ಶುಕ್ರವಾರ, ಏಪ್ರಿಲ್ 23, 2021
27 °C
ಪಕ್ಷದ ಆಯ್ದ ನಾಯಕರಿಗೆ ಅಧಿರ್ ರಂಜನ್ ಚೌಧರಿ ತಾಕೀತು

ಕಾಂಗ್ರೆಸ್‌ನಲ್ಲಿ ಮತ್ತೆ ಒಡಕು ದನಿ: ಮೋದಿಯನ್ನು ಹೊಗಳುವುದನ್ನು ನಿಲ್ಲಿಸಿ

ಪಿಟಿಐ/ ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಪಕ್ಷವು ತಿರುಗೇಟು ನೀಡಿದೆ. ಮೋದಿಯನ್ನು ಹೊಗಳುತ್ತಾ ಸಮಯ ವ್ಯರ್ಥಮಾಡುವುದನ್ನು ನಿಲ್ಲಿಸಿ ಎಂದು ಪಕ್ಷವು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಾವು ಚಹಾ ಮಾರುತ್ತಿದ್ದ ವಿಷಯವನ್ನು ಜಗತ್ತಿನ ಎದುರು ಬಹಿರಂಗಪಡಿಸಿದರು. ಅದನ್ನು ಮುಚ್ಚಿಡುವ ಪ್ರಯತ್ನ ಮಾಡಲಿಲ್ಲ ಎಂದು ಗುಲಾಂ ನಬಿ ಆಜಾದ್ ಅವರು ಈಚೆಗೆ ಹೇಳಿದ್ದರು. ಕಾಂಗ್ರೆಸ್ ನಾಯಕತ್ವದ ವಿರುದ್ಧ ಪತ್ರ ಬರೆದಿದ್ದ ಪಕ್ಷದ 23 ನಾಯಕರಲ್ಲಿ ನಬಿ ಸಹ ಒಬ್ಬರು. ಈಚೆಗೆ ಈ ನಾಯಕರಲ್ಲಿ ಕೆಲವರು ಸಭೆ ನಡೆಸಿದ್ದರು. ಸಭೆ ಮುಗಿದ ಕೆಲವೇ ಗಂಟೆಗಳಲ್ಲಿ ಗುಲಾಂ ನಬಿ ಅವರು ಮೋದಿಯನ್ನು ಹೊಗಳಿ ಹೇಳಿಕೆ ನೀಡಿದ್ದರು. ಇದಕ್ಕೆ ಕಾಂಗ್ರೆಸ್‌ನಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ಕಾಂಗ್ರೆಸ್‌ನ ಕೆಲವು ನಾಯಕರು ಸದಾ ತಮ್ಮ ವೈಯಕ್ತಿಕ ಕ್ಷೇಮದ ಬಗ್ಗೆ ಯೋಚಿಸುವುದರಿಂದ ಹೊರಗೆ ಬರಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳುತ್ತಾ ಸಮಯ ವ್ಯರ್ಥಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತೇನೆ. ಈ ನಾಯಕರು ಪಕ್ಷದ ಋಣದಲ್ಲಿದ್ದಾರೆ. ಪಕ್ಷವನ್ನು ಬಲಪಡಿಸುವ ಹೊಣೆ ಅವರ ಮೇಲೂ ಇದೆ. ತಮ್ಮನ್ನು ಸಲಹಿದ ಮರದ ಬುಡವನ್ನು ಸಡಿಲಗೊಳಿಸುವ ಯತ್ನವನ್ನು ಈ ನಾಯಕರು ಕೈಬಿಡಬೇಕು’ ಎಂದು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಆಗ್ರಹಿಸಿದ್ದಾರೆ.

ನಬಿ ಅವರನ್ನು ಉಚ್ಚಾಟಿಸಿ: ಪಕ್ಷದ ಬಲವನ್ನು ಕುಗ್ಗಿಸುತ್ತಿರುವ ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ಜಮ್ಮು-ಕಾಶ್ಮೀರ ಕಾಂಗ್ರೆಸ್‌ ಘಟಕವು ಆಗ್ರಹಿಸಿದೆ. ಆಜಾದ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ಕಾಂಗ್ರೆಸ್‌ನ ಮತ್ತೊಂದು ಗುಂಪು ಆಜಾದ್ ಪರವಾಗಿ ಪ್ರದರ್ಶನ ನಡೆಸಿದೆ.

‘ಆಜಾದ್ ಅವರನ್ನು ಕಾಂಗ್ರೆಸ್‌ ಸದಾ ಉನ್ನತ ಸ್ಥಾನದಲ್ಲಿ ಇರಿಸಿದೆ. ದಶಕಗಳ ಕಾಲ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದೆ. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯನ್ನಾಗಿಯೂ ಮಾಡಿದೆ. ಈಗ ಪಕ್ಷ ಸಂಕಷ್ಟದಲ್ಲಿರುವಾಗ, ಆಜಾದ್ ಅವರ ಅನುಭವದ ನೆರವು ಅಗತ್ಯವಿದೆ. ಆದರೆ ಜಮ್ಮು-ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ಕಸಿದುಕೊಂಡ ಪ್ರಧಾನಿ ನರೇಂದ್ರ ಮೋದಿಯನ್ನು, ಕಾಶ್ಮೀರಕ್ಕೇ ಬಂದು ಹೊಗಳುವ ಕೆಲಸವನ್ನು ಆಜಾದ್ ಮಾಡಿದ್ದಾರೆ’ ಎಂದು ಜಮ್ಮು-ಕಾಶ್ಮೀರ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್ ಶಾನವಾಜ್ ಚೌಧರಿ ಟೀಕಿಸಿದ್ದಾರೆ.

‘ಆಜಾದ್ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬಿಜೆಪಿಯ ಕಾರ್ಯಸೂಚಿಯಂತೆ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಪಕ್ಷದ ಬಲವನ್ನು ಕುಗ್ಗಿಸುತ್ತಿದ್ದಾರೆ. ಅವರನ್ನು ತಕ್ಷಣವೇ ಪಕ್ಷದಿಂದ ಉಚ್ಚಾಟಿಸಬೇಕು‘ ಎಂದು ಶಾನವಾಜ್ ಆಗ್ರಹಿಸಿದ್ದಾರೆ.

ಬಿಜೆಪಿ ಟೀಕೆ: ಪ್ರಧಾನಿ ಮೋದಿ ಅವರನ್ನು ದ್ವೇಷಿಸುವುದು ಮಾತ್ರ ಕಾಂಗ್ರೆಸ್‌ನ ಕಾರ್ಯಸೂಚಿಯಾಗಿದೆ. ಮೋದಿಯನ್ನು ಹೊಗಳುವವರನ್ನು ಶಿಕ್ಷಿಸುವುದು ಕಾಂಗ್ರೆಸ್‌ನ ರಕ್ತದಲ್ಲಿಯೇ ಇದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದ್ದಾರೆ.

‘ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಗುಲಾಂ ನಬಿ ಆಜಾದ್ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ದಿನದ ಬೆಳವಣಿಗೆ

*ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆ ಆರಂಭಿಸಿದ ಬಿಜೆಪಿ. ಯಾತ್ರೆಗೆ ಟಿಎಂಸಿ ಕಾರ್ಯಕರ್ತರಿಂದ ತಡೆ. ಮಾತಿನ ಚಕಮಕಿ

*ಅಸ್ಸಾಂನಲ್ಲಿ ತಮ್ಮ ಎರಡನೇ ದಿನದ ಪ್ರಚಾರ ಕಾರ್ಯ ಮುಂದುವರಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ. ಬುಧವಾರವೂ ಅಸ್ಸಾಮಿ ಜನರ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಪ್ರಿಯಾಂಕಾ. ಮಹಿಳೆಯರು, ಚಹಾ ತೋಟದ ಕೂಲಿಯಾಳುಗಳ ಜತೆ ಸಂವಾದ. ಕೂಲಿಯಾಳುಗಳ ಜತೆ ಸೇರಿ ಚಹಾ ಎಲೆ ಬಿಡಿಸಿದ ನಾಯಕಿ

*ಪಶ್ಚಿಮ ಬಂಗಾಳ ಚುನಾವಣೆಗೆ ವೀಕ್ಷಕರನ್ನು ನೇಮಕ ಮಾಡಿದ ಕಾಂಗ್ರೆಸ್

*ಡಿಎಂಕೆಯನ್ನು ಅಧಿಕಾರದಿಂದ ದೂರ ಇಡುವುದೇ ಅಮ್ಮ ಮಕ್ಕಳ ಮುನ್ನೇತ್ರ ಕಳಗಂನ ಪ್ರಧಾನ ಉದ್ದೇಶ. ಈ ಉದ್ದೇಶ ಈಡೇರಿಕೆಗಾಗಿ ಯಾವ ಪಕ್ಷದ ಜತೆಗೂ ಮೈತ್ರಿಮಾಡಿಕೊಳ್ಳಲು ಸಿದ್ಧರಿದ್ದೇವೆ: ಟಿ.ಟಿ.ವಿ.ದಿನಕರನ್

*ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಹಂತದ ಮತದಾನದ ಅವಧಿಗೆ ಹೆಚ್ಚುವರಿ 30 ನಿಮಿಷಗಳನ್ನು ಸೇರಿಸಿ ಅಧಿಸೂಚನೆ ಹೊರಡಿಸಿದ ಚುನಾವಣಾ ಆಯೋಗ

*ತಮಿಳುನಾಡಿನಲ್ಲಿ ಪಕ್ಷದ ಟಿಕೆಟ್ ಬಯಸುವವರನ್ನು ಸಂದರ್ಶನಕ್ಕೆ ಒಳಪಡಿಸಲಾಗುತ್ತದೆ: ಎಐಎಡಿಎಂಕೆ

*ಟಿಎಂಸಿ ಶಾಸಕ ಜಿತೇಂದ್ರ ತಿವಾರಿ ಅವರು ಬುಧವಾರ ಬಿಜೆಪಿ ಸೇರಿದರು

ನುಡಿ–ಕಿಡಿ

ಪ್ರಶಾಂತ್ ಕಿಶೋರ್ ಅವರು ಮಮತಾ ದೀದಿಯನ್ನು ತ್ಯಜಿಸಿದ್ದಾರೆ. ಚುನಾವಣೆಯ ಫಲಿತಾಂಶ ಬರುವ ಮುನ್ನವೇ ಮಮತಾ ಅವರ ಬಹುದೊಡ್ಡ ಸಲಹೆಗಾರ, ಈಗ ಬೇರೊಬ್ಬರ ಜತೆ ಕೈಜೋಡಿಸಿದ್ದಾರೆ

- ಸಂಬಿತ್ ಪಾತ್ರಾ, ಬಿಜೆಪಿ ವಕ್ತಾರ

***

ಉತ್ತರ ಪ್ರದೇಶದಲ್ಲಿ ಹಿಂದೆ ಒಂದು ಸರ್ಕಾರವಿತ್ತು. ರಾಮಭಕ್ತರ ಮೇಲೆ ಆ ಸರ್ಕಾರ ಗುಂಡು ಹಾರಿಸುತ್ತಿತ್ತು. ಆ ಸರ್ಕಾರ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಂ ಎನ್ನಲು ಬಿಡದ ಟಿಎಂಸಿ ಸರ್ಕಾರಕ್ಕೂ ಇದೇ ಗತಿ ಆಗಲಿದೆ

- ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

***
ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಅವರ ರಾಜ್ಯದ ಯುವತಿಯ ಘನತೆ ಮತ್ತು ಆಕೆಯ ಕುಟುಂಬದ ರಕ್ಷಣೆ ಆದ್ಯತೆಯಾಗದೆ, ಪಶ್ಚಿಮ ಬಂಗಾಳದ ಚುನಾವಣೆ ಹೇಗೆ ಆದ್ಯತೆಯಾಯಿತು ಎಂಬುದು ಅರ್ಥವಾಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಭದ್ರತೆ ನೀಡಲಾಗದ ಯೋಗಿ ಆದಿತ್ಯನಾಥ ಅವರು, ಬಂಗಾಳದ ಮಹಿಳೆಯರ ರಕ್ಷಕರಾಗಬಲ್ಲರು ಎಂದು ಇಲ್ಲಿನ ಬಿಜೆಪಿ ನಾಯಕರು ಅಂದುಕೊಂಡಿದ್ದಾರೆಯೇ?

- ಟಿಎಂಸಿ

***

ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್

ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಬದ್ರುದ್ದೀನ್‌ ಅಜ್ಮಲ್ ಅವರ ಎಐಯುಡಿಎಫ್ ಮತ್ತು ಮೌಲ್ಮಿ ಅಬ್ಬಾಸ್ ಸಿದ್ಧಿಕಿ ಅವರ ಐಎಸ್‌ಎಫ್ ಜತೆ ಕಾಂಗ್ರೆಸ್‌ ಪಕ್ಷವು ಮೈತ್ರಿ ಮಾಡಿಕೊಂಡಿರುವುದಕ್ಕೆ, ಪಕ್ಷದ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆಕ್ಷೇಪಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ನೊಳಗಿನ ಈ ಭಿನ್ನಮತವನ್ನು ಕಾಂಗ್ರೆಸ್‌ ವರ್ಸಸ್ ಕಾಂಗ್ರೆಸ್‌ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ

ಆನಂದ್ ಶರ್ಮಾ ಹೇಳಿದ್ದೇನು?

‘ಕಾಂಗ್ರೆಸ್‌ ಪಕ್ಷವು ಒಂದೊಂದು ರಾಜ್ಯದಲ್ಲಿ ಒಂದೊಂಡು ನೀತಿ ಅನುಸರಿಸಬಾರದು. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಕೋಮುವಾದಿ ಪಕ್ಷಗಳ ಜತೆಗೆ ಕಾಂಗ್ರೆಸ್‌ ಕೈಜೋಡಿಸಿದೆ. ಇದು ಪಕ್ಷದ ಮೂಲಸಿದ್ಧಾಂತ, ಗಾಂಧಿವಾದ ಮತ್ತು ನೆಹರೂ ಧ್ಯೇಯಗಳಿಗೆ ವಿರುದ್ಧವಾದುದು. ಈ ಮೈತ್ರಿಗೆ ಪಕ್ಷದ ಕಾರ್ಯಕಾರಿಣಿಯ ಒಪ್ಪಿಗೆ ಪಡೆಯಬೇಕು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಆನಂದ್ ಶರ್ಮಾ ಹೇಳಿದ್ದರು.

‘ಬಿಜೆಪಿಯ ಉದ್ದೇಶ ಈಡೇರುತ್ತಿದೆ’

‘ಆನಂದ್ ಶರ್ಮಾ ಅವರೇ, ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ನೇತೃತ್ವದ ಎಡರಂಗವು ಜಾತ್ಯತೀತ ಮೈತ್ರಿಕೂಟವನ್ನು ಮುನ್ನಡೆಸುತ್ತಿದೆ. ಕಾಂಗ್ರೆಸ್ ಈ ಮೈತ್ರಿಯ ಭಾಗವಾಗಿದೆ. ನಾವು ಬಿಜೆಪಿಯ ಕೋಮುವಾದ ಮತ್ತು ವಿಭಜನಾ ರಾಜಕಾರಣವನ್ನು ಮಣಿಸಲು ಬದ್ಧರಾಗಿದ್ದೇವೆ. ಕಾಂಗ್ರೆಸ್‌ಗೆ ಅದರ ಪಾಲಿನ ಎಲ್ಲಾ ಸೀಟುಗಳೂ ದೊರೆತಿವೆ. ಎಡಪಕ್ಷಗಳು ತಮ್ಮ ಪಾಲಿನ ಸೀಟುಗಳನ್ನು ಇಂಡಿಯನ್ ಸೆಕ್ಯುಲರ್ ಫ್ರಂಟ್‌ಗೆ ಹಂಚಿಕೆ ಮಾಡಿವೆ. ಎಡಪಕ್ಷಗಳ ಈ ನಡೆಯನ್ನು ನೀವು ಕೋಮುವಾದ ಎನ್ನುವುದಾದರೆ, ಬಿಜೆಪಿಯ ಧ್ರುವೀಕರಣ ತಂತ್ರ ಈಡೇರುತ್ತಿದೆ ಎಂದೇ ಅರ್ಥ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ತಿರುಗೇಟು ನೀಡಿದ್ದಾರೆ.

ಪ್ರಿಯಾಂಕಾ ಸಮರ್ಥನೆ

‘ಈ ಬಗ್ಗೆ ನಮ್ಮ ಪಕ್ಷದ ನಾಯಕರು ಈಗಾಗಲೇ ವಿವರಣೆ ನೀಡಿದ್ದಾರೆ. ಅಸ್ಸಾಂನಲ್ಲಿನ ಹೋರಾಟವು ಅಸ್ಸಾಂಗೆ ಮಾತ್ರ ಸೀಮಿತವಾದುದು. ಅಲ್ಲಿನ ಮಿತ್ರಪಕ್ಷಗಳ ಪ್ರತಿಪಾದನೆಯನ್ನು ಕಾಂಗ್ರೆಸ್ ಶೇ 100ರಷ್ಟು ಒಪ್ಪುವುದಿಲ್ಲ. ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಸಿದ್ಧಾಂತಗಳಲ್ಲಿ ವ್ಯತ್ಯಾಸವಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ಹೋರಾಟವಲ್ಲ. ಬದಲಿಗೆ ಅಸ್ಸಾಂ ಅಸ್ಮಿತೆ ಮತ್ತು ಬಿಜೆಪಿ-ಆರ್‌ಎಸ್‌ಎಸ್‌ ಸಿದ್ಧಾಂತಗಳ ನಡುವಣ ಹೋರಾಟ. ಈ ಹೋರಾಟದಲ್ಲಿ ಅಸ್ಸಾಂನ ಪಕ್ಷಗಳ ಜತೆ ಕಾಂಗ್ರೆಸ್ ಕೈಜೋಡಿಸಿದೆ ಅಷ್ಟೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು