ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಕಾಂಗ್ರೆಸ್‌ ‘ಮಹಾ ಮೈತ್ರಿ’; ಶತಾಯಗತಾಯ ಬಿಜೆಪಿ ಸೋಲಿಸಲು ಪ್ರಯತ್ನ

Last Updated 3 ಮಾರ್ಚ್ 2021, 20:16 IST
ಅಕ್ಷರ ಗಾತ್ರ

ಗುವಾಹಟಿ: 2016ರಲ್ಲಿ ಅಸ್ಸಾಂನಲ್ಲಿ ಅಧಿಕಾರ ಹಿಡಿದ ಬಿಜೆಪಿಯನ್ನು ಶತಾಯಗತಾಯ ಸೋಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ ರಾಜ್ಯದಲ್ಲಿ ಆರು ರಾಜಕೀಯ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ವಿರೋಧಿ ಎಲ್ಲಾ ಮತಗಳನ್ನು ಧ್ರುವೀಕರಣಗೊಳಿಸುವ ಪ್ರಯತ್ನ ಆರಂಭಿಸಿದೆ.

2005ರಿಂದಲೇ ತನ್ನ ವಿರೋಧಿಯಾಗಿದ್ದ, ಬದ್ರುದ್ದೀನ್‌ ಅಜ್ಮಲ್‌ ನೇತೃತ್ವದ ಎಐಯುಡಿಎಫ್‌ ಜತೆಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಅದಲ್ಲದೆ, ಎಡಪಂಥೀಯ ಪಕ್ಷಗಳು ಹಾಗೂ ಇನ್ನೊಂದು ಪ್ರಾದೇಶಿಕ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡು ‘ಮಹಾ ಮೈತ್ರಿ’ ರಚಿಸಿಕೊಂಡಿದೆ. ಇದಾದ ಬಳಿಕ, ಬೋಡೊಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ (ಬಿಪಿಎಫ್‌) ಅನ್ನೂ ಕೂಟದೊಳಕ್ಕೆ ಸೆಳೆದುಕೊಂಡಿದೆ.

ಕಾಂಗ್ರೆಸ್‌ ಜತೆಗಿನ 8 ವರ್ಷಗಳ ಮೈತ್ರಿಗೆ ಮಂಗಳ ಹಾಡಿದ್ದ ಬಿಪಿಎಫ್‌, 2016ರಲ್ಲಿ ಬಿಜೆಪಿ ಜತೆ ಕೈಜೋಡಿಸಿತ್ತು. ಬಿಜೆಪಿಯು ಈ ಬಾರಿ ಪ್ರಾದೇಶಿಕ ಪಕ್ಷಗಳಾದ ಎಜಿಪಿ ಹಾಗೂ ಯುಪಿಪಿಎಲ್‌ಗಳ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ. ಬಿಜೆಪಿ ಮೈತ್ರಿಯ ಜತೆಗೆ ಕಾಂಗ್ರೆಸ್‌ನ ಮಹಾ ಮೈತ್ರಿಯು ಶಕ್ತಿಶಾಲಿಯಾಗಿ ಗೋಚರಿಸುತ್ತಿದ್ದರೂ, ಅಷ್ಟಕ್ಕೆ ಸಮಾಧಾನಗೊಳ್ಳದೆ, ಹೊಸ ಪಕ್ಷಗಳಾದ ಅಸ್ಸಾಂ ಜತಿಯಾ ಪರಿಷದ್‌ (ಎಜೆಪಿ) ಹಾಗೂ ಅಖಿಲ್‌ ಗೊಗೊಯಿ ನೇತೃತ್ವದ ರಾಯ್ಜೋರ್‌ ದಳವನ್ನೂ ಮೈತ್ರಿಯೊಳಗೆ ಸೇರಿಸುವ ಪ್ರಯತ್ನವನ್ನು ಮುಂದುವರಿಸಿದೆ. ‘ನಮ್ಮ ಮಹಾ ಮೈತ್ರಿಯು ಬಿಜೆಪಿಯನ್ನು ಸೋಲಿಸಿ ಅಸ್ಸಾಂನಲ್ಲಿ ಮುಂದಿನ ಸರ್ಕಾರವನ್ನು ರಚಿಸಲಿದೆ’ ಎಂಬ ವಿಶ್ವಾಸವನ್ನು ಎಐಸಿಸಿ ಕಾರ್ಯದರ್ಶಿ ಅನಿರುದ್ಧ್‌ ಸಿಂಗ್‌ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಮತಗಳ ಒಗ್ಗಟ್ಟು: ‘ಮಹಾ ಮೈತ್ರಿಯಲ್ಲಿ ಎಐಯುಡಿಎಫ್‌ ಸೇರಿಕೊಂಡಿರುವುದರಿಂದ ಮುಸ್ಲಿಂ ಮತಗಳು (ಸುಮಾರು ಶೇ 30ರಷ್ಟು) ವಿಭಜನೆಯಾಗುವುದು ತಪ್ಪಿದೆ. ಈ ಕಾರಣಕ್ಕಾಗಿಯೇ ಬಿಜೆಪಿಯು ಅಜ್ಮಲ್‌ ಅವರನ್ನು ‘ನುಸುಳುಕೋರರ ರಕ್ಷಕ’ ಎಂದು ಬಿಂಬಿಸುತ್ತಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

2016ರಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗಿದ್ದರಿಂದ ಬಿಜೆಪಿಗೆ ಹಲವು ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಿತ್ತು. ಕೆಲವು ಕ್ಷೇತ್ರಗಳಲ್ಲಿ ಎಡಪಕ್ಷಗಳ ಸ್ಪರ್ಧೆಯೂ ಬಿಜೆಪಿಗೆ ಸಹಾಯಕವಾಗಿತ್ತು. ಈ ಬಾರಿ ಮಹಾ ಮೈತ್ರಿಯು ಕಣಕ್ಕಿಳಿಸುವ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಅಸ್ಸಾಂನ ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ.

ಅಸ್ಮಿತೆಯ ಪ್ರಶ್ನೆ: ಅಸ್ಸಾಂನ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಈ ಬಾರಿ ಕಣಕ್ಕೆ ಇಳಿಯುತ್ತಿದೆ. 2014ರ ಲೋಕಸಭೆ ಹಾಗೂ 2016ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಇದೇ ವಿಚಾರವನ್ನಿಟ್ಟುಕೊಂಡು ಸ್ಪರ್ಧಿಸಿತ್ತು. ‘ಬಾಂಗ್ಲಾದ ನುಸುಳುಕೋರರನ್ನು ತಡೆಯುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ವಿದೇಶಿ ನುಸುಳುಕೋರರ ಮತಗಳಿಂದ ಕಾಂಗ್ರೆಸ್‌ ಗೆಲ್ಲುತ್ತಾ ಬಂದಿದೆ’ ಎಂದು ಬಿಜೆಪಿ ಆರೋಪಿಸಿತ್ತು. ಈಗ ಅದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್‌ ಮತಯಾಚಿಸುತ್ತಿದೆ.

‘ಸಿಎಎ ಜಾರಿ ಮಾಡುವ ಮೂಲಕ ಬಾಂಗ್ಲಾದೇಶದ ಹಿಂದೂಗಳಿಗೆ ಪೌರತ್ವ ನೀಡಲು ಬಿಜೆಪಿ ಮುಂದಾಗಿದೆ. ಇದು ಅಸ್ಸಾಂನ ಅಸ್ಮಿತೆಗೆ ಧಕ್ಕೆ ಉಂಟುಮಾಡಲಿದೆ’ ಎಂದು ಪ್ರಿಯಾಂಕಾ ಗಾಂಧಿ ಈಚೆಗೆ ಚುನಾವಣಾ ರ್‍ಯಾಲಿಯೊಂದರಲ್ಲಿ ಹೇಳಿದ್ದಾರೆ.

ಬಿಪಿಎಫ್‌ ಸವಾಲು: ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯು 2016ರಿಂದ ತನ್ನ ಮಿತ್ರಪಕ್ಷವಾಗಿದ್ದ ಬೋಡೊಲ್ಯಾಂಡ್‌ ಪೀಪಲ್ಸ್‌ ಫ್ರಂಟ್‌ ಅನ್ನು ದೂರವಿಟ್ಟಿತ್ತು. ಆ ಪಕ್ಷ ಈಗ ಮಹಾ ಮೈತ್ರಿಯಲ್ಲಿ ಸೇರಿಕೊಂಡಿದೆ. ‘2016ರ ಚುನಾವಣೆಯಲ್ಲಿ ಬೋಡೊಲ್ಯಾಂಡ್‌ ಪ್ರದೇಶದ ಹೊರಗೆ ಸುಮಾರು 12 ಸ್ಥಾನಗಳನ್ನು ಗೆಲ್ಲಲು ನಾನು ಬಿಜೆ‍ಪಿಗೆ ನೆರವಾಗಿದ್ದೆ. ಈ ಬಾರಿ ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ನೆರವು ನೀಡುತ್ತೇನೆ’ ಎಂದು ಬಿಪಿಎಫ್‌ ಮುಖ್ಯಸ್ಥ ಹಗ್ರಾಮ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT