ಗುರುವಾರ , ಫೆಬ್ರವರಿ 25, 2021
28 °C
2025ರ ವೇಳೆಗೆ ದೇಶದ 1,000ಕ್ಕೂ ಅಧಿಕ ಅಣೆಕಟ್ಟುಗಳಿಗೆ 50 ವರ್ಷ ತುಂಬಲಿದೆ

ಹಳೆಯ ಅಣೆಕಟ್ಟುಗಳಿಂದ ಅಪಾಯ: ವಿಶ್ವಸಂಸ್ಥೆ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌: ಭಾರತದಲ್ಲಿರುವ 1,000ಕ್ಕೂ ಅಧಿಕ ಅಣೆಕಟ್ಟುಗಳು 2025ರ ವೇಳೆಗೆ 50 ವರ್ಷಗಳಷ್ಟು ಹಳೆಯದಾಗಲಿವೆ. ಇವುಗಳಿಂದ ಅಪಾಯ ಹೆಚ್ಚು ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯೊಂದು ಎಚ್ಚರಿಕೆ ನೀಡಿದೆ.

ವಿಶ್ವಸಂಸ್ಥೆ ‘ಏಜಿಂಗ್‌ ವಾಟರ್‌ ಇನ್‌ಫ್ರಾಸ್ಟ್ರಕ್ಚರ್‌: ಆ್ಯನ್‌ ಎಮರ್ಜಿಂಗ್‌ ಗ್ಲೋಬಲ್‌ ರಿಸ್ಕ್‌’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಕೆನಡಾ ಮೂಲದ ‘ನೀರು, ಪರಿಸರ ಹಾಗೂ ಆರೋಗ್ಯ ಸಂಸ್ಥೆ’ (ಐಎನ್‌ಡಬ್ಲ್ಯುಇಎಚ್‌) ಈ ವರದಿಯನ್ನು ಸಿದ್ಧಪಡಿಸಿದೆ.

ಭಾರತದಲ್ಲಿ 1,115 ಬೃಹತ್‌ ಅಣೆಕಟ್ಟುಗಳಿಗೆ 2025ರ ವೇಳೆಗೆ 50 ವರ್ಷ ತುಂಬುವುದು. 2050ರ ವೇಳೆಗೆ 50 ವರ್ಷ ತುಂಬುವ ಅಣೆಕಟ್ಟುಗಳ ಸಂಖ್ಯೆ 4,250ಕ್ಕೂ ಅಧಿಕ ಇರಲಿದೆ. 64 ಅಣೆಕಟ್ಟುಗಳಿಗೆ 2050ರ ವೇಳೆಗೆ 150 ವರ್ಷ ತುಂಬುವುದು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕೇರಳದಲ್ಲಿರುವ ಮುಲ್ಲಪೆರಿಯಾರ್‌ ಅಣೆಕಟ್ಟು ಕಟ್ಟಿ 100 ವರ್ಷಗಳು ಕಳೆದಿವೆ. ಒಂದು ವೇಳೆ ಈ ಅಣೆಕಟ್ಟು ಒಡೆದರೆ, 35 ಲಕ್ಷ ಜನರಿಗೆ ಅಪಾಯ ತಪ್ಪಿದ್ದಲ್ಲ ಎಂದು ವರದಿ ಎಚ್ಚರಿಸಿದೆ.

ಈ ಅಣೆಕಟ್ಟು ನೀರಿನ ಹಂಚಿಕೆ, ನಿರ್ವಹಣೆ ಕುರಿತಂತೆ ಕೇರಳ ಹಾಗೂ ತಮಿಳುನಾಡು ಮಧ್ಯೆ ವಿವಾದ ಇದೆ. ಈ ಅಣೆಕಟ್ಟು ನಿರ್ಮಿಸಿರುವ ಪ್ರದೇಶದಲ್ಲಿ ಭೂಕಂಪನದ ಸಾಧ್ಯತೆಗಳು ಅಧಿಕ. ಈ ಅಂಶಗಳು ಸಹ ಅಪಾಯವನ್ನು ಹೆಚ್ಚಿಸಿವೆ ಎಂದು ವಿವರಿಸಿದೆ.

ಅಧ್ಯಯನ: ಅಣೆಕಟ್ಟುಗಳ ಕುರಿತ ಈ ಅಧ್ಯಯನವನ್ನು ಅಮೆರಿಕ, ಫ್ರಾನ್ಸ್‌, ಕೆನಡಾ, ಭಾರತ, ಜಪಾನ್‌, ಜಾಂಬಿಯಾ ಹಾಗೂ ಜಿಂಬಾಬ್ವೆಯಲ್ಲಿ ಕೈಗೊಳ್ಳಲಾಗಿತ್ತು. 

‘ಬಹಳ ಹಳೆಯದಾದ ಅಣೆಕಟ್ಟುಗಳಿಂದ ಆಗುವ ಅಪಾಯ ಕುರಿತು ಜಾಗತಿಕ ಸಮುದಾಯದ ಗಮನ ಸೆಳೆಯುವ ಉದ್ದೇಶದಿಂದ ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸಲಾಗಿದೆ’ ಎಂದು ಐಎನ್‌ಡಬ್ಲ್ಯುಇಎಚ್‌ ಸಂಶೋಧಕ ವ್ಲಾದಿಮಿರ್‌ ಸ್ಮ್ಯಾಖ್‌ಟಿನ್‌ ಹೇಳಿದರು.

‘ಹೆಚ್ಚುತ್ತಿರುವ ಪ್ರವಾಹ ಸೇರಿದಂತೆ ವಿವಿಧ ನೈಸರ್ಗಿಕ ವಿಕೋಪಗಳಿಂದ ಅಣೆಕಟ್ಟುಗಳು ಬೇಗನೆ ಕ್ಷೀಣಿಸಲು ಆರಂಭಿಸುತ್ತವೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಅಗತ್ಯ’ ಎಂದು ಅವರು ಪ್ರತಿಪಾದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು