ಸೋಮವಾರ, ನವೆಂಬರ್ 30, 2020
24 °C

ಜಂಗಲ್‌ರಾಜ್‌ಗೆ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಎಂದರೆ ಸಮಸ್ಯೆ: ಪ್ರಧಾನಿ ಮೋದಿ

ಎಎನ್‌ಐ‌ Updated:

ಅಕ್ಷರ ಗಾತ್ರ : | |

Narendra modi

ಸಹರ್ಸಾ (ಬಿಹಾರ): ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ, 'ಜಂಗಲ್ ರಾಜ್' ಮೈತ್ರಿ ಪಕ್ಷಗಳಿಗೆ 'ಭಾರತ್ ಮಾತಾ ಕಿ ಜೈ' ಮತ್ತು 'ಜೈ ಶ್ರೀ ರಾಮ್' ಎಂಬ ಘೋಷಣೆಗಳಲ್ಲಿ ಸಮಸ್ಯೆ ಇದೆ ಎಂದು ಹೇಳಿದರು.

ಚುನಾವಣಾ ಪ್ರಚಾರ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಬಿಹಾರವು ಅಭದ್ರತೆ ಮತ್ತು ಅರಾಜಕತೆಯ ಕತ್ತಲೆಯಿಂದ ಹೊರಬಂದಿದೆ. 'ಜಂಗಲ್ ರಾಜ್' ಆಡಳಿತದ ಸಮಯದಲ್ಲಿ ಬಡವರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿದೆ. ಬಿಹಾರದಲ್ಲಿ 'ಜಂಗಲ್ ರಾಜ್' ನಡೆಸುತ್ತಿದ್ದವರು ಮತ್ತು ಅವರ ಮಿತ್ರರು ನೀವು 'ಭಾರತ್ ಮಾತಾ ಕಿ ಜೈ' ಘೋಷಣೆಗಳನ್ನು ಕೂಗಬಾರದು ಎಂದು ಬಯಸುತ್ತಾರೆ. ಅದರ ಬಗ್ಗೆ ಯೋಚಿಸಿ. 'ಭಾರತ್ ಮಾತಾ ಕಿ ಜೈ' ಎಂದು ಹೇಳಿದರೆ ಜ್ವರ ಬರುವ ಜನರಿದ್ದಾರೆ. 'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆಗಳನ್ನು ಎತ್ತಲೇಬಾರದು ಎಂದು ಜಂಗಲ್ ರಾಜ್‌ನ ಮಿತ್ರ ಪಕ್ಷಗಳು ಬಯಸುತ್ತವೆ. ಅವರಿಗೆ ನೀವು ಜೈ ಶ್ರೀರಾಮ್ ಘೋಷಣೆ ಕೂಗುವುದು ಇಷ್ಟವಿಲ್ಲ' ಎಂದು ಹೇಳಿದರು.

ಬಿಹಾರದ ಜಂಗಲ್ ರಾಜ್ ಮಿತ್ರಪಕ್ಷಗಳಿಗೆ ಭಾರತ ಮಾತೆಯ ಸಮಸ್ಯೆ ಇದೆ. ನೀವು ಭಾರತ್ ಮಾತಾ ಕಿ ಜೈ ಘೋಷಣೆಯನ್ನು ಕೂಗಬಾರದು ಎಂದು ಒಂದು ಗುಂಪು ಹೇಳುತ್ತದೆ ಮತ್ತು ಇನ್ನೊಂದು ಗುಂಪು ಘೋಷಣೆಯಿಂದಾಗಿ ತಲೆನೋವು ಅನುಭವಿಸುತ್ತದೆ. ಭಾರತ ಮಾತೆಗೆ ವಿರೋಧ ವ್ಯಕ್ತಪಡಿಸುವ ಈ ಜನರು ಈಗ ಮತ ಕೇಳಲು ಬಂದಿದ್ದಾರೆ. ಈ ಚುನಾವಣೆಯಲ್ಲಿ ಅಂತಹ ಜನರಿಗೆ ಸೂಕ್ತವಾದ ಉತ್ತರವನ್ನು ನೀಡುವ ಅವಶ್ಯಕತೆಯಿದೆ ಎಂದು ತಿಳಿಸಿದರು.

ಜಂಗಲ್‌ರಾಜ್ ಸಮಯದಲ್ಲಿ ಬೂತ್‌ಗಳ ಮೇಲೆ ದಾಳಿ ಮಾಡಲಾಗುತ್ತಿತ್ತು. ಆದರೆ ಈಗ ಜನರು ಹೆದರುವುದಿಲ್ಲ. ಬಡವರಿಗೆ ತಮ್ಮ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಇರಲಿಲ್ಲ. ಜಂಗಲ್ ರಾಜ್ ಸಮಯದಲ್ಲಿ, ಬಡವರಿಗೆ ತಮ್ಮ ಮನೆಗಳಿಂದ ಹೊರಬರಲು ಕೂಡ ಅವಕಾಶವಿರಲಿಲ್ಲ. ಬೂತ್‌ಗಳನ್ನು ವಶಪಡಿಸಿಕೊಳ್ಳಲಾಗುತ್ತಿತ್ತು. ಅಂತಹ ಜನರು ಈಗ ಬಿಹಾರವನ್ನು ಮತ್ತೆ ಅದೇ ರೀತಿಯ ಸಮಸ್ಯೆಗೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜನರು ದಾರಿ ತಪ್ಪುವುದಿಲ್ಲ ಮತ್ತು ಅವರು ಹೆದರುವುದಿಲ್ಲ ಎಂಬುದನ್ನು ಅವರು ಮರೆಯುತ್ತಿದ್ದಾರೆ ಎಂದರು.

'ಇಂದು, ಬಿಹಾರವು ಅಭದ್ರತೆ ಮತ್ತು ಅರಾಜಕತೆಯ ಕತ್ತಲೆಯಿಂದ ಹೊರಬಂದಿದೆ. ಡಬಲ್ ಎಂಜಿನ್ ಸರ್ಕಾರವು ಕಳೆದ ವರ್ಷಗಳಲ್ಲಿ ಅಭೂತಪೂರ್ವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದೆ. ಕಳೆದ ವರ್ಷಗಳಲ್ಲಿ ಸ್ವಾವಲಂಬಿ ಮತ್ತು ಅದ್ಭುತ ಇತಿಹಾಸದಿಂದ ಪ್ರೇರಿತವಾದ ಬಿಹಾರದ ಅಭಿವೃದ್ಧಿಗೆ ಹೊಸ ಅಡಿಪಾಯವನ್ನು ಹಾಕಲಾಗಿದೆ. ಇದು ಆಧುನಿಕ ಬಿಹಾರವನ್ನು ನಿರ್ಮಿಸುವ ಸಮಯ. ಹಾಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಇದ್ದಾಗ ಮಾತ್ರ ಈ ನಿರ್ಣಯಗಳು ಈಡೇರುತ್ತವೆ ಎಂಬುದು ಬಿಹಾರದ ಜನರಿಗೆ ತಿಳಿದಿದೆ' ಎಂದರು.

ಕಳೆದ 5 ವರ್ಷಗಳಲ್ಲಿ ಮಾರಾಟವಾದ ಖಾದಿ ಉತ್ಪನ್ನಗಳು ಕಳೆದ 25 ವರ್ಷಗಳಲ್ಲಿ ಮಾರಾಟವಾದದ್ದಕ್ಕಿಂತ ಹೆಚ್ಚಾಗಿದೆ. ಎಷ್ಟು ನೇಕಾರರು ಪ್ರಯೋಜನ ಪಡೆಯುತ್ತಿದ್ದರು? ಎರಡು ವಾರಗಳ ಹಿಂದೆ, ದೆಹಲಿಯ ಖಾದಿ ಅಂಗಡಿಯೊಂದು ಒಂದೇ ದಿನದಲ್ಲಿ ₹ 1 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟಮಾಡಿದೆ. ಸ್ಥಳೀಯ ವಸ್ತುಗಳನ್ನೇ ಆದಷ್ಟು ಖರೀದಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಇದರೊಂದಿಗೆ ದೀಪಾವಳಿಯನ್ನು ನಿಮ್ಮ ಮನೆಯಲ್ಲಿ ಮಾತ್ರವಲ್ಲದೆ ಬಡವರ ಮನೆಯಲ್ಲಿಯೂ ಆಚರಿಸುವಂತಾಗುತ್ತದೆ ಎಂದು ಒತ್ತಾಯಿಸಿದರು.

ತಮ್ಮ 'ವೋಕಲ್ ಫಾರ್ ಲೋಕಲ್' ಮನವಿಯ ಕುರಿತು ಮಾತನಾಡುತ್ತಾ, ಎನ್‌ಡಿಎ ಸರ್ಕಾರ ರೈತರ ಉತ್ಪನ್ನಗಳಿಗೆ ಎಷ್ಟು ರಕ್ಷಣೆ ನೀಡುತ್ತಿದೆ ಎಂಬುದಕ್ಕೆ ಸೆಣಬಿನ ವಲಯವು ಒಂದು ಉತ್ತಮ ಉದಾಹರಣೆಯಾಗಿದೆ. ದೇಶವು ಇಂದು ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ಮುಕ್ತವಾಗಲು ವೇಗವಾಗಿ ಚಲಿಸುತ್ತಿದೆ. ಇದು ನಮ್ಮ ಸೆಣಬಿನ ರೈತರಿಗೆ ಮತ್ತು ಸೆಣಬಿನ ಉದ್ಯಮಕ್ಕೆ ನೇರವಾಗಿ ಪ್ರಯೋಜನವನ್ನು ನೀಡುತ್ತಿದೆ' ಎಂದೂ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು