ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆಗೆ ಕಾರಣವಾದ ಕೃಷಿ ಕಾಯ್ದೆಯ ಅಂಶಗಳ್ಯಾವುವು ?

Last Updated 8 ಡಿಸೆಂಬರ್ 2020, 11:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯಿಸಿ ದೇಶದಾದ್ಯಂತ ರೈತರು ಬೀದಿಗಿಳಿದಿದ್ದಾರೆ. ಭಾರತ್ ಬಂದ್ ಕರೆ ನೀಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಕೊರೆವ ಚಳಿ ನಡುವೆಯೂ ನವದೆಹಲಿಯ ಗಡಿಯಲ್ಲಿ ಬೀಡು ಬಿಟ್ಟ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಕಾಯ್ದೆಗಳು ರೈತರ ದೃಷ್ಟಿಯಿಂದ ಮರಣ ಶಾಸನ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಹಾಗಾದರೆ, ಈ ಕಾಯ್ದೆಯಲ್ಲಿ ಅಂತದ್ದೇನಿದೆ ಎಂಬುದರ ಕಿರು ನೋಟ ಇಲ್ಲಿದೆ.

1. ಮೂರೂ ಕಾಯ್ದೆಗಳ ಪ್ರಮುಖ ಅಂಶಗಳು

* ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಕಿಸಿಕೊಳ್ಳಲಾಗದ ಅಥವಾ ಕೃಷಿಯಲ್ಲಿ ಇಳುವರಿ ಹೆಚ್ಚಿಸಿಕೊಳ್ಳಲು ತಂತ್ರಜ್ಞಾನ ಅಳವಡಿಸಿಕೊಳ್ಳುವ ಸಾಮರ್ಥ್ಯವಿಲ್ಲದ ಸಣ್ಣ ಮತ್ತು ಮಧ್ಯಮ ( (86% ರಷ್ಟು ರೈತರು) ರೈತರ ಅಭಿವೃದ್ಧಿ ದೃಷ್ಟಿಯಿಂದ ಈ ಕಾಯ್ದೆಗಳನ್ನ ತರಲಾಗಿದೆ.

ಕೃಷಿ ಮಾರುಕಟ್ಟೆ ಕಾಯ್ದೆ

* ಕೃಷಿ ಮಾರುಕಟ್ಟೆ ಕಾಯ್ದೆಯು ರೈತರು ತಾವು ಬೆಳೆದ ಬೆಳೆಯನ್ನ ಎಪಿಎಂಸಿಯ ಹೊರಗಡೆಯೂ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.

* ಅವರ ತೋಟದ ಬಾಗಿಲಲ್ಲೇ ಯಾರೂ ಬೇಕಾದರೂ ಕೃಷಿ ಉತ್ಪನ್ನಗಳನ್ನ ಖರೀದಿಸಬಹುದು.

* ಕ್ರಮವಾಗಿ ಮಂಡಿಗಳ ಕಮೀಶನ್ ಏಜೆಂಟ್‌ಗಳು ಮತ್ತು ರಾಜ್ಯಸರ್ಕಾರಗಳು ಕಮೀಶನ್ ಮತ್ತು ಮಂಡಿ ಶುಲ್ಕವನ್ನು ಕಳೆದುಕೊಳ್ಳುತ್ತಾರೆ

* ಸ್ಪರ್ಧೆಯಿಂದಾಗಿ ರೈತರು ತಮ್ಮ ಬೆಳೆಗೆ ಹೆಚ್ಚುಬೆಲೆ ಪಡೆಯುತ್ತಾರೆ. ಜೊತೆಗೆ, ಸರಬರಾಜಿನ ಖರ್ಚು ಸಹ ಉಳಿಯುತ್ತದೆ.

ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ

* ಒಪ್ಪಂದದ ಕೃಷಿ ಕಾಯ್ದೆಯು ರೈತರನ್ನ ಕೃಷಿ ಸಂಬಂಧಿತ ಉದ್ಯಮ ನಡೆಸುವ ಕಂಪನಿಗಳು ಅಥವಾ ಉತ್ಪನ್ನಕ್ಕೆ ಪೂರ್ವ ನಿಗದಿತ ಬೆಲೆಯಲ್ಲಿ ದೊಡ್ಡ ಪ್ರಮಾಣದ ಚಿಲ್ಲರೆ ವ್ಯಾಪಾರಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.

* ಇದು ಮಾರುಕಟ್ಟೆಬೆಲೆಗಳ ‌ ಅನಿಶ್ಚಿತತೆಯ ರಿಸ್ಕ್‌ ಅನ್ನುವರ್ಗಾಯಿಸುವ ಮೂಲಕ ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲ ಮಾಡಿಕೊಡುತ್ತದೆ.

ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ

* ಅಗತ್ಯ ಸರಕುಗಳ ಪಟ್ಟಿಯಿಂದ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಬೀಜಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗಡ್ಡೆ ಮುಂತಾದ ಸರಕುಗಳನ್ನು ತೆಗೆದುಹಾಕಲು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನುವು ಮಾಡಿಕೊಡುತ್ತದೆ.

* ಯುದ್ಧ ಮತ್ತು ನೈಸರ್ಗಿಕ ವಿಪತ್ತುಗಳಂತಹ ಅಸಾಧಾರಣ ಸಂದರ್ಭಗಳಲ್ಲಿ ಹೊರತುಪಡಿಸಿ ಅಂತಹ ವಸ್ತುಗಳ ಮೇಲೆ ಸ್ಟಾಕ್-ಹೋಲ್ಡಿಂಗ್ ಮಿತಿ ಹೇರುವುದನ್ನು ಶಾಸನವು ತೆಗೆದುಹಾಕುತ್ತದೆ ಎಂದರ್ಥ.

* ಈ ಕಾಯ್ದೆಯು ಕೃಷಿ ಕ್ಷೇತ್ರಕ್ಕೆ ಖಾಸಗಿ ವಲಯ / ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುತ್ತದೆ.

2. ರೈತರ ಆತಂಕ ಏನು ?

* ಹೊಸ ಕೃಷಿ ಕಾಯ್ದೆಗಳು ಸದ್ಯ ಜಾರಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಿತ್ತು ಹಾಕುತ್ತವೆ

* ಸ್ವಾಮಿನಾಥನ್ ವರದಿ ಉಲ್ಲೇಖ ಎಲ್ಲಿಯೂ ಇಲ್ಲ

* ಈ ಕಾಯ್ದೆಗಳ ನಿಯಮಾವಳಿಗಳನ್ವಯ ಮುಂದೊಂದು ದಿನ ಕಾರ್ಪೋರೇಟ್ ಕಂಪನಿಗಳು ರೈತರ ಮೇಲೆ ಸರ್ವಾಧಿಕಾರಿಯಾಗುತ್ತವೆ. ರೈತ ತಾನು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವುದಿಲ್ಲ.

* ಮಂಡಿ ವ್ಯವಸ್ಥೆಯನ್ನು ವಾಸ್ತವಿಕವಾಗಿ ವಿಸರ್ಜಿಸುವುದರಿಂದ, ತಮ್ಮ ಬೆಳೆಗಳಿಗೆ ಖಚಿತವಾದ ಬೆಲೆ ಸಿಗುವುದಿಲ್ಲ.

* ಸಾಲ ನೀಡುತ್ತಿರುವ ಕಮೀಶನ್ ಏಜೆಂಟ್‌ಗಳು ಸಹ ಮರೆಯಾಗುತ್ತಾರೆ ಎಂಬುದು ಪಂಜಾಬ್ ಮತ್ತು ಹರಿಯಾಣ ರೈತರ ಆತಂಕವಾಗಿದೆ.

3. ರೈತರ ಬೇಡಿಕೆ

* ಮೂರೂ ಕಾಯ್ದೆಗಳ ತಮ್ಮ ಬೆಳೆಗಳ ಮಾರಾಟ ನಿಯಂತ್ರಿಸುವುದರಿಂದ ಮೂರೂ ಕಾಯ್ದೆಗಳನ್ನ ಹಿಂಪಡೆಯಬೇಕುಎಂಬುದು ಪ್ರಮುಖ ಬೇಡಿಕೆ

* ವಿದ್ಯುತ್ (ತಿದ್ದುಪಡಿ) ಮಸೂದೆ 2020 ಅನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯ. ಈ ಕಾಯ್ದೆ ರೈತರಿಗೆ ನೀಡುತ್ತಿರುವ ವಿದ್ಯುತ್ ಸಬ್ಸಿಡಿ ಕಸಿಯಬಹುದೆಂಬ ಆತಂಕ


4. ಸರ್ಕಾರ ಹೇಳುವುದೇನು?

* ಕೃಷಿಯಲ್ಲಿ ಸುಧಾರಣೆ ತರುವ ದೃಷ್ಟಿಯಿಂದ ಈ ಮೂರೂ ಕಾಯ್ದೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸಲಿವೆ

* ಮಧ್ಯವರ್ತಿಗಳ ಕಾಟ ಕೊನೆಗಾಣಿಸಿ ತಮ್ಮ ಉತ್ಪನ್ನವನ್ನ ದೇಶದ ಯಾವುದೇ ಭಾಗದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತವೆ

* ಎಪಿಎಂಸಿಗಳಲ್ಲಿ ಮಾತ್ರ ರೈತರ ಉತ್ಪನ್ನಮಾರಾಟ ಮಾಡುವ ವ್ಯವಸ್ಥೆ ಇತ್ತು.ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ ಅಸ್ತಿತ್ವಕ್ಕೆ ಬಂದ ಬಳಿಕ ಎಪಿಎಂಸಿ ಹೊರಗಡೆಯೂ ದೇಶದ ಯಾವುದೇ ಭಾಗದ ಮಾರಾಟ ಮಾಡಲು ಅವಕಾಶ ಸಿಗುತ್ತಿದೆ.

ಇತ್ತ, ಕೃಷಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಬಗ್ಗೆ ಕಿಡಿ ಕಾರಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಕಾಂಗ್ರೆಸ್ ಪಕ್ಷವು 2019ರ ತನ್ನ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಉಲ್ಲೇಖ ಮಾಡಿತ್ತು. ಸದ್ಯ ಮೋದಿ ಸರ್ಕಾರ ಹೊಸ ಕಾಯ್ದೆಗಳ ಮೂಲಕ ಕೃಷಿ ಸುಧಾರಣೆಗೆ ಮುಂದಾಗಿದೆಯೋ ಅದೇ ರೀತಿಯ ಸುಧಾರಣೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಶರದ್ ಪವಾರ್ ಕೃಷಿ ಸಚಿವರಾಗಿದ್ದಾಗಕೈಹಾಕಲಾಗಿತ್ತು. ಇದೀಗ, ಚುನಾವಣೆ ಸೋತ ಬಳಿಕ ತಮ್ಮ ಅಸ್ತಿತ್ವಕ್ಕಾಗಿ ಕಾಂಗ್ರೆಸ್ ಹೋರಾಟದಲ್ಲಿ ಸೇರಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT