ಮಂಗಳವಾರ, ಆಗಸ್ಟ್ 9, 2022
23 °C

ಟ್ವೀಟ್‌ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ; ಪತ್ರಕರ್ತ ಮೊಹಮ್ಮದ್ ಜುಬೇರ್ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಮೊಹಮ್ಮದ್‌ ಜುಬೇರ್‌

ನವದೆಹಲಿ: ಟ್ವೀಟ್‌ವೊಂದರ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಗಳ ಮೇಲೆ ಫ್ಯಾಕ್ಟ್‌ ಚೆಕಿಂಗ್‌ ವೆಬ್‌ಸೈಟ್‌ 'ಆಲ್ಟ್‌ ನ್ಯೂಸ್' ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಅವರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಜುಬೇರ್‌ ವಿರುದ್ಧ ಐಪಿಸಿ ಸೆಕ್ಷನ್‌ 153ಎ (ಧಾರ್ಮಿಕ, ಜನಾಂಗೀಯ, ಹುಟ್ಟಿದ ಸ್ಥಳ, ಭಾಷೆಯ ಹಿನ್ನೆಯಲ್ಲಿ ಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಹರಡುವುದು) ಹಾಗೂ 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ) ಅಡಿಯಲ್ಲಿ ಈ ತಿಂಗಳ ಆರಂಭದಲ್ಲಿ ಪ್ರಕರಣ ದಾಖಲಾಗಿರುವುದಾಗಿ ಸೈಬರ್‌ ಸೆಲ್‌ ಡಿಸಿಪಿ ಕೆ.ಪಿ.ಎಸ್‌.ಮಲ್ಹೋತ್ರಾ ಹೇಳಿದ್ದಾರೆ.

ಜುಬೇರ್‌ ಅವರನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರು ಪಡಿಸಲಾಗಿದ್ದು, ಒಂದು ದಿನ ಪೊಲೀಸ್‌ ವಶಕ್ಕೆ ನೀಡಿದ್ದಾರೆ.

ಅವರ ಬಂಧನವನ್ನು ವಿರೋಧಿಸಿ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷಗಳ ಹಲವು ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಉದ್ದೇಶಪೂರ್ವಕವಾಗಿ ಧರ್ಮವೊಂದರ ದೇವರನ್ನು ಅವಮಾನ ಪಡಿಸಲು ಮಾಡಿರುವ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಜುಬೇರ್‌ ಬಂಧನವಾಗಿರುವುದಾಗಿ ಡಿಸಿಪಿ ಹೇಳಿದ್ದಾರೆ.

ಆದರೆ, ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ನೋಟಿಸ್‌ ನೀಡದೆಯೇ ಜುಬೇರ್‌ ಅವರನ್ನು ಬಂಧಿಸಲಾಗಿದೆ ಎಂದು ಆಲ್ಟ್‌ ನ್ಯೂಸ್‌ ಸಹ–ಸಂಸ್ಥಾಪಕ ಪ್ರತೀಕ್‌ ಸಿನ್ಹಾ ಆರೋಪಿಸಿದ್ದಾರೆ.

 

'ಸತತವಾಗಿ ಪ್ರಶ್ನಿಸಿದರೂ ಎಫ್‌ಐಆರ್‌ ಕಾಪಿಯನ್ನು ನೀಡಿಲ್ಲ. 2020ರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ದೆಹಲಿಯ ಸ್ಪೆಷಲ್‌ ಸೆಲ್‌ ಜುಬೇರ್‌ರನ್ನು ಕರೆದಿತ್ತು. ಈಗಾಗಲೇ ಆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ರಕ್ಷಣೆ ಪಡೆಯಲಾಗಿದೆ. ಇಂದು ಸಂಜೆ 6:45ರ ಹೊತ್ತಿಗೆ ಅವರನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸಿರುವುದಾಗಿ ತಿಳಿಸಲಾಯಿತು. ವೈದ್ಯಕೀಯ ತಪಾಸಣೆಯ ಬಳಿಕ ಅವರನ್ನು ಗೋಪ್ಯ ಸ್ಥಳಕ್ಕೆ ಕರೆದೊಯ್ಯಲಾಯಿತು' ಎಂದು ಆರೋಪಿಸಿ ಸೋಮವಾರ ಸಿನ್ಹಾ ಟ್ವೀಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು