ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗಳಲ್ಲಿ ಸೋತರೂ ಕಾಂಗ್ರೆಸ್‌ನ ಅಹಂಕಾರ ಕಡಿಮೆಯಾಗಿಲ್ಲ: ಮೋದಿ

Last Updated 7 ಫೆಬ್ರುವರಿ 2022, 13:40 IST
ಅಕ್ಷರ ಗಾತ್ರ

ನವದೆಹಲಿ: ಹಲವು ಚುನಾವಣೆಗಳಲ್ಲಿ ಸೋತ ಬಳಿಕವೂ ನಿಮ್ಮ (ಕಾಂಗ್ರೆಸ್) 'ಅಹಂಕಾರ'ದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಸಂಸತ್‌ನಲ್ಲಿ ಮಾತನಾಡಿರುವ ಅವರು ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಇಂದು ದೇಶದ ಬಡ ಜನರು ಗ್ಯಾಸ್ ಸೇರಿದಂತೆ ಹಲವು ರೀತಿಯ ಮೂಲಸೌಕರ್ಯ ಸಂಪರ್ಕ ಪಡೆಯುತ್ತಿದ್ದಾರೆ. ಮನೆ ಮತ್ತು ಶೌಚಾಲಯಗಳನ್ನು ಪಡೆಯುತ್ತಿದ್ದಾರೆ. ತಮ್ಮದೇ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಆದರೆ ದುರದೃಷ್ಟವಶಾತ್ ಕೆಲವರ (ವಿರೋಧ ಪಕ್ಷಗಳ) ಮನಸ್ಸು 2014ಕ್ಕೇ ಅಂಟಿಕೊಂಡಿದೆ’ ಎಂದು ಮೋದಿ ವಿರೋಧಪಕ್ಷಗಳನ್ನು ಗೇಲಿ ಮಾಡಿದರು.

‘ನಾಗಾಲ್ಯಾಂಡ್‌ 24 ವರ್ಷಗಳ ಹಿಂದೆ ಕಾಂಗ್ರೆಸ್‌ ಅನ್ನು ಬೆಂಬಲಿಸಿದೆ. ಒಡಿಶಾ ಕೂಡ 27 ವರ್ಷಗಳ ಹಿಂದೆ ನಿಮ್ಮನ್ನೇ ಬೆಂಬಲಿಸಿದೆ. 28 ವರ್ಷಗಳ ಹಿಂದೆ ಗೋವಾದಲ್ಲಿ ಪೂರ್ಣ ಬಹುಮತದೊಂದಿಗೆ ಗೆದ್ದಿದ್ದೀರಿ. 1988ರಲ್ಲಿ ತ್ರಿಪುರಾದಲ್ಲಿ ಕಾಂಗ್ರೆಸ್‌ ಗೆದ್ದಿತ್ತು. ಪಶ್ಚಿಮ ಬಂಗಾಳ 1972ರಲ್ಲಿ ಕಾಂಗ್ರೆಸ್‌ ಅನ್ನು ಬೆಂಬಲಿಸಿದೆ. ತೆಲಂಗಾಣ ರಚನೆಯ ಶ್ರೇಯವನ್ನು ನೀವೇ ಪಡೆಯುತ್ತೀರಿ. ಆದರೆ, ಜನ ಮಾತ್ರ ನಿಮ್ಮನ್ನು ಸ್ವೀಕರಿಸಲಿಲ್ಲ’ ಎಂದು ಪ್ರಧಾನಿ ಕಾಂಗ್ರೆಸ್‌ ಅನ್ನು ವ್ಯಂಗ್ಯ ಮಾಡಿದರು.

‘ಕೋವಿಡ್ ಮೊದಲ ಅಲೆಯ ಸಮಯದಲ್ಲಿ ನೀವು (ಕಾಂಗ್ರೆಸ್) ವಲಸೆ ಕಾರ್ಮಿಕರಿಗೆ ಮುಂಬೈಯಿಂದ ಊರುಗಳಿಗೆ ಹೋಗಲು ಉಚಿತ ರೈಲು ಟಿಕೆಟ್ ನೀಡಿದ್ದೀರಿ. ಅದೇ ಸಮಯದಲ್ಲಿ, ದೆಹಲಿ ಸರ್ಕಾರವು ವಲಸೆ ಕಾರ್ಮಿಕರನ್ನು ನಗರ ತೊರೆಯುವಂತೆ ಹೇಳಿತು. ಅಲ್ಲದೇ, ಅವರಿಗೆ ಬಸ್ಸುಗಳನ್ನು ಒದಗಿಸಿತು. ಪರಿಣಾಮವಾಗಿ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕೋವಿಡ್ ವೇಗವಾಗಿ ಹರಡಿತು’ ಎಂದು ಮೋದಿ ಆರೋಪಿಸಿದರು.

‘ನೀವು ನನ್ನನ್ನು ವಿರೋಧಿಸಬಹುದು. ಆದರೆ, ಫಿಟ್ ಇಂಡಿಯಾ ಚಳವಳಿ ಮತ್ತು ಇತರ ಯೋಜನೆಗಳನ್ನು ಏಕೆ ವಿರೋಧಿಸುತ್ತಿದ್ದೀರಿ? ವರ್ಷಗಳ ಹಿಂದೆಯೇ ನೀವು ಹಲವು ರಾಜ್ಯಗಳಲ್ಲಿ ಸೋತಿದ್ದೀರಿ. ಇದರಲ್ಲಿ ಯಾವುದೇ ಆಶ್ಚರ್ಯವೂ ಇಲ್ಲ. ಮುಂದಿನ 100 ವರ್ಷಗಳ ಕಾಲ ಅಧಿಕಾರಕ್ಕೆ ಬರಬಾರದೆಂದು ನೀವು ನಿರ್ಣಯಿಸಿದಂತೆ ಕಾಣುತ್ತಿದೆ’ ಎಂದು ಮೋದಿ ವಾಗ್ದಾಳಿ ನಡೆಸಿದರು.

‘ನಾನು ‘ವೋಕಲ್ ಫಾರ್ ಲೋಕಲ್' (ದೇಶೀಯ ಉತ್ಪಾದನೆ) ಯೋಜನೆ ಬಗ್ಗೆ ಮಾತನಾಡಿದರೆ ನೀವು ಅದನ್ನು ನಿರ್ಲಕ್ಷಿಸುತ್ತೀರಿ. ಭಾರತ ‘ಆತ್ಮನಿರ್ಭರ’ವಾಗುವುದನ್ನು ನೀವು ಬಯಸುವುದಿಲ್ಲವೇ? ನೀವು ಮಹಾತ್ಮ ಗಾಂಧಿಯವರ ಕನಸುಗಳನ್ನು ನನಸು ಮಾಡಲು ಬಯಸುವುದಿಲ್ಲವೇ’ ಎಂದು ಮೋದಿ ಪ್ರಶ್ನೆ ಮಾಡಿದರು.

‘ನಮ್ಮ ಸಣ್ಣ ರೈತರನ್ನು ಬಲಪಡಿಸಬೇಕು. ನಮ್ಮ ಗಮನ ಆ ನಿಟ್ಟಿನಲ್ಲಿದೆ. ಆದರೆ ಸಣ್ಣ ರೈತರ ನೋವು ಗೊತ್ತಿಲ್ಲದವರಿಗೆ ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ಹಕ್ಕಿಲ್ಲ’ ಎಂದು ಅವರು ಹೇಳಿದರು.

ಕೆಲವರಿಗೆ 'ಮೇಕ್ ಇನ್ ಇಂಡಿಯಾ' ಎಂದರೆ ಆಗದು. ಯಾಕೆಂದರೆ ಅದರಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ, ಹಣ ಸಂಗ್ರಹಿಸಲು ಆಗುವುದಿಲ್ಲ ಎಂದು ಮೋದಿ ಹೇಳಿದರು.

ರಕ್ಷಣಾ ಕ್ಷೇತ್ರದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಾವು ಪ್ರಯತ್ನಿಸಿದ್ದೇವೆ ಎಂದೂ ಪ್ರಧಾನಿ ಇದೇ ವೇಳೆ ತಿಳಿಸಿದ್ದಾರೆ.

‘ಪ್ರತಿಪಕ್ಷಗಳು ಈಗ ಹಣದುಬ್ಬರದ ವಿಷಯವನ್ನು ಎತ್ತಿವೆ. ಆದರೆ, ಅವರದ್ದೇ ಸರ್ಕಾರಗಳಿದ್ದಾಗ ಆ ವಿಷಯವನ್ನು ಪ್ರಸ್ತಾಪಿಸಿದ್ದಿದ್ದರೆ ಉತ್ತಮವಾಗಿರುತ್ತಿತ್ತು. ಸಾಂಕ್ರಾಮಿಕದ ಸಂದರ್ಭದಲ್ಲಿಯೂ ನಮ್ಮ ಸರ್ಕಾರವು ಹಣದುಬ್ಬರವನ್ನು ನಿಭಾಯಿಸಲು ಪ್ರಯತ್ನಿಸಿದೆ. 2014-2020ರ ಅವಧಿಯಲ್ಲಿ ಹಣದುಬ್ಬರ ದರ ಶೇ.5ಕ್ಕಿಂತ ಕಡಿಮೆ ಇತ್ತು’ ಎಂದು ಮೋದಿ ಹೇಳಿದರು.

ಕಾಂಗ್ರೆಸ್ಸಿನ ಪಿ ಚಿದಂಬರಂ ಅವರು ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಆರ್ಥಿಕತೆಯ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಆದರೆ ಇದೇ ಚಿದಂಬರಂ ಅವರು 2012 ರಲ್ಲಿ ಏನು ಹೇಳಿದ್ದರು? ‘ಜನ ನೀರಿನ ಬಾಟಲಿಗೆ ₹15 ಮತ್ತು ಐಸ್ ಕ್ರೀಮ್‌ಗೆ ₹20 ಖರ್ಚು ಮಾಡುತ್ತಾರೆ. ಆದರೆ, ಗೋಧಿ ಮತ್ತು ಅಕ್ಕಿಯ ಬೆಲೆಯಲ್ಲಿ ₹1 ಏರಿಕೆಯಾದಾಗ ಸಹಿಸುವುದಿಲ್ಲ ಎಂದಿದ್ದರು’ ಎಂದು ಮೋದಿ ಹಿಂದಿನದ್ದನ್ನು ನೆನಪು ಮಾಡಿಕೊಟ್ಟರು.

ಕೊರಿಯಾ ಯುದ್ಧವು ಹಣದುಬ್ಬರಕ್ಕೆ ಕಾರಣವಾಯಿತು ಎಂದು ಪಂಡಿತ್ ನೆಹರೂ ಹೇಳಿದ್ದರು. ಅಮೆರಿಕದಲ್ಲಿ ಆಗುವ ಯಾವುದೇ ಗೊಂದಲವೂ ಹಣದುಬ್ಬರಕ್ಕೆ ಕಾರಣವಾಗುತ್ತದೆ ಎಂದಿದ್ದರು ಎನ್ನುವ ಮೂಲಕ ಮೋದಿ ಅವರು ನೆಹರೂ ಆಡಳಿತವನ್ನೂ ಗೇಲಿ ಮಾಡಿದರು.

'ಗರೀಬಿ ಹಟಾವೋ (ಬಡತನ ನಿರ್ಮೂಲನೆ) ಘೋಷಣೆ ಮೂಲಕ ಕಾಂಗ್ರೆಸ್ ಹಲವಾರು ಚುನಾವಣೆಗಳನ್ನು ಗೆದ್ದಿತು. ಆದರೆ ಅದನ್ನು ಮಾಡುವಲ್ಲಿ ವಿಫಲವಾಯಿತು. ಹೀಗಾಗಿ ಈ ದೇಶ ಬಡವರಿಗೆ ಮತ ಹಾಕಿದೆ’ ಎಂದು ಅವರು ಹೇಳಿದರು.

ಕಾಂಗ್ರೆಸ್‌ನದ್ದು ಒಡೆದು ಆಳುವ ನೀತಿ. ಕಾಂಗ್ರೆಸ್‌ ‘ಟುಕ್ಡೆ ಟುಕ್ಡೆ ಗ್ಯಾಂಗ್‌’ನ (ದೇಶ ವಿಭಜಿಸುವವರ) ನಾಯಕ ಎಂದೂ ಮೋದಿ ಆರೋಪಿಸಿದ್ದಾರೆ.

ಕಾಂಗ್ರೆಸ್ ತಮಿಳು ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸಿದೆ. ಅದು ದೇಶವನ್ನು ಒಡೆದು ಆಳಲು ಬಯಸುತ್ತದೆ. ಒಡೆದು ಆಳುವುದು ಅವರ ಡಿಎನ್‌ಎಯಲ್ಲಿದೆ. ಜನರಲ್ ಬಿಪಿನ್ ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬೀದಿ ಬೀದಿಗಳಲ್ಲಿ ಸಾಲುಗಟ್ಟಿನಿಂತ ತಮಿಳುನಾಡು ನಾಗರಿಕರಿಗೆ ನಾನು ‘ಸೆಲ್ಯೂಟ್‌’ ಅರ್ಪಿಸುತ್ತೇನೆ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT