ಬುಧವಾರ, ಆಗಸ್ಟ್ 10, 2022
24 °C
ಬಿಜೆಪಿ ಸೇರುವಂತೆ ಒತ್ತಡ, ಅಧಿಕಾರಿಗಳಿಂದ ಚಿತ್ರಹಿಂಸೆ, ಬೆದರಿಕೆ: ಅಖಿಲ್‌ ಗೊಗೊಯ್‌

ಸಿಎಎ ಹೋರಾಟ ತೊರೆದರೆ ಸಚಿವ ಸ್ಥಾನದ ಆಮಿಷ: ಅಖಿಲ್‌ ಗೊಗೊಯ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: 2019ರಲ್ಲಿ ತನಿಖಾಧಿಕಾರಿಗಳು ತಮಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿ ಕಾರ್ಯಕರ್ತ, ಈಗ ನ್ಯಾಯಾಂಗ ಬಂಧನದಲ್ಲಿ ಇರುವ ಅಖಿಲ್‌ ಗೊಗೊಯ್‌ ಅವರು ಹೇಳಿದ್ದಾರೆ. ನ್ಯಾಯಾಂಗ ಬಂಧನದಿಂದಲೇ ಅವರು ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಿಎಎ ಮತ್ತು ದೊಡ್ಡ ಅಣೆಕಟ್ಟೆಗಳ ವಿರುದ್ಧದ ಹೋರಾಟ ಕೈಬಿಡುವಂತೆ ಅವರು ಬೆದರಿಸಿದ್ದರು; ಹೋರಾಟ ಕೈಬಿಟ್ಟು ಆರ್‌ಎಸ್‌ಎಸ್‌–ಬಿಜೆಪಿ ಸೇರಿದರೆ ಸಚಿವನನ್ನಾಗಿ ಮಾಡಲಾಗುವುದು ಎಂದು ಆಮಿಷ ಒಡ್ಡಿದ್ದರು ಎಂದು ಅಖಿಲ್ ಮಂಗಳವಾರ‌ ಆರೋಪಿಸಿದ್ದಾರೆ. 

ಅವರು ಹೊಸದಾಗಿ ಸ್ಥಾಪಿಸಿರುವ ರಾಯ್‌ಜೊರ್‌ ದಳ್‌, ಅಸ್ಸಾಂನ 126 ಕ್ಷೇತ್ರಗಳ ಪೈಕಿ 32ರಲ್ಲಿ ಸ್ಪರ್ಧಿಸುತ್ತಿದೆ. 

‘ಸಿಎಎ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದ 2019ರ ಡಿಸೆಂಬರ್‌ 17ರ ರಾತ್ರಿ ನನ್ನನ್ನು ಬಲವಂತವಾಗಿ ವಿಮಾನ ಮೂಲಕ ದೆಹಲಿಗೆ ಕರೆದೊಯ್ಯಲಾಗಿತ್ತು. ಡಿಸೆಂಬರ್‌ 18ರಂದು ಬೆಳಿಗ್ಗೆ 9 ಗಂಟೆಗೆ ತನಿಖೆ ಆರಂಭಿಸಲಾಗಿತ್ತು. ಈ ತನಿಖೆ ಎಂದರೆ ರಾಜಕೀಯ ಚರ್ಚೆಯೇ ಆಗಿತ್ತು. ಸಿಎಎಯನ್ನು ವಿರೋಧಿಸುವುದು ಎಂದರೆ ಮುಸ್ಲಿಮರ ಜತೆ ಸೇರಿದಂತೆ. ಇದು ದೇಶದ್ರೋಹ ಎಂದು ನನಗೆ ಹೇಳಲಾಯಿತು’ ಎಂದು ಜೈಲಿನಿಂದ ಬಿಡುಗಡೆ ಮಾಡಿದ ಪತ್ರದಲ್ಲಿ ಅಖಿಲ್‌ ಆಪಾದಿಸಿದ್ದಾರೆ. ಅವರ ವಕೀಲ ಈ ಪತ್ರವನ್ನು ಬಹಿರಂಗಪಡಿಸಿದ್ದಾರೆ. 

‘ಆರ್‌ಎಸ್‌ಎಸ್‌ ಸೇರಿದರೆ ತಕ್ಷಣ ಜಾಮೀನು ನೀಡಲಾಗುವುದು. ಅಸ್ಸಾಂನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುತ್ತಿರುವುದನ್ನು ತಡೆಯಬೇಕು ಎಂದು ಅವರು ನನಗೆ ಹೇಳಿದರು. ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಮತಾಂಧ ಸಿದ್ಧಾಂತದ ವಿರುದ್ಧ ಮಾತನಾಡಿದಾಗ ನೇರವಾಗಿ ಬಿಜೆಪಿ ಸೇರುವಂತೆ ಹೇಳಿದರು. ಆಗ ಖಾಲಿ ಇದ್ದ ಒಂದು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕೊಡುವುದಾಗಿ ಹೇಳಿದರು. ಬಳಿಕ ಸಚಿವನನ್ನಾಗಿ ಮಾಡುವ ಭರವಸೆಯನ್ನೂ ಕೊಟ್ಟರು. ಆದರೆ ಈ ಎಲ್ಲ ಕೊಡುಗೆಗಳನ್ನು ನಾನು ತಿರಸ್ಕರಿಸಿದೆ. ಜನವಿರೋಧಿ ಸಿಎಎ ಮತ್ತು ದೊಡ್ಡ ಅಣೆಕಟ್ಟೆಗಳ ವಿರುದ್ಧದ ಹೋರಾಟ ಮುಂದುವರಿಸುವುದಾಗಿ ಹೇಳಿದೆ’ ಎಂದು ಅಖಿಲ್‌ ಅವರು ಪತ್ರದಲ್ಲಿ ವಿವರಿಸಿದ್ದಾರೆ. 

ಅಖಿಲ್‌ ಅವರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ. ಅವರಿಗೆ ನಕ್ಸಲರ ಜತೆಗೆ ನಂಟು ಇದೆ ಎಂದು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

***

ನನಗೆ ಜೀವ ಬೆದರಿಕೆ ಮತ್ತು 10 ವರ್ಷ ಜೈಲಿನಲ್ಲಿ ಕೊಳೆಸುವ ಬೆದರಿಕೆ ಒಡ್ಡಲಾಗಿದೆ. ನನ್ನ ಜಾಮೀನು ಅರ್ಜಿ ಮತ್ತೆ ಮತ್ತೆ ತಿರಸ್ಕೃತಗೊಂಡಿದೆ. ನಾನು ಜೈಲಿನಲ್ಲಿ ನರಳುತ್ತಿದ್ದೇನೆ.

-ಅಖಿಲ್‌ ಗೊಗೊಯ್‌, ಸಿಎಎ ವಿರೋಧಿ ಹೋರಾಟಗಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು