ನವದೆಹಲಿ: ‘ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು’ ಎಂದು ಎಎಪಿ ಶಾಸಕ ಶೋಹಿಬ್ ಇಕ್ಬಾಲ್ ಒತ್ತಾಯಿಸಿದ್ದಾರೆ.
‘ಕೋವಿಡ್ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ಸರ್ಕಾರಕ್ಕಾಗಲೀ, ನನಗಾಗಲೀ ಸಾಧ್ಯವಾಗುತ್ತಿಲ್ಲ. ಹಾಗಾಗಿ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು’ ಎಂದು ಶಾಸಕ ಶೋಹಿಬ್ ಇಕ್ಬಾಲ್ ಹೇಳಿದರು. ಈ ಬಗ್ಗೆ ಆಮ್ ಆದ್ಮಿ ಪಕ್ಷವು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
‘ನನ್ನಿಂದ ಯಾರಿಗೂ ಏನೂ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ನನಗೆ ಶಾಸಕನಾಗಿರಲು ನಾಚಿಕೆಯಾಗುತ್ತಿದೆ. ನಮ್ಮ ಸರ್ಕಾರಕ್ಕೂ ಜನರೊಂದಿಗೆ ನಿಲ್ಲಲು ಆಗುತ್ತಿಲ್ಲ. ನಾನು ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದರೂ, ನನ್ನ ಮಾತನ್ನು ಕೇಳಲು ಯಾರೂ ಇಲ್ಲ’ ಎಂದು ಶೋಹಿಬ್ ಇಕ್ಬಾಲ್ ಅವರು ವಿಡಿಯೊ ಸಂದೇಶದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮೂರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವಂತೆ ಇಕ್ಬಾಲ್ ಅವರು ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
‘ದೆಹಲಿಯು ಬಹಳ ಕೆಟ್ಟ ಪರಿಸ್ಥಿತಿಯಲ್ಲಿದೆ. ಹಾಗಾಗಿ ದೆಹಲಿಯಲ್ಲಿ ಆದಷ್ಟು ಬೇಗ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತನ್ನಿ. ಇಲ್ಲದಿದ್ದರೆ ನಗರದೆಲ್ಲೆಡೆ ಶವಗಳನ್ನು ನೋಡುವ ಪರಿಸ್ಥಿತಿ ಎದುರಾಗಬಹುದು’ ಎಂದು ಅವರು ಹೇಳಿದ್ದಾರೆ.
‘ನಾನು ಕಣ್ಣೀರು ಹಾಕುತ್ತಿದ್ಧೇನೆ. ಜನರಿಗೆ ಸಹಾಯ ಮಾಡಲಾಗುತ್ತಿಲ್ಲ. ಆಮ್ಲಜನಕ ಮತ್ತು ಔಷಧಿಯ ಕೊರತೆಯಿದೆ. ಆಸ್ಪತ್ರೆಯಲ್ಲಿದ್ದ ನನ್ನ ಸ್ನೇಹಿತನಿಗೂ ಸಹಾಯ ಮಾಡಲು ನನ್ನಿಂದ ಸಾಧ್ಯವಾಗಿಲ್ಲ. ನಾನು ಪಕ್ಷದ ವಿರುದ್ಧವಾಗಿ ಏನೂ ಮಾಡುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸುವುದೇ ಪ್ರಮುಖ ಆದ್ಯತೆವಾಗಿರಬೇಕು’ ಎಂದು ಅವರು ತಿಳಿಸಿದರು.
ದೆಹಲಿಯಲ್ಲಿ ಗುರುವಾರ 395 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ಈವರೆಗಿನ ಅತಿ ಹೆಚ್ಚಿನ ಅತಿ ಹೆಚ್ಚಿನ ದೈನಂದಿನ ಮರಣ ಸಂಖ್ಯೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.