ಭಾನುವಾರ, ಸೆಪ್ಟೆಂಬರ್ 19, 2021
24 °C

ಪೆಗಾಸಸ್‌: ವರದಿಗಳಲ್ಲಿ ಸತ್ಯಾಂಶವಿದ್ದರೆ ಗಂಭೀರ ಆರೋಪವದು ಎಂದ ಸುಪ್ರೀಂಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೆಗಾಸಸ್‌ ಗೂಢಚರ್ಯೆ ಕುರಿತ ವರದಿಗಳಲ್ಲಿ ಸತ್ಯಾಂಶವಿದ್ದರೆ ಅದು ಗಂಭೀರ ಸ್ವರೂಪದ ಆರೋಪವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಆರಂಭಿಸಿರುವ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನೊಳಗೊಂಡ ಪೀಠ ಈ ಕುರಿತು ಹೇಳಿದೆ.

ಭಾರತೀಯ ಸಂಪಾದಕರ ಕೂಟ, ಹಿರಿಯ ಪತ್ರಕರ್ತರಾದ ಎನ್‌.ರಾಮ್‌ ಮತ್ತು ಶಶಿಕುಮಾರ್‌ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್‌ ಅವರ ಕುರಿತು ಪೀಠ, ‘ನಮ್ಮಲ್ಲಿ ಕೆಲ ಪ್ರಶ್ನೆಗಳಿವೆ. ಈ ಆರೋಪಗಳ ಕುರಿತ ವರದಿಗಳಲ್ಲಿ ಸತ್ಯಾಂಶವಿದ್ದರೆ, ಇದು ಗಂಭೀರ ಆರೋಪ ಎಂಬುದರಲ್ಲಿ ಸಂದೇಹವಿಲ್ಲ’ ಎಂದು ಹೇಳಿತು.

2019ರಲ್ಲಿ ಇದೇ ರೀತಿಯ ವಿಷಯ ಬೆಳಕಿಗೆ ಬಂದಿತ್ತು. ಆದರೆ ಇಷ್ಟು ವಿಳಂಬಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಪೀಠ, ವಿಳಂಬವು ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಪೀಠವು, ಪ್ರತೀ ಪ್ರಕರಣಗಳನ್ನು ಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ಅಗತ್ಯವಿರುವವರು ಟೆಲಿಗ್ರಾಫ್‌ ಕಾಯ್ದೆಯಡಿ ದೂರುಗಳನ್ನು ದಾಖಲಿಸಬಹುದು ಎಂದು ಹೇಳಿತು.

‘ಸಲ್ಲಿಸಿರುವ ಅರ್ಜಿಗಳಲ್ಲಿ 10 ಪ್ರಕರಣಗಳ ಕುರಿತು ಮಾಹಿತಿ ಇದೆ’ ಎಂದು ಕಪಿಲ್‌ ಸಿಬಲ್‌ ಪೀಠಕ್ಕೆ ತಿಳಿಸಿದರು.

ಈ ಪ್ರಕರಣದ ಕುರಿತು ಸ್ವತಂತ್ರ ತನಿಖೆಗೆ ಕೋರಿ ಭಾರತೀಯ ಸಂಪಾದಕರ ಕೂಟ, ಹಿರಿಯ ಪತ್ರಕರ್ತರು ಸಲ್ಲಿಸಿರುವ ಅರ್ಜಿಗಳು ಸೇರಿದಂತೆ ಒಟ್ಟು ಒಂಬತ್ತು ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ಪೆಗಾಸಸ್‌ ಕುತಂತ್ರಾಂಶ ಬಳಸಿ ದೇಶದ 300ಕ್ಕೂ ಹೆಚ್ಚು ಜನರ ಮೊಬೈಲ್‌ ಸಂಖ್ಯೆಗಳ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ಒಕ್ಕೂಟ ಇತ್ತೀಚೆಗೆ ವರದಿ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು