೂಲಕ ಹಿಮ್ಮೆಟ್ಟಿಸುವ ಮೂರ್ಖ ಪ್ರಯತ್ನಕ್ಕೆ ಪ್ರಭುತ್ವ ಕೈ ಹಾಕಿದೆ. ಕ್ರಿಕೆಟಿಗರಾದ ‘ಭಾರತ ರತ್ನ’ ಸಚಿನ್ ತೆಂಡೂಲ್ಕರ್‍ ಮತ್ತು ಅನಿಲ್ ಕುಂಬ್ಳೆ ಅವರಂತಹ ‘ದೇವರು’ಗಳು ಕೂಡ ಈ ಮರು ಪಿತೂರಿಯ ಭಾಗವಾಗಿ ಸಾಮಾಜಿಕ ಜಾಲತಾಣದ ಮಹಾಯುದ್ಧರಂಗ ಪ್ರವೇಶಿಸಿದ್ದಾರೆ. ತೆಂಡೂಲ್ಕರ್‍, ಕುಂಬ್ಳೆ ಮತ್ತು ಇನ್ನೂ ಹಲವಾರು ಕ್ರಿಕೆಟ್ ದೇವರುಗಳು ಈಗ ಯುದ್ಧರಂಗಕ್ಕೆ ಇಳಿದಿರುವುದಕ್ಕೆ ಮೂಲ ಕಾರಣ ಈಗ ಭಾರತೀಯ ಕ್ರಿಕೆಟ್ ಲೋಕದಲ್ಲಿ ‘ಶಾ ವಂಶಾಡಳಿತ’ ಅಸ್ತಿತ್ವದಲ್ಲಿದೆ ಎಂಬುದಷ್ಟೇ!

ವಾಸ್ತವದಲ್ಲಿ ರಿಯಾನಾ ಮಾಡಿದ ಒಂದು ಅತಿ ಸಾಮಾನ್ಯ ಟ್ವೀಟ್ ಗೆ ಭಾರತದ ಸಾರ್ವಭೌಮತ್ವ ಕುಸಿಯಲು ಸಾಧ್ಯವೇ ಇಲ್ಲ. ಅದೂ ಅಲ್ಲದೇ ಇದು ಯಾರೋ ಮಾಡಿದ ಸಂಚು ಕೂಡ ಅಲ್ಲ. ಬಾಲಿವುಡ್ ತಾರೆಯರು, ಕ್ರಿಕೆಟ್ ದಂತಕಥೆಗಳು ಮತ್ತು ಪ್ರಭುತ್ವದ ಪರ ಇರುವವರು ಆಪಾದಿಸುತ್ತಿರುವಂತೆ, ರಿಯಾನಾ ಮತ್ತು ಉಳಿದ ಸೆಲೆಬ್ರಿಟಿಗಳ ಮೇಲೆ ಪ್ರಭಾವ ಬೀರಿ ಅವರಿಂದ ಇಂತಹ ಟ್ವೀಟ್ ಮಾಡಿಸುವಂತಹ ಶಕ್ತಿ ಪ್ರತಿಭಟನೆನಿರತ ರೈತ ಸಂಘಟನೆಗಳು ಅಥವಾ ಅವರನ್ನು ಬೆಂಬಲಿಸುತ್ತಿರುವ ಭಾರತದ ಯಾವುದೇ ವಿರೋಧ ಪಕ್ಷಕ್ಕೆ ಇಲ್ಲ.

ದುರಂತವೆಂದರೆ ರಿಯಾನಾ ಟ್ವೀಟ್‌ಗೆ ಅತಿಯಾದ ಪ್ರತಿಕ್ರಿಯೆ ನೀಡುವ ಯತ್ನದಲ್ಲಿ ಪ್ರಭುತ್ವ ಮತ್ತು ‘ಶಾ ವಂಶಾಡಳಿತ’ ಬಾಲಿವುಡ್ ತಾರೆಯರು ಮತ್ತು ಕ್ರಿಕೆಟ್ ದಂತಕಥೆಗಳ ಮೇಲೆ ಒತ್ತಡ ಹೇರಿದೆ. ಒಂದು ಕ್ಷಣ ಕೂಡ ರೈತರ ಹೋರಾಟದ ಹಿಂದು-ಮುಂದಿನ ಕುರಿತು ಯೋಚಿಸದೇ ಯುದ್ಧರಂಗ ಪ್ರವೇಶಿಸಿದ ಇವರೆಲ್ಲ ಈಗ ಪ್ರಪಂಚದೆದುರು ಬೆತ್ತಲಾಗಿ ನಿಂತಿದ್ದಾರೆ. ಬೆತ್ತಲಾದವರು ಮತ್ತು ಬೆತ್ತಲಾಗಲು ಹೊರಟ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಒಂದು ಅಂಶವೆಂದರೆ ಭಾರತ ಎಂಬ ಈ ದೇಶ ಈವತ್ತು ಆಡಳಿತ ನಡೆಸುತ್ತಿರುವ ಒಂದು ಪಕ್ಷ, ಒಬ್ಬ ನಾಯಕ, ಒಂದು ಸಿದ್ಧಾಂತಕ್ಕೆ ಸೀಮಿತವಾದದಲ್ಲ. ಅದು ಬಹುತ್ವದ ಪ್ರತೀಕ ಮತ್ತು ಇವೆಲ್ಲವನ್ನೂ ಮೀರಿದ ಒಂದು ಶಕ್ತಿ. ಹಾಗಿರುವಾಗ ಆಡಳಿತದಲ್ಲಿರುವ ಸರ್ಕಾರ, ಆಡಳಿತದ ಚುಕ್ಕಾಣಿ ಹಿಡಿದ ನಾಯಕ, ಅವರು ಜಾರಿಗೆ ತರಲು ಹೊರಟಿರುವ ಒಂದು ಕಾಯ್ದೆಯ ವಿರುದ್ಧ ಮಾತನಾಡುವುದು ಅಥವಾ ಪ್ರಶ್ನಿಸುವುದೆಂದರೆ ‘ಭಾರತ ದೇಶ’ದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡುವ ಯತ್ನವಲ್ಲ. ಬದಲಾಗಿ ಗಣತಂತ್ರವನ್ನೇ ಆಧಾರವಾಗಿಸಿಕೊಂಡು ನಿಂತಿರುವ ‘ಭಾರತ ದೇಶ’ವನ್ನು ಇನ್ನಷ್ಟು ಸದೃಢಗೊಳಿಸುವ ಯತ್ನ.

(ಲೇಖಕ: ಹಿರಿಯ ಪತ್ರಕರ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT