ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದೇವರನ್ನು ಪೂಜಿಸಿದರು, ಸೇವೆ ಸಲ್ಲಿಸಿದವರ ಮೇಲೆ ಹೂಮಳೆ ಗೈದರು'

ದೇಶದ ವಿವಿಧ ರಾಜ್ಯಗಳಲ್ಲಿ ಐತಿಹಾಸಿಕ ಕೋವಿಡ್‌ ಲಸಿಕೆ ಅಭಿಯಾನ
Last Updated 16 ಜನವರಿ 2021, 10:23 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಐತಿಹಾಸಿಕ ಬೃಹತ್‌ ‘ಕೊರೊನಾ ಸೋಂಕಿನ ವಿರುದ್ಧದ ಲಸಿಕೆ ಅಭಿಯಾನ‘ ‌ಶನಿವಾರದಿಂದ ಆರಂಭವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದಂತೆ ದೇಶದ ಎಲ್ಲ ರಾಜ್ಯಗಳಲ್ಲೂ ಏಕಕಾಲಕ್ಕೆ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಒಂದೊಂದು ರಾಜ್ಯಗಳು ಒಂದೊಂದು ರೀತಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದವು. ಕೆಲವು ರಾಜ್ಯಗಳಲ್ಲಿ ಲಸಿಕೆ ಕೇಂದ್ರಗಳನ್ನು ಪುಷ್ಪ, ಬಲೂನ್‌ಗಳಿಂದ ಅಲಂಕರಿಸಿ, ಆರೋಗ್ಯ ಕಾರ್ಯಕರ್ತರ ಮೇಲೆ ಪುಷ್ಪವೃಷ್ಟಿಗೈದು ಅವರನ್ನು ಸ್ವಾಗತಿಸಲಾಯಿತು. ಇನ್ನೂ ಕೆಲವು ಕಡೆ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಲಸಿಕೆ ಅಭಿಯಾನ ಆರಂಭಿಸಲಾಗಿದೆ.

ಕೆಲವು ರಾಜ್ಯಗಳಲ್ಲಿ ಆಸ್ಪತ್ರೆಯ ಪೌರಕಾರ್ಮಿಕರು ಲಸಿಕೆ ಪಡೆದವರಲ್ಲಿ ಮೊದಲಿಗರಾದರೆ, ಇನ್ನೂ ಕೆಲವು ಕಡೆ ವೈದ್ಯರು, ಹಿರಿಯ ಅಧಿಕಾರಿಗಳು, ಮಾಜಿ ಮತ್ತು ಹಾಲಿ ಸಂಸದರು, ಶಾಸಕರು, ಸಚಿವರು ಮೊದಲ ಬಾರಿಗೆ ಲಸಿಕೆ ಪಡೆದು ಸಾರ್ವಜನಿಕರಲ್ಲಿ ಲಸಿಕೆ ಬಗ್ಗೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು.

ದೇಶದ ವಿವಿಧ ಭಾಗಗಳಲ್ಲಿ ಲಸಿಕೆ ಅಭಿಯಾನ ಆರಂಭವಾಗಿರುವ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.

ಮಹಾರಾಷ್ಟ್ರ: ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಡೀನ್‌ ಡಾ. ರಂಜಿತ್‌ ಮಂಕೇಶ್ವರ್‌, ಡಾ. ಪದ್ಮಜಾ ಸರಾಫ್‌ ಅವರು ಇಲ್ಲಿನ ಜಲ್ನಾ ಸಿವಿಲ್ ಆಸ್ಪತ್ರೆಯಲ್ಲಿ ಮೊದಲಿಗರಾಗಿ ಕೋವಿಡ್‌ ಲಸಿಕೆ ಪಡೆಯುವ ಮೂಲಕ ಮಹಾರಾಷ್ಟ್ರದಲ್ಲಿ ಕೋವಿಡ್‌ ಲಸಿಕೆ ಅಭಿಯಾನಕ್ಕೆ ಚಾಲನೆ ದೊರೆಯಿತು.
ಮಹಾರಾಷ್ಟ್ರದ 285 ಕೇಂದ್ರಗಳನ್ನು ಕೋವಿಡ್‌ ಲಸಿಕಾ ಕೇಂದ್ರಗಳೆಂದು ಗುರುತಿಸಲಾಗಿದೆ. ಪ್ರತಿ ದಿನ 100 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುತ್ತದೆ. 28,500 ಕಾರ್ಯಕರ್ತರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಕ್ಕೆ 9.63 ಲಕ್ಷ ಡೋಸ್‌ನಷ್ಟು ಕೋವಿಶೀಲ್ಡ್ ಲಸಿಕೆ ಹಾಗೂ 20 ಸಾವಿರ ಡೋಸ್‌ಗಳಷ್ಟು ಕೊವ್ಯಾಕ್ಸಿನ್ ಲಸಿಕೆ ಬಂದಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಅದನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹಂಚಿಕೆ ಮಾಡಲಾಗಿದೆ.

ಮಧ್ಯಪ್ರದೇಶ: ರಾಜ್ಯದ ಕೆಲವು ಕಡೆ ವೈದ್ಯರು ಪೂಜೆ ಸಲ್ಲಿಸಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರೆ, ಇನ್ನೂ ಕೆಲವು ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರನ್ನು ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಲಾಯಿತು.

ಗ್ವಾಲಿಯರ್‌ನಲ್ಲಿ ಲಸಿಕೆ ಅಭಿಯಾನ ಆರಂಭವಾಗುವ ಮುನ್ನ ವೈದ್ಯರು ಹನುಮಾನ್ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಗ್ವಾಲಿಯರ್‌, ಇಂದೋರ್‌, ಭೋಪಾಲ್ ನಗರದ ಕೆಲವು ಕೇಂದ್ರಗಳಲ್ಲಿ ಲಸಿಕೆ ಕೇಂದ್ರಗಳನ್ನು ಪುಷ್ಪ ಮತ್ತು ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಪೌರಕಾರ್ಮಿಕರೊಬ್ಬರಿಗೆ ಲಸಿಕೆ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ದೊರೆಯಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ‘ಕೊರೊನಾ ಯೋಧರಿಗೆ‘ ಧನ್ಯವಾದ ಹೇಳಿದರು. ಭೋಪಾಲ್‌ನ 12 ಕೇಂದ್ರಗಳನ್ನು ಒಳಗೊಂಡಂತೆ ಮಧ್ಯಪ್ರದೇಶದ 150 ಕೇಂದ್ರಗಳಲ್ಲಿ ಈ ಅಭಿಯಾನ ನಡೆಯುತ್ತಿದೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ 4.17 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾ: ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಜಿಎಂಸಿಎಚ್‌) ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ರಾಜ್ಯದಲ್ಲಿ ‘ಲಸಿಕೆ ಅಭಿಯಾನ‘ಕ್ಕೆ ಚಾಲನೆ ನೀಡಲಾಯಿತು.

ಎರಡು ಖಾಸಗಿ ಆಸ್ಪತ್ರೆ ಸೇರಿ, ರಾಜ್ಯದ ಏಳು ವಿವಿಧ ಕೇಂದ್ರಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್‌ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಜರಿದ್ದರು.

ದಕ್ಷಿಣ ಗೋವಾದಲ್ಲಿರುವ ಮಾರ್ಗೊವಾ ಟಿ.ಬಿ. ಆಸ್ಪತ್ರೆಯಲ್ಲಿ ವೈದ್ಯ ಡಾ. ಇರಾ ಅಲ್ಮೆಡಾ ಅವರು ಲಸಿಕೆ ಹಾಕಿಸಿಕೊಂಡರು.

ಛತ್ತೀಸ್‌ಗಡ: ರಾಯಪುರದ ಡಾ. ಬಿ.ಆರ್. ಅಂಬೇಡ್ಕರ್ ಆಸ್ಪತ್ರೆಯ 51 ವರ್ಷದ ಮಹಿಳಾ ಪೌರಕಾರ್ಮಿಕರಿಗೆ ಕೊರೊನಾ ಲಸಿಕೆ ಹಾಕುವ ಮೂಲಕ, ರಾಜ್ಯದಾದ್ಯಂತ ‘ಲಸಿಕಾ ಅಭಿಯಾನ‘ಕ್ಕೆ ಚಾಲನೆ ನೀಡಲಾಯಿತು.

ಪ್ರಧಾನಿಯವರು ಲಸಿಕೆ ಅಭಿಯಾನಕ್ಕೆ ದೆಹಲಿಯಲ್ಲಿ ಔಪಚಾರಿಕ ಚಾಲನೆ ನೀಡಿದ ನಂತರ, ರಾಜ್ಯ 97 ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ಆರಂಭವಾಯಿತು ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ರಾಜ್ಯ ನಿರ್ದೇಶಕಿ ಪ್ರಿಯಾಂಕಾ ಶುಕ್ಲಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಮಿಳುನಾಡು: ತಮಿಳುನಾಡು ಸರ್ಕಾರಿ ವೈದ್ಯಕೀಯ ಸಂಘದ (ಟಿಎನ್‌ಜಿಡಿಎ) ಅಧ್ಯಕ್ಷ ಡಾ. ಕೆ.ಸೆಂಥಿಲ್ ಅವರು ರಾಜಾಜಿ ಆಸ್ಪತ್ರೆ ಆವರಣದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ‘ಲಸಿಕೆ ಅಭಿಯಾನ’ ಆರಂಭವಾಯಿತು.

ಮುಖ್ಯಮಂತ್ರಿ ಪಳನಿಸ್ವಾಮಿ, ಸಂಪುಟ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸೆಂಥಿಲ್ ಅವರು ಲಸಿಕೆ ಪಡೆದರು. ರಾಜ್ಯದಾದ್ಯಂತ 166 ತಾಣಗಳಲ್ಲಿ ಲಸಿಕೆ ಅಭಿಯಾನ ಆರಂಭವಾಯಿತು.

ನವದೆಹಲಿ: ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಸ್ಪತ್ರೆಯ ಪೌರಕಾರ್ಮಿಕ ಮನೀಶ್ ಕುಮಾರ್ ಅವರಿಗೆ ಲಸಿಕೆ ಹಾಕುವ ಮೂಲಕ ರಾಜಧಾನಿ ದೆಹಲಿಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸುತ್ತಲೂ ಸೇರಿದ್ದ ಜನರು ಚಪ್ಪಾಳೆ ತಟ್ಟಿ ಲಸಿಕೆ ಅಭಿಯಾನಕ್ಕೆ ಶುಭ ಕೋರುತ್ತಿದ್ದಂತೆ ಏಮ್ಸ್‌ ನಿರ್ದೇಶಕ ರಂದೀಪ್ ಗುಲೇರಿಯಾ ಕೂಡ ಲಸಿಕೆ ಪಡೆದರು. ಈ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಹಾಜರಿದ್ದರು.

ಭಾರತದಲ್ಲೇ ತಯಾರಾದ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳನ್ನು ಕೋವಿಡ್‌ ವಿರುದ್ಧದ ಹೋರಾಟಕ್ಕಾಗಿ ‘ಸಂಜೀವಿನಿ‘ಯಾಗಿವೆ ಎಂದು ಹರ್ಷವರ್ಧನ್ ಹೇಳಿದರು.

‘ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ‘ಲಸಿಕೆಗಳು’ ಸಂಜೀವಿಗಳಾಗಿವೆ. ನಾವು ಪೋಲಿಯೊ ವಿರುದ್ಧದ ಯುದ್ಧ ಮಾಡಿ ಗೆದ್ದಿದ್ದೇವೆ. ಈಗ ಕೋವಿಡ್‌ ವಿರುದ್ಧದ ಯುದ್ಧದಲ್ಲಿ ಗೆಲುವಿನ ನಿರ್ಣಾಯಕ ಹಂತ ತಲುಪಿದ್ದೇವೆ’ ಎಂದರು. ಈ ಸಂದರ್ಭದಲ್ಲಿ ಎಲ್ಲ ಕೊರೊನಾ ವಾರಿಯರ್‌ಗಳಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು.

ಗುಜರಾತ್: ರಾಜ್‌ಕೋಟ್‌ ಜಿಲ್ಲೆಯಲ್ಲಿ ವೈದ್ಯಕೀಯ ವಾಹನದ ಚಾಲಕ ಅಶೋಕ್‌ ಭಾಯ್‌, ಕೊರೊನಾ ಲಸಿಕೆ ಪಡೆಯುವ ಮೂಲಕ ರಾಜ್ಯದಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

‘ರಾಜ್‌ಕೋಟ್‌ನ ಈ ಕೇಂದ್ರದಲ್ಲಿ ಮೊದಲ ಡೋಸ್ ಲಸಿಕೆಗಾಗಿ ನನ್ನ ಹೆಸರನ್ನು ಆಯ್ಕೆ ಮಾಡಿದಾಗ, ತುಂಬಾ ಹೆಮ್ಮೆ ಎನ್ನಿಸಿತು. ಲಸಿಕೆ ಪಡೆಯುವ ಬಗ್ಗೆ ನನಗೆ ಯಾವುದೇ ಆತಂಕವಿರಲಿಲ್ಲ. ಎಲ್ಲರೂ ಇದನ್ನು ತೆಗೆದುಕೊಳ್ಳಬೇಕು‘ ಎಂದು ಅಶೋಕ್ ಭಾಯ್ ಸುದ್ದಿಗಾರರಿಗೆ ತಿಳಿಸಿದರು.

ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಮಾಜಿ ಅಧ್ಯಕ್ಷ ಡಾ.ಕೇತನ್ ದೇಸಾಯಿ ಎರಡನೇ ವ್ಯಕ್ತಿಯಾಗಿ ಲಸಿಕೆ ಪಡೆದರು. ‌

ರಾಜ್ಯದ 161 ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಏಕಕಾಲದಲ್ಲಿ ಲಸಿಕೆ ನೀಡುವ ಮೂಲಕ ಅಭಿಯಾನ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT