ಮಂಗಳವಾರ, ಜೂನ್ 15, 2021
27 °C

ನಟ ಸುಶಾಂತ್‌ ಸಾವಿನ ಪ್ರಕರಣ: ಸಿಬಿಐ ತನಿಖೆ ಎತ್ತಿಹಿಡಿದ ‘ಸುಪ್ರೀಂ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅಸಹಜ ಸಾವಿಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಆಧರಿಸಿ ನಡೆಸಲಾಗುತ್ತಿರುವ ಸಿಬಿಐ ತನಿಖೆಗೆ, ಸುಪ್ರೀಂ ಕೋರ್ಟ್‌ ಬುಧವಾರ ಸಮ್ಮತಿ ಸೂಚಿಸಿದೆ. 

‘ಸ್ಪಷ್ಟ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾದ ತನಿಖೆ ಈ ಸಂದರ್ಭದಲ್ಲಿ ಅವಶ್ಯವಾಗಿದೆ. ಪ್ರಸ್ತುತ ಸಿಬಿಐ ಆರಂಭಿಸಿರುವ ತನಿಖೆಯೂ ಕಾನೂನುಬದ್ಧವಾಗಿದೆ. ಹೀಗಾಗಿ ಈ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಇತರೆ ಎಲ್ಲ ಪ್ರಕರಣಗಳನ್ನೂ ಸಿಬಿಐಯೇ ತನಿಖೆ ನಡೆಸಲಿ’ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್‌, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದ ಬಿಹಾರ ಸರ್ಕಾರದ ಕ್ರಮವನ್ನು ಸಮರ್ಥಿಸಿದೆ. 

ಸುಶಾಂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಅನ್ನು ಪಟ್ನಾದಿಂದ ಮುಂಬೈಗೆ ವರ್ಗಾಯಿಸುವಂತೆ ಕೋರಿ ರಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೃಷಿಕೇಷ್‌ ರಾಯ್‌ ಅವರಿದ್ದ ನ್ಯಾಯಪೀಠವು, ‘ಸುಶಾಂತ್‌ ತಂದೆ ನೀಡಿದ ದೂರನ್ನು ಆಧರಿಸಿ ಪಟ್ನಾ ಪೋಲೀಸರು ದಾಖಲಿಸಿರುವ ಎಫ್‌ಐಆರ್‌ ಕಾನೂನುಬಾಹಿರವಲ್ಲ. ಪ್ರಕರಣದಲ್ಲಿ ಮಹಾರಾಷ್ಟ್ರ ಹಾಗೂ ಬಿಹಾರ ಸರ್ಕಾರಗಳ ಪರಸ್ಪರ ರಾಜಕೀಯ ಆರೋಪಗಳ ಘರ್ಷಣೆಯಿಂದಾಗಿ ತನಿಖೆಯ ಮೇಲೆ ಕಾರ್ಮೋಡ ಕವಿದಿದೆ. ಇಂಥ ಸಂದರ್ಭದಲ್ಲಿ ಸತ್ಯವು ನಾಶವಾಗಲಿದ್ದು, ನ್ಯಾಯ ಬಲಿಯಾಗಲಿದೆ ಎನ್ನುವ ಶಂಕೆ ಮೂಡುತ್ತದೆ. ಹೀಗಾಗಿ ಈಗಾಗಲೇ ಆರಂಭವಾಗಿರುವ ಸಿಬಿಐ ತನಿಖೆಗೆ ಸಮ್ಮತಿ ನೀಡಲಾಗುತ್ತಿದೆ. ಈಗಾಗಲೇ ದಾಖಲಾಗಿರುವ ಪ್ರಕರಣಗಳ ಜೊತೆಗೆ ಹೊಸ ಪ್ರಕರಣಗಳನ್ನೂ ತನಿಖೆ ನಡೆಸಬೇಕು’ ಎಂದು ಪೀಠವು ಸಿಬಿಐಗೆ ನಿರ್ದೇಶಿಸಿದೆ. 

ಮೇಲ್ನೋಟಕ್ಕೆ ಮುಂಬೈ ಪೊಲೀಸರ ತಪ್ಪಿಲ್ಲ: ‘ಸುಶಾಂತ್‌ ಸಿಂಗ್‌ ಪ್ರತಿಭಾವಂತ ನಟ. ಆತನ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಅಭಿಮಾನಿಗಳು ತನಿಖೆ ಪೂರ್ಣಗೊಳ್ಳುವುದಕ್ಕೆ ಎದುರು ನೋಡುತ್ತಿದ್ದಾರೆ. ಇದರಿಂದಾಗಿ ಈಗ ಹುಟ್ಟಿಕೊಂಡಿರುವ ಎಲ್ಲ ಊಹಾಪೋಹಗಳಿಗೆ ತೆರೆ ಬೀಳಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ದಾಖಲೆಗಳನ್ನು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮೇಲ್ನೋಟಕ್ಕೆ ಮುಂಬೈ ಪೊಲೀಸರು ಯಾವುದೇ ತಪ್ಪು ಮಾಡಿದಂತೆ ಕಂಡುಬರುತ್ತಿಲ್ಲ. ಆದರೆ ತನಿಖೆಗೆ ಆಗಮಿಸಿದ್ದ ಬಿಹಾರ ಪೊಲೀಸರ ತಂಡವನ್ನು ಅವರು ತಡೆದಿದ್ದ ಘಟನೆಯನ್ನು ತಪ್ಪಿಸಬಹುದಿತ್ತು. ಇದರಿಂದಾಗೇ ತನಿಖೆಯ ಕುರಿತು ಮತ್ತಷ್ಟು ಸಂಶಯ ಹೆಚ್ಚಾಯಿತು’ ಎಂದು 35 ಪುಟಗಳ ತೀರ್ಪಿನಲ್ಲಿ ಪೀಠವು ಉಲ್ಲೇಖಿಸಿದೆ.

‘ಸತ್ಯ ಬದಲಾಗುವುದಿಲ್ಲ’
ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಯಾ ಚಕ್ರವರ್ತಿ ವಕೀಲರಾದ ಸತೀಶ್‌ ಮನೆಶಿಂಧೆ, ‘ಈ ಪ್ರಕರಣದಲ್ಲಿ ಯಾವುದೇ ಸಂಸ್ಥೆಯು ತನಿಖೆ ನಡೆಸಿದರೂ, ಸತ್ಯ ಹಾಗೆಯೇ ಉಳಿಯಲಿದೆ’ ಎಂದಿದ್ದಾರೆ. 

‘ರಿಯಾ ಅವರು ಈಗಾಗಲೇ ಮುಂಬೈ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ(ಇ.ಡಿ) ನಡೆಸಿದ ವಿಚಾರಣೆಗೆ ಹಾಜರಾಗಿದ್ದಾರೆ. ಸಿಬಿಐ ತನಿಖೆಗೂ ಅವರು ಹಾಜರಾಗಲಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಸ್ವತಃ ರಿಯಾ ಅವರೇ ಸುಶಾಂತ್‌ ಸಿಂಗ್‌ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಆಗ್ರಹಿಸಿದ್ದರು’ ಎಂದು ಸತೀಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ರಜಪೂತ್‌ ಕುಟುಂಬದ ಗೆಲುವು’
ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಜಪೂತ್‌ ಕುಟುಂಬದ ವಕೀಲರಾದ ವಿಕಾಸ್‌ ಸಿಂಗ್‌, ‘ಇದು ರಜಪೂತ್‌ ಕುಟುಂಬ ಹಾಗೂ ಅಭಿಮಾನಿಗಳ ಗೆಲುವು. ನಾವು ಮಂಡಿಸಿದ ಎಲ್ಲ ಅಂಶಗಳನ್ನು ಸುಪ್ರೀಂ ಕೋರ್ಟ್‌ ಪರಿಗಣಿಸಿದೆ. ಮುಖ್ಯವಾಗಿ ಪಟ್ನಾದಲ್ಲಿ ದಾಖಲಾದ ಎಫ್‌ಐಆರ್‌ ಕಾನೂನುಬದ್ಧವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ. ನ್ಯಾಯಕ್ಕಾಗಿ ಹೋರಾಡುವ ನಮಗೆ ಮತ್ತಷ್ಟು ಆವೇಗ ದೊರೆತಿದೆ’ ಎಂದು ಟ್ವೀಟ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

**

ಈ ಪ್ರಕರಣದಲ್ಲಿ ರಾಜಕೀಯ ಅಥವಾ ಚುನಾವಣೆ ಉದ್ದೇಶವಿರಲಿಲ್ಲ. ಬಿಹಾರ ಸರ್ಕಾರದ ಕಾನೂನುಬದ್ಧ ಕ್ರಮವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.
-ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

**

ನ್ಯಾಯ ಗೆದ್ದಿದೆ. ನಿಷ್ಪಕ್ಷಪಾತ ಸಿಬಿಐ ತನಿಖೆಯ ಭರವಸೆಯಿಂದಾಗಿ ಸುಶಾಂತ್‌ ಅವರ ಆತ್ಮಕ್ಕೆ ಶಾಂತಿ ದೊರೆತಂತಾಗಿದೆ. ಸಿಬಿಐಗೆ ಪ್ರಕರಣ ವರ್ಗಾವಣೆ ಕೋರಿ ಬಿಹಾರ ಪೊಲೀಸರು ಸಲ್ಲಿಸಿದ್ದ ಮನವಿಯನ್ನೂ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.
-ರವಿ ಶಂಕರ್‌ ಪ್ರಸಾದ್‌, ಕೇಂದ್ರ ಕಾನೂನು ಸಚಿವ 

**

ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಮತ್ತಷ್ಟು ಹೆಚ್ಚುವಂಥ ತೀರ್ಪಿದು. ಈ ಪ್ರಕರಣ ನಿಭಾಯಿಸಿದ ರೀತಿಯ ಕುರಿತು ಮಹಾರಾಷ್ಟ್ರ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಲಿ.
-ದೇವೇಂದ್ರ ಫಡಣವೀಸ್‌, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ

**

ಮುಂಬೈ ಪೊಲೀಸರ ಪ್ರಾಮಾಣಿಕತೆ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರ ಹಿಂದೆ ಪಿತೂರಿ ಇದೆ. ರಾಜಕಾರಣಿಗಳೇ ಪೊಲೀಸರ ಮೇಲೆ ಅಪವಾದ ಹೊರಿಸಿದರು.
-ಸಂಜಯ್‌ ರಾವುತ್‌, ಶಿವಸೇನಾ ನಾಯಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು