ರಾಷ್ಟ್ರಪತಿ ಚುನಾವಣೆ: ಬೆಂಬಲದ ಬಗ್ಗೆ ನಾಳೆ ನಿಲುವು ಪ್ರಕಟಿಸಲಿರುವ ಎಎಪಿ

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಶನಿವಾರ ನಡೆಯಲಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸಬೇಕೊ, ಬೇಡವೊ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ.
ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಂಬಂಧ ಕಳೆದ ತಿಂಗಳು ನಡೆದ ವಿರೋಧ ಪಕ್ಷಗಳ ನಾಯಕರ ಸಭೆಗೆ ಅರವಿಂದ್ ಕೇಜ್ರಿವಾಲ್ ಗೈರು ಹಾಜರಾಗಿದ್ದರು. ಅದರೆ, ಯಶವಂತ ಸಿನ್ಹಾ ಅವರನ್ನು ವಿರೋಧ ಪಕ್ಷಗಳು ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ, ಅವರನ್ನು ಬೆಂಬಲಿಸುವುದಾಗಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರಿಗೆ ಎಎಪಿ ತಿಳಿಸಿತ್ತು ಎನ್ನಲಾಗಿದೆ.
ಕಾಂಗ್ರೆಸ್ ತೊರೆದು ಈಚೆಗೆ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಿರುವ ಕಪಿಲ್ ಸಿಬಲ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಾಡುವಂತೆ ಕೇಜ್ರಿವಾಲ್ ಈ ಹಿಂದೆ ಸೂಚಿಸಿದ್ದರು. ಆದರೆ, ವಿರೋಧ ಪಕ್ಷಗಳು ಇದಕ್ಕೆ ಒಪ್ಪಿಗೆ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಜೂನ್ 21ರಂದು ನಡೆದ ವಿರೋಧ ಪಕ್ಷಗಳ ಎರಡನೇ ಸಭೆಗೂ ಮುಂಚೆ ಕೇಜ್ರಿವಾಲ್ ಅವರು ಸಿಬಲ್ ಅವನ್ನು ಅಭ್ಯರ್ಥಿಯನ್ನಾಗಿ ಮಾಡುವಂತೆ ಪವಾರ್‌ಗೆ ಸಲಹೆ ಮಾಡಿದ್ದರು. ಇದಾದ ಬಳಿಕ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಈ ಬಗ್ಗೆ ತಿಳಿಸಿದ್ದರು ಎಂದು ತಿಳಿದುಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.